Monday, January 23, 2017

ನಾನು , ನಡೆ ಮತ್ತು ಗಾಡಿ

ನಾನು , ನಡೆ ಮತ್ತು ಗಾಡಿ

ಉಪನ್ಯಾಸಕ ವೃತ್ತಿಗೆ ಸೇರಿದ ಮೇಲೆ ಅಸಂಖ್ಯ ಅನುಭವಗಳು.
ಇಂಗ್ಲಿಷ್ ಉಪನ್ಯಾಸಕ ಅಂದ ಮೇಲೆ ವಿದ್ಯಾರ್ಥಿಗಳು ಏನೇನೋ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದು ತಪ್ಪಲ್ಲ ಬಿಡಿ !

ಅವರು class ನಲ್ಲಿ ತುಂಬಾ serious ಆಗಿ ಗಲಾಟೆ ಮಾಡದೇ ಕುಳಿತಿರುವುದಕ್ಕೆ ತುಂಬಾ ಹೆಮ್ಮೆ ಪಡುತ್ತಿದ್ದೆ , ಅದ್ಭುತ ಪಾಠ ಅಂದುಕೊಂಡಿದ್ದೆ ಆದರೆ ನಂತರ ತಿಳೀತು ಏನೂ ಅರ್ಥವಾಗದ ಕಾರಣಕ್ಕೆ ಸುಮ್ಮನೇ ಇರುತ್ತಾರೆ ಎಂದು .

ಸತ್ಯ ತಿಳಿದ ಮೇಲೆ ಪಾಠ ಮಾಡುವ ಶೈಲಿ ಬದಲಾಯಿಸಿಕೊಂಡು ಅಗತ್ಯವೆನಿಸಿದಾಗ ಕನ್ನಡದಲ್ಲಿ ಹೇಳಿ ನಿಜವಾದ ಜನಪ್ರಿಯತೆ ಗಳಿಸಿಕೊಂಡೆ. ಈಗ ಬಿಡಿ ಇಪ್ಪತ್ತೆಂಟು ವರ್ಷಗಳ ಅನುಭವ. ಕೆ.ಜಿ.ಯಿಂದ ಪಿ.ಜಿ.ವರೆಗೆ ನಿರಾಯಾಸವಾಗಿ ಪಾಠ ಮಾಡುವ ಸಂಭ್ರಮ. ಉದ್ಯೋಗವೇ ಇದಾದ್ದರಿಂದ ಹೆಗ್ಗಳಿಕೆಯ ಮಾತೆಲ್ಲಿ ?

ಇದು ಪಾಠದ ಕತೆಯಾದರೆ , ಬಳಸುವ ವಾಹನದ ಬಗೆಗೂ ಹಿಂದಿನ ವಿದ್ಯಾರ್ಥಿಗಳಿಗೆ ಕುತೂಹಲವಿರುತ್ತಿತ್ತು. ಕೇವಲ ಆರುನೂರು ರೂಪಾಯಿ ಸಂಬಳದಲ್ಲಿ , ಅರೆಕಾಲಿಕ , ಅನುದಾನರಹಿತ ಪದಗಳಿಗೆ ಬೆಂಡಾದ ನಾವು ಕಾಲನ್ನೇ ನಂಬಿದ ಕಾಲವದು. ಆದರೆ ನಮ್ಮ ಕಣ್ಣೆದುರಿಗೆ ನಮ್ಮ ವಿದ್ಯಾರ್ಥಿಗಳು ಮೊಪೆಡ್ಡುಗಳಲಿ ಓಡಾಡಿದರೂ ನಮಗೇನು ಅವಮಾನವಾಗುತ್ತಿರಲಿಲ್ಲ.

ಮುಂದೆ 600 ರೂಪಾಯಿಯಲ್ಲಿ ಕಂತಿನ ಮೇಲೆ ಸೈಕಲ್ ತೆಗೆದುಕೊಂಡಾಗಲೂ ವಿದ್ಯಾರ್ಥಿಗಳಿಗೆ ಅಸಮಾಧಾನ. ' ಅಯ್ಯೋ ಸರ್ ಸೂಟು , ಬೂಟು ಹಾಕಿಕೊಂಡು ಸೈಕಲ್ ಮೇಲೆ ಬರುವುದು ಒಂಥರಾ ಕಾಣುತ್ತೆ ' ಎಂದು ರಗಳೆ ತೆಗೆದರು. ಮುಂದೆ ಮತ್ತೆ ಸಾಲ ಮಾಡಿ ಸ್ಕೂಟರ್ ತಗೊಂಡಾಗ ತುಂಬಾ ಖುಷಿಯಾದರು...

ನಂತರ ಬಿಡಿ ಸಾಲು ಸಾಲಾಗಿ ಸಾಲದ ಮೇಲೆ ಸಾಲ , ಮದುವೆ , ಮತ್ತೆ ಕಾರು , ಮನೆ ಹೀಗೆ ಸಾಲವೆಂಬ ಶೂಲ ಹಿಡಿದು ಓಡಿದ್ದೇ ಓಡಿದ್ದು.

ಮುಂದೆ ಬ್ಯಾಂಕುಗಳ ಆರಾಧಕರಾಗಿ , ಬ್ಯಾಂಕಿನವರ ಪಾಲಿನ ಸಂಪನ್ಮೂಲವೂ ಆಗಿದ್ದೇನೆ.
ಇಂದು ಅನಿವಾರ್ಯವಾಗಿ ನಾನು ಕೆಲಸ ಮಾಡಲು ಹೋಗುವ ತಿಮ್ಮಾಪುರದ ಬಸ್ ಹರ್ಲಾಪೂರದಿಂದ ಕೈಕೊಟ್ಟಾಗ ಕೊಂಚ ವಾಕಿಂಗ್ ಇರಲಿ ಎಂದು ನಡೆಯುತ್ತಾ ಹೊರಟಾಗ ಮನಸ್ಸು ಇಪ್ಪತ್ತೈದು ವರ್ಷಗಳ ಹಿಂದೆ ಓಡಿದ flash back ನಲ್ಲಿ ತಿಮ್ಮಾಪುರ ಬಂದಿದ್ದೇ ಗೊತ್ತಾಗಲಿಲ್ಲ.

ಈಗ ಬಿಡಿ ಪ್ರಾಥಮಿಕ ಶಾಲಾ ಹುಡುಗರೇ ನಡೆಯುವುದಿಲ್ಲ ಇನ್ನೂ ಉಪನ್ಯಾಸಕರು ನಡೆಯುವುದೆಲ್ಲಿ ?

ನಾವೀಗ ನಡೆಯುವುದು ಕೇವಲ ಮಧುಮೇಹಕ್ಕೆ ಹೆದರಿಯೇ ಹೊರತು ಸರಳತೆಗಾಗಿ ಅಲ್ಲ.

ಹೂ ಬಿಸಲಿನ ನಡಿಗೆ ತಂದ ಹತ್ತಾರು ನೆನಪುಗಳ ಗೊಂಚಲನ್ನ ಹಾಗೆ ಹಂಚಿಕೊಂಡೆ , ನಿಮಗೂ ಏನಾದರೂ ನೆನಪಾಗಬಹುದೆಂದು !!

---ಸಿದ್ದು ಯಾಪಲಪರವಿ

No comments:

Post a Comment