Tuesday, September 24, 2013

ನಮೋ ನಮೋ ಭಾರತ ಮಾತೆ
- ಸಿದ್ದು ಯಾಪಲಪರವಿ
ಭಾವನೆಗಳೂಂದಿಗೆ
ಆಟವಾಡಲು ಇದು
ಸಕಾಲವಲ್ಲ.
ರಾಹು ಕೇತುಗಳು ಅಧಿಕಾರಕ್ಕೆ
ಪರದಾಡುತ್ತಿರುವಾಗ
ನಮೋ ನಮೋ ಎಂಬ
ಮಂತ್ರಘೋಷದೊಂದಿಗೆ
ಅಡ್ಡಗಾಲಾಗಲು ಅಡ್ಡ ಹಾದಿ
ಹಿಡಿಯಲು ಸನ್ನದ್ಧರಾಗಿದ್ದಾರೆ.
ಒಮ್ಮೆ ಹೇಳಿದ ಸುಳ್ಳನ್ನು ಸಾವಿರ 
ಸಲ ಹೇಳಿ ಸತ್ಯವಾಗಿಸುವ ಹೆಣ
ಗಾಟದ 
ಆಟ ನೋಡುತ್ತಾ ನರ
ಸತ್ತವರ ಹಾಗೆ ಮೂಕರಾಗಿದ್ದೇವೆ.
ಮಂತ್ರ ಘೋಷಣೆ ಉಗ್ರವಾದಾಗ
ಮೌನ ಮಾತಾಗಲು ನಿರಾಕರಿಸುವ
ಹೊತ್ತು ಭಾವನೆಗಳು ಕದಡಿಹೋಗಿವೆ.
ಪ್ರೀತಿ ಪ್ರೇಮ ಉಲ್ಲಾಸಗಳು
ಮಾಯವಾಗಿ ಕಾವ್ಯ ಕನ್ನಿಕೆ
ಸೌಂದರ್ಯ ಕಳೆದುಕೊಂಡ
ಕುರೂಪಿ ಈಗ.
ಪರಿಶ್ರಮದ ಹಾದಿ
- ಸಿದ್ದು ಯಾಪಲಪರವಿ

ಪರಿಶ್ರಮ ಹಾದಿಯ ಸಂಕಟಗಳ
ಲಕ್ಕಿಸದೇ ಸಾಗಿದ್ದೇ ರಾಜಮಾರ್ಗ
ದೇಸಿ ಸೊಗಡ ಸವಿಜೇನ ಸವಿದ ಸಂತಸ
ರೋಗಿಗಳ ಮನದಾಳದ ನೋವನರಿತು
ನಗುಮೊಗದ ಸಿಂಚನಕೆ ನೋವೆಲ್ಲ ಮಾಯ
ಸತಿಪತಿಗಳೊಂದಾಗಿ ಸವಿಭಾವ
ಸಂಸಾರದಿ ನೋವುನಲಿವುಗಳ ಸಮನಾಗಿ
ಸವಿದ ಸಂಭ್ರಮ
ಗುರುಪೂಜೆ ಅತಿಥಿ ಸತ್ಕಾರದೊಳಡಗಿದೆ
ದೇವಮಂತ್ರ
ಬಾಳ ಹಾದಿಯ ಐವತ್ತರ ಪಯಣದ
ಸಂಸಾರ ಸರಿಗಮಕೆ ಬೆಳ್ಳಿ ಹಬ್ಬ
ನಿರಂತರ ಸಾಗಿರಲಿ
ನಗು ಮೊಗದ ಬಾಳ ಪಯಣ.

ಬದುಕ ಪಯಣದ ಹಾದಿಯಲಿ - ೩

 ಒಂಟಿತನದ ಹಿಂಸೆ

- ಸಿದ್ದು ಯಾಪಲಪರವಿ
ಗೆಳೆಯ ರವಿ ಬೆಳಗೆರೆ ತಮ್ಮ ಆಡಿಯೋ 'ಒ ಮನಸೇ' ಎಂಬುದರಲ್ಲಿ ಒಂಟಿತನದ ಬಗ್ಗೆ ಪ್ರಸ್ತಾಪಿಸಿದ ನೆನಪು. ಇದು ಅರ್ಥವಾಗಬೇಕಾದರೆ ಸ್ವತಃ ಅನುಭವಿಸಬೇಕಲ್ಲ. ಈ ಒಂಟಿತನವನ್ನು ಕೆಲವೊಮ್ಮೆ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಮನಸಿಗೆ ಆಘಾತವಾದಾಗ ಅದರಲ್ಲೂ ವಿಶೇಷವಾಗಿ ನಾವು ಪರಮ ಆಪ್ತರು ಎಂದು ನಂಬಿದವರು ಕೈ ಕೊಟ್ಟಾಗ, ಹಿಂಸೆ ನೀಡಿದಾಗ ಒಂಟಿತನ ಆವರಿಸುತ್ತದೆ.
ಇದು ನಂಬಿಕೆಯ ತಪ್ಪು ಗ್ರಹಿಕೆಯೋ, ವ್ಯಕ್ತಿಗಳ ತಪ್ಪು ಗ್ರಹಿಕೆಯೋ ಎಂಬುದು ಇಂತಹ ಸಂದರ್ಭಗಳಲ್ಲಿ ಗೊತ್ತಾಗುವುದಿಲ್ಲ. ನಮಗರಿವಿಲ್ಲದಂತೆ ಕೆಲವರನ್ನು ತುಂಬಾ ಆಪ್ತರೆಂದು, ಒಳ್ಳೆಯವರೆಂದು ತೀವ್ರವಾಗಿ ನಂಬಿ ಬಿಡುತ್ತೇವೆ. ಅಂತಹ ಆಪ್ತತೆ ಅವರಿಗೆ ನಮ್ಮ ಬಗ್ಗೆ ಇದೆಯೋ ಇಲ್ಲವೋ ಎಂಬುದನ್ನು ಅರಿತುಕೊಳ್ಳಲು ವಿಫಲರಾಗುತ್ತೇವೆ.
ಭಾವುಕ ಮನಸ್ಸು ಅವರ ವ್ಯಕ್ತಿತ್ವದ ಹಿಂದಿರುವ ಹಿಡನ್ ಅಜೆಂಡಾ ಅರ್ಥ ಮಾಡಿಕೊಳ್ಳಲು ವಿಫಲವಾಗಿರುತ್ತದೆ ಎಂಬ ವಾಸ್ತವ ನಮಗೆ ಗೊತ್ತಿರುವುದಿಲ್ಲ. 
ತಮ್ಮ ಆಸೆ, ಉದ್ದೇಶ ಈಡೇರಲಿಲ್ಲ ಎಂದು ಗೊತ್ತಾದಾಗ ನಂಬಿದವರು ವ್ಯಗ್ರವಾಗಿ ಮೈಮೇಲೆ ಮುಗಿ ಬೀಳುತ್ತಾರೆ. ಆಗ ಅವರ ಭಾಷೆ, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಬದಲಾಗುತ್ತದೆ. ನಂಬಿದವರ ಅನಿರೀಕ್ಷಿತ ದಾಳಿಯನ್ನು ಎದುರಿಸದ ಮನಸ್ಸು ತತ್ತರಿಸಿ ಹೋಗುತ್ತದೆ, ದುಃಖಕ್ಕೆ ಈಡಾಗುತ್ತದೆ. 
ಯಾರನ್ನಾದರೂ ಸ್ನೇಹಿತರೆಂದು ಸ್ವೀಕರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಅವರ ಸ್ನೇಹದ ಉದ್ದೇಶವನ್ನು ಗ್ರಹಿಸದೇ ಹೋದರೂ, ನಂತರ ತಿರುಗಿ ಬಿದ್ದರೆ ಹೇಗೆ ಸ್ವೀಕರಿಸಬೇಕು ಎಂಬ ಮಾನಸಿಕ ತಯಾರಿ ಇರಬೇಕು. ಇದು ಕೇವಲ ಪ್ರೀತಿ, ಪ್ರೇಮ, ಹುಡುಗ, ಹುಡುಗಿಯರಿಗೆ ಸಂಬಂಧಿಸಿರುವುದಿಲ್ಲ. ಎಲ್ಲ ರೀತಿಯ ಸ್ನೇಹಕ್ಕೆ ಅನ್ವಯಿಸುತ್ತದೆ.
ನೀವು ಒಂಟಿಯಾಗಿದ್ದೀರಿ ಎಂದೆನಿಸಿದಾಗ, ಎಲ್ಲವೂ ಬೇಡವೆನಿಸುತ್ತದೆ. ಊಟ-ನಿದ್ರೆ, ಮಾತು-ಚರ್ಚೆ ಎಲ್ಲವೂ ನಿರರ್ಥಕ. ಮನಸು ಮುದುರಿಕೊಂಡು ನಮ್ಮ ಮೇಲೆ ಕೋಪಿಸಿಕೊಂಡು ಬಿಡುತ್ತದೆ. ನಮ್ಮ ತಪ್ಪಿಗೆ ನಾವೇ ಕಾರಣ ಎಂಬ ಪಾಪಪ್ರಜ್ಞೆ ಕಾಡುತ್ತದೆ. ನಾವು ಸಹನಶೀಲ ಸ್ವಭಾವದವರಾದರೆ ಸರಿ ಇಲ್ಲದೇ ಹೋದರೆ ಎಲ್ಲರೊಂದಿಗೆ ಅದರಲ್ಲೂ ವಿಶೇಷವಾಗಿ ಬಾಳ ಸಂಗಾತಿ, ಕುಟುಂಬ ಸ್ನೇಹಿತರೊಂದಿಗೆ ಅಸಹನೆಯಿಂದ ವರ್ತಿಸಿಬಿಡುತ್ತೇವೆ. ದುಃಖ ಉಮ್ಮಳಿಸಿ ಬರುತ್ತದೆ. ಆತ್ಮೀಯರನ್ನು ಹುಡುಕಿ ಹೋಗಿ ಅತ್ತು ಬಿಡಬೇಕೆನಿಸುತ್ತದೆ. ಒಮ್ಮೊಮ್ಮೆ ಹೆಚ್ಚು ದುಃಖಿತರಾಗಿ ಅಳಲು ಸಾಧ್ಯವಾಗುವುದಿಲ್ಲ. ಹೊಟ್ಟೆಯಲ್ಲಿ ಬೆಂಕಿ ಬಿದ್ದ ಅನುಭವ. ಈ ಒಂಟಿತನ ಹೆಚ್ಚಾಗುವುದು ತುಂಬಾ ಅಪಾಯಕಾರಿ ಪರಿಣಾಮ ಬೀರಿ ಡಿಪ್ರೆಶನ್ ಹಂತಕ್ಕೆ ತಲುಪುತ್ತೇವೆ. ಹೆಚ್ಚಾದ ಡಿಪ್ರೆಶನ್ ಆತ್ಮಹತ್ಯೆಗೆ ಕಾರಣವಾಗುತ್ತದೆ.. ಅಕಸ್ಮಾತ್ ನಮ್ಮ ಆತ್ಮೀಯರು ಕೆಲಕ್ಷಣ ನಮ್ಮಿಂದ ದೂರಾದರೆ ಮನಸು ಸಾಯಲು ಹಪಹಪಿಸುತ್ತದೆ. ಸಾಧಿಸಬೇಕಾಗಿದ್ದು ಬೇಕಾದಷ್ಟಿದ್ದಾಗ, ಅನೇಕ ಜವಾಬ್ದಾರಿಗಳು ನಮ್ಮ ಹೆಗಲ ಮೇಲಿದ್ದಾಗ ನಮ್ಮನ್ನು ನಂಬಿದವರು ನಮ್ಮ ಸುತ್ತಲೂ ಇದ್ದದ್ದು ಇಂತಹ ವಿಷಗಳಿಗೆಯಲ್ಲಿ ಗೋಚರವಾಗುವುದೇ ಇಲ್ಲ.
ಎಲ್ಲರೂ ನಮ್ಮನ್ನು ತಪ್ಪಿತಸ್ಥ ಎಂದು ಭಾವಿಸಿದ್ದಾರೆ ಎಂದೆನಿಸುತ್ತದೆ. ಆದರೆ ವಾಸ್ತವದಲ್ಲಿ ಯಾರೂ ನಮ್ಮನ್ನು ಹಾಗೆ ಅಂದುಕೊಂಡಿರುವುದೇ ಇಲ್ಲ. ಎಲ್ಲರೂ ಅವರ ಪಾಡಿಗೆ ಅವರಿದ್ದರೂ ನಮ್ಮ ಬಗ್ಗೆ ಏನೋ ಕಮೆಂಟ್ ಮಾಡುತ್ತಾರೆ ಎಂಬ ಸುಳ್ಳು ಭ್ರಮೆ ಸೃಷ್ಟಿಯಾಗುತ್ತದೆ. 
ಖಿನ್ನತೆ, ಅನುಮಾನ, ಅಸಂತೋಷ, ಅಸಹಾಯಕತೆ, ಅಸಮಾಧಾನ, ಆತಂಕ ಕ್ಷಣ ಕ್ಷಣಕ್ಕೆ ಹೆಚ್ಚಾಗುವ ಭಾವಗಳು. ವೈದ್ಯರನ್ನು, ಆಪ್ತಸಮಾಲೋಚಕರನ್ನು ಭೇಟಿ ಆಗಿ ಸಮಸ್ಯೆ ಹೇಳಿಕೊಳ್ಳಬೇಕು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಬೇಡವಾಗುತ್ತದೆ. ಸಾವೇ ಶ್ರೇಷ್ಠ ಪರಿಹಾರವೆನಿಸುತ್ತದೆ. 
ಆತ್ಮೀಯರು ನಮ್ಮ ಸಮಸ್ಯೆಯ ಕುರಿತು ಚರ್ಚಿಸಿ ಸಮಾಧಾನಗೊಳಿಸುವುದು ನಿರರ್ಥಕವೆನಿಸುತ್ತದೆ. ಅವರು ನಮ್ಮ ಸಮೀಪದಲ್ಲಿದ್ದಾಗ ಅವರು ಹೇಳುವುದು ನಿಜ ಅನಿಸುತ್ತದೆ. ನಂತರ ಮತ್ತೇ ಅದೇ ಯಥಾ ಸ್ಥಿತಿ. ಬೇರೆಯವರ ಸಮಾಧಾನದ ಮಾತುಗಳು ಮನಸ್ಸಿಗೆ ತಾಟದಂತೆ ಒಂಟಿತನ ಅಡ್ಡಿಪಡಿಸುತ್ತದೆ.
ಒಂಟಿತನದ ವಿಷ ದಿನದಿಂದ ದಿನಕ್ಕೆ ಸಿಹಿ ಎನಿಸುತ್ತದೆ. ವರ್ತಮಾನದ ಸಮಸ್ಯೆಯಿಂದ ನಾವು ಹೊರ ಬರಲು  ಅಸಾಧ್ಯವೆನಿಸುತ್ತದೆ. ಉಪದೇಶ ಹೇಳುವವರು ನನ್ನ ಸ್ಥಿತಿ ತಲುಪಲಿ ಗೊತ್ತಾಗುತ್ತದೆ ಎಂಬ ತಕರಾರು ಏಳುತ್ತದೆ. ಹೀಗೆ ಹತ್ತು-ಹಲವು ಬಗೆಯ ಕರಾಳ ಸ್ವರೂಪದೊಂದಿಗೆ ಒಳಗಿನ ವೈರಿ ಒಂಟಿತನ  ನಮ್ಮನ್ನು ಕುಬ್ಜರನ್ನಾಗಿಸುತ್ತದೆ. ಆದರೆ ಈ ಒಂಟಿತನಕ್ಕೆ ಕಾರಣವಾದವರು ತಮ್ಮಷ್ಟಕ್ಕೆ ತಾವೇ ಆರಾಮವಾಗಿ ಇದ್ದು ಬಿಡುತ್ತಾರೆ. ನಮ್ಮನ್ನು ಏಳಲಾರದ, ಮೇಲೇಳಲಾರದ ಆಳಕ್ಕೆ ನೂಕಿ .॒

Wednesday, September 18, 2013

ಬದುಕ ಪಯಣದ ಹಾದಿಯಲಿ-ಭಾಗ-೨

ಸೋಲು, ನಿರಾಸೆ,  ಹತಾಶೆ ಹಾಗೂ ತಳಮಳ ನಮ್ಮನ್ನು ಕಾಡುವ ಬೇಡವಾದ ಶತ್ರುಗಳು. ಈ ಶತ್ರುಗಳನ್ನ ನಾವೇನು ಬಯಸುವುದಿಲ್ಲವಾದರು, ನಮಗರಿವಿಲ್ಲದಂತೆ ಅಂಟಿಕೊಂಡು ಬೆಂಬತ್ತಿಬಿಡುತ್ತವೆ.
ಅಂತಹ ಅನಿವಾರ್ಯ  ಬ್ಲಾಕ್ ಸಂಧರ್ಭ, ಖಾಲಿತನ ಎಲ್ಲರಿಗೊ ಒಂದೊಂದು ಸಲ ಎಲ್ಲರ ಬದುಕಿನಲ್ಲಿ ಬರುತ್ತದೆ ಎಂದು ಮನೋವಿಜ್ಜಾನಿಗಳು ವಿವರಿಸಿದರೆ, ಸಂಧಿ ಕಾಲವೆಂದು ಜ್ಯೋತಿಷಿಗಳು ವಿಶ್ಲೇಷಿಸುತ್ತಾರೆ'
ಸಂಧಿಗಾಗಿ ಜ್ಯೋತಿಷ್ಯ ಶಾಸ್ತ್ರ ಸಂಧಿ ಶಾಂತಿ ಹೋಮ ಹವನಗಳನ್ನ ಹೇಳಿದರೆ, ಮನೋವಿಜ್ಞಾನಿಗಳು ಸೂಕ್ತ ಆಪ್ತ ಸಮಾಲೋಚನೆ ಇರಲಿ ಎನ್ನುತ್ತಾರೆ.
ಆದರೆ ಅಂತಹ ತಲ್ಲಣಗಳಲ್ಲಿ ಎಲ್ಲಂದರಲ್ಲಿ ನಿರರ್ಥಕ ಅಲೆದಾಟವಿರುತ್ತದೆ.ಎರಡು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಹಾಡಿ ಹೊಗಳಿದವರು, ಮಾರ್ಗದರ್ಶನ ಪಡೆದು ಧನ್ಯರಾದಂತವರು ಕೂಡ ಆನಗತ್ಯವಾದ ಸಲಹೆ ನೀಡಲು ಆರಂಭಿಸಿದ್ದನ್ನು ಎದುರಿಸಿದ್ದೇನೆ. ಅದು ಅವರ ತಪ್ಪಲ್ಲ, ಕೆಳಗೆ ಬಿದ್ದಂತೆ ಒದ್ದಾಡುವ ನನ್ನ ಮಿತಿಗಾಗಿ ಹಾಗೆ ನಡದುಕೊಂಡಿರಬಹುದಲ್ಲವೆ? 
ಹಾಗಂತ ನಮ್ಮ ಖಾಲಿತನ, ನಿರಾಸೆಯ ಪ್ರಸಂಗಗಳಲ್ಲಿ  ವ್ಯದ್ಯಕೀಯ ಚಿಕಿತ್ಸೆಯ ಮೊರೆ ಹೋಗದೆ, ಆಪ್ತರೆನಿಸಿ, ಆಪ್ತರಂದು ಖಾತ್ರಿಯಾದವರೊಂದಿಗೆ ಹಂಚಿಕೊಳ್ಳಬೇಕು.
ಪ್ರತಿಯೊಬ್ಬರ ಬದುಕನ್ನು ಒಮ್ಮೆ 'ಆತ್ಮಹತ್ಯೆ'ಯ ಭೂತ ಬಡಿದುಕೊಂಡು, ಅವರನ್ನು ಬಲಿ ತೆಗೆದುಕೊಳ್ಳಲು ಕಾರಣ   ಅವರ ಒಂಟಿತನ ಹಾಗೊ ಆಪ್ತ ಸಮಾಲೋಚನೆಯ ಕೊರತೆ. ಒಂಟಿತನವನ್ನು ಏಕಾಂತವನ್ನಾಗಿ ಪರಿವರ್ತಿಸಿಕೊಳ್ಳದವರು ಸಾವಿನ ಬಾಗಿಲು ತಟ್ಟಿ ಇಲ್ಲವಾಗುತ್ತಾರೆ.
ವೃತ್ತಿ ಪಲ್ಲಟ ಹಾಗೂ ತಳಮಳಗಳ ತವಕದಲ್ಲಿದ್ದಾಗ ನಾನು ಕೂಡ ಖಾಸಗಿ ಗೆಳೆಯರೊಂದಿಗೆ ಭಾವನೆಗಳನ್ನ ಮುಕ್ತವಾಗಿ ಹಂಚಿಕೊಂಡು ಅವರ ಸಹನೆಯನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ್ದೇನೆ. ಆಗ ಉಳಿದವರು ಕಡೇ ತನಕ ಉಳಿಯುತ್ತಾರೆ ಎಂಬ ವಿಶ್ವಾಸವು ನನಗಿತ್ತು.
ಕಳೆದೆ ದಶಕದಿಂದ ವ್ಯಕ್ತಿತ್ವ ವಿಕಸನದ ಟ್ರೇನಿಂಗ್ ಗುರು ಎನಿಸಿಕೊಂಡು  ಶಹಬ್ಬಾಸಗಿರಿ ಗಿಟ್ಟಿಸಿದ ನಾನೇ ಅಗ್ನಿ ಪರೀಕ್ಷೆಯಲ್ಲಿ ಬೆಂದಾಗ  ಅದಕ್ಕೆ ಪರಿಪೊರ್ಣತೆ ಸಿಕ್ಕಿತು.


ನನ್ನ  ಆತಂಕ ಭಯ ಕಂಡವರು ನಾನ್ಯಾವ ಸೀಮೆ ಟ್ರೇನರ್ ಎಂದು  ಮೂದಲಿಸಿದರೂ ಸಹಿಸಿಕೊಂಡೆ. ಇಷ್ಟು ದಿನ ತರಬೇತಿಯ ಪಠ್ಯವಾಗಿ 'ನಿರ್ಭಯ ' ಸೇರಿಕೊಳ್ಳಲು ನನ್ನ ಆತಂಕದ ದಿನಗಳು ಕಾರಣವಾದವು. 
ಈಗ ಅಂತಿಮ ನಿರ್ಣಯಕ್ಕೆ ಬಂದಿದ್ದೇನೆ, ನಿರ್ಭಯ ನಿರ್ಲಿಪ್ತತೆ ಹಾಗೊ ನಿರಾಕರಣೆಯ ತ್ರಿಸೂತ್ರಗಳು, ಈಗ ನನ್ನ ಬದುಕಿನ  ಸಮರ್ಥ ಸೂತ್ರಗಳೆನಿಸಿವೆ. 
ಅದೇ ಜಾಡು ಹಿಡಿದುಕೊಂಡು ಈಗ ಯುಧ್ಧಕ್ಕೆ  ಸನ್ನದ್ಧನಾಗಿದ್ದೇನೆ. ಕೆಲದಿನ ತುಕ್ಕು ಹಿಡಿದಿದ್ದ  ಲೇಖನಿ , ನಾಲಿಗೆಗೆ ಕೆಲಸ ಕೊಟ್ಟಿದ್ದೇನೆ. ಆರು ತಿಂಗಳ  'ಏಕಾಂತ'ದ  ಹಿತದಿಂದ ಪಕ್ವವಾಗಿದ್ದೇನೆ ಎಂಬ ಆತ್ಮವಿಶ್ವಾಸ. 
ನಾವು ಅನಿವಾರ್ಯವಾಗಿ ಆತಂಕಕ್ಕೆ ಒಳಗಾದಾಗ ಆ ತಪ್ಪನ್ನು ಬೇರೆಯವರ ಮೇಲೆ ಹೊರಿಸಲು ನೋಡುತ್ತೇವೆ. ಆ ಸ್ಥಿತಿಗೆ ನಮ್ಮ ನಿರ್ಣಯಗಳು ಹಾಗೊ ಆಯ್ಕೆಗಳೇ ಕಾರಣ ಎಂಬುದನ್ನು ಒಪ್ಪಲೇಬೇಕು.
ಅವರಿಂದ ಹೀಗಾಯ್ತು, ಇವರಿಂದ ಹೀಗಾಯ್ತು , ಅವರನ್ನು ನಂಬಿದ್ದೇ ತಪ್ಪಾಯಿತೆಂದು ಬೇರೆಯವರನ್ನು ದೂಷಿಸುವುದು.
ನನ್ನ ಏಳು-ಬೀಳುಗಳಿಗೆ, ಸರಿ-ತಪ್ಪುಗಳಿಗೆ ನಾನೇ ಕಾರಣ , ನನ್ನ ನಿರ್ಣಯಗಳೇ ಕಾರಣವೆಂದು ಒಪ್ಪಿಕೊಂಡಿದ್ದೇನೆ.
ಸೋಲುವಂತೆ ಭಾಸವಾಗಿರುವ ಸಂಗತಿಗಳನ್ನು ಏರುವ ಮೆಟ್ಟಿಲುಗಳು ಎಂದು ಸ್ವೀಕರಿಸಿದ್ದೇನೆ.  "ಆಗುವುದೆಲ್ಲಾ ಒಳ್ಳೆಯದು", 'ಬಾರದು ಬಪ್ಪದು, ಬಪ್ಪದು ತಪ್ಪದು', ಎಂಬ ವಾಣಿಯನ್ನು  ಮೆಲುಕು ಹಾಕುತ್ತೇನೆ.
ಸತ್ತೆನೆಂದೆನಬೇಡ, ಸೋತೆನೆಂದನಬೇಡ  ಎಂಬ ಕಗ್ಗದ ಸಾಲುಗಳನ್ನ ಮಂತ್ರಿಸುತ್ತಾ ಬಾಳನೆದುರಿ ಸಬೇಕು.
ನಿರ್ಭಯ ಸೂತ್ರವ ವಿವಿಧ ಮಗ್ಗುಲಗಳನ್ನು. ಭಯದ ಮೊಲದ ವಿವಿಧ ಹಂತಗಳನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು.
ನಿರ್ಭಯ, ನಿರಾಕರಣೆ ಹಾಗೊ ನಿರ್ಲಿಪ್ತತೆಯ ಸೂತ್ರಗಳನ್ನು ಗೆಳೆಯರು ಮೆಚ್ಚಿಕೊಂಡಿದ್ದಾರೆ. ವ್ಯಾಖ್ಯಾನಿಸುವ ಬಗೆಯನ್ನು ಪ್ರಶಂಶಿಸಿದ್ದಾರೆ. ಅವುಗಳನ್ನು ಸಮರ್ಥವಾಗಿ ಅಳವಡಿಸಿಕೊಂಡು rank-     ಗಳಿಸದೇ ಹೋದರು, ಕನಿಷ್ಟ ಪಾಸಾಗಿದ್ದರೆ, ತರಬೇತಿ ಅರ್ಥಪೊರ್ಣವೆನಿಸಬಹುದನಿಸಿದೆ. 
-ಸಿದ್ದು ಯಾಪಲಪರವಿ

Wednesday, September 11, 2013

ಬದುಕ ಪಯಣದ ಹಾದಿಯಲಿ- 1

ಬದುಕ ಪಯಣದ ಹಾದಿಯಲಿ

ನಾವು ಪಾಠವನ್ನು ಎಲ್ಲಿಂದ ಕಲಿಯುತ್ತೇವೆ, ಅಧ್ಯಯನದಿಂದಲೋ? ತರಬೇತಿಯಿಂದಲೋ? ಬೇರೆ ವ್ಯಕ್ತಿಗಳಿಂದಲೋ? ಉತ್ತರಿಸುವುದು ಕಷ್ಟ. ಆದರೆ ಸಮರ್ಪಕ ಉತ್ತರ ನಾವು ಕಲಿಯುವುದು ಬದುಕಿನ ನಮ್ಮ ವೈಯಕ್ತಿಕ ಅನುಭವಗಳಿಂದ, ಆದರೆ ನಾವು ನಮ್ಮ ಅನುಭವಗಳನ್ನು ಗಂಭೀರವಾಗಿ ಅವಲೋಕಿಸದೇ ಹಾಗೆಯೇ ಹಾದು ಹೋಗಲು ಬಿಡುತ್ತೇವೆ.
ಸಮಸ್ಯೆಗಳ ಪರಿಹಾರಕ್ಕಾಗಿ ಕಷ್ಟದಲ್ಲಿದ್ದಾಗ ವ್ಯಕ್ತಿಗಳಿಂದ ಪುಸ್ತಕಗಳಿಂದ ಪರಿಹಾರ ಹುಡುಕಲು ಹೋರಾಡಿ ನೋವು ಅನುಭವಿಸುತ್ತೇವೆ,. ಹೀಗಾಗಿ ನಮ್ಮ ಬದುಕು ನಮ್ಮ ಪಾಲಿನ ಬಹುದೊಡ್ಡ ಗೈಡ್.
ಬದುಕಿನಲ್ಲಿ ತೊಂದರೆ, ನೋವು ಸಮಸ್ಯೆಗಳು ಬಂದೇ ಬರುತ್ತವೆ ಅವುಗಳಿಂದ ಪಾರಾಗಲು ಸಾಧ್ಯವೇ ಇಲ್ಲ. ಕಷ್ಟ ಬಂದಾಗ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಅಲ್ಲಲ್ಲಿ ಅಲೆದಾಡುತ್ತೇವೆ, ಓಡಾಡುತ್ತೇವೆ. ಓಡಾಡಿದರೆ ಹೊತ್ತು ಮುಳುಗುವುದಿಲ್ಲ, ಹೊತ್ತು ಮುಳುಗಲು ಸಂಜೆಯವರೆಗೂ ಕಾಯಲೇಬೇಕು. ಭ್ರಮೆಯಿಂದ ಓಡಾಡಬಹುದು, ಆದರೆ ಭ್ರಮೆ, ಆತಂಕ ನಮ್ಮನ್ನು ನಮಗರಿವಿಲ್ಲದಂತೆ ಓಡಾಡಿಸುತ್ತದೆ.
ನೀವು ಹೇಳಬಹುದು, ಅಯ್ಯೋ ಹೇಳುವುದು ಸುಲಭ, ಎದುರಿಸುವುದು ಕಷ್ಟ ಎಂದು ನಾನು ನಿಮ್ಮ ವಾದವನ್ನು ಒಪ್ಪುತ್ತೇನೆ. ಈ ವಾದವನ್ನು ವೈಯಕ್ತಿಕವಾಗಿ ಅನಿಭವಿಸಿಯೇ ಹೇಳುತ್ತಿದ್ದೇನೆ.
ಆಸೆಯೇ ದುಃಖಕ್ಕೆ ಮೂಲ, ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ ಎಂದು ಬುದ್ಧ ಹೇಳಿದರೂ ಆಸೆಯಿಂದ ಸಾಸಿವೆ ತರದೇ ನಾವು ಒದ್ದಾಡುತ್ತೇವೆ.
ನನ್ನ ದಶಕದ ತರಬೇತಿ, ವ್ಯಕ್ತಿಗಳೊಂದಿಗಿನ ಸಂವಹನ ಎದುರಿಸಿದ ವೈಯಕ್ತಿಕ ಕಷ್ಟಗಳು, ನಾನಾಗಿಯೇ ಆಹ್ವಾನಿಸಿಕೊಂಡ ಅದ್ವಾನಗಳು ನನಗೆ ಸಾಕಷ್ಟು ಪಾಠ ಕಲಿಸಿವೆ.
ವ್ಯಾಧಿ ಬಂದಾಗ ಒದರು ಎನ್ನುವಂತೆ ಒಬ್ಬನೇ ಒಂಟಿಯಾಗಿ ಒದರಿದ್ದೇನೆ, ಚೀರಿದ್ದೇನೆ, ಅತ್ತಿದ್ದೇನೆ, ನರಳಾಡಿದ್ದೇನೆ. ಆದರೆ ಆ ನರಳಾಟಕ್ಕೆ ಅರ್ಥವಿದೆಯೇ?
ಈಗ ಅರ್ಥವಾದದ್ದನ್ನು, ಅರ್ಥಪೂರ್ಣ ಅನಿಸಿದ್ದನ್ನು ಹೇಳುವುದು ಯಾಕೋ ಅಗತ್ಯವೆನಿಸಿದೆ. ನಮ್ಮ ದುಃಖಕ್ಕೆ ಕಾರಣ ಹುಡುಕದೇ, ದುಃಖವನ್ನು ಸಮರ್ಥವಾಗಿ ಎದುರಿಸಿ, ಆ ದುಃಖದಲ್ಲಿಯೇ ಸಂತೋಷವಾಗಿರಲು ಕಲಿಯೋಣ. ದುಃಖಕ್ಕೆ ಕಾರಣ ಹುಡುಕಿ, ಅದನ್ನು ಅರಿತುಕೊಂಡು, ಜೀವಂತವಿರುವ ವ್ಯಕ್ತಿಯ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡುವ ಕೆಲಸ ಬೇಡ.
ನಮ್ಮಿಂದಾದ ತಪ್ಪುಗಳು ನಮ್ಮ ಎಚ್ಚರಿಕೆಯಾಗಿರಲಿ, ಆ ಎಚ್ಚರಿಕೆಯ ಮಧ್ಯೆ ಸಂತಸವಾಗಿರಲು ಪ್ರಯತ್ನಿಸೋಣ. ಅಂತಹ ಪ್ರಯತ್ನಗಳ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಲು ಪ್ರಾಮಾಣಿಕವಾಗಿ ನನ್ನ ಬರಹಗಳ ಮೂಲಕ ಪ್ರಯತ್ನಿಸುತ್ತೇನೆ.
ಮನುಷ್ಯನ ಗುಣಧರ್ಮ ಹುಡುಕಾಟ. ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಹುಡುಕುವುದು ಅವನ ಸ್ವಭಾವ. ಈ ವಾಸ್ತವ ಗೊತ್ತಿದ್ದರೂ ನಮ್ಮ ಹುಡುಕಾಟ ನಿಲ್ಲುವುದಿಲ್ಲವಲ್ಲ?
ಹರೆಯದ ಪ್ರಾಯದಲ್ಲಿ ಎಲ್ಲವೂ ಸುಂದರ, ಅಪ್ಯಾಯಮಾನ, ಆಕರ್ಷಣೆ. ಗಂಡಾದರೆ ಹೆಣ್ಣಿಗೆ, ಹೆಣ್ಣಾದರೆ ಗಂಡಿಗಾಗಿ ಹುಡುಕಾಟ. ಹೆಣ್ಣು, ಹೊನ್ನು, ಮಣ್ಣು ಮನುಷ್ಯನ ಆಕರ್ಷಣೆಯೂ ಹೌದು, ದೌರ್ಬಲ್ಯವೂ ಹೌದು. 
ಎಲ್ಲವೂ ಅಗತ್ಯವಿರುವಷ್ಟು ಇದ್ದರೆ ಸರಿ,  ಆದರೆ ಆಕರ್ಷಣೆ ವ್ಯಾಮೋಹವಾಗಿ ಹೆಚ್ಚಾದರೆ ದೌರ್ಬಲ್ಯ.
ಈ ಮೂರನ್ನು ಬಿಟ್ಟು ಬದುಕುತ್ತೇವೆ ಎಂದರೆ  ನಾವು ಸಂತರಾಗುತ್ತೇವೆ, ಆದರೆ ಬಿಟ್ಟಿದ್ದೇವೆ ಎಂದು ಹೇಳಿದರೆ ಆಷಾಢಭೂತಿ (ಹಿಪೋಕ್ರ್ಯಾಟ್ಸ್)ಗಳಾಗುತ್ತೇವೆ.
ಹದಿಹರೆಯದಲ್ಲಿ ಹೆಣ್ಣು ಅಥವಾ ಗಂಡು ಆಕರ್ಷಣೆಯಾದರೆ, ಮಧ್ಯೆ ವಯಸ್ಸು ತಲುಪಿದೊಡನೆ ಮನಸ್ಸು ಹೊನ್ನಿಗಾಗಿ ಅಂದರೆ ಗಳಿಸುವ ಧನದಾಹಕ್ಕೆ ಆಸೆ ಪಡುತ್ತದೆ. ಮಧ್ಯ ವಯಸ್ಸು ದಾಟಿ ಪ್ರೌಢಾವಸ್ಥೆಗೆ ತಲುಪಿದಾಗ ಮಣ್ಣು ಅಂದರೆ ಆಸ್ತಿ ಗಳಿಸುವ ಹುಚ್ಚುಗಳ ಮಧ್ಯೆ ಬದುಕ ಸಾಗಿಸುವ ನಾವು ಸಂತಸ, ನೆಮ್ಮದಿ, ಆರೋಗ್ಯ ಕಾಪಾಡಿಕೊಳ್ಳಲು ಹಪಹಪಿಸುತ್ತೇವೆ. ಹಾಗಾದರೆ ಯಾವುದನ್ನು ನಾವು ಪಡೆಯುತ್ತೇವೆ, ಎಲ್ಲಿ ಸಲ್ಲುತ್ತೇವೆ ಎಂದು ಅವಲೋಕಿಸುವುದೇ ಜೀವನ.
                                                             - ಸಿದ್ದು ಯಾಪಲಪರವಿ

Thursday, September 5, 2013

ಒಬ್ಬ ಮನುಷ್ಯ

ಕಥೆಗಳನ್ನು ಓದುವಾಗ ನಮಗರಿವಿಲ್ಲದಂತೆ ನಾವೇ ಪಾತ್ರಗಳಾಗಿ ಬಿಡುತ್ತೇವೆ. ಆದರೆ ಕಥೆಗಾರ ಕಥೆ ಹೇಳುವಾಗ ಯಾರು ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾನೆ.
  ಅಂತೆಯೇ ಈ ಕಥೆಯಲ್ಲಿ ಕಥೆಗಾರನೇ ಘಟನಾನುಭವಗಳನ್ನು ವಿವರಿಸುವುದರಿಂದ ಅವನೇ ನಿರೂಪಕನಾಗಿದ್ದಾನೆ. 
ಇಲ್ಲಿನ ನಿರೂಪಕನ ಅನುಭವ, ಓದುಗನ ಅನುಭವವೂ ಆಗುತ್ತದೆ. 
ಅಲೆಮಾರಿ ನಿರೂಪಕನಿಗೆ ಗೊತ್ತು ಗುರಿಯಂಬುದು ಇರುವುದಿಲ್ಲ. ಅದಕ್ಕೆ ಅಲ್ಲವೇ ಅಲೆಮಾರಿ ಅನ್ನುವುದು?
ಯಾವುದಕ್ಕೂ ಹೇಸದ ಜನರು ವಾಸಿಸುವ ಪ್ರದೇಶಕ್ಕೆ ನಿರೂಪಕ ಹೋಗಿರುತ್ತಾನೆ. ವಿಪರೀತ ಹಣಕಾಸು ತೊಂದರೆ ಎದುರಿಸುತ್ತಿರುವ ನಿರೂಪಕ ಹೊಟ್ಟೆ ತುಂಬ ತಿನ್ನಲಾಗದ ಸ್ಥಿತಿಯಲ್ಲಿರುತ್ತಾನೆ. 
ಬೆಳಗಿನ ಉಪಹಾರ, ಮಧ್ಯಾಹ್ನದ ಊಟಕ್ಕೆ ಗತಿ ಇರದ ನಿರೂಪಕ ಹಣ ಉಳಿಸಲೆಂದೇ ಮಧ್ಯಾನ್ಹ ನಾಲ್ಕು ಗಂಟೆಗೆ ಎಳುತ್ತಾ ಇರುತ್ತಾನೆ. ರೂಮಿನ ಬಾಡಿಗೆ ಉಳಿಸಲೆಂದೇ ಗಲೀಜು ಪ್ರದೇಶದಲ್ಲಿರುವ ಕತ್ತಲೆ ಕೋಣೆಯಲ್ಲಿ ನೆಲೆಸಿರುತ್ತಾನೆ. ಜನ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುವ ಪ್ರದೇಶವಿದು. ಕೊಲೆ, ಸುಲಿಗೆ, ಕಳ್ಳತನ ಮಾಡುತ್ತಾ, ಅನೇಕ ರೋಗ ರುಜಿನಗಳನ್ನು ಲೆಕ್ಕಿಸದೇ ಬದುಕುವ ಅನಿವಾರ್ಯತೆ. 
ಬೇರೆಯವರಿಗೆ ಆಗುವ ನೋವು-ದುಃಖವನ್ನು ಲೆಕ್ಕಿಸದೇ ಕ್ರೂರವಾಗಿ ವರ್ತಿಸುವ ಜನರ ಮಧ್ಯದ ಅನುಭವವನ್ನು ಕಥೆಗಾರ ನಮ್ಮೊಂದಿಗೆ ಹಂಚಿಕೊಳ್ಳುತ್ತಾನೆ. 
ಹಾಗಂತ ಬರೀ ಕೆಟ್ಟವರು ಎಂದು ವ್ಯಾಖ್ಯಾನಿಸುವುದು. ಕ್ಲಿಷ್ಟಕರವಾದರೂ ಒಳ್ಳೆಯವರು ಎಂದು ಒಪ್ಪಿಕೊಳ್ಳುವುದು ಅಸಾಧ್ಯ. ಅಲ್ಲಿನ ಕೆಲವು ಜನ ಕಾವಲುಗಾರರಾಗಿಯೂ ಕೆಲಸ ಮಾಡುತ್ತಾರೆ ಯಾಕೆಂದರೆ ಇವರಿಗೆ ಹೇಗಾದರೂ ಹಣಗಳಿಸಿ ಬದುಕುವುದೇ ಮುಖ್ಯ ಅಷ್ಟೇ!.
ನಿರೂಪಕನದು ವಲಸಿಗ ಕಾರ್ಮಿಕರಿಗೆ ಇಂಗ್ಲಿಷಿನಲ್ಲಿ ವಿಳಾಸ ಬರೆಯೋದನ್ನು ಕಲಿಸೋ ಕಾಯಕ ಅದರಿಂದ ಉಳಿದಿರೋ ೧೪ ರೂಪಾಯಿಯಲ್ಲಿ ಜೀವನ ಸಾಗಿಸುವ ಇರಾದೆ. 
ಜೇಬಿನಲ್ಲಿ ಉಳಿದಿರೋ ೧೪ ರೂಪಾಯಿ ಪರ್ಸಿನಲ್ಲಿ ಸೇರಿಸಿಕೊಂಡು ಟೀಕು ಟಾಕಾಗಿ ಕೋಟು-ಪ್ಯಾಂಟು ಧರಿಸಿಕೊಂಡು ಊಟಕ್ಕೆ ತೆರಳುತ್ತಾನೆ.
ಹದಿನಾಲ್ಕು ರೂಪಾಯಿ ಇರುವ ಲೆಕ್ಕಾಚಾರ ಇಟ್ಟುಕೊಂಡೇ ಚಪಾತಿ, ಮಾಂಸದ ಸಾರು ಹಾಗೂ ಚಹಾ ಸೇವಿಸುತ್ತಾನೆ. ಹನ್ನೊಂದು ಅಣೆ ತೆಗೆಯಲು ಜೀಬಿಗೆ ಕೈಹಾಕಿದಾಗ ಆಘಾತವಾಗುತ್ತದೆ. 
ಜೇಬಿನಲ್ಲಿರುವ ಪರ್ಸನ್ನು ಯಾರೋ ಲಪಟಾಯಿಸಿದ್ದು ಗೊತ್ತಾದಾಗ ಗಾಭರಿಯಾಗುತ್ತಾನೆ. ಯಾರೋ ಪಿಕ್ ಪಾಕೀಟ್ ಮಾಡಿದ್ದಾರೆ ಎಂದು ಹೋಟೆಲ್‌ನವನಿಗೆ ತಿಳಿಸಿ, ಕೋಟು ಇಲ್ಲೇ ಇಟ್ಟು ಹೋಗಿ ಹಣ ತಂದು ಕೊಡುತ್ತೇನೆ ಎಂದಾಗ ಕ್ರೂರಿ ಹೋಟೆಲ್‌ನವ ಗಹಗಹಿಸಿ ನಗುತ್ತಾನೆ. 
ಹಣ ಇಡು ಇಲ್ಲಾಂದ್ರೆ, ಇಲ್ಲಾಂದ್ರೆ ನಿನ್ನ ಕಣ್ಣು ಕಿತ್ತು ಹಾಕ್ತೀನಿ ಎಂದು ಅಬ್ಬರಿಸಿದ. ಬಟ್ಟೆ ಬಿಚ್ಚಿ ಹಾಕು ಎಂದು ಕ್ರೂರವಾಗಿ ಆಜ್ಞಾಪಿಸಿದ.
ಅವನ ಕ್ರೂರ ಆಜ್ಞೆಗೆ ಅನುಗುಣವಾಗಿ ಕೋಟ್ ಬಿಚ್ಚಿದೆ. 
ಅವನು ಶರ್ಟ್ ಬಿಚ್ಚಲು ಹೇಳಿದ
ಶರ್ಟ್ ಬಿಚ್ಚಿದೆ.
ನನ್ನ ಬೂಟು ಬಿಚ್ಚಲು ಹೇಳಿದ
ಬೂಟು ಬಿಚ್ಚಿದೆ. ಇವನು ನನ್ನ ಮಾನ ಹರಾಜು ಹಾಕ್ತಾನೆ ಎಂಬ ಭಯ, ಆತಂಕ ಶುರು ಆಯ್ತು. ಎಲ್ಲಿ ಪ್ಯಾಂಟು ಬಿಚ್ಚಿ ಹಾಕು ಅಂತಾನೋ ಎಂಬ ಭ್ರಮೆಯಲ್ಲಿದ್ದಾಗಲೇ ಪ್ಯಾಂಟು ಬಿಚ್ಚಲು ಆದೇಶಿಸಿದ. ಅಲ್ಲಿದ್ದವರೆಲ್ಲಾ ನನ್ನ ಬಗ್ಗೆ ಅನುಕಂಪ ತೋರಿಸಬಹುದು ಅಂದುಕೊಂಡಿದ್ದೆ. ಆದರೆ ಅವರು ಅವನಿಗಿಂತ ವಿಕೃತರು. ಗಹಗಹಿಸಿ ನಗುತ್ತಾ ನನಗೆ ಆಗುವ ಅಪಮಾನವನ್ನು ಅನುಭವಿಸುವ ತರಾತುರಿಯಲ್ಲಿದ್ದರು. 
ಪ್ಯಾಂಟ್ ಬಿಚ್ಚು ಅಂದಾಗ ಒಳಗೆ ಏನೂ ಹಾಕಿಕೊಂಡಿಲ್ಲ ಎಂದೆ. ಇಲ್ಲಾ ಬಿಚ್ಚಿಹಾಕು ಎಂದಾಗ ಬೆಚ್ಚಿ ಬಿದ್ದೆ ನಾನು ಸಂಪೂರ್ಣ ಬೆತ್ತಲಾಗಿ ಕಣ್ಣು ಕೀಳಿಸಿಕೊಂಡು ರಸ್ತೇಲಿ ತಿರುಗೋ ಭಯಂಕರ ದೃಶ್ಯ ಕಲ್ಪಿಸಿಕೊಂಡು ದುಃಖಿತನಾದೆ. 
ಇದೆಂತಹ ಕ್ರೂರತನ ಎನಿಸಿತು. ಇನ್ನೇನು ಪ್ಯಾಂಟ್ ಬಟನ್ ಬಿಚ್ಚಿಹಾಕಬೇಕು ಅನ್ನುವಾಗಲೇ ಆಗ ಒಬ್ಬ ಮನುಷ್ಯ ಕೂಗುತ್ತಾನೆ. ಅವನ ಬಿಲ್ ನಾನು ಕೊಡುತ್ತೇನೆ ಎಂದು ಅಪರಿಚಿತನೊಬ್ಬ ರಕ್ಷಣೆಗೆ ಧಾವಿಸುತ್ತಾನೆ.
ಅಪರಿಚಿತ ನಾನು ಕೊಡಬೇಕಾಗಿದ್ದ ಬಿಲ್ ಕೊಟ್ಟು ಬಟ್ಟೆಹಾಕಿಕೊಂಡು ತನ್ನ ಜೊತೆಗೆ ಬರುವಂತೆ ಆದೇಶಿಸುತ್ತಾನೆ.
ದೂರದ ನಿಗೂಢ ಸ್ಥಳಕ್ಕೆ ಕರೆದೊಯ್ದಾಗ ಅವನ ಮಾನವೀಯತೆಗಾಗಿ ಮೂಕ ವಿಸ್ಮಿತನಾಗುತ್ತೇನೆ. ಪರಸ್ಪರ ಹೇಳಲು ಇಬ್ಬರಿಗೂ ಹೆಸರಿಲ್ಲವಲ್ಲ!
ನಿರ್ಜನವಾದ ಒಂದು ಸೇತುವೆ ಹತ್ತಿರ ಕರೆದುಕೊಂಡು ಹೋದ ಅಪರಿಚಿತ ಹೇಳುತ್ತಾನೆ. ನೋಡು ನೀನು ಇಲ್ಲಿಂದ ಹೋಗುವಾಗ ತಿರುಗಿ ನೋಡದೇ ಹೋಗಬೇಕು, ಯಾರಾದರೂ ನನ್ನನ್ನು ನೊಡಿದ್ದೀಯ ಎಂದು ಕೇಳಿದರೆ ಇಲ್ಲಾ ಅಂತ ಹೇಳಬೇಕು ಎಂಬ ಕರಾರಿನೊಂದಿಗೆ ತನ್ನ ಜೇಬಿನಲ್ಲಿದ್ದ ಬಗೆ ಬಗೆಯ ಐದು  ಪರ್ಸಗಳನ್ನು ಹೊರತೆಗೆದು ಇದರಲ್ಲಿ ನಿನ್ನದು ಯಾವುದು ಎಂದು ಕೇಳುತ್ತಾನೆ. 
ನಿರೂಪಕ ತನ್ನ ಪರ್ಸ ತೆಗೆದುಕೊಂಡು ನೊಡುತ್ತಾನೆ. ತನ್ನ ಹಣ ಸರಿಯಾಗಿರುತ್ತೆ. ದೇವರು ನಿನಗೆ ಒಳ್ಳೆಯದು ಮಾಡಲಿ ಅಂತ ಅಪರಿಚಿತ ಹೇಳುತ್ತಾನೆ. ಏನು ಹೇಳಬೇಕೆಂದು ತಿಳಿಯದ ನಿರೂಪಕನೂ ಪುನಃ ನಿನಗೆ ದೇವರು ಒಳ್ಳೆಯದು ಮಾಡಲಿ ಎಂದು ಉಚ್ಛರಿಸುತ್ತಾನೆ. ಅಲ್ಲಿಗೆ ಕಥೆಮುಗಿಯುತ್ತದೆಯಾದರೂ, ನಮ್ಮ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳು ಮುಗಿಯುವುದಿಲ್ಲ. ಇಷ್ಟೊಂದು ಕರುಣಾಮಯಿಯಾದ ಅವನು ಪಿಕ್ ಪಾಕೆಟ್ ಯಾಕೆ ಮಾಡಿದ? ನಂತರ ತನ್ನ ನೆರವಿಗೆ ಯಾಕೆ ಧಾವಿಸಿದ ಎಂದು ಪ್ರಶ್ನಿಸಿಕೊಳ್ಳುತ್ತಾನೆ.
ಮನುಷ್ಯನ ಒಳ್ಳೆಯತನವನ್ನು ಗ್ರಹಿಸುವುದು, ಒಳ್ಳೆಯವರು, ಕೆಟ್ಟವರು ಎಂದು ಯಾರನ್ನಾದರೂ ನಿರ್ಧರಿಸುವುದು ಸಮಂಜಸವೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ, ಎಲ್ಲರನ್ನೂ ಕಾಡುತ್ತದೆ. ಮನುಷ್ಯನನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ ಎನಿಸುತ್ತಲೇ ನಾವು ನಿರುತ್ತರರಾಗುತ್ತೇವೆ.      

ಮೂಲ : ಬಶೀರ್
(ಅನುವಾದ)
  ಸಿದ್ದು ಯಾಪಲಪರವಿ
 ಇಂಗ್ಲಿಷ್ ಉಪನ್ಯಾಸಕ
ಕೆ.ವ್ಹಿ.ಎಸ್.ಆರ್. ಕಾಲೇಜು
ಗದಗ

ಆರ್.ಕೆ. ನಾರಾಯಣ್ ಅವರ ನಾಟಕ ವಾಚಮನ್ ಆಫ್ ದಿ. ಲೇಕ್ (ಕೆರೆಯ ಕಾವಲುಗಾರ)

ಕೆರೆಯಂ ಕಟ್ಟಿಸು, ಭಾವಿಯಂ ತೋಡಿಸು ಎಂಬುದು ನಮ್ಮ ಹಿರಿಯರ ನಿರಂತರ ಆಶಿರ್ವಾದವಾಗಿರುತ್ತಿತ್ತು. ರಾಜಮಹಾರಾಜರು ಹಿರಿಯರಿಂದ ಆಶೀರ್ವಾದ ಬೇಡಿದಾಗ ಹಿರಿಯರು ಮೇಲಿನಂತೆ ಹಾರೈಸುತ್ತಿದ್ದರು. ನಮ್ಮ ರಾಜ್ಯದ ಇತಿಹಾಸವನ್ನು ಗಮನಿಸಿದಾಗ ರಾಜ ಮಹಾರಾಜರಷ್ಟೇ ಕೆರೆಗಳು ಮಹತ್ವದ ಐತಿಹ್ಯ ಪಡೆದಿದೆ. ಆದ್ದರಿಂದ ಪ್ರತಿ ಊರಲ್ಲಿ ಕೆರೆಗಳ ಇತಿಹಾಸ ಸರ್ವೇ ಸಾಮಾನ್ಯ. ಕೆರೆ, ಭಾವಿ, ದೇವಾಲಯಗಳಿಲ್ಲದ ಊರುಗಳನ್ನು ನಾವು ಕಾಣಲು ಸಾಧ್ಯವಿಲ್ಲ. 
ಈ ಹಿನ್ನಲೆಯಲ್ಲಿ ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣರವರು ಬರೆದ ಕಥಾನಕ - ನಾಟಕ ಕೆರೆಕಾವಲುಗಾರ ಕೆರೆಗೆ ಹಾರದಂತೆ ಹೊಸ ವಿಚಾರವನ್ನು ಕಟ್ಟಿಕೊಡುತ್ತದೆ. 
ಈ ನಾಟಕದಲ್ಲಿ ಮಾರಾ, ರಾಜಾ ಹಾಗೂ ದೇವಿ ಪ್ರಮುಖ ಪಾತ್ರಗಳಾಗಿವೆ. ಎಲ್ಲ ಕೆರೆಗಳಂತೆ ಇಲ್ಲಿಯೂ ತ್ಯಾಗ ಬಲಿದಾನವಿದೆ. ನೋಡಲು ಅರೆ ಹುಚ್ಚನಂತೆ ಕಾಣುವ ಮಾರಾ ನಿಜವಾಗಲೂ ಹಾಸ್ಯ ಪ್ರಜ್ಞೆವುಳ್ಳ ಬುದ್ಧಿವಂತ, ಕರುಣಾಮಯಿ, ತ್ಯಾಗಜೀವಿ. ಆದರೆ ಊರ ಮುಖ್ಯಸ್ಥ ಅವನನ್ನು ಹುಚ್ಚನೆಂದು ಭಾವಿಸಿ ರಾಜನ ಭೇಟಿಯ ಸಂದರ್ಭದಲ್ಲಿ ರಾಜನ ಕಣ್ಣಿಗೆ ಬೀಳದಂತೆ ದೂರವಿಡಲು ಪ್ರಯತ್ನಿಸುತ್ತಾನೆ. ಆದರೆ ಮಾರಾ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ರಾಜನನ್ನು ಕಂಡು ದೇವಿ ತನ್ನ ಕನಸಿನಲ್ಲಿ ವಿವರಿಸಿದ ಕೆರೆ ಕಟ್ಟಿಸುವ ಆಶಯವನ್ನು ವಿವರಿಸಿ ಕೆರೆ ಕಟ್ಟಿಸಲು ಕಾರಣನಾಗುತ್ತಾನೆ. ವಿಶಾಲ ಕೆರೆಯ ರಕ್ಷಣೆ ಹಾಗೂ ಉಸ್ತುವಾರಿ ಮಾರಾನ ಹೆಗಲಿಗೆ ಬೀಳುತ್ತದೆ. ಒಂದರ್ಥದಲ್ಲಿ ಮಾರಾ ಕೆರೆಗೆ ಮಹಾರಾಜನಿದ್ದಂತೆ. ಕೆರೆಯ ಮೇಲಿನ ಕಾಳಜಿ, ಪ್ರೀತಿ, ಹಾಗೂ ಶ್ರದ್ಧೆ ಅನನ್ಯವಾದುದು. ಕೆರೆ ಮಲಿನವಾಗದಂತೆ ಎಲ್ಲರಿಗೂ ಉಪಯೋಗವಾಗುವಂತೆ ಮಾರಾ ಎಚ್ಚರವಹಿಸುತ್ತಾನೆ. ಜೊತೆ ಜೊತೆಗೆ ಮಗ ಗಂಗನಿಗೂ ಕೆರೆ ರಕ್ಷಿಸುವಲ್ಲಿ ತರಬೇತಿ ನೀಡುತ್ತಾನೆ. 
ಈ ಹಂತದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆಯುತ್ತದೆ. ಅಬ್ಬರ ರಭಸದಿಂದ ಜೋರಾಗಿ ಸುರಿದ ಮಳೆಯಿಂದಾಗಿ ಕೆರೆ ಒಡೆದು ಹೋಗುವ ಭೀತಿ ಉಂಟಾಗುತ್ತದೆ. ಮತ್ತೊಮ್ಮೆ ಪ್ರತ್ಯಕ್ಷಳಾದ ದೇವಿ ಈಗ ತಾನು ಭಿನ್ನವಾದ ಮನಸ್ಥಿತಿಯಲ್ಲಿದ್ದು, ಕೆರೆಯನ್ನು ಒಡೆದು ಹಾಕುವದಾಗಿ ತಿಳಿಸುತ್ತಾಳೆ. ತಾನು ನಿಷ್ಠೆಯಿಂದ ರಕ್ಷಿಸಿಕೊಂಡ ಕೆರೆಯನ್ನು ಊರ ಜನರನ್ನು ಉಳಿಸಬೇಕೆಂದು ಮಾರಾ ಪರಿಪರಿಯಿಂದ ಬೇಡಿಕೊಳ್ಳುತ್ತಾನೆ. ದೇವಿಗೆ ರಕ್ಷಣೆ ಹೇಗೆ ಸಾಧ್ಯವೊ ವಿನಾಶವು ಸಾಧ್ಯ ಎಂಬುದನ್ನು ಉಗ್ರವಾಗಿ ವಿವರಿಸುತ್ತಾಳೆ. ಪುರಾಣಕಾಲದ ಪವಿತ್ರ ಸ್ಥಳದಲ್ಲಿ ದೇವಿಯ ಆಟದ ಬೊಂಬೆಯಂತಿದ್ದ ವೇದಾ ನದಿಯ ನೀರನ್ನು ಕಲ್ಲುಗಳ ಮಧ್ಯೆ ನೀವು ಬಂಧಿಸಿದ್ದು ಈಗ ನಾನು ನನ್ನ ವೇದಾಳನ್ನು ಮುಕ್ತಗೊಳಿಸಬೇಕಾಗಿದೆ ಎಂಬ ಭಾವ ಉಂಟಾಗಿದೆ ಅದಕ್ಕಾಗಿ ನಾನು ಕೆರೆಯನ್ನು ಒಡೆಯುತ್ತೇನೆ ಎನ್ನುತ್ತಾಳೆ. ವಿನಾಶದ ಮನಸ್ಥಿತಿಯಲ್ಲಿದ್ದ ದೇವಿ ಮಾರಾನ ದುಃಖಿತ ನಿವೇದನೆಯನ್ನು ತಿರಸ್ಕರಿಸುತ್ತಾಳೆ. 
ಮಾರಾ ರಾಜನಿಗೆ ವಿಷಯ ತಿಳಿಸಿ ತಾನು ಮರಳಿ ಬರುವವರೆಗೆ ದೇವಿ ತನ್ನ ರುದ್ರಾವತಾರವನ್ನು ಪ್ರದರ್ಶಿಸಬಾರದು ಎಂಬ ಕರಾರಿನೊಂದಿಗೆ ತಾನು ಬರುವವರೆಗೆ ಕೆರೆ ರಕ್ಷಣೆಯ ಜವಾಬ್ದಾರಿಯನ್ನು ದೇವಿಯ ಹೆಗಲಿಗೆ ಹೊರಿಸಿ ರಾಜನ ಬಳಿ ತೆರಳುತ್ತಾನೆ. 
ರಾಜ ಮಾರನ ವಿವರಣೆ ಕೇಳಿ ಆತಂಕಕೊಳಗಾಗುತ್ತಾನೆ. ಈ ಹಂತದಲ್ಲಿ ಊರಿನ ರಕ್ಷಣೆ ಅಸಾಧ್ಯವೆನಿಸಿದರೂ ಎಚ್ಚರಿಕೆ ನೀಡಲು ಬಯಸುತ್ತಾನೆ. ಆದರೆ ತ್ಯಾಗಮಯಿ, ದಯಾಮಯಿ ಮಾರನ ಆಲೋಚನೆ ಭಿನ್ನವಾಗಿರುತ್ತದೆ. ದೇವಿ ತಾನು ಮರಳಿ ಹೋಗುವವರೆಗೆ ಕೆರೆಯನ್ನು ರಕ್ಷಿಸುವ ಭರವಸೆ ನೀಡಿದ್ದಾಳೆ. ದೇವಿ ಕೊಟ್ಟ ಮಾತಿಗೆ ತಪ್ಪುವುದಿಲ್ಲವಾದ್ದರಿಂದ ತಾನು ಅಲ್ಲಿಗೆ ತಿರುಗಿ ಹೋಗದಂತೆ ಆಗಲಿ ಎಂಬ ಸೂಕ್ಷ್ಮ ಭಾವನೆಯನ್ನು ರಾಜನಿಗೆ ತಿಳಿಸಿದಾಗ ಆಘಾತವಾಗುತ್ತದೆ. ನಿಮ್ಮ ಖಡ್ಗದಿಂದ ರಾಜಭಟ್ಟರ ಮೂಲಕ ನನ್ನ ಹತ್ಯೆಯಾದರೆ ನಾನು ತಿರುಗಿ ಹೋಗುವ ಪ್ರಸಂಗವೇ ಬರುವುದಿಲ್ಲಾ. ಆಗ ದೇವಿಯೂ ಶಾಂತಳಾಗುತ್ತಾಳೆ, ಕೆರೆಯೂ ರಕ್ಷಣೆಯಾಗುತ್ತದೆ. ನನ್ನ ಪ್ರಾಣ ತ್ಯಾಗದಿಂದ ಕೆರೆ ಉಳಿಯಲಿ ಊರ ಜನರ ರಕ್ಷಣೆಯಾಗಲಿ ಎಂದು ಪ್ರಾಣ ಕಳೆದುಕೊಳ್ಳಲು ತನ್ನ ಸಮ್ಮತಿ ಸೂಚಿಸುತ್ತಾನೆ. 
ತನ್ನ ವಂಶಕ್ಕೆ ಕೆರೆಯ ರಕ್ಷಣೆಯ ನಿರ್ವಹಣೆ ದೊರಕುವಂತಾಗಲಿ ಎಂಬ ತನ್ನ ಕೊನೆಯ ಆಸೆಯನ್ನು ರಾಜನ ಬಳಿ ನಿವೇದಿಸಿಕೊಂಡು ಗಂಗಾ ಹಾಗೂ ಅವನ ಮಗನ ಉಸ್ತುವಾರಿಯಲ್ಲಿ ಕೆರೆ ರಕ್ಷಣೆ ಮುಂದುವರೆಯುವ ವಿವರಣೆಯೊಂದಿಗೆ ನಾಟಕ ಮುಗಿಯುತ್ತದೆ. 
ಕೆರೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಮಾರನ ಮೂರ್ತಿ ಕೆರೆಯ ಮುಂದೆ ಸ್ಥಾಪಿಸಿ ಪೂಜಿಸಲ್ಪಡುತ್ತದೆ. 
ಇದೊಂದು ಕಾಲ್ಪನಿಕ ಕಥೆಯಾದರೂ ನಮ್ಮ ಪೂರ್ವಜರ ಪರಿಸರ ಕಾಳಜಿಯನ್ನು ಕಥೆ ಪ್ರತಿಬಿಂಬಿಸುತ್ತದೆ. ಕರ್ನಾಟಕದ ಪ್ರತಿ ಊರುಗಳಲ್ಲಿನ ಕೆರೆಗಳು ಇಂದು ನಾಶವಾಗಿವೆ. ಪರಿಸರ ಪ್ರಜ್ಞೆ ಇರುದ ನಾವು ಪ್ರಕೃತಿ ಮಾತೆಯ ಕೋಪಕ್ಕೆ ಗುರಿಯಾಗುತ್ತಲಿದ್ದೇವೆ. ಮಾರನಂತಹ ಪರಿಸರ ಪ್ರೇಮಿಗಳು ಇಲ್ಲದ ಕಾರಣ ನಿತ್ಯ ದೇವಿ ಕ್ಷುದ್ರಳಾಗುತ್ತಿದ್ದಾಳೆ. ಕೆರೆಗಳು ಬತ್ತಿ ಹೋಗಿವೆ, ಕೆರೆಗಳ ಸ್ಥಳಗಳಲ್ಲಿ ಕಾಂಕ್ರೀಟ್ ಕಟ್ಟಡಗಳು ಆಕ್ರಮಿಸಿ ನಮ್ಮ ಪೂರ್ವಜರು ನಂಬಿದ್ದ ಮೌಲ್ಯಗಳು ನಾಶವಾಗಿವೆ. 
ದೇವರು, ಪುರಾಣಗಳ ಕಲ್ಪನೆಯು ಅವೈಜ್ಞಾನಿಕವೆನಿಸಿದರೂ ನಮ್ಮ ಹಿರಿಯರಿಗೆ ಪರಿಸರ ರಕ್ಷಿಸುವ ಉದ್ದೇಶ ಅದರ ಹಿಂದೆ ಇರುತ್ತಿತ್ತು. ದೇವರು-ಧರ್ಮದ ಹೆಸರಿನಲ್ಲಿ ಭಯ-ಭಕ್ತಿಯ ಆಚರಣೆಗಳ ಮೂಲಕ ಪರಿಸರ ರಕ್ಷಣೆ ನಮ್ಮವರ ಉದ್ದೇಶವಾಗಿತ್ತು. ಇಂದು ಪರಿಸರ, ಕೆರೆ, ಭಾವಿ, ಹಳ್ಳಗಳು ಚಿತ್ರದ ರೂಪಗಳಾಗಿ ಪಾಠದ ವಸ್ತುಗಳಾಗಿವೆ. ಆರ್.ಕೆ. ನಾರಾಯಣರ ಈ ನಾಟಕ ವರ್ತಮಾನದ ಸಂದರ್ಭಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಹರಿಯುವ ನದಿಗಳನ್ನು ತಡೆದು ಡ್ಯಾಂ ಕಟ್ಟುವುದನ್ನು ಪರಿಸರ ಪ್ರೇಮಿಗಳು ನಿಸಗ ವಿರೋಧಿ ಕ್ರಿಯೆಯಂದು ವಾದಿಸಿದರು ವಿವಿಧ ಯೋಜನೆಗಳ ಮೂಲಕ ಪರಿಸರ ವಿನಾಶ ಮುಂದುವರೆದಿದೆ. ಇತ್ತೀಚೆಗೆ ಉತ್ತರಾಂಚಲದಲ್ಲಿ ಸಂಭವಿಸಿದ ಜಲಪ್ರಳಯ ಪರಿಸರ ಮಾತೆಯ ಉಗ್ರ ಕೋಪಕ್ಕೆ ಸಾಕ್ಷಿಯಾಗಿದೆ. ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂಬ ಸಂದೇಶವನ್ನು ಪ್ರಕೃತಿ ಮಾತೆ ನಮಗೆ ರವಾನಿಸಿದ್ದಾಳೆ.
ಬೆಂಗಳೂರಿನಲ್ಲಿದ್ದ ನೂರಾರು ಕೆರೆಗಳು ಹೆಸರಿನಲ್ಲಿ ಮಾತ್ರ ಉಳಿದಿವೆ. ಕೆರೆಗಳ ಒತ್ತುವರಿಯಲ್ಲದೇ ಇದ್ದ ಕೆರೆಗಳಿಗೆ ಮಲಿನ ನೀರನ್ನು ಸೇರಿಸುವ ಕೆರೆಗಳ ಅತ್ಯಾಚಾರ ನಡೆದಿದೆ. ಕರ್ನಾಟಕದ ಹಳ್ಳಿ ಬದುಕನ್ನು, ಮುಗ್ಧ ಪಾತ್ರಗಳನ್ನು ತಮ್ಮ ಕಥೆ ಕಾದಂಬರಿಗಳ ಮೂಲಕ ಕಟ್ಟಿಕೊಟ್ಟ ಆರ್.ಕೆ. ನಾರಾಯಣ್ ಕರ್ನಾಟಕದ ಕೆರೆಗಳ ವಿನಾಶ ಕಂಡು ಈ ನಾಟಕ ಬರೆದಿರಬಹುದು ಎಂಬ ಭಾವ ಉಂಟಾಗುತ್ತದೆ. 
ಇಂದು ಯಾವುದೇ ಹೊಸ ಯೋಜನೆಗೆ ಸುಲಭ ಆಕ್ರಮಣವೆಂದರೆ ಕೆರೆಗಳು. ಕೆರೆಗೆಳ ಜಾಗದಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳು, ಮಲ್ಟಿಪ್ಲೆಕ್ಸ್ ಕಟ್ಟಡಗಳು ಮಳೆ ಬಂದಾಗ ಜಲಾವೃತಗೊಂಡು ಅಲ್ಲಿದ್ದ ಕೆರೆಗಳನ್ನು ನೆನಪಿಸುತ್ತವೆ. ಸಮಯ ಸಿಕ್ಕಾಗಲೆಲ್ಲಾ ಪ್ರಕೃತಿ ಮಾತೆ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತಾಳೆ. 
ಗೈಡ್, ಮಾಲ್ಗುಡಿ ಡೇಸ್, ಫೈನಾನ್ಸಿಯಲ್ ಎಕ್ಸ್‌ಪರ್ಟ್ ನಂತಹ ಮಹತ್ವದ ಕೃತಿಗಳನ್ನು ಇಂಗ್ಲಿಷ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಆರ್.ಕೆ. ನಾರಾಯಣ್ ಅವರ 'ವಾಚ್‌ಮನ್ ಆಫ್ ದಿ ಲೇಖ್' ನಾಟಕ ಭಾವನಾತ್ಮಕ ಕಥಾ ನಿರೂಪಣೆ ಮೂಲಕ, ಗ್ರಾಮೀಣ ಜನರ ಸಹಜ ಪಾತ್ರಗಳನ್ನು ಕಟ್ಟಿಕೊಡುವದರೊಂದಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪರಿಸರ ರಕ್ಷಣೆ ಕಾಳಜಿಯನ್ನು ಓದುಗರಿಗೆ ತಲುಪಿಸಲು ಯಶಸ್ವಿಯಾಗಿದೆ.