Wednesday, May 3, 2017

ಒಂದಾಗೋಣ

ಒಂದಾಗೋಣ

ಕನಸಿಗೆ ಕಣ್ಣಿಲ್ಲ ವಯಸಿಲ್ಲ
ಹಂಗಿನರಮನೆಯ ವಾಸವಿರದ
ಸಂಚಾರಿ ಭಾವನೆಗಳ ವಾರಸುದಾರಿಕೆಯ
ದೌಲತ್ತಿನಲಿ ಆನೆ ನಡೆದದ್ದೇ ದಾರಿ

ಚಾರಿತ್ರ್ಯದ ಗುಂಗು ಭವಿತವ್ಯದ ಹಂಗು
ಮಾರು ದೂರ ಕಂಡದ್ದು ಕಂಡಂತೆ
ಅನಿಸಿದ್ದ ಹೇಳುತ್ತ ಉತ್ತರದ ಗೊಡೆವೆಗೆ
ಕಾಯದ ನಿರ್ಲಿಪ್ತ ನುಡಿ

ಮೆಚ್ಚಿದ ಮೆಚ್ಚುವ ಸಂಗತಿಗಳ ಪಡೆಯುವ
ತೀವ್ರ ಹಂಬಲದ ಭರದಲಿ ತಡೆಯಿಲ್ಲದ ವೇಗ

ಕನಸು ಸುಂದರ ಮಧುರವೆನಿಸಿದರೆ ಇಲ್ಲದ
ನಖರಾ ಬಿಟ್ಟು ಹತ್ತಿರ ಬಾ ಬಿಗಿದಪ್ಪಿ
ಪಿಸುಮಾತಲಿ ನಸುನಗುತ ಕನಸುಗಳಿಗೆ ಬಣ್ಣ
ಬಳಿದು ಒಂಚೂರು ಆಳಕಿಳಿದು ಸುಖದ
ಸುಪ್ಪತ್ತಿಗೆಯನೇರು ರಾಣಿಯಂತೆ ಮೆರೆ

ಸುಕ್ಕುಗಟ್ಟಿ ಜೋತು ಬಿದ್ದು ಮಣ್ಣು ಸೇರುವ
ದೇಹಕೆ ಚಾರಿತ್ರ್ಯದ ಪಟ್ಟ ಕಟ್ಟಿ ಮನಸಿನ ಚಟ್ಟ
ಕಟ್ಟಬೇಡ

ಮನಸು ಹಂಬಲಿಸಿ ಸ್ವೀಕರಿಸಿ ಬಲಿಯಾಗಿ
ಮೈಮನಗಳು ಪುಳಕಗೊಂಡು
ಚಾರಿತ್ರ್ಯದ ಮುಖವಾಡ ಕಳಚಿ
ಬಿದ್ದಾಗಲಾದರೂ ಬಿಡು ಒಣ ಜಂಬವ

ಬಾ ಮನದ ಮಾತನಾಲಿಸಿ ಮನಸೋತು
ಮೈಮರೆತು ಒಂದಾಗಿ ಬಿಂದುವಾಗೋಣ.

---ಸಿದ್ದು ಯಾಪಲಪರವಿ

No comments:

Post a Comment