Tuesday, February 7, 2017

ಎಚ್ಚರಿಸು

ಕಿವಿ ಹಿಂಡಿ ಎಚ್ಚರಿಸು

ಆಸೆಗಳಿಗೆ ಮಿತಿಯಂಬುದೇ ಇಲ್ಲ
ಕಂಡದ್ದೆಲ್ಲ ನನಗಿರಲಿ ಅಲ್ಲ

ಹೆಣ್ಣು-ಹೊನ್ನು-ಮಣ್ಣು ಎಂಬ
ಜಗದ ಜಂಜಡದ
ಕೈಗೂಸು ನಾ
ಎಂದರಿತರೂ ಇನ್ನಿಲ್ಲದ
ಸೆಳೆತ ಸೆಳೆತ ಸೆಳೆತ

ಆಸೆಯ ಅರುಹಿದರೆ ಕಳೆದುಕೊಳ್ಳುವ ಭೀತಿ
ಬಿಟ್ಟು ಸದಾ ಕೊರಗಿದರೆ ಇನ್ನಿಲ್ಲದ ತವಕ

ಹಿಡಿ ಅನ್ನಕೆ ತುಂಬುವ ಹೊಟ್ಟೆ
ಬೊಗಸೆ ನೀರಿಗೆ ತಣಿಯುವ ದಾಹ
ಸಮ-ಭೋಗದಿ ಕರಗುವ ಚಪಲ

ಆದರೂ
ಬೇಕು ಬೇಕು ಬೇಕು
ಕಂಡದ್ದು ಕಣ್ಣಿಗೆ

ಬೇಡಲಾರೆ ಎಂಬ ಧ್ಯಾನಸ್ಥ ತಪವ
ಮನಕೆ ದೀಕ್ಷೆ ಕೊಡುವವರು ಯಾರು ?

ಉಸಿರು ನಿಂತ ಮರುಕ್ಷಣ ಇದು ಕೇವಲ
ದೇಹ ಎಂಬ ಒಣ ವೇದಾಂತದ ವಾದ

ಹೂತಿಟ್ಟ ಆಸೆಗಳು ಕೊಳೆತು ನಾರಿ ಮೂಗು
ಮುಚ್ಚಿಕೊಳ್ಳುವ ಹೇಸಿಗೆಯಲು ಸವಿ ಸುಖದ
ತೀರದ ಚಪಲ

ಕಳೆದು , ನಿರಾಕರಿಸಿ , ನಿರ್ಲಿಪ್ತ
ಹಂತವನೇರಲು ಉಸಿರು ಬಿಗಿಹಿಡಿದು
ಚಡಪಡಿಸುವ ಸಾಧನೆಯ ಹಾದಿಗೆ ಮಂಕು
ಕವಿದಾಗ ಕೈಹಿಡಿದು ನಡೆಸಿ ಕಿವಿ ಹಿಂಡಿ
ಎಚ್ಚರಿಸು ಗುರುವೆ.

ಹರ ಮುನಿದರೂ
ಕಾಯುವ ಗುರುವಿನ ಗುರು ನೀ
ನಾ ಹಿಡಿದ ಗುರಿ ತಲುಪುವ ತನಕ...
---ಸಿದ್ದು ಯಾಪಲಪರವಿ

No comments:

Post a Comment