Monday, February 27, 2017

ಬದುಕ ಪಾಠ-ಪಾಕ ಶಾಲೆ

ಬದುಕ ಪಾಠ-ಪಾಕ  ಶಾಲೆ

ಬದುಕ  ಶಾಲೆಯಲಿ ಪಾಠ
ಕಲಿಸಲು ಅಸಂಖ್ಯ ಗುರುಗಳು
ಕಲಿಯಲು ಸಾವಿರಾರು ವಿಷಯಗಳು

ಬದುಕ ಪಾಕ ಶಾಲೆಯಲಿ ಬಗೆ ಬಗೆಯ
ಬಗೆ ಬಗೆಯ ನೂರೆಂಟು ಪಾಕಗಳು
ಸವಿಯಬೇಕು ಹಿತ-ಮಿತ

ಬರೆಯದೇ ಓದದೇ ಕಲಿಯುವ ನೂರು
ವಿಧಾನಗಳು
ಯಾಕೆಂದರೆ ಇದು ಬದುಕೆಂಬ ಮಹಾಶಾಲೆ

ಗುರಿಯಿಲ್ಲದ ಪಯಣದಲಿ ಹಿಂದೆ ಗುರುವಿಲ್ಲ
ಮುಂದೆ ಎಲ್ಲವೂ ಶೂನ್ಯ ಆದರೂ ನಿಲ್ಲದ ಪಯಣ

ಸದ್ದಿಲ್ಲದೆ ಬಂದವರು ದೊಡ್ಡ ಸುದ್ದಿ ಮಾಡಿ ತಮಗೆ
ಬೇಕಾದಂತೆ ಆಟ ಆಡಿ ಮರದ ತೊಗಟೆಗೆ ಮೈ ತಿಕ್ಕಿ
ತುರಿಕೆ ತೀರಿಸಿಕೊಂಡಂತೆ  ನಡೆದು ಬಿಡುತ್ತಾರೆ
ಬಿಡುತ್ತಾರೆ ನಮ್ಮನು ಅರ್ಧ ದಾರಿಯಲಿ
ಉಳಿದ ದಾರಿಯ ಕ್ರಮಿಸುವ ಹೊಣೆ ಹೆಗಲಿಗೆ ಹೊರಿಸಿ

ನಿಲ್ಲಬಾರದು ನಿಲ್ಲಲಾಗದು
ಹೋಗುತ್ತಲಿರಲೇಬೇಕು
ನಿಂತರೆ ಮಲಿತು
ಮೈಲಿಗೆ ಕೊಳೆತ ನಾತ

ಅವರಿವರನು ಶಂಕಿಸಿ ಶಪಿಸಿ ದೂರಿ ದೂಡುವುದು
ಬೇಡ ಎಲ್ಲರೂ ಪಾತ್ರಧಾರಿಗಳು ದೇವನಾಡಿಸುವ
ಬಣ್ಣವಿರದಾಟದಲಿ

ನವರಸಗಳ ರಸಗವಳವ ಮೀಯಬೇಕು ಬದುಕಿನ
ಹದವರಿತು
ಮನದ ಬಾಗಿಲು ತಟ್ಟುತ್ತಾರೆ ನೂರೆಂಟು ಜನ ತಮ್ಮ
ಅನೂಕೂಲಕ್ಕಾಗಿ

ತೆಗೆದು ತೋರುವ ಮುನ್ನ ಇರಲಿ ಮನದಂಕಿತದ
ಲಗಾಮು ಓಡಿಸುವ ಮುನ್ನ

ಎಲ್ಲಿಯೇ ಹುಟ್ಟಿ ಎಲ್ಲಿಗೋ ಹರಿಯುವ ಜೀವನದಿ
ಅನುಭವಿಸುವ ಅಂಕು ಡೊಂಕುಗಳ ಅನುಭವಿಸದೇ
ಸೇರಲಾದೀತೇ ಮುಕ್ತಿ ಸರೋವರ

ಹೀಗೆ ಹರಿಯುತ್ತ ಹರಿಯುತ್ತ ತಿರುವುಗಳ ಎದುರಿಸುತ
ಕಲಿತ ಪಾಠಗಳ ಮೆಲುಕುತ ಮೆಲುಕುತ್ತ ಬಂದ
ಕುತ್ತುಗಳ ಎದುರಿಸಿ ಪಾರಾಗುತ್ತ ಒಮ್ಮೆ ದಡ
ಸೇರೋಣ , ಒಮ್ಮೆ ದಡ ಸೇರಿ ಬಿಡೋಣ.
---ಸಿದ್ದು ಯಾಪಲಪರವಿ

ದೇಹದಾಚೆಗಿನ ಮಿಂಚು

ದೇಹದಾಚೆಗಿನ ಮಿಂಚು

ಸರಸದ ಸಮರಸದಿ ಸೋಲು ಗೆಲುವುಗಳ
ಬಿಗುಮಾನದ ಸೊಲ್ಲಿಲ್ಲ

ದೇಹಗಳ ಹಂಗು ಹರಿದು ಆತ್ಮಗಳು ಮಿಲನಕೆ ಮನಸೋತು ಮೈಯೊಡ್ಡಿ ನಿಂತಾಗ ಅಹಮಿಕೆಯ ಹಂಗಿಲ್ಲ

ಒಮ್ಮೆ ನಾನು ಮತ್ತೊಮ್ಮೆ ನೀನು
ಆದಾಗ ಈ ಜಗದ ಪರಿವಿಲ್ಲ

ಪಂಚಮಹಾಭೂತಗಳು ಹೂಂಕರಿಸುವ ಅಮರ ಮಿಲನದಾಟದಲಿ ಸೋತು ಗೆಲ್ಲುವ ಚಡಪಡಿಕೆ

ಮೈಮನಗಳು ಹಗುರಾಗಿ ತೇಲಾಡುವ ಮಧುರ ಕ್ಷಣಗಳಲಿ
ಏಕತೆಯ ನಿನಾದವೇ ನಿನಾದ

ಇದು ನಿತ್ಯದ ಸಂಭ್ರಮವಲ್ಲ ದೇವನೊಲುಮೆಯ ಪ್ರಕಾಶದಿ
ಒಮ್ಮೆ ಥಟ್ಟನೇ ಹೊಳೆಯುವ ಕೋಲ್ಮಿಂಚು

ಕೆಸರಲರಳಿದ ಕಮಲದಂತೆ ಮೆಲ್ಲನೆ ಬಿಚ್ಚಿಕೊಳುವ
ಸೊಗಡಿನ ಸಿರಿ

ಮಿಂಚು ಗುಡುಗುಗಳ ಸಂಚಲನದಿ ಸುರಿಯುವ ಮಳೆ ನಾಸಿಕಕೆ ರಾಚುವ  ಮಣ್ಣಿನ ವಾಸನೆ

ದೇಹ-ಮನಸುಗಳ ಮಿಲನ ಬರೀ ಕಾಮದಾಟವಲ್ಲ
ಕೆಲ ಕ್ಷಣದ ತೀಟೆಯೂ ಅಲ್ಲ

ಮನುಜ ಪಥವ ಬೆಳಗಲು ದೇವನಿತ್ತ ಮಹಾ ಮಿಲನ
ಮಹೋತ್ಸವದ ಬೆರಗು ಬೆಳಕು ಹರಿಯುವದರೊಳಗೆ

ಇದು ಎಲ್ಲಂದರಲ್ಲಿ ಎಲ್ಲರೊಂದಿಗೆಯೂ ಅಲ್ಲ
ಬದುಕಿನ ರೀತಿ ನೀತಿಗಿದು ಸಲ್ಲ

ಪರಸ್ಪರ ಒಲಿಯದೆ ಮನಸುಗಳು ಬಲಿಯದೆ
ಆಗದು ಈ ಒಲವ ಜಲದ ಕ್ರೀಡೆ

ನೀ ಗಂಡು ನಾ ಹೆಣ್ಣು ನೀ ಮೇಲು ನಾ ಕೀಳು
ಎಂಬ ತಂಟೆ ತಗಾದೆಯ ಆಟವಂತೂ ಅಲ್ಲವೇ ಅಲ್ಲ

ಇದರ ಸವಿಯ ಬಲ್ಲವನೇ ಬಲ್ಲ
ಬಲ್ಲಿದಾಗ ಮೆಲ್ಲಬಲ್ಲ ಮೆಲ್ಲ ಬೆಲ್ಲ.

---ಸಿದ್ದು ಯಾಪಲಪರವಿ

ಮುಂದೆ ಸಾಗುವೆ

ಮುಂದೆ ಸಾಗುವೆ

ಗಮ್ಯದ ಕಡೆ ಗಮನವಿಟ್ಟು ನಿರಂತರ
ದುಡಿಯುವ ಮೈಮನಗಳ ಓಟಕ್ಕೆ
ಬೇಕು ಕೊಂಚ ವಿಶ್ರಾಂತಿ
ಆದರೆ ವಿರಾಮವಲ್ಲ

ವಿಶ್ರಾಂತಿ ಬಯಸಿದ ಮನಕೆ
ಜೀವಸೆಲೆ ತುಂಬುವ
ಸ್ಪೂರ್ತಿಯ ಚಿಲುಮೆಯಾಗಿ
ಎನ್ನ ಮುನ್ನಡೆಸಲಿ ಎಂಬ ಬಯಕೆ
ಅಪರಾಧವಲ್ಲ

ಎನ್ನ ಮನದ ಬಯಕೆ
ಮುಟ್ಠಾಳ ದೌರ್ಬಲ್ಯವೆಂದು
ನಿನಗನಿಸಿ ನನ್ನ ಭಾವನೆಗಳೊಂದಿಗೆ
ಚಲ್ಲಾಟವಾಡಿದರೆ ನಾ ಸಹಿಸಬಹುದು
ಆದರೆ ಸಮಯ ಸಹಿಸುವುದಿಲ್ಲ

ಧ್ಯಾನಸ್ಥ ಮನಸಿಗೆ ಅದರೆ ಆದ ತಾಕತ್ತು
ಉಕ್ಕಿ ಹರಿಯುತಿರುವಾಗ ತಡೆಯುವ
ಗಮ್ಮತ್ತು ಹೇಗೆ ಸಾಧ್ಯ ?

ಪವಿತ್ರ ಭಾವನೆಗಳು  ಪ್ರೀತಿ-ಪ್ರೇಮ-ಪ್ರಣಯ
ಸಂತೆಯಲಿ ಹರಾಜಿಗಿಟ್ಟ ಹಳೆ ಪಾತ್ರೆಯಲ್ಲ
ಗಿಲೀಟು ಮಾಡಿದ ನಕಲಿ ಆಭರಣಗಳಲ್ಲ

ಭಾವನೆಗಳೊಂದಿಗೆ ಒಂದಿಷ್ಟು ಆಟ
ಆಡಿ ಮೋಜು ಮಾಡಿ ಮಜಾ ಉಡಾಯಿಸಿ
ಧೂಳೆಬ್ಬಿಸಿ ಕಣ್ಣು ಮಂಕಾಗಿಸಬಹುದು

ನಂಬಿದ ಮೌಲ್ಯಗಳು ಕಾಯುವ ಗುರು
ಕಾಡುವ ಅಗಮ್ಯ ಅಪ್ರತಿಮ ಗಮ್ಯಗಳು
ಮುನ್ನಡೆಸುವದನು ತಡೆಯುವುದು
ನನ್ನಿಂದಲೇ ಅಸಾಧ್ಯ

ಬರೆಯುವ ಲೇಖನಿ ಕಿತ್ತಿಕೊಳಬಹುದು
ನುಡಿಯುವ ನಾಲಿಗೆ ಕತ್ತರಿಸಬಹುದು
ಉಸಿರುಗಟ್ಟಿ ಸಾಯಿಸಬಹುದು

ಮೋಡದಂತೆ ನಿತಾಂತವಾಗಿ
ಚಲಿಸುವ ಭಾವನೆಗಳ ನಿತ್ಯ
ನದಿಯಂತೆ ನಿಧಾನವಾಗಿ
ಹರಿಯುವ ವಿಚಾರಗಳ
ಯಾರೂ ತಡೆಯಲಾರರು

ಮುಂದೆ ಗುರಿಯಿದ್ದು ಹಿಂದೆ ಗುರು
ಇರುವಾಗ ನಿನ್ನ ಆಟದ ಮಾಟ
ಇನ್ಯಾವ ಲೆಕ್ಕ

ಬೈಯ್ಯಲಾರೆ ಶಪಿಸಲಾರೆ ದೂರಿ
ದೂರಮಾಡಲಾರೆ ಗೊಣಗಲಾರೆ
ಹಳಿಯಲಾರೆ ಅರಚುತ ಕಿರುಚುತ
ಕರುಬುತ ಕುದಿಯಲಾರೆ

ಒಂದಿಷ್ಟು ಅತ್ತು
ನನ್ನ ಆಸೆಗಾಗಿ ವ್ಯಥೆ ಪಟ್ಟು
ಹರಿವ ಕಣ್ಣ ನೀರು ಬಿದ್ದ ಧೂಳು
ಕಣಗಳ ದೂರ ಮಾಡಿದಕೆ ನಸು ನಕ್ಕು
ಸುಮ್ಮನಾಗಿ ಮುಂದೆ ಸಾಗುವೆ

ಒಳ್ಳೆಯದಾಗಲಿ ನನಗೆ ಪಾಠ ಕಲಿಸಿದ
ನಿನಗೆ ಎಂದು ಹಾಡುತ ಮುಂದೆ ಸಾಗುವೆ.
---ಸಿದ್ದು ಯಾಪಲಪರವಿ

Tuesday, February 21, 2017

ಮಹೋತ್ಸವ


ಹೂವ ರಾಶಿಯ ಮೇಲೆ
ಮಲ್ಲಿಗೆಯ ಮೊಗ್ಗಲಿ ಸಿಂಗರಿಸಿ
ವಸ್ತ್ರದ ಹಂಗು ಹರಿದು 
ಮೈಮನಗಳ ಬಿಗುಮಾನ
ತೊರೆದು ಅಡಿಯಿಂದ
ಮುಡಿಯವರೆಗೆ ಮುತ್ತಿನ
ಮಳೆಗರೆದು
ವೀಣೇಯ ತಂತಿಯ ತೆರದಿ
ಉನ್ಮಾದದ ನಿನಾದವ
ಹೊರಡಿಸುವಾಸೆ

ನಿನ್ನ ಮುಲುಕಾಟದ ಅಲೆಯಲಿ ತೇಲುತ
ಮೆಲ್ಲ ಮೆಲ್ಲನೆ ಪ್ರತಿ ಅಂಗುಲ ಸರ್ಪ ಸಂಚಾರದಿ ಹರಿದಾಡಿ ನಾಜೂಕಾಗಿ ಹಿಂಡಿ ಹಿಪ್ಪೆ ಮಾಡಿ
ಕಬ್ಬಿನ ರಸವ ಹೀರುವಾಸೆ

ಕಣ್ಣಿನ ನೋಟ
ಮೈಥುನದಾಟದಲಿ ಸೋಲದೇ ಮೇಲಿರುವ ಧಾವಂತ
ಮೆಲ್ಲಗೆ ನಾಲಿಗೆ ಚಾಚಿ ಸವರುತ ತುಟಿಯಂಚಲಿ ಎದೆ
ಶಿಖರದ ದ್ರಾಕ್ಷಿಯ
ಮೆಲ್ಲುತ ಚಿಮ್ಮುವ
ಅಮೃತವ ಸವಿಯುವಾಸೆ

ಬಿಗಿದಪ್ಪಿ ಅಪ್ಪಚ್ಚಿ ಮಾಡಿ ಎತ್ತಿ ನಾಜೂಕಾಗಿ ನರ್ತಿಸುತ ನಿನ್ನ ದೇಹದಲುಗಾಟವ ಕಣ್ತುಂಬುವ ರೋಮಾಂಚನ 

ದೇಹ ಸಿರಿಯ ಸೂರೆ ಮಾಡಿ
ನಿನ್ನ ಮುಲುಕಾಟದ
ಇಂಪಿನ ಕಂಪಲಿ ಕರಗಿ
ನೀರಾಗಿ ನಿನ್ನ ಒಳಗೆ
ತೀರಾ ಒಳಗೆ ರಭಸದಲಿ ನುಗ್ಗಿ ಚಡಪಡಿಸಿ ಕೊಸರಾಡಿ
ಹರಿಯುವ ಬೆವರಲಿ
ತೇಲುತ ತೇಲುತ ನಿಧಾನದಿ
ನಿಧಾನದಿ ಹರಿದು
ಹಗುರಾಗುವ ಬಾ
ಸಖಿ

Monday, February 20, 2017

ಮನದಾಟ

ಮನದಾಟ

ಈ ಜಗದಲಿ ಮಿಲನವೆಂಬುದು
ಬರೀ ದೇಹದಾಟವಲ್ಲ
ಮನಸು ಮನಸು ಕೂಡಿದರೆ
ಸಾಕು ಕೂಡುವಾಟ ಮುಗಿಯುವುದಿಲ್ಲಿ 

ಚರಿತ್ರೆಯ ಬೆಂಬತ್ತಿ ಹೋದ
ಚಾರಿತ್ರ್ಯ ಬೀಳುವುದು
ಅಲ್ಲಿ ಇಲ್ಲಿ ಎಲ್ಲಿ ಮತ್ತೆಲ್ಲಿ

ಬೆನ್ನು ಬಾಗಿ ಗೂನು ಬಿದ್ದು
ಸುಕ್ಕು ಗಟ್ಟಿ ಮುದಿಯಾಗಿ
ಕೊಳೆತು ಹೆಣವಾಗಿ ನಾರುವ
ದೇಹಕಿಲ್ಲ ಮೂರು
ಕಾಸಿನ ಕಿಮ್ಮತ್ತು

ಬದುಕಿ ಬಾಳುವ
ಸವಿ ಅಡಗಿರುವುದು
ಮನದ ಮೂಲೆಯಲ್ಲಿ

ಮನಸ ಹಾರಲು ಬಿಟ್ಟು
ಕನಸಲಿ ಕೆಟ್ಟರೂ ಸಾಕು
ಮೈಗೆ ಚಾರಿತ್ರ್ಯ ಇನ್ನೆಲ್ಲಿ

ಚಾರಿತ್ರ್ಯ ಚರಿತ್ರೆಯ ಒಳಗುಟ್ಟು
ಬಲ್ಲ ಕೇವಲ ಮನದ ಕಳ್ಳ
ಮನಸ ಸಾಕ್ಷಿ ಸಾಕು
ಬದುಕ ಬವಣೆ ಎಲ್ಲ

ಕಳ್ಳರು ನಾವು ಬಲುಗಳ್ಳರು
ಹುಡುಕುತೇವೆ ಅವರಿವರ
ದೇಹದಾಟದ ಮಾಟ

ಕಳೆದುಕೊಂಡ ಕಳ್ಳ
ಮಳ್ಳರಾಗಿ ಮರೆಯಾಗುತೇವ
ಒಂದು ದಿವಸ.

---ಸಿದ್ದು ಯಾಪಲಪರವಿ

ಜಲಧಾರೆ

ಜಲ ಧಾರೆ

ನಾ ಹರಿಸುವ ಪ್ರೀತಿ ಜಲಧಾರೆಯಲಿ
ಮೀಯಲು ಸನ್ನದ್ಧಳಾಗು ಕೊಚ್ಚಿ
ಹೋಗದಂತೆ ಬಿಗಿದಪ್ಪಿ
ಮುದ್ದು ಮಾಡಿ ಹೊಸ
ಲೋಕವ ಸೇರುವ

ಮನದಲಿ ಉಕ್ಕಿ
ಹರಿಯುವ ಪ್ರೀತಿ
ಸರೋವರಕೆ ಕಟ್ಟಲಾದೀತೆ
ಆಣೆಕಟ್ಟನು
ಕಟ್ಟಿದರೆ ಕೊಚ್ಚಿ
ಹೋಗುವೆವು ಪ್ರೇಮದಲೆಯಲಿ
ಇದು ದೇಹದಾಚೆಗಿನ
ಪ್ರೇಮಗಾನ ಇಲ್ಲಿ ಇಲ್ಲವೇ
ಇಲ್ಲ ಕಾಮದಪಸ್ವರ

ಸುರಿವೆ ನಿತ್ಯ ಮುತ್ತಿನ
ಮಳೆ ಬೇಡ ನಮಗೆ
ಗತ್ತು ಗೈರತ್ತಿನ ಕೊಳೆ

ದೇವನಿತ್ತ ವರ ನೀ
ಕೇಳಿಸಿತವನಿಗೆ ನನ್ನ ಮನದ ಮೊರೆ
ದಕ್ಕಿದೆನಗೆ ನೀ
ಉತ್ಸಾಹದ ಚಿಲುಮೆಯಾಗಿ
ನಾಜೂಕಾಗಿ ನನ್ನ ಮನವ ತಾಗಿ

ಬ್ರಹ್ಮ ಬರೆದ ವಿಧಿಯ ಲೀಲೆ
ಸಿಕ್ಕಿತೆನಗೆ ಪ್ರೇಮ ಜ್ವಾಲೆ
ತಪ್ಪಿಸಿಕೊಳಲಾದೀತೆ
ನೀ ನಾ

---ಸಿದ್ದು ಯಾಪಲಪರವಿ

ಹಂಗೇಕೆ

ಹಂಗೇಕೆ

ಹೊಳೆಯುವ ಚಿನ್ನಾಭರಗಳು
ಅಸೂಯೆ ಪಡುತಿವೆ
ನಿನ್ನ ಮೈ ಕಾಂತಿಯ ಬೆರಗ ಕಂಡು

ವೃಕ್ಷ ಸ್ಥಳಗಳ ಮೇಲೆ ರಾರಾಜಿಸುತಿರುವ
ಕೇಶರಾಶಿಗೆ ಎಲ್ಲಿಲ್ಲದ ಗರ್ವ
ಹರಡಿ ಅಪ್ಪಿರುವ ಮಹಾದಾನಂದ

ಉಡುಗೆಯ ಹಂಗೇಕೆ
ಚಿನ್ನದ ಬೊಂಬೆಗೆ
ಬೆಳಕ ಸಿರಿ ಮರೆಮಾಚಲು

ಕಣ್ಣಂಚಿನ ಸೆಳೆತವಷ್ಟೇ ಸಾಕು
ಎದೆ ನಡುಗಿಸಿ ಬೆರಗಾಗಿ
ಕರಗಿ ಹೋಗಲು

ಸಾಕು ಸಖಿ ಈ ಬೆರಗಿನಾಟವ
ಸೋತು ಶರಣಾಗಿ ಕರಗಿ
ನೀರಾಗಿ ಪುಳಕಗೊಂಡು
ಮೈಮನಗಳು ನಲುಗಿವೆ
ನಿನ್ನ ಚಲುವ ಮಾಟವ ಕಂಡು
---ಸಿದ್ದು ಯಾಪಲಪರವಿ

ಇಷ್ಟೇ ಅಲ್ಲ

ಇಷ್ಟೇ ಅಲ್ಲ

ಬದುಕು ಎಂದರೆ ಇಷ್ಟೇ ಅಲ್ಲ
ಹೊಟ್ಟೆ ತುಂಬಾ ತಿಂದು
ಕಣ್ಣು ತುಂಬಾ ಮಲಗಿ
ಕಾಮನೆಗಳ ತಣಿಸಲು ಒಂದಿಷ್ಟು ಮುಲುಗಿ
ಬದುಕಿನ ಬವಣೆಗಳಲಿ ನಲುಗುವದಲ್ಲ
ಇನ್ನೂ ಏನೇನೋ ಇದೆ

ಓಡುವ ವಾಹನದ ಹಿಂದೆ ಜೋರಾಗಿ
ಬೆಂಬತ್ತಿ ಅಸಹಾಕತೆಯಿಂದ
ಏದುಸಿರು ಬಿಡುವ ಹಡಬೆ
'ನಾಯಿ ಪಾಡು ' ಅಲ್ಲ

ಕಂಗಳ ನೋಟಕೆ ಮಾತಿನ ಮಾಟಕೆ
ಮರುಳಾಗಿ ಜೊಲ್ಲು ಸುರಿಸಿ ಕಾಲಹರಣ
ಮಾಡುವುದೂ ಅಲ್ಲ

ಹಾಗೆ ಮಾಡಿದ್ದರೆ
ಗೌತಮ ಬುದ್ಧನಾಗುತ್ತಿರಲಿಲ್ಲ
ಅಲ್ಲಮ ಪ್ರಭುವಾಗುತ್ತಿರಲಿಲ್ಲ
ಬಸವಣ್ಣ ಅಣ್ಣನಾಗುತ್ತಿರಲಿಲ್ಲ
ಅಕ್ಕ ಮಹಾದೇವಿಯಾಗುತ್ತಿರಲಿಲ್ಲ
ಗಾಂಧಿ ಮಹಾತ್ಮನಾಗುತ್ತಿರಲಿಲ್ಲ

ಸಾವಿರ ವರುಷಗಳು ಉರುಳಿದರೂ
ಸಾವಿರದೆ ಬದುಕುತ್ತಿರಲಿಲ್ಲ
ನಮ್ಮ ಹಾಗೆ ಇದ್ದು ಸಾಯುತ್ತಿರಲಿಲ್ಲ

ನಿತ್ಯವೂ ಉದಯಿಸುವ ರವಿ
ನಗುವ ಚಂದಿರ ಹೊಳೆಯುವ
ಚುಕ್ಕಿಗಳಿಗೆ ದಣಿವೂ ಇಲ್ಲ
ಸಾವು ನೋವುಗಳ ಹಂಗಿಲ್ಲ

ಧ್ಯಾನಸ್ಥ ಸ್ಥಿತಿಯಲಿ ಒಳಗಿಳಿದಾಗ
ಕಾಡುವ ಎಚ್ಚರಿಸಿ ಕೆನ್ನೆಗೆ ಬಾರಿಸುವ
ಮಹನೀಯರಿಗೆ
ನಮೊ ನಮಃ
---ಸಿದ್ದು ಯಾಪಲಪರವಿ

Sunday, February 19, 2017

ಕಳೆದು ಹೋಗತೀವಿ

ಕಳೆದು ಹೋಗತೀವಿ ಒಮ್ಮೊಮ್ಮೆ ತಪ್ಪು
ಲೆಕ್ಕ-ಆಚಾರಗಳಿಂದ ನಮಗೆ
ಅರಿವಿಲ್ಲದಂಗ  ಮನದಾಟದ
ಮಹಿಮೆಯ ನಂಬಿ ಜೋಲಿ ಹೊಡೆಯುತೀವಿ

ಹಸಿವು ತಾಳಲಾರದೇ ಜೋಳಿಗೆ ಒಡ್ಡುತೀವಿ
ಜಿಡ್ಡು ಜನರ ಮುಂದ
ಹಾಲು ಹಿಂಡುತೀವಿ ಗೊಡ್ಡು ಎಮ್ಮಿಯಿಂದ

ನಂಬಿ ಕೆಟ್ಟವರಿಲ್ಲ ಎಂದು ಕೆಟ್ಟವರ ನಂಬಿ
ಕೆಡುತೀವ ಅವರಲ್ಲ ಕೆಟ್ಟವರು ನಾವೆಂಬುದ
ಮರೆತು ಹಲುಬಿ ಮನದಲಿ ಮರುಗತೀವ

ದುಃಖದಿ ಮಂದ್ಯಾಗ ಅತ್ತು ಮಂಗ್ಯಾ ಆಗಿ
ಹಾರಿ ಹೋಗುತೇವ
ರೆಂಬಿ ಮ್ಯಾಲ ಕುಂತ ಹಕ್ಕಿಗೂ ಗೊತ್ತು
ನಂಬಬಾರದು ರೆಂಬಿಯನೆಂದು
ಹಾರತೈತಿ ಮ್ಯಾಲ ತನ್ನ ರೆಕ್ಕಿಯ ನಂಬಿ

ಮೂರು ದಿನದ ಸಂತೀವಳಗ ನಾವ ದಾರಿ
ತಪ್ಪಿ ಅಡ್ಡ ದಾರಿ ಹಿಡೀತೀವ ನೋಡದ
ಹಿಂದ ಮುಂದ...
---ಸಿದ್ದು ಯಾಪಲಪರವಿ

Saturday, February 18, 2017

ಪೂರ್ಣ ಮಿಲನ

ಪೂರ್ಣ ಮಿಲನ

ನಗುತಿರುವ 'ಪೂರ್ಣ 'ಚಂದಿರ
ಮೋಸ ಮಾಡಲಾರ ನಗುವಲಡಗಿರುವ
ಆಳದ ಮುಗ್ಧತೆಯ ಸಿರಿಯ ಕದಿಯಲಾಗದು

ಉಕ್ಕಿ ಹರಿಯುವ ಅಲೆಗಳ ದಕ್ಕಿಸಿಕೊಳುವ ತವಕ
ಬಿದಿಗೆ ಚಂದಿರೆಗೆ

ಮೇಲಿರುವ ಆಗಸಕೆ ಧರೆಗಿಳಿದು
ಭುವಿಯ ಸೇರುವಾಸೆ
ಭುವಿಗೂ ಬಾನೆತ್ತರಕೆ ಹಾರುವಾಸೆ

ಮಿಲನ ಸುಖಕೆ ತುಡಿಯುವ ಜೀವಗಳ
ಹಿಡಿದು ತಡೆಯುವವರು ಯಾರಿಹರು
ಈ ಜಗದಲಿ

ಭಾನು-ಭೂಮಿ
ಚಂದ್ರ-ಕಡಲಲೆಗಳ ಮಿಲನಮಹೋತ್ಸವಕೆ
ಮೂಕಸಾಕ್ಷಿ ನೀನೇ ದೇವಾ

ದೇಹಮೀರಿದ ಆತ್ಮಗಳ ಸಚ್ಛಿದಾನಂದವ
ಸವಿಯುವ ಎನ್ನಳಲ ಕೇಳು ದೊರೆಯೇ
ನೀನೊಲಿಯದೆ ಸವಿಯಲಾರೆ ಕಬ್ಬಲಡಗಿರುವ
ಸವಿಯ , ಹೂವಲವಿತಿರುವ ಮಧುವ.

ಭಾವ-ಜೀವಗಳ ತಳಮಳಕೆ ತೋರು
ಗುರುವೆ ಹೊಸದೊಂದು ಹೊಳೆವ ಬೆಳಕ.
---ಸಿದ್ದು ಯಾಪಲಪರವಿ

ಸ್ಪೂರ್ತಿಯ ಸೆಲೆ

ಸ್ಪೂರ್ತಿಯ ಸೆಲೆ

ಸಾವಿರಾರು ಭಾವನೆಗಳಿಗೆ ಗಾಳ
ಹಾಕಿ ಹಿಡಿದಿಡುವ ಸೆಳೆತ
ಕಣ್ಣು ಮಿಟುಕಿಸದ ತೀಕ್ಣ ಸವಿ ನೋಟ

ಚಿನ್ನದಲಿ ಕೆತ್ತಿ ಸಿಂಗರಿಸಿದ ಮೈ-ಮಾಟ
ಒಡೆವೆಗಳ ಹಂಗಿಲ್ಲ ಚಿತ್ತಾರದ ಚಲುವಿಗೆ

ಅಲ್ಲೆಲ್ಲೋ ಹುಡುಕುತಿದ್ದೆ ಚುಕ್ಕಿ-ಚಂದ್ರಮರ
ಬಾನಲಿ
ಆದರೆ ನೀ ಇಲ್ಲೇ ಹೊಳೆಯುತಿರುವೆ ಅಂಗೈ
ಕನ್ನಡಿಯಲಿ

ಒಮ್ಮೆ ದೀರ್ಘವಾಗಿ ಆಸ್ವಾದಿಸಲು
ಚಡಪಡಿಸುವ ಪಂಚೇಂದ್ರಿಯಗಳ
ಕಾತುರಕೆ ಬೇಕು ಸಣ್ಣ ಕಡಿವಾಣ

ಇಲ್ಲದಿರೆ ಅರಿವಿಲ್ಲದೆ ಅಳಿದು ಲೀನನಾಗಿ
ಕಳೆದು ಹೋಗುವೆ ಕಂಗಳ ಸರೋವರದಲಿ
ಜಾರಿ ಇಳಿಯುವ ಮುನ್ನ ಅರಿಯುವುದು
ಒಳಿತು ದೇವನಿತ್ತ ಭಾಗ್ಯವ ಸ್ವೀಕರಿಸುವ
ಪರಿಯ

ಸಾಕು ಮನವ ತಡೆದುಕೋ ತಲ್ಲಣವ
ಅನುಮತಿಯಿಲ್ಲದೆ ಅಪ್ಪಿಕೊಳಬೇಡ ದೇವ
ನೀಡಿದ ಸಿರಿಯ

ಒಲಿಯುವ ಯೋಗಾಯೋಗದಲಿ
ಇರಲಿ ಸ್ಪೂರ್ತಿಯ ಸೆಲೆಯಾಗಿ ನಿತ್ಯ
ನೂತನ

ಕಾಯು ಮನವೆ ಅಂಗೈಯಲಿ ಹಿಡಿದು
ಜೀವನೋತ್ಸಾಹದ ಈ ಚಲುವ...

---ಸಿದ್ದು ಯಾಪಲಪರವಿ

Monday, February 13, 2017

ಪ್ರೇಮಿಗಳ ದಿನ

ಉಕ್ಕಿ ಹರಿಯುವ ಭಾವನೆಗಳಿಗೆ
ಲೆಕ್ಕ ಕೊಡುವವರು ಯಾರು ?

ಕನಸಲಿ ಕಂಡವಳು ಮನದಲಿ ಮೂಡಿದವಳು
ನನ್ನ ಹೆಸರಲಿ ಹೂ ಮುಡಿದು ಕಾಡಿದವಳು
ಬೀದಿ ಬದಿಯಲಿ ಹಾಯ್ದು ಹೋಗುವಾಗ
ಕ್ಷಣ ಹೊತ್ತು ಕದಡಿದವಳು

ಪ್ರೇಮವೆಂಬುದೊಂದು ಬಿಕ್ಷೆ ಬೇಡಿದರೆ ನೀಡಬಹುದು ಶಿಕ್ಷೆ
ಬೇಡದಿರೆ ಸಿಗಬಹುದಿತ್ತೇನೋ ಎಂಬ ಬಡಬಡಿಕೆ

ರಾಮನ ನಿಷ್ಟೆಯದುರು , ರಾವಣನೂ ಅಷ್ಟೇ
ಎದುರಿಗಿದ್ದರೂ ಮನಗೆದ್ದು ವರಿಸಲು ಹೆಣಗಿ ಹೆಣವಾದ
ಪಡೆದ ಚಡಪಡಿಕೆಯಲಿ ರಾಮ ಜೀವಂತ ಬಲಿಯಾದ

ಹೆಣ್ಣು-ಹೊನ್ನು-ಮಣ್ಣು ಬೇಡ ಯಾರಿಗೆ ಹೇಳಿ
ಮನದಲಿ ತಿಂದ ಮಂಡಿಗೆಗೆ ಗೋದಿ ಕೊಡುವವರು ಯಾರು ?

ಈ ಬದುಕೇ ಹೀಗೆ ಇರುವುದ ಬಿಟ್ಟು ಇಲ್ಲದಕೆ ಹಾರುವ ಮಂಗ ಸುಮ್ಮನೇ ಬಿಟ್ಟುಕೊಂಡ ಇರುವೆ

ನಕ್ಕು ಮಾಯವಾದವಳು
ಅತ್ತು ಎದೆಯೇರಿದವಳು
ಪಕ್ಕದಲಿ ನಿಶ್ಯಬ್ದ ಮಲಗಿದವಳು
ಯಾರು ಮನಕೆ ಸನಿಹವೋ ನಾ ಕಾಣೆ

ಹುಡುಕುವೆ ಕಳೆದು ಕೈಗೆ ಸಿಗದವಳ ಸಂತೆಯಲಿ ಸಿಕ್ಕರೂ ಸಿಗಬಹುದು ಎಂಬ ಲಂಪಟ ಮನಸಿಗೆ ಇಲ್ಲ ಕಡಿವಾಣ

ನೆನಪುಗಳ ಬಗೆದರೆ ಅಸಂಖ್ಯ ವಾಂಛೆಯಲಿ ಕಳೆದು ಹೋದವರ ಲೆಕ್ಕ ಕೊಡುವುದಾದರೂ ಯಾರಿಗೆ

ಇಂದು ಈ ರಾತ್ರಿಯ ಬೆಳದಿಂಗಳಲಿ  ನನ್ನ ನೆನಪು ಮಾಡಿಕೊಂಡವಳು ಚಂದ್ರನ ಕಂಡು ನಸು ನಕ್ಕರೆ ಸಾಕು
ಹಾಲು ಬೆಳದಿಂಗಳು ನನ್ನ ಎದೆ ಮೇಲೆ ಎಲ್ಲ

ಕಣ್ಣು ಮುಚ್ಚಿ ಹುಡುಕುವೆ ಧ್ಯಾನಸ್ಥನಾಗಿ ಮರೆಯಾದವಳು ಮತ್ತೆ ಸಿಗಬಹುದು ಪ್ರೇಮಿಗಳ ದಿನದಂದು ಇಂದು ಎಂದೆಂದು ಮುಂದೆಂದು.

ಭರವಸೆಯ ಬೆಳಕ ಭರದ ನಡಿಗೆ ಬಾಡದಿರಲಿ ಎಂದೆಂದೂ...

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

---ಸಿದ್ದು ಯಾಪಲಪರವಿ

Tuesday, February 7, 2017

ನಿದಿರೆ

Sleep is temporary death
Death is permanent sleep

ಅನ್ನ ನೀರು ಕಾಮ ದಾಹ
ತೀರಿಸಲು ಸಂಗಾತಿ ಬೇಕು
ಆದರೆ ನಿದಿರೆಯ ಬಾಚಿ
ಅಪ್ಪಿ ಮುದ್ದಾಡಲು
ಬರೀ  ಏಕಾಂತ
ಸಾಕು.
---ಸಿದ್ದು ಯಾಪಲಪರವಿ

ಎಚ್ಚರಿಸು

ಕಿವಿ ಹಿಂಡಿ ಎಚ್ಚರಿಸು

ಆಸೆಗಳಿಗೆ ಮಿತಿಯಂಬುದೇ ಇಲ್ಲ
ಕಂಡದ್ದೆಲ್ಲ ನನಗಿರಲಿ ಅಲ್ಲ

ಹೆಣ್ಣು-ಹೊನ್ನು-ಮಣ್ಣು ಎಂಬ
ಜಗದ ಜಂಜಡದ
ಕೈಗೂಸು ನಾ
ಎಂದರಿತರೂ ಇನ್ನಿಲ್ಲದ
ಸೆಳೆತ ಸೆಳೆತ ಸೆಳೆತ

ಆಸೆಯ ಅರುಹಿದರೆ ಕಳೆದುಕೊಳ್ಳುವ ಭೀತಿ
ಬಿಟ್ಟು ಸದಾ ಕೊರಗಿದರೆ ಇನ್ನಿಲ್ಲದ ತವಕ

ಹಿಡಿ ಅನ್ನಕೆ ತುಂಬುವ ಹೊಟ್ಟೆ
ಬೊಗಸೆ ನೀರಿಗೆ ತಣಿಯುವ ದಾಹ
ಸಮ-ಭೋಗದಿ ಕರಗುವ ಚಪಲ

ಆದರೂ
ಬೇಕು ಬೇಕು ಬೇಕು
ಕಂಡದ್ದು ಕಣ್ಣಿಗೆ

ಬೇಡಲಾರೆ ಎಂಬ ಧ್ಯಾನಸ್ಥ ತಪವ
ಮನಕೆ ದೀಕ್ಷೆ ಕೊಡುವವರು ಯಾರು ?

ಉಸಿರು ನಿಂತ ಮರುಕ್ಷಣ ಇದು ಕೇವಲ
ದೇಹ ಎಂಬ ಒಣ ವೇದಾಂತದ ವಾದ

ಹೂತಿಟ್ಟ ಆಸೆಗಳು ಕೊಳೆತು ನಾರಿ ಮೂಗು
ಮುಚ್ಚಿಕೊಳ್ಳುವ ಹೇಸಿಗೆಯಲು ಸವಿ ಸುಖದ
ತೀರದ ಚಪಲ

ಕಳೆದು , ನಿರಾಕರಿಸಿ , ನಿರ್ಲಿಪ್ತ
ಹಂತವನೇರಲು ಉಸಿರು ಬಿಗಿಹಿಡಿದು
ಚಡಪಡಿಸುವ ಸಾಧನೆಯ ಹಾದಿಗೆ ಮಂಕು
ಕವಿದಾಗ ಕೈಹಿಡಿದು ನಡೆಸಿ ಕಿವಿ ಹಿಂಡಿ
ಎಚ್ಚರಿಸು ಗುರುವೆ.

ಹರ ಮುನಿದರೂ
ಕಾಯುವ ಗುರುವಿನ ಗುರು ನೀ
ನಾ ಹಿಡಿದ ಗುರಿ ತಲುಪುವ ತನಕ...
---ಸಿದ್ದು ಯಾಪಲಪರವಿ