Sunday, April 11, 2010

ಜಗದ್ಗುರು ಡಾ.ತೋಂಟದ ಶ್ರೀಗಳ ಶಿವಯೋಗ ಮಂದಿರ ಪ್ರಕರಣ

ಸತ್ಯ ಸೂರ್ಯನಿಗಿಂತಲೂ ಪ್ರಖರ ತಡೆಯಲಾರದವರು ಕುದಿಯುತ್ತಾರೆ.

ಸ್ವಜನ ಪಕ್ಷಪಾತಿಗಳು, ಮೂಲಭೂತವಾದಿಗಳು ಸತ್ಯವನ್ನು ಸಹಿಸುವುದಿಲ್ಲ ಎಂಬುದನ್ನು 10-3-2010 ರಂದು ಶಿವಯೋಗ ಮಂದಿರದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಕಾರಿನ ಮೇಲೆ ಕಲ್ಲು ಎಸೆದು, ಏಕವಚನದಲ್ಲಿ ನಿಂದಿಸಿದ ಮಹನೀಯರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲಾಗಿಲ್ಲ.
ಕೋಟ್ಯಾಂತರ ಹಣ ಖರ್ಚು ಮಾಡಿ ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರಸ್ವಾಮಿಗಳವರ ಶತಮಾನೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. ಅದ್ಧೂರಿತನ ಕೇವಲ ಭೌತಿಕವಾಗಿದೆ ಎಂಬುದನ್ನು ಎಲ್ಲರೂ ಸಾಬೀತುಪಡಿಸಿದ್ದಾರೆ. ಇಪ್ಪತ್ತೈದು ಸಾವಿರ ಕುರ್ಚಿಗಳಿರುವ ಪೆಂಡಾಲಿನಲ್ಲಿ ಕೇವಲ ಸಾವಿರ ಜನ ಇದ್ದರೆ ಹೇಗಾಗಬೇಡ. ಲಕ್ಷಾಂತರ ಲಿಂಗಾಯತರನ್ನು ಹೊಂದಿದ ಸಮಾಜ, ಶತಮಾನಗಳ ಇತಿಹಾಸವಿರುವ ಸಂಘಟನೆಗಳು ಆಯೋಜಿಸುವ ಸಂಭ್ರಮದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪಾಲ್ಗೊಳ್ಳುತ್ತಾರೆ ಎಂದರೆ ಏನರ್ಥ? ಹಾಗಾದರೆ ದೋಷವೆಲ್ಲಿದೆ? ಎಂಬುದನ್ನು ಮಠಾಧೀಶರು ಪರಾಮರ್ಶಿಸದಿದ್ದರೆ, ಇನ್ಯಾರು ಆ ಕೆಲಸ ಮಾಡಬೇಕು?
ಅಂದು ಆಗಿದ್ದು ಅದೇ ತಮ್ಮ ಭಾಷಣದಲ್ಲಿ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಶಿವಯೋಗಮಂದಿರದ ಪೀಠಾಧಿಪತಿಗಳಾದ ಬಳ್ಳಾರಿ-ಹೊಸಪೇಟೆಯ ಜಗದ್ಗುರು ಸಂಗನಬಸವ ಸ್ವಾಮಿಗಳು ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಶ್ರೀ ಭೀಮಣ್ಣಖಂಡ್ರೆ ಅವರು ತಮ್ಮ ಸ್ಥಾನ ತ್ಯಜಿಸಿ ಹೊಸಬರಿಗೆ ಅವಕಾಶ ನೀಡಲಿ ಎಂದು ನೇರವಾಗಿ ಹೇಳಿದ್ದು ಸದರಿ ಅಧ್ಯಕ್ಷರುಗಳ ಪಿತ್ತ ನೆತ್ತಿಗೇರಿಸಿದೆ.
ಈಗ ಲಿಂಗಾಯತ ಧರ್ಮವು ಜಡವಾಗಿದೆ. ಸ್ಥಾವರವಾಗಿದೆ. ಬಸವಣ್ಣನಿಂದ ಆರಂಭಗೊಂಡ ಧರ್ಮ ಕೆಲವರ ತಪ್ಪು ಇತಿಹಾಸದಿಂದ ಪುರಾತನ ಧರ್ಮ ಎಂಬ ಭ್ರಮೆ ಹುಟ್ಟಿಸಿದೆ. ಲಿಂಗಾಯತ್ ಧರ್ಮದ so called ಮೇಲ್ವರ್ಗದ ಪುರೋಹಿತಶಾಹಿಗಳು ಬಸವಣ್ಣನನ್ನು ಧರ್ಮಗುರು ಎಂದು ಒಪ್ಪುತ್ತಿಲ್ಲ. ಅದ್ಯಾರು ಕಾಲ್ಪನಿಕ ವ್ಯಕ್ತಿ ಗುರು ಎಂಬ ಗುರಾವಣೆ ಶುರು ಆಗಿದೆ.

ಈ ಚರ್ಚೆಯ ಅಂತಿಮ ಹಂತಕ್ಕೆ ನಾವೀಗ ತಲುಪಿದ್ದೇವೆ. ಗುರು-ವಿರಕ್ತರ ಮಧ್ಯ ಬೆಸೆಯಲಾಗದ ಬಿರುಕು ಬಿಟ್ಟಿದೆ. ಗುರುಪರಂಪರೆಯ ಮಠಾಧೀಶರು ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪುತ್ತಿಲ್ಲ, ಕೆಲ ವಿರಕ್ತ ಪರಂಪರೆಯ ಮಠಾಧೀಶರು ಬಹಿರಂಗವಾಗಿ ಬಸವಣ್ಣ ಅಂದರೂ, ಆಂತರಿಕವಾಗಿ ಜಾತಿಜಂಗಮ ಮೇಲರಿಮೆಯಿಂದ ಮುಕ್ತರಾಗಿಲ್ಲ. ಗುರುಗಳಿಗೂ-ವಿರಕ್ತರಿಗೂ ಬಸವಣ್ಣ ಬೇಡವಾದರೆ ಸಮಾಜದ ವಿಕಸನ ಹೇಗೆ ಸಾಧ್ಯ?
ಲಿಂಗಾಯತ ಧರ್ಮಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವುದು ಬಸವಾದಿ ಶರಣ ತತ್ವಗಳಿಂದ. ಅವರು ರಚಿಸಿದ ವಚನ ಶಾಸ್ತ್ರ ಲಿಂಗಾಯತರ ಧರ್ಮಗ್ರಂಥ. ಬಸವ ಧರ್ಮದ ಜಾತ್ಯಾತೀತ ನಿಲುವನ್ನು ಮಾನಸಿಕವಾಗಿ ಸ್ವೀಕರಿಸದ ಜಾತಿವಾದಿಗಳಿಗೆ ಬಸವಣ್ಣನೆಂದರೆ ಅಷ್ಟಕ್ಕಷ್ಟೇ.
ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರ ಗವಾಯಿಗಳು ಹಾಗೂ ಡಾ. ಪಂಡಿತ ಪುಟ್ಟಾರಾಜ ಗವಾಯಿಗಳವರಿಗೆ ಇರುವ ತತ್ವ ನಿಷ್ಠೆ ಈಗಿನ ಮಠಾಧೀಶರಿಗಿಲ್ಲ. ಆದರೆ ಹಾನಗಲ್ ಕುಮಾರಸ್ವಾಮಿಗಳ ಹೆಸರಿನಲ್ಲಿ ಜಾತಿ ಸಂಘಟನೆಯಂತಹ ಸಣ್ಣ ಕಾರ್ಯಕ್ಕೆ ತೊಡಗಿದ್ದು ವಿಷಾದನೀಯ. ಒಳ್ಳೆಯದಿದ್ದರೆ ಮಾತ್ರ ಜನ ಸ್ವಿಕರಿಸುತ್ತಾರೆ, ಇಲ್ಲದಿದ್ದರೆ ಇಲ್ಲ ಎಂಬುದಕ್ಕೆ ಶಿವಯೋಗಮಂದಿರದ poor performance ಸಾಕ್ಷಿಯಾಗಿದೆ.
ಹಿಪೋಕ್ರಸಿ ಈಗ ಬಯಲಾಗಹತ್ತಿದೆ. ಕೇವಲ ಇಳಕಲ್ಲ, ಚಿತ್ರದುರ್ಗ ಹಾಗೂ ಗದುಗಿನ ಜಗದ್ಗುರುಗಳು ತಮ್ಮ ಕೆಲವು ಮಠಾಧೀಶರೊಂದಿಗೆ ಬಸವ ನಿಷ್ಠೆಯ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವುದು ವೀರಶೈವ ಮೂಲಭೂತವಾದಿಗಳನ್ನು ಕೆಣಕಿದ. ಜನ ಬಸವ ಧರ್ಮವನ್ನು ಸಮರ್ಪಕವಾಗಿ ಅರಿತುಕೊಂಡರೆ ಪುರೋಹಿತ ವ್ಯವಸ್ಥೆಗೆ ಪೆಟ್ಟು ಬೀಳುತ್ತದೆ. ಪುರೋಹಿತ ವ್ಯವಸ್ಥೆಗೆ ಪೆಟ್ಟು ಬಿದ್ದರೆ ಜಾತಿ ಜಂಗಮ ಮಠಾಧೀಶರ ದೌಲತ್ತು ಕುಗ್ಗುತ್ತದೆ. ಜನ ಪ್ರಜ್ಞಾವಂತರಾದರೆ, ಲಿಂಗಾಯತ ಧರ್ಮವನ್ನು ಅರಿತುಕೊಂಡು, ಲಿಂಗಾಯತ ಒಳ ಪಂಗಡ ಸಮಾಜದವರು ಸ್ವಾಮಿಗಳಾದರೆ ಜಾತಿ ಜಂಗಮರನ್ನು ಮೆರೆಸುವವರು ಯಾರು? ಎಂಬ ಧಾವಂತ. ಜಾತಿಯಿಂದ ಜಂಗಮರಾದರೂ ವೀರಕ್ತ ಪೀಠಪರಂಪರೆಯ ಜವಾಬ್ದಾರಿ ಹೊತ್ತುಕೊಂಡಿರುವ ಗದಗ, ಇಳಕಲ್ಲ ಹಾಗೂ ಚಿತ್ರದುರ್ಗ ಶ್ರೀಗಳು ಮತ್ತಷ್ಟು ಒಗ್ಗಟ್ಟಾಗಿ ಬಸವ ತತ್ವ ಪ್ರಚಾರಕ್ಕಾಗಿ ಬದ್ಧರಾಗಬೇಕಾದ ಕಾಲ ಈಗ ಕೂಡಿಬಂದಿದೆ.
ನೈತಿಕವಾಗಿ ಈಗ ಇಳಕಲ್ ಶ್ರೀಗಳು ಹೆಚ್ಚು ಬಲಶಾಲಿಗಳಾಗಲು ಕಾರಣ ತಮ್ಮ ಉತ್ತರಾಧಿಕಾರಿಗಳನ್ನಾಗಿ ಜಂಗಮೇತರರನ್ನು ಅಯ್ದುಕೊಂಡು ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದ್ದಕ್ಕೆ ಎಂಬುದನ್ನು ಎಲ್ಲರೂ ಅರಿತಿದ್ದಾರೆ.
ಅದೇ ಪರಂಪರೆಯನ್ನು ಭದ್ರ ಪಡಿಸಲು ಈಗ ಚಿತ್ರದುರ್ಗ ಹಾಗೂ ಗದುಗಿನ ಶ್ರೀಗಳು ಮುಂದಾಗಿ ಬಸವ ತತ್ವ ನಿಷ್ಠರ ನೈತಿಕ ಸ್ಥ್ಯರ್ಯ ಹೆಚ್ಚಿಸಬೆಕು.
ಬಸವ ತತ್ವದಲ್ಲಿ ನಂಬಿಕೆ ಇರದವರನ್ನು ವೀರಶೈವರೆಂದು, ಇದ್ದವರನ್ನು ಲಿಂಗಾಯತರೆಂದು ಪರಿಗಣಿಸಬೇಕು. ಅನಗತ್ಯ ವೀರಶೈವ ಧರ್ಮಿಯರನ್ನು ಕೆಣಕುವ ಅಗತ್ಯವಿಲ್ಲ. ಖಡಾ ತುಂಡಾಗಿ ತಾತ್ವಿಕ ಹಿನ್ನಲೆಯಲ್ಲಿ ವಿಭಜಿತರಾದಾಗ ಈ ಗೊಂದಲವೇ ಇರುವುದಿಲ್ಲ. ಈ ಹಿಂದೆ ಇಳಕಲ್ಲ ಶ್ರೀಗಳ ಮೇಲೆ ಕಲ್ಲು ಎಸೆಯಲು ಯತ್ನಿಸಿದವರೇ ಇಂದು ಈ ಕೃತ್ಯವನ್ನು ಮಾಡಿದ್ದಾರೆ. ಸತ್ಯ ಒರೆಗೆ ಹಚ್ಚಬೇಕಾದರೆ ಈ ರೀತಿಯ ಸಂಘರ್ಷ ಅನಿವಾರ್ಯ. ಬಸವ ತತ್ವ ತರಬೇತಿಗಾಗಿ ಇನ್ನೊಂದು ವಿಶ್ವವಿದ್ಯಾಲಯ ಪ್ರಾರಂಭಿಸಿ positive ವಿಚಾರದ ದೊಡ್ಡಗೆರೆ ಎಳೆಯಬೇಕೇ ಹೊರತು ಈ ರೀತಿ ಸಾರ್ವಜನಿಕ ಸಂಘರ್ಷಕ್ಕೆ ಮುಂದಾಗಬಾರದು. ಲಿಂಗಾಯತ ಧರ್ಮದ ಸಾರವನ್ನು ಪ್ರಚುರ ಪಡಿಸಿ, ಜನಸಾಮಾನ್ಯರಲ್ಲಿರುವ ಗೊಂದಲ ನಿವಾರಿಸಬೇಕು. ಈ ಹಿನ್ನಲೆಯಲ್ಲಿ ಜಾತಿ ಜಂಗಮದ ಹಿನ್ನಲೆಯಲ್ಲಿ ಬಂದ ವಿರಕ್ತ ಮಠಾಧೀಶರು ಇನ್ನೂ ಹೆಚ್ಚು ಗಟ್ಟಿಯಾಗಬೇಕು. ಶಿವಯೋಗ ಮಂದಿರದ ಸದರಿ ಪ್ರಕರಣ ಇಂತಹ ಮನ್ವಂತರಕ್ಕೆ ನಾಂದಿ ಹಾಡಿ ಶುಭಸೂಚನೆ ನೀಡಿದೆ. ಪ್ರಗತಿಪರರೆಲ್ಲ ಒಗ್ಗಟ್ಟಾಗಿ ಬಸವಧರ್ಮ ಬೆಂಬಲಿಸಿ ತೋಂಟದ ಶ್ರೀಗಳ ಮೌಲ್ಯವನ್ನು ಇಮ್ಮಡಿಗೊಳಿಸಬೇಕು.

2 comments: