ಬಿಗುಮಾನ ಬಿಡು
ನಿನ್ನನು ಗೆಲ್ಲುತ್ತೇನೆ ನಿನಗೆ ಸೋತಿದ್ದೇವೆ 
ಎಂಬ ಭ್ರಮೆ ನನಗಿಲ್ಲ ಹಾಗಂತ 
ಮನಸೋತಿರುವುದನು ಬಚ್ಚಿಡಲಾದೀತೆ ?
ಹೌದು ಗೆಲ್ಲುವೆ ಎಂಬ ಭರವಸೆಯಲಿ ಎದೆಯ 
ಬಗೆದು ನಿವೇದಿಸುವೆ ಮನದಾಳದ ಆಸೆಗಳಿಗೆ 
ಬಣ್ಣದುಂಬಿ ನಿನ್ನ ಅಂಗೈಯಲಿಡುವೆ 
ಎದೆಗಪ್ಪಿ ಮುದ್ದಾಡಿ ಲಾಲಿ ಹಾಡುವ ಬಯಕೆಯನು 
ಪೂರೈಸುವ ಹಕ್ಕು ನಿನಗಿದೆ 
ಬೇಡವಾದರೆ ಗೋಡೆಗೆ ತೂಗು ಹಾಕು ಒಣ 
ಜಂಬದ ಮೊಳೆಗೆ 
ನೋಡುಗರ ಕಣ್ಣಿಗೆ ಹಬ್ಬವಾಗಿ ಕಾಡುವ ನೋವುಗಳ 
ಒಂದು ಕ್ಷಣ ಮರೆಸಿ ಬಿಡುವೆ 
ಈ ಪ್ರೇಮದಾಟದಲಿ ನಾ ಕೀಳಲ್ಲ ನೀ ಮೇಲೂ ಅಲ್ಲ 
ಇದು ಇಬ್ಬರ ಇಬ್ಬಗೆಯ ಅನುಸಂಧಾನ ನಾ 
ಹೇಳಿದ್ದೇನೆ ನೀ ಹೇಳುತ್ತಿಲ್ಲ ಅಷ್ಟೇ 
ನನಗಿರುವ ಆಸೆ ನಿನಗೂ ಇದೆ ಬಿಗುಮಾನಕೆ 
ಚಾರಿತ್ರ್ಯದ ಹೊದಿಕೆಯ ಮುಖವಾಡವ ಕಳಚಿ 
ಸುಂದರ ನಗುವಿನಾಭರಣ ಹೊತ್ತು 
ಒಮ್ಮೆ ಬಿಗಿದಪ್ಪಿ ಕಣ್ಣು ಮುಚ್ಚಿ ಮೈ ಮರೆಯೋಣ 
ಒಲವ ಧಾರೆಯಲಿ ಮೀಯೋಣ ಬಾ ಬಾ ಬಾ...
---ಸಿದ್ದು ಯಾಪಲಪರವಿ
 
 
 
 Posts
Posts
 
 
No comments:
Post a Comment