Monday, February 27, 2017

ದೇಹದಾಚೆಗಿನ ಮಿಂಚು

ದೇಹದಾಚೆಗಿನ ಮಿಂಚು

ಸರಸದ ಸಮರಸದಿ ಸೋಲು ಗೆಲುವುಗಳ
ಬಿಗುಮಾನದ ಸೊಲ್ಲಿಲ್ಲ

ದೇಹಗಳ ಹಂಗು ಹರಿದು ಆತ್ಮಗಳು ಮಿಲನಕೆ ಮನಸೋತು ಮೈಯೊಡ್ಡಿ ನಿಂತಾಗ ಅಹಮಿಕೆಯ ಹಂಗಿಲ್ಲ

ಒಮ್ಮೆ ನಾನು ಮತ್ತೊಮ್ಮೆ ನೀನು
ಆದಾಗ ಈ ಜಗದ ಪರಿವಿಲ್ಲ

ಪಂಚಮಹಾಭೂತಗಳು ಹೂಂಕರಿಸುವ ಅಮರ ಮಿಲನದಾಟದಲಿ ಸೋತು ಗೆಲ್ಲುವ ಚಡಪಡಿಕೆ

ಮೈಮನಗಳು ಹಗುರಾಗಿ ತೇಲಾಡುವ ಮಧುರ ಕ್ಷಣಗಳಲಿ
ಏಕತೆಯ ನಿನಾದವೇ ನಿನಾದ

ಇದು ನಿತ್ಯದ ಸಂಭ್ರಮವಲ್ಲ ದೇವನೊಲುಮೆಯ ಪ್ರಕಾಶದಿ
ಒಮ್ಮೆ ಥಟ್ಟನೇ ಹೊಳೆಯುವ ಕೋಲ್ಮಿಂಚು

ಕೆಸರಲರಳಿದ ಕಮಲದಂತೆ ಮೆಲ್ಲನೆ ಬಿಚ್ಚಿಕೊಳುವ
ಸೊಗಡಿನ ಸಿರಿ

ಮಿಂಚು ಗುಡುಗುಗಳ ಸಂಚಲನದಿ ಸುರಿಯುವ ಮಳೆ ನಾಸಿಕಕೆ ರಾಚುವ  ಮಣ್ಣಿನ ವಾಸನೆ

ದೇಹ-ಮನಸುಗಳ ಮಿಲನ ಬರೀ ಕಾಮದಾಟವಲ್ಲ
ಕೆಲ ಕ್ಷಣದ ತೀಟೆಯೂ ಅಲ್ಲ

ಮನುಜ ಪಥವ ಬೆಳಗಲು ದೇವನಿತ್ತ ಮಹಾ ಮಿಲನ
ಮಹೋತ್ಸವದ ಬೆರಗು ಬೆಳಕು ಹರಿಯುವದರೊಳಗೆ

ಇದು ಎಲ್ಲಂದರಲ್ಲಿ ಎಲ್ಲರೊಂದಿಗೆಯೂ ಅಲ್ಲ
ಬದುಕಿನ ರೀತಿ ನೀತಿಗಿದು ಸಲ್ಲ

ಪರಸ್ಪರ ಒಲಿಯದೆ ಮನಸುಗಳು ಬಲಿಯದೆ
ಆಗದು ಈ ಒಲವ ಜಲದ ಕ್ರೀಡೆ

ನೀ ಗಂಡು ನಾ ಹೆಣ್ಣು ನೀ ಮೇಲು ನಾ ಕೀಳು
ಎಂಬ ತಂಟೆ ತಗಾದೆಯ ಆಟವಂತೂ ಅಲ್ಲವೇ ಅಲ್ಲ

ಇದರ ಸವಿಯ ಬಲ್ಲವನೇ ಬಲ್ಲ
ಬಲ್ಲಿದಾಗ ಮೆಲ್ಲಬಲ್ಲ ಮೆಲ್ಲ ಬೆಲ್ಲ.

---ಸಿದ್ದು ಯಾಪಲಪರವಿ

No comments:

Post a Comment