ಹೈಸ್ಕೂಲಿನ ದಿನಗಳು ಗೆಳೆಯರಿಂದ ಕೂಡಿದ್ದರೂ, ಎಲ್ಲರೂ ಶಾಶ್ವತ ಸ್ನೇಹಿತರಾಗಿ ಉಳಿಯಲಿಲ್ಲ. ಪ್ರತಿ ದಶಕಗಳಿಗೊಮ್ಮೆ ಬದುಕು ಬದಲಾಗುತ್ತಾ, ವ್ಯಕ್ತಿಗಳೂ ಬದಲಾಗುತ್ತಾರೆ. ಬೆಳೆದಂತೆಲ್ಲ ತಂಡವೂ ಬದಲಾಗುತ್ತದೆ.
ಆದರೆ ಬದುಕಿನ ಬ್ಯಾಲೆನ್ಸ್ ಶೀಟ್‌ನಲ್ಲಿ ಹಳೆ ಗೆಳೆಯರು ನೆನಪಾಗಿ ಉಳಿಯುತ್ತಾರೆ. ಹೈಸ್ಕೂಲು ದಿನಗಳಲ್ಲಿ ಶಾಲೆಗೆ ಬೈಕುಗಳಿರಲಿಲ್ಲ. ಅಡ್ಡ ದಾರಿ ಹಿಡಿದು ಕೆರೆ ಮೇಲೆ ನಡೆದುಹೋದರೆ ಶಾಲೆ ಸಮೀಪವಾಗುತ್ತಿತ್ತು.
ದಿದ್ದಗಿ ಸುರೇಶ್, ನಾಗರಾಜ ಕಾಗಲ್‌ಕರ್ ನನ್ನನ್ನು ದಿನಾ ಶಾಲೆಗೆ ಕರೆಯಲು ಮನೆಗೆ ಬರುತ್ತಿದ್ದರು. ಬಾಗಿಲಲ್ಲಿ ನಿಂತು ಸಿದ್ಧಿ ಬಾರಲೇ ಎಂದು ಕೂಗಿದಾಗ ಜಿಂಕೆಯಂತೆ ಓಡಿ ಬರುತ್ತಿದ್ದೆ, ಶಾಲೆಗೆ ಹೋಗುವಾಗ ನಿತ್ಯ ಜತೆಯಾಗುತ್ತಿದ್ದ ಗೆಳೆಯರು ಈಗ ಕೇವಲ ಮನದ ಮೂಲೆಯಲ್ಲಿ ಅಡಗಿದ್ದಾರೆ. ನಾಗರಾಜ ಗಂಗಾವತಿಯಲ್ಲಿ ಬಂಗಾರದ ವ್ಯಾಪಾರಿ, ಸುರೇಶ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾನೆ.
ಹೈಸ್ಕೂಲು ಸಂಗಾತಿಗಳು ಈಗ ಎಲ್ಲಿಯಾದರೂ ಭೇಟಿ ಆದರೆ ಅಚ್ಛರಿಂದ ನೋಡುತ್ತಾರೆ. ಗುರುತು ಹಿಡಿದಾಗ ಬೆರಗುಗೊಳ್ಳುತ್ತಾರೆ. ಗೆಳತಿಯರಾರು ಸಿಗುವ ಪ್ರಶ್ನೆ ಇಲ್ಲ ಅವರೆಲ್ಲ ಈಗ ಅಜ್ಜಿಯರಾಗಿದ್ದಾರೆ.
ಗದ್ದಿ ಪಂಪ, ಅಂಗಡಿ ಮಲ್ಲಿ ಮ್ಯಾಗೇರಿ ವಿರೇಶ, ಜಿ. ಬಸವರಾಜ, ಸೋಮಲಿಂಗ, ಶಾಂತಮೂರ್ತಿ, ಗಾಣಿಗೇರ ಪಂಪ ಅಲ್ಲಲ್ಲಿ ಸಿಗುತ್ತಾರೆ. ಅವರ ಮಕ್ಕಳೀಗ ಕಾಲೇಜು ವ್ಯಾಸಂಗ ಮುಗಿಸಿ ಮದುವೆಯಾಗಿದ್ದಾರೆ. ನನ್ನ ಬಹುಪಾಲು ಗೆಳೆಯರು ಹೈಸ್ಕೂಲು ಮುಗಿಸಿದಾಗಲೇ ಮದುವೆಯಾಗಿ ಹಿರಿಯರಾದರು. ಕಾಲೇಜು, ನೌಕರಿ ಅಂತ ಅಲೆದಲೆದು ತಡವಾಗಿ ಮದುವೆಯಾದ ನನ್ನಂತವರು ಅವರೆದುರು ನಿಂತಾಗ ಸಣ್ಣವರೆನಿಸುತ್ತೇವೆ.
ಈಗ ಬಾಲ್ಯದ ಗೆಳೆಯರನ್ನು ಯಾವುದಾದರೂ ಸಂಧರ್ಭದಲ್ಲಿ ಒಟ್ಟಾಗಿ ಸೇರಿಸಬೇಕೆನಿಸುತ್ತದೆ. ಆದರೆ ಸಂಸಾರದ ಜವಾಬ್ದಾರಿಯಲ್ಹುಲಿ ಉಡುಗೆ ಹೋದವರನು ಹೊರ ತೆಗೆಯುವುದು ಹೇಗೆ ಎಂಬುದೇ ಮುಂದಿರುವ ಪ್ರಶ್ನೆ.
ಇಂಗ್ಲೆಂಡ್ ಪ್ರವಾಸ ಕಥನ ಓದಿ ಫೋನಾಸಿದ ರಾಯಚೂರಿನಲ್ಲಿರುವ ಮಲ್ಲಿ, ಪ್ರಾಣೇಶ ನನ್ನ ಬೆಳವಣಿಗೆಗಾಗಿ ಬೆರಗು ಪಟ್ಟರು. ಹೈಸ್ಕೂಲಿನಲ್ಲಿ ನನ್ನ ಯೋಗ್ಯತೆ ಗೊತ್ತಿದ್ದವರು ಈಗಿನ ವರ್ತಮಾನವನ್ನು ಬೆರಗಿನಿಂದ ನೋಡುತ್ತಾನೆ. ಅಬ್ಬಾ ! ಎನ್ನುತ್ತಾರೆ. ಅಲ್ಲಿ ಅಭಿಮಾನ, ಅಚ್ಚರಿ, ಪ್ರೀತಿ, ಗೌರವವಿದೆ.
ಹೈಸ್ಕೂಲಿನಲ್ಲಿ ಚುನಾವಣೆ ಬಂದಾಗ ನಾನು ಗೆದ್ದು ಮಂತ್ರಿಯಾದದ್ದು ಅನುಕಂಪದ ಮೇಲೆ, ಪಾಪ ಸಿದ್ದಿ ದಡ್ಡ ಕೊನೆ ಪಕ್ಷ ಇಂತಹ ಚಟುವಟಿಕೆಗಳನ್ನಾದರೂ ಮಾಡಲಿ ಎಂಬ ಪ್ರೋತ್ಸಾಹ.
ಅಚ್ಚರಿ ಮೂಡಿಸುತ್ತಿದ್ದ ಪಾಠಗಳು ಅರ್ಥವಾಗುತ್ತಿರಲಿಲ್ಲ. ಜೀವನೋತ್ಸಾಹ ಕಳೆದುಕೊಳ್ಳದೆ ಕಲಿತೆ. ಗೆಲ್ಲಬೇಕೆಂದು ಪ್ರಯತ್ನಿಸಿದೆ.
ಸಾಹಿತ್ಯ ಕಲಿಸುತ್ತಿದ್ದ ಆರಾಳಗೌಡರು, ಇಂಗ್ಲೀಷ ಕಲಿಸುತ್ತಿದ್ದ ಬಿ.ಎಂ. ಪಾಟೀಲರ ಪಾಠಗಳನ್ನು ಆಸ್ಥೆಂಯಿಂದ ಆಲಿಸುತ್ತಿದ್ದೆ. ಗಣಿತ, ವಿಜ್ಞಾನ ಕ್ಲಾಸುಗಳಲ್ಲಿ ದೈಹಿಕವಾಗಿ ಹಾಜರಿದ್ದು ಮನಸ್ಸನ್ನು ಎಲ್ಲಿಯೋ ಹರಿಬಿಡುತ್ತಿದ್ದೆ. ಅಯ್ಯೋ ತಿಳಿಯದ ವಿಷಯಗಳ ಬಗ್ಗೆ ಪ್ರಯತ್ನ ಯಾಕೆ ಎಂಬ ಅಸಡ್ಡೆ ಬೇರೆ, ಹೀಗಾಗಿ ಗಣಿತ, ವಿಜ್ಞಾನ ತಲೆಗೆ ಹೋಗಲೇ ಇಲ್ಲ.
ನಾನದಕ್ಕೆ ಪ್ರಯತ್ನಿಸಲೂ ಇಲ್ಲ. ಬಯಲಿಗಿಳಿದು ಎಂದೂ ಆಟವಾಡದ ನಾನು, ಸಾಹಿತ್ಯ ಸಂಸ್ಕೃತಿಯ ಕೆಲಸಗಳನ್ನು ಶೃದ್ಧೆಂಯಿದ ಮಾಡಿದೆ. ಒಂಬತ್ತನೇ ಕ್ಲಾಸಿನಲ್ಲಿ ಸ್ತ್ರೀ ಪಾತ್ರ ಮಾಡಿ ಅಭಿನಯಿಸಿದೆ. ವೇದಿಕೆ ಮುಂದೆ ತೆಗ್ಗು ತೆಗೆದು ಹಾರ್ಮೋನಿಯಂ ಹೂತಿಟ್ಟು ಕಾಲಿನಿಂದ ಹಾರ್ಮೋನಿಯಂ ನುಡಿಸುತ್ತಿದ್ದ ನಾಟಕದ ಮೇಷ್ಟ್ರು ಹಾಡಿಗೆ ತಾಳ ಹಾಕಿದ್ದರು. ಹಾಗಂತ ನಾನೇನು ಸಂಗೀತಗಾರನಾಗಿ ಬೆಳೆಯಲಿಲ್ಲ.
ಆ ದಿನಗಳಲ್ಲಿ ಮನೆಯಲ್ಲಿ ಯಾರೂ ಮಾರ್ಗದರ್ಶನ ಮಾಡುತ್ತಿರಲಿಲ್ಲ.ಆದರೆ ಹೈಸ್ಕೂಲಿನ ಶಿಕ್ಷಕರು ತುಂಬಾ ಪರಿಶ್ರಮದಿಂದ ಕಲಿಸುತ್ತಿದ್ದರು. ಅವರ ಸ್ನೇಹಮಯ ವರ್ತನೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ನಾನು ಅಕ್ಯಾಡೆಮಿಕ್ ಆಗಿ ಬೆಳೆಯಲಿಲ್ಲ ಎಂಬ ನಿರಾಶೆ ಅವರಲ್ಲಿತ್ತು.
ಗಣಿತದ ಚನ್ನಯ್ಯ ಮೇಷ್ಟ್ರು, ವಿಜ್ಞಾನದ ಬಿ.ಜಿ.ಸಾಲಿಮಠ, ಹಿಂದಿಯ ಗುರುಸಿದ್ದಪ್ಪ, ಸಮಾಜಶಾಸ್ತ್ರದ ಮಲ್ಲಿಕಾರ್ಜುನ ತಿಮ್ಮಾಪೂರ, ಆಟದ ಮೇಷ್ಟ್ರು ಸಂಗಪ್ಪ ತೆಗ್ಗಿನಮನಿ, ಡ್ರಾಯಿಂಗನ ವೀರಭದ್ರಪ್ಪ ಬಂಡೋರಳ್ಳಿ ಹೀಗೆ ಎಲ್ಲ ಶಿಕ್ಷಕರು ಮನದಾಳದಲಿ ಉಳಿದಿದ್ದಾರೆ.
ಆದರೆ ಎಲ್ಲರ ಪರಿಶ್ರಮ ನನಗೆ ಉಪಯೋಗವಾಗಲಿಲ್ಲ ಎಂಬ ಅವರ ವಿಷಾದಕ್ಕೆ ಕಾರಣನಾದೆ.
ಎಂಟು, ಒಂಬತ್ತು ಹೇಗೋ ಪಾಸ್ ಆದೆ, ನಮ್ಮ ಶಾಲೆಯ ಕಟ್ಟಡವಿಲ್ಲದೆ ಗುಡಿಸಲಿನಲ್ಲಿ ವರ್ಗಗಳು ನಡೆಯುತ್ತಾ ಇದ್ದುದು ಮನಸಿಗೆ ಕಿರಿ ಕಿರಿ ಎನಿಸಿತು. ಮೌಲ್ಯ ಹೆಚ್ಚಿಸುವ ಶಿಕ್ಷಕರಿದ್ದರು, ಶಾಲೆಗೆ ಕಟ್ಟಡ ಬೇಕಿಲ್ಲ ಎಂಬ ಶಾಶ್ವತ ಸತ್ಯವನ್ನು ನಮ್ಮ ಪ್ರಾಮಾಣಿಕ ಶಿಕ್ಷಕರು ಸಾರಿದರು.ತುಂಬಾ ಪ್ರಯಾಸಪಟ್ಟರೂ ಹತ್ತನೇ ವರ್ಗದಲಿ ಕೇವಲ ನಾಲ್ಕು ವಿಷಯ ಪಾಸಾದೆ. ಇಂಗ್ಲೀಷ್ ಹಾಗೂ ವಿಜ್ಞಾನ ವಿಷಯಗಳಲ್ಲಿ ಫೇಲ್ ಆಗಿದ್ದೆ. ಗಣಿತದಲ್ಲಿ ಪವಾಡ ನಡೆದಿತ್ತು. ಕಹಿ-ಸಿಹಿಯ ಹೈಸ್ಕೂಲ್ ಶಿಕ್ಷಣದ ನೆನಪು..
No comments:
Post a Comment