Friday, May 28, 2010

ಕ್ರೇಜಿಸ್ಟಾರ್ ನೊಂದಿಗೆ ಕೆಲಕಾಲಕನ್ನಡದ ಅಪರೂಪದ ತಂತ್ರಜ್ಞ, ಖ್ಯಾತ ನಟ ರವಿಚಂದ್ರನ್ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ನಟ. ಸುಪರ್ ಸ್ಟಾರ್ ಪಟ್ಟದ ಪೈಪೋಟಿಗೆ ನಿಲ್ಲದೆ ಭಿನ್ನ ಸಿನೆಮಾಗಳ ನಿರ್ಮಾಣ ಹಾಗೂ ನಟನೆಯಿಂದಾಗಿ ಕ್ರೇಜಿಸ್ಟಾರ್ ಪಟ್ಟಗಳಿಸಿದ ಖ್ಯಾತಿ.
ರವಿಚಂದ್ರನ್ ಪ್ರೇಮಲೋಕದ ಮೂಲಕ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ನಟ-ನಿರ್ದೇಶಕ.
ಹೊಸತನ, ಸುಂದರ ಸೆಟ್ಟಿಂಗ್, ಸುಂದರ ನಟಿಯರೊಂದಿಗೆ ರೋಮಾಂಚನ ಉಂಟುಮಾಡಿದ ಹೆಗ್ಗಳಿಕೆ.
ನಾವು ವಿದ್ಯಾರ್ಥಿಗಳಾಗಿದ್ದಾಗ ರವಿಚಂದ್ರನ್ ಸಿನೆಮಾಗಳು ಕಚಗುಳಿ ಉಂಟು ಮಾಡಿ ಮೈ-ಮನಗಳು ಬೆಚ್ಚಗಾಗಿಸುತ್ತಿದ್ದವು.
ಸುಂದರ ನಟಿಯರನ್ನು ಸದುಪಯೋಗ ಪಡಿಸಿಕೊಂಡ ಖ್ಯಾತಿಯೂ ರವಿಚಂದ್ರನ್ ಗೆ ಸಲ್ಲುತ್ತದೆ. ನಟಿಯರನ್ನು ಸಮರ್ಥವಾಗಿ, ರೋಮ್ಯಾಂಟಿಕ್ ಆಗಿ expose ಮಾಡಿ ಬಿಗ್ ಸ್ಕ್ರಿನ್ ಮೇಲೆ ಹೂಮಂಚ ಹಾಸಿ ಮೈ ಬೆಚ್ಚಗಾಗಿಸಿದ ಅಚ್ಚು ಮೆಚ್ಚಿನ ನಟ ಕೂಡಾ!
ರವಿಚಂದ್ರನ್ ಹಲವಾರು ಸಿನೆಮಾಗಳ ಮೂಲಕ ಸಿನೆಮಾಕ್ಕೆ ಹೊಸ ಭಾಷೆ ಬರೆದ ತಂತ್ರಜ್ಞ. ಅದ್ಧೂರಿ ವೆಚ್ಚದ ಸಿನೆಮಾ ನಿರ್ಮಿಸಿ ಆರ್ಥಿಕ ರಿಸ್ಕ್ ತಗೆದುಕೊಂಡರೂ ಸಿನೆಮಾದ ಮೂಲಕವೇ ಬದುಕು ರೂಪಿಸಿಕೊಂಡ ಅಪ್ಪಟ ಕಲಾವಿದ.
ತೇಲುಗಣ್ಣಿನ ಕನಸುಗಾರ ಯುವಕರ ಹೃದಯಕ್ಕೆ ಕೊಳ್ಳಿ ಇಟ್ಟು ಪುಳಕಿತಗೊಳಿಸಿದ ರೋಮ್ಯಾಂಟಿಕ್ ಹೀರೋ.
ರಿಮೇಕ್ ನಲ್ಲಿಯೂ ಸ್ವಂತಿಕೆ, ಕ್ರಿಯಾಶೀಲತೆಯನ್ನು ಸೃಷ್ಠಿಸಿ ಹತ್ತಾರು ಬಾರಿ ಗೆಲ್ಲುತ್ತಾ, ಸೋಲುತ್ತಾ ಸಾಗಿದರೂ ಸಿನೆಮಾದೊಂದಿಗೆ ಬದುಕಿ - ಬಾಳುವ ರವಿಚಂದ್ರನ್ ರನ್ನು ಭೇಟಿ ಆಗುವ ಇರಾದೆ ಇತ್ತು.
ಮನುಷ್ಯನ ಗುಣ-ಧರ್ಮಗಳನ್ನು ಅರಿಯುತ್ತಾ, ವ್ಯಕ್ತಿತ್ವ ವಿಕಸನಕ್ಕಾಗಿ ವ್ಯಕ್ತಿತ್ವಗಳನ್ನು ಭೇಟಿ ಆಗುವ ನನ್ನ ಹುಚ್ಚು ಮನಸಿಗೆ ರವಿಚಂದ್ರನ್ ರೊಂದಿಗೆ ಮಾತನಾಡುವ ತವಕವಿತ್ತು. ನನ್ನ ಬಹುದಿನದ ಕನಸನ್ನು ಈಡೇರಿಸಿದವರು ಕಲಾವಿದ ಎಂ. ಎನ್. ಸುರೇಶ್.
ಮಧ್ಯಾನ್ಹ ಒಂದು ಗಂಟೆಗೆ ರವಿಚಂದ್ರನ್ ಮನೆ ಪ್ರವೇಶಿಸಿದೆ.
ಮನುಷ್ಯನ ಗುಣ ಸ್ವಭಾವ, ಜೀವನೋತ್ಸಾಹ, ಹೆಣ್ಣಿನ ಬಗೆಗಿರುವ ಆಕರ್ಷಣೆ, ಸೆಳೆತ ಹೀಗೆ ಚರ್ಚೆ ಸಾಗಿಯೇ ಇತ್ತು ಕೆಲ ನಿಮಿಷಗಳ ಭೇಟಿ ತಾಸುಗಳಿಗೆ ಮುಂದುವರೆಯಿತು.
ರವಿಚಂದ್ರನ್ ಗೂ ನನ್ನೊಂದಿಗೆ ಚರ್ಚಿಸಬೇಕೆನಿಸಿತಂತೆ, ತುಂಬಾ ಆಪ್ತವಾಗಿ ಮಾತನಾಡಿದರು. Off the record ಎನ್ನುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದರು. ಎಲ್ಲವನ್ನು expose ಮಾಡುವ ಅಗತ್ಯವಾದರೂ ಏನಿದೆ?
ಬದುಕಿನ ಉತ್ಕೃಷ್ಟ ಆಕರ್ಷಣೆ ಎನಿಸಿರುವ ಹೆಣ್ಣು ತಮ್ಮನ್ನು ಕಾಡಿದ ಬಗೆಯನ್ನು ಹಂಚಿಕೊಂಡು, ಸಿನೆಮಾಗಳಲಿ ಬಳಸಿಕೊಂಡ ಕಾರಣಗಳನ್ನು ರಸವತ್ತಾಗಿ ವಿವರಿಸಿದರು.
ಹೆಣ್ಣಿನ ಬಗೆಗಿರುವ ನನ್ನ ಅಭಿಪ್ರಾಯಕ್ಕೆ ಸಮ್ಮತಿಸಿದ ಹೀರೋ ರಸಿಕತೆ ಹಾಗೂ ಫ್ಲರ್ಟಗಿರುವ ಅಂತರವನ್ನು convince ಮಾಡಿದರು.
ಸದಾ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕನಸು ಕಾಣುತ್ತಾ, ಕಂಡ ಕನಸನ್ನು ಜನರಿಗೆ ತೋರಿಸುವ ಸಿನೆಮಾ ಅವರ ಪಾಲಿನ ಅದ್ಭುತ ಮಾಧ್ಯಮ. ಮನುಷ್ಯನನ್ನು ಮೂರು ತಾಸು ಒಂದು ಕಡೆ ಕೂಡಿಸಿ ಹೃದಯವನ್ನು ತಟ್ಟುವ, ಕಟ್ಟುವ ಪರಿಣಾಮಕಾರಿ ಮಹಾದೃಶ್ಯಕಾವ್ಯ.
ಒಂದು ಶ್ರೇಷ್ಠ ಕೃತಿ ನೀಡುವ ಪರಿಣಾಮವನ್ನು ಸಿನೆಮಾ ಕೊಡುತ್ತದೆ. ಓದು, ಬರಹದಂತೆ ಸಿನೆಮಾ ಕೂಡಾ ನನಗೆ ಪ್ರಿಯವೆನಿಸುತ್ತದೆ.
ಉತ್ತಮ ಚಿತ್ರಗಳು ಮನೋರಂಜನೆ ನೀಡುವುದರೊಂದಿಗೆ, ಮನೋಪರಿವರ್ತನೆಗೆ ಕೂಡಾ ಕಾರಣವಾದದ್ದನ್ನು ನೋಡಿದ್ದೇವೆ.
ಉತ್ತಮ ಸಿನೆಮಾಗಳನ್ನು ನಿರ್ಮಿಸಿದರೆ ಜನ ನೋಡುತ್ತಾರೆ ಎಂಬುದನ್ನು Industry ನಿರೂಪಿಸಿದೆ. ಎಲ್ಲ ವರ್ಗದ ಜನ ಸಿನೆಮಾ ನೋಡಬಯಸುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ, ಸಿನೆಮಾ ತಯಾರಾಗುತ್ತವೆ, ಕೆಲ ತಂತ್ರಜ್ಞರ ಸಿನೆಮಾಗಳು ಹೀಗಿರಬೇಕು ಎಂದು ಕೂಡಾ ಜನ ಬಯಸುತ್ತಾರೆ. ಈ ಸಾಲಿನಲ್ಲಿ ರವಿಚಂದ್ರನ್ ಪ್ರಮುಖರು. ರವಿಚಂದ್ರನ್ ಸಿನೆಮಾ ಹೀಗಿರಬೇಕು ಎಂದು ಬಯಸುತ್ತಲೇ ಜನ ಥೇಟರ್ ಗೆ ಹೋಗುತ್ತಾರೆ. ಒಮ್ಮೆ ನಿರಾಶೆ, ಒಮ್ಮೆ ಭರವಸೆ ಹುಟ್ಟಿಸುವ ಸಿನೆಮಾ ನೀಡುವ ರವಿಚಂದ್ರನ್ ಅಭಿನಂದನಾರ್ಹರು.
ಅವರ ಹುಟ್ಟು ಹಬ್ಬದಂದು ರವಿಚಂದ್ರನ್ ಭೇಟಿಯನ್ನು ನೆನಪಿಸಿಕೊಳ್ಳಲು ಖುಷಿ ಎನಿಸುತ್ತದೆ. ಅವರ ಚರ್ಚೆಯ ವಿವರಗಳನ್ನು ಮತ್ತೊಮ್ಮೆ ವಿವರಿಸುತ್ತೇನೆ.
ಯುವಕರನ್ನು ಬೆಚ್ಚಿಸುವ, ಮನಸುಗಳನು ಬೆಚ್ಚಗಾಗಿಸುವ ಸಿನೆಮಾಗಳನ್ನು ಸದಾ ನಿರ್ಮಿಸಲಿ ಎಂದು ಹಾರೈಸುವೆ.

1 comment:

  1. ravi without cap?.............m seeing him first time like that. eagar to read more

    ReplyDelete