Sunday, May 16, 2010

ಕೃತಿ ವಿಮರ್ಶೆ

ಎತ್ತಣ ಮಾಮರ ಎತ್ತಣ ಕೋಗಿಲೆ
ಇಂಗ್ಲೆಂಡ್ ಪ್ರವಾಸ ಕಥನ
ಪ್ರವಾಸ ಸಾಹಿತ್ಯಕ್ಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಸೇರ್ಪಡೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿರಳವಾಗಿರುವ ಪ್ರವಾಸ ಕಥನಕ್ಕೆ ಸಿದ್ದು ಯಾಪಲಪರವಿಯವರ ಇಂಗ್ಲೆಂಡ್ ಪ್ರವಾಸ ಕಥನ "ಎತ್ತಣ ಮಾಮರ ಎತ್ತಣ ಕೋಗಿಲೆ" ಅಪರೂಪದ ಕೊಡುಗೆಯಾಗಿದೆ.
ಗದಗದ ಸಾಂಗತ್ಯ ಪ್ರಕಾಶನ ದಡಿಯಲ್ಲಿ ಪ್ರಕಟಗೊಂಡಿರುವ ಈ ಕೃತಿ ಒಬ್ಬ ಪ್ರಬುದ್ಧ ಲೇಖಕನ ಕೈಚಳಕದಿಂದ ಹೊರಬಂದ ವಿಶಿಷ್ಟ ಕೃತಿಯಾಗಿ ಹೊರ ಹೊಮ್ಮಿದೆ.
ರೈಲನ್ನೇ ನೋಡದ ಊರಿನಿಂದ ಬಂದ ಸಿದ್ದು ಯಾಪಲಪರವಿಯವರಿಗೆ ವಿಮಾನ ಯಾನ ನೀಡಿದ ಖುಷಿಯಂತೆ ಈ ಕೃತಿಯ 37 ಅಂಕಣಗಳನ್ನು ಓದುವ ಓದುಗನಿಗೆ ಎಲ್ಲಿಯೂ ಬೇಸರವಾಗದಂತೆ ಪುಸ್ತಕ ಪ್ರವಾಸ ಕಥನದ ರಸಾನುಭೂತಿಯನ್ನು ನೀಡುವಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಇಂಗ್ಲೆಂಡಿನ ಕಣ್ಣಾಗಿರುವ ಲಂಡನ್ 'ಐ' ನಂತೆ ಈ ಕೃತಿಯು 141 ಪುಟಗಳಲ್ಲಿಯೇ ಇಂಗ್ಲೆಂಡಿನ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುತ್ತದೆ. ಅಲ್ಲಿಯ ಜನರ ಶಿಸ್ತು ಬದ್ದ ಜೀವನ, ಸಮಯ ಪ್ರಜ್ಞೆ, ಮದುವೆಯಿಲ್ಲದ ದಾಂಪತ್ಯ, ಅಲ್ಲಿನ ಆಕ್ಸಫರ್ಡ ವಿಶ್ವವಿದ್ಯಾಲಯದ ಸಮಗ್ರ ಚಿತ್ರಣದ ಜೊತೆಗೆ ಅಲ್ಲಿನ ಜನರ ಅಧ್ಯಯನ ಶೀಲತೆಯ ತುಡಿತ ಮಿಡಿತಗಳನ್ನು ಕುರಿತಾಗಿ ವಿಶದವಾಗಿ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.
ಪ್ರಜಾ ಸತ್ತೆಯೊಂದಿಗೆ ರಾಜಸತ್ತೆಯ ಪಳಿಯುಳಿಕೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿರುವ ಬಕಿಂಗ್ ಹ್ಯಾಮ್ ಅರಮನೆ, ಅಲ್ಲಿಯ ಜನ ಪ್ರತಿನಿಧಿಗಳ " ಹೌಸ್ ಆಫ್ ಕಾಮಾನ್ಸ್" ನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಐರ್ಲೆಂಡಿನ ಕಣಿವೆಗಳಲ್ಲಿ ಓದುಗನನ್ನು ಅಲೆಸಿ, ಮಹಾಕವಿ ಶೇಕ್ಸಪಿಯರನ ಮಹಾಮನೆಯನ್ನು ದರ್ಶಿಸಿದ ದಿವ್ಯಾನುಭವವನ್ನು ಲೇಖಕರು ತಮ್ಮ ಕೃತಿಯ ಮೂಲಕ ನೀಡುತ್ತಾರೆ. ಪಾಶ್ಚಾತ್ಯರ ವೈಭವೋಪೇತ ಸ್ವೇಚ್ಚಾ ಜೀವನವನ್ನು ಆದರ್ಶವೆಂದು, ಮಾದರಿಯೆಂದು ಭಾವಿಸುವ ಭಾರತೀಯನಿಗೆ ಪಾಶ್ಚಾತ್ಯರ ಸಮಯ ಪ್ರಜ್ಞೆ ಕರ್ತವ್ಯ ನಿಷ್ಠೆ, ಅಧ್ಯಯನಶೀಲತೆ ಹಪಾಹಪಿ ಇಲ್ಲದಿರುವ ಬಗ್ಗ್ಎ ಸಿದ್ದು ಅವರು ಗಂಭೀರವಾಗಿ ಆರೋಪಿಸುತ್ತಾರೆ.
ಲಿಂಗ ಭೇದವಿಲ್ಲದೆ ಅಂಗ ಸಮಭೋಗದ ಪರಿ ಮತ್ತು ಸಲಿಂಗಕಾಮಗಳ ತಲ್ಲಣವನ್ನು ಆತಂಕದಿಂದ ಎದುರುಗೊಳ್ಳುವ ಲೇಖಕರು, ಇಂಗ್ಲೆಂಡಿನ ಯುವ ಸಮುದಾಯ ಹೆಚ್ಚು ಜವಾಬ್ದಾರಿಯಿಲ್ಲದೆ ಪಡ್ಡೆ ಹುಡುಗರಂತೆ ಅಲೆಯುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.
ಎತ್ತಣ ಮಾಮರ ಎತ್ತಣ ಕೋಗಿಲೆಯ ಮೂಲಕ ಇಂಗ್ಲೆಂಡಿನ ದರ್ಶನ ಮಾಡಿಸುವ ಲೇಖಕರು ಅಲ್ಲಿನ ಜನರು ಯಾವುದಾದರು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ ಒಂದು ಕ್ಷಣವನ್ನು ವ್ಯರ್ಥ ಕಳೆಯದೆ ಅಧ್ಯಯನ, ಇಮೇಲ್ ಮೂಲಕ ಜಗತ್ತಿನ ವಿವಿಧ ವಿಷಯಗಳನ್ನು ಅರಿಯಬಲ್ಲವರಾಗಿದ್ದಾರೆ. ಇಲ್ಲಿ ಹರಟೆಯಲ್ಲಿ ತೊಡಗುವ ಜನ ಬಹಳ ಕಡಿಮೆ ಎನ್ನುವ ಮೂಲಕ ಆ ಜನರು ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸುತ್ತಾರೆ.
ಒಟ್ಟಾರೆ ಈ ಕೃತಿ ಇಂಗ್ಲೆಂಡ್ ಪ್ರವಾಸ ಮಾಡಬಯಸುವವರ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ 16 ವರ್ಣ ಚಿತ್ರಗಳನ್ನು ಒಳಗೊಂಡ ಈ ಪುಸ್ತಕವು ಲಂಡನ್ ಬ್ರಿಡ್ಜನ ಆಕರ್ಷಕ ಮುಖಪುಟ ಹೊಂದಿದೆ.
- ನಿಷ್ಠಿ ರುದ್ರಪ್ಪ
ಅಧ್ಯಕ್ಷರು ಜಿಲ್ಲಾ ಕಸಾಪ, ಬಳ್ಲಾರಿ.

No comments:

Post a Comment