ಹೈಸ್ಕೂಲು ಕಟ್ಟೆ ಏರುವುದರೊಳಗೆ ಮನೆತನದ ಸ್ಥಿತಿ ಇಳಿದುಹೋಗಿತ್ತು. ಗಂಭೀರವಾಗಿ ಓದಬೇಕು ಎಂಬ ಜವಾಬ್ದಾರಿಯೇನೋ ಹೆಚ್ಚಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು.
ಅಡಿಪಾಯವಿಲ್ಲದೇ ಕಟ್ಟಿದ ಕಟ್ಟಡದಂತಾಗಿತ್ತು ನನ್ನ ಶಿಕ್ಷಣದ ಪರಿಸ್ಥಿತಿ. ಬಾಲ್ಯದ ಪ್ರಾಥಮಿಕ ಶಿಕ್ಷಣ ಸರಿಯಾಗಿ ಸಿಕ್ಕರೆ, ದಕ್ಕಿದರೆ ಮಾತ್ರ ಹೆಚ್ಚಿನ ವ್ಯಾಸಂಗ ಸಾಧ್ಯ ಎಂದು ಗೊತ್ತಿದ್ದರೂ, ಬಾಲ್ಯದಲ್ಲಿನ ಅಲಕ್ಷ ಮುಂದೆ ತೊಂದರೆಯನ್ನುಂಟು ಮಾಡಿತು.
ಹೈಸ್ಕೂಲು ವಿಭಾಗದಲ್ಲಿ ಕನ್ನಡ, ಸಮಾಜ ವಿಷಯಗಳು ಮಾತ್ರ ತಲೆಗೆ ಹೋದವು. ಗಣಿತ-ವಿಜ್ಞಾನ ಗ್ರಹಿಸಲಾಗಲೇ ಇಲ್ಲ. ಹಾಗಂತ ಬಿಡಲು ಸಾಧ್ಯವೇ? ಓದಲೇಬೇಕಲ್ಲ.
ಅಲ್ಲಿಂದ ನನ್ನ ನಿಜವಾದ ಕಲಿಕೆ ಪ್ರಾರಂಭವಾಯಿತು. ಆದರೆ ಒಮ್ಮೆಲೆ ಕಠಿಣವೆನಿಸಿ ಗ್ರಹಿಸಿದ್ದನ್ನು ಮಾತ್ರ ಕಲಿಯಲು ಪ್ರಾರಂಭಿಸಿದೆ.
ಕನ್ನಡದ ಕಾಡಬಸಪ್ಪ ಆರಾಳಗೌಡರ, ಹೊಸ ಬೆಳಕನ್ನೇ ತೋರಿ, ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಸಿದರು.
ಇಂದಿಗೂ ಅವರು ಕಲಿಸಿದ ರೀತಿ ಅಚ್ಚಳಿಯದೇ ಹಸುರಾಗಿ ಉಳಿದಿದೆ. ಗಣಿತ ಕಲಿಸುತ್ತಿದ್ದು ಗುರುಗಳು ಆರ್.ಎಂ.ಚನ್ನಯ್ಯ ಸರ್ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದರು. ಆದರೆ ಅವರು ಕಲಿಸಿದ ಗಣಿತ ತಲೆಗೆ ಹೋಗಲಿಲ್ಲವಾದರೂ,
'ಸೊನ್ನೆ ಸೂಕ್ಷ್ಮವ ಸೇರಲಿ, ಭಿನ್ನ ಭೇಧಗಳು ಅಳಿಯಲಿ' ಎಂಬ ಪದ್ಯದ ಸಾಲುಗಳು ನನಗಿನ್ನು ನೆನಪಿವೆ. ಅವರು ಅಂದು ಬಿತ್ತಿದ ಕಾವ್ಯದ ಬೀಜ ಇಂದು ಸಸಿಯಾಗಿ ಬೆಳೆದಿದೆ. ಭಾಷಾ ಸೌಂದರ್ಯ ಮತ್ತು ಶುದ್ಧತೆ ಬಗ್ಗೆ ಕಾಡ ಬಸಪ್ಪ ಸರ್, ಇಂಗ್ಲೀಷ ಕಲಿಸುತ್ತಿದ್ದ ಬಿ.ಎಂ.ಪಾಟೀಲ್ ಸರ್ ಅವರು ನಿರಂತರ ಪರಿಶ್ರಮದಿಂದ ಬೋಧಿಸಿದರು.
ವಿಜ್ಞಾನ ಕಲಿಸುತ್ತಿದ್ದ ಬೆಳಗಾವಿಯ ಅಥಣಿಯ ಬಿ.ಜಿ.ಸಾಲಿಮಠ ಸರ್ ಅವರ ಶಿಸ್ತು ಮತ್ತು ದಕ್ಷತೆಂದಾಗಿ ಆಕರ್ಷಣೀಯ ಎನಿಸಿದ್ದರು. ನಮ್ಮೂರ ಪಕ್ಕದ ತಿಮ್ಮಾಪೂರದ ಮಲ್ಲಿಕಾರ್ಜುನ ಸರ್ ಸಮಾಜ ಬೋಧಿಸಿದರು. ಗುರುಸಿದ್ಧಪ್ಪ ಶೆಟ್ಟರ್ ಅವರು ಕಲಿಸಿದ ಹಿಂದಿ ಪ್ರಾಥಮಿಕ ಹಂತಕ್ಕೆ ನಿಂತಿತು.
ಹೀಗೆ ಹೈಸ್ಕೂಲ್ ವ್ಯಾಸಂಗದ ಶಿಕ್ಷಕರು ಅತ್ಯಂತ ಪರಿಶ್ರಮದಿಂದ ಪಾಠ ಮಾಡುತ್ತಿದ್ದರು. ನನಗೆ ಕಲಿಯುವ ಉತ್ಸಾಹವಿತ್ತು. ಆದರೆ ಸಾಮರ್ಥ್ಯ ಇರಲಿಲ್ಲ. ನನ್ನ ಸಹಪಾಠಿಗಳಾ ಶಾಂತಮೂರ್ತಿ, ಸೋಮಲಿಂಗಪ್ಪ ಚನ್ನಾಗಿ ಅಂಕ ಗಳಿಸಿದರು. ಎಂಟನೇ ತರಗತಿಯಲ್ಲಿ ಪಾಠಕ್ಕಿಂತಲೂ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸತೊಡಗಿದೆ.
ಅಲ್ಲಿನ ಆಸಕ್ತಿ ನನ್ನ ಬೇಸರವನ್ನು ಮರೆಸಿತು. ಹೈಸ್ಕೂಲಿನ ಮೂರು ವರ್ಷ ಚರ್ಚೆಯಲ್ಲಿ ನಾನೇ ಮೊದಲ ಸ್ಥಾನದಲ್ಲಿದ್ದೆ. ಅದೇ ನನ್ನ ಮುಂದಿನ ಯಶಸ್ಸಿಗೆ ಕಾರಣವಾಯಿತು ಎನ್ನಬಹುದು. ನನ್ನೊಂದಿಗೆ ಶಾಂತಮೂರ್ತಿ, ಬಸವರಾಜ ಸದಾ ಪೈಪೋಟಿಯಲ್ಲಿರುತ್ತಿದ್ದರು. ಹೈಸ್ಕೂಲಿನಲ್ಲಿ ಚುನಾವಣೆಗೆ ನಿಂತು, ಆರಿಸಿಬಂದು ಸಂಸ್ಕೃತಿ ಮಂತ್ರಿಯಾದೆ. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆದರೆ ಅಕ್ಯಾಡೆಮಿಕ್ಆಗಿ ಬೆಳೆಯಲು ಸಾಧ್ಯವಿಲ್ಲ ಎಂಬ ನಿರಾಶೆ ನಿತ್ಯ ಕಾಡುತ್ತಲೇ ಇತ್ತು.
No comments:
Post a Comment