ನಿನ್ನಲ್ಲಿ ಇಷ್ಟೊಂದು ಸೌಂದರ್ಯ ಅಡಗಿದೆ ಎಂದು ಅಂದುಕೊಂಡಿರಲಿಲ್ಲ. ಹೆಣ್ಣಿಗೆ ಮದುವೆ ಎಂತಹ ಬದಲಾವಣೆಯನ್ನು ತರುತ್ತದೆ ಎಂದು ಆಗಲೇ ಅರಿತುಕೊಂಡೆ. ಎಳೆಯ ಹುಡುಗಿಯ ಹಾಗೆ ಬಟ್ಟೆ ಧರಿಸಿ ಶಾಲೆಯಲ್ಲಿ ಓಡಾಡುತ್ತಿದ್ದ ನಿನ್ನ ಹುಡುಗಾಟ ಸೀರೆಯಲ್ಲಿ ಮಾಯವಾಗಿ ಹೋಗಿತ್ತು.
ನಿನ್ನ ಮುಂದೆ ನಾನು ಬಚ್ಚಾನ ಹಾಗೆ ಕಾಣಿಸಿದೆ. ನೀನಂದು ಮಾತು ಕೊಟ್ಟಂತೆ ಊರ ಹೊರಗಿನ ಭವ್ಯ ಆಲದ ಮರದ ಕೆಳಗೆ ಕುಳಿತು ಮಾತಿಗಿಳಿದದ್ದು, ಅಂದಿನ ನಿನ್ನ ಕಣ್ಣ ಹೊಳಪು. ನಳನಳಿಸಿದ ಆಭರಣಗಳು, ಕೊರಳಿಗೆ ಅಂಟಿಕೊಂಡಿದ್ದ ತಾಳಿ, ಹಸಿರು ಗಾಜಿನ ಬಳೆಗಳು, ಅರಿಷಿಣದ ಹೊಳಪು, ಹೊಳೆಯುವ ಮೈಕಾಂತಿಗೆ ಕರಗಿ ನೀರಾಗಿದ್ದೆ.
ಹಿಂದಿನ ಆಕ್ರೋಶ ಕಡಿಮೆ ಆಗಿತ್ತು. ಆಗಲೇಬೇಕಿತ್ತು. ವಾಸ್ತವದ ದುಸ್ಥಿತಿ ಗೊತ್ತಾಗಿ ಹೋಗಿತ್ತು. ಎಂದೂ ನೋಡದವನ ಹಾಗೆ ಮನ:ತೃಪ್ತಿಯಾಗುವವರೆಗೆ ದಿಟ್ಟಿಸಿ ನೋಡಿದೆ. ಹಕ್ಕಿಗಳ ಚಿಲಿ-ಪಿಲಿ ಕಲರವ ನಮ್ಮನ್ನು ಒಂಟಿಯಾಗಿಸಲಿಲ್ಲ.
ಕಾಣಿಕೆಯ ಗೊಂದಲ ನನ್ನಿಂದ ಮಾಯವಾಗಿತ್ತು.
ನೀನು ಅಷ್ಟೇ ಶಾಂತವಾಗಿ ಹೇಳಿದ ಒಂದೊಂದು ಮಾತುಗಳು ನನ್ನ ವ್ಯಕ್ತಿತ್ವವನ್ನೇ ಬದಲಿಸಿದವು. ನೋಡು ಈಗ ಬಂದಿದ್ದೇನೆ. ಇಂದು ಸಂಜೆಯವರೆಗೆ ನಿನ್ನೊಂದಿಗಿರುತ್ತೇನೆ. ನೀನು ಏನೇ ಬಯಸಿದರೂ ಕೊಡುವ ನಿರ್ಧಾರ ಮಾಡಿದ್ದೇನೆ. ಎಲ್ಲಿಗೆ ಮುಟ್ಟಬಹುದು ಎಂದು ಗೊತ್ತಿಲ್ಲ.
ನಾಳೆಯಿಂದ ನಿನ್ನ ಬದುಕಿನಲ್ಲಿ ನಾನು ಕೇವಲ ನೆನಪಾಗುತ್ತೇನೆ. ಕಣ್ಣು ತಿಕ್ಕಿಕೊಂಡು, ಕಣ್ಣು ಮುಚ್ಚಿ ತೆರೆದು ಹೊಸ ಬೆಳಕನನು ಕಂಡಂತೆ ಹೊಸ ಜಗತ್ತನ್ನು ನೋಡು. ಆ ಜಗದ ತುಂಬೆಲ್ಲ ನಾನಿದ್ದರೂ, ಅಲ್ಲಿ ನಾನಿರುವುದಿಲ್ಲ.
ಬಹುಶ: ನಿನಗೆ ನನ್ನ ಮಾತುಗಳು ಅರ್ಥವಾಗದೇ ಇರಬಹುದು, ಆದರೆ ಮುಂದೊಂದು ದಿನ ಅರ್ಥವಾಗುತ್ತವೆ ಎಂಬ ನಂಬಿಕೆ ನನಗಿದೆ. ಒಂದೇ ಉಸುರಿನಲ್ಲಿ ಮಾತನಾಡಿದಾಗ ಸುಮ್ಮನೆ ಕುಳಿತುಕೊಂಡೆ,
ಗದ್ದಕ್ಕೆ ಕೈಯೂರಿ ಅಸಹಾಯಕನಾಗಿ .ಕುಳಿತುಕೊಂಡೆ.
ನಿನ್ನ ದಿಟ್ಟತನ, ಪ್ರಾಮಾಣಿಕತೆ ನನಗೆ ಅರ್ಥವಾಗಿದ್ದರೆ ಎಷ್ಟೊಂದು ಚಂದಿರುತ್ತಿತ್ತು. ಆದರೆ ಹಾಗಾಗಲಿಲ್ಲ.
ನಿಧಾನವಾಗಿ ಇಬ್ಬರೂ ಎದುರಿಗಿದ್ದ ದೇವರ ಗುಡಿಯನ್ನು ಹೊಕ್ಕಾಗ ಕತ್ತಲು. ಬರೀ ಕತ್ತಲು ದೇವರ ಮುಂದೆ ಬೆಳಗುತ್ತಿದ್ದ ದೀಪದಂತೆ ನಿನ್ನ ಕಣ್ಣುಗಳು ಪ್ರಕಾಶಿಸುತ್ತಿದ್ದವು.
ನಿಧಾನವಾಗಿ ಆಪ್ತವಾಗಿ ದೇವರ ಸನ್ನಿಧಿಯಲ್ಲಿ ಪವಿತ್ರವಾಗಿ ಮಗುವನ್ನು ಮುದ್ದಿಸಿದಂತೆ ಹಣೆ, ಕೆನ್ನೆ, ತುಟಿ ಮೇಲೆ ನರ್ತಿಸಿದ ನಿನ್ನ ತುಟಿಗಳ ಬಿಸಿಗೆ ಮತ್ತೇರಲಿಲ್ಲ.
ಮುತ್ತು ಕೇವಲ ಮತ್ತೇರಿಸುತ್ತದೆ ಅಂದುಕೊಂಡಿದ್ದೆ ಆದರೆ ಅಲ್ಲಿ ಮೌಲ್ಯವಿದೆ ಎಂಬುದನ್ನು ನೀನು ತೋರಿಸಿ ಹೊಸ ಭಾಷೆಗೆ ನಾಂದಿಹಾಡಿದೆ. ಕೇಳು ಏನು ಬೇಕು, ಕೊಡುತ್ತೇನೆ ಎಂದಾಗ ಗಳ-ಗಳ ಅಳಲು ಶುರು ಮಾಡಿದೆ. ಆಗ ಕೇಳಲು - ಹೇಳಲು ನನ್ನಬಳಿ ಏನೂ ಇರಲಿಲ್ಲ. ಸಂಪೂರ್ಣ ಖಾಲಿಯಾಗಿದ್ದೆ. ಆ ಖಾಲಿತನದ ತುಂಬೆಲ್ಲನಿನ್ನ ಪ್ರೀತಿ ಆವರಿಸಿತ್ತು.
ನಿನ್ನ ನಿರೀಕ್ಷೆಯನ್ನು ಮೀರಿಸಿದ ಕಾಣಿಕೆಯನ್ನು ನೀಡಲು ನಿರ್ಧರಿಸಿದೆ. ಪ್ರೀತಿ ಹೃದಯದಲಿ. ನರನಾಡಿಗಳಲಿ ಹರಿಯುತ್ತಿದೆ. ಆದರೆ ಪ್ರವಹಿಸುವ ಪ್ರೀತಿ ಕಣಗಳು ಯಾರಿಗೂ ಕಾಣುವುದಿಲ್ಲ. ಆದರೆ ಅವುಗಳನ್ನು ಸಾಂಕೇತಿಕವಾಗಿ ತೋರಿಸಲು ಹಪಹಪಿಸುತ್ತೇವೆ.
ತುಂಬಾ ಪ್ರಯಾಸಪಟ್ಟು ಹಣ ಹೊಂದಿಸಿ ತಂದಿದ್ದ ಕಾಣಿಕೆಯನ್ನು ಹೊರತಗೆದೆ. ಕಾಲುಂಗುರ, ಬೆಳ್ಳಿಗೆಜ್ಜೆಗಳನ್ನು ಅರಿಶಿಣ ಕೊಂಬಿನಲ್ಲಿ ಭದ್ರವಾಗಿ ಅಡಗಿಸಿಟ್ಟಿದ್ದೆ.
ನಿನ್ನ ಕಂಗಳ ಹೊಳಪನ್ನು ಮತ್ತೊಮ್ಮೆ ಅನುಭವಿಸಿದೆ.
ನೀನು ಅಷ್ಟೇ ಸಂಭ್ರಮದಿಂದ ಮದುವೆಯ ಸಂಕೇತವಾಗಿ ತೊಟ್ಟಿದ್ದ ಕಾಲುಂಗರ ತೆಗೆದು ಅಲ್ಲಿ ನಾನು ತಂದಿದ್ದ ಉಂಗುರವನ್ನು ತೊಡಿಸಲು ಹೇಳಿದಾಗ ಬೆಚ್ಚಿಬಿದ್ದೆ.
ಪ್ರೀತಿಯ ಯುದ್ಧದಲಿ ಎಲ್ಲವೂ ಸುಂದರ' ಎಂಬ ಮಾತು ಮತಿಸಿತು. ಮಾರ್ಧನಿಸಿತು.
ಅಲ್ಲ ಇವುಗಳನ್ನು ತಗೆದದ್ದು ಯಾರಿಗಾದರೂ ಗೊತ್ತಾದರೆ ಎಂದಾಗ, ನೀ ನಕ್ಕು ಸುಮ್ಮನಾದೆ.ಮದುವೆಯಲ್ಲಿ ತೊಟ್ಟಿದ್ದ ಕಾಲುಂಗುರ - ಗೆಜ್ಜೆಗಳನ್ನು ಸಂತಸದಿಂದ, ನಿರ್ಲಿಪ್ತ ಭಾವದಿಂದ ತಗೆದು ನನ್ನ ಕ್ಯಗಿಟ್ಟೆ.
ಸಾಧ್ಯವಾದರೆ ಇವುಗಳನ್ನು ಕಾಪಾಡು, ತುಂಬಾ ತೊಂದರೆ ಎನಿಸಿದರೆ ದೂರ-ಎಲ್ಲಿಗಾದರೂ ಸಾಗಿಸಿ ಬಿಡು ಎಂದಾಗ ಏನಾಗಿರಬೇಡ.
ದೇವರ ಸನ್ನಿಧಿಯಲ್ಲಿ ನಾನೇ ಕಾಲುಂಗುರ ಗೆಜ್ಜೆ ತೊಡಿಸಿ ಮನದ ಮದುವೆಯ ಮಲ್ಲಿಗೆ ಸುರಿದೆ. ಮತ್ತೊಮ್ಮೆ ಬಿಗಿದಪ್ಪಿ ಪ್ರೀತಿಯ ಮಳೆ ಸುರಿದೆ. ಅಲ್ಲಿನ ನಿಷ್ಕಾಮ ಪ್ರೀತಿ ಎಲ್ಲಿ ಹುಡುಕಿದರೂ, ಯಾವ ಮಾರುಕಟ್ಟೆಯಲ್ಲೂ ಈಗ ಸಿಗುವುದಿಲ್ಲ. ಈಗಲೂ ಸಿಗುತ್ತಿಲ್ಲ.
ಮೊನ್ನೆ ನಡೆದದ್ದು ಶಾಸ್ತ್ರದ ಮದುವೆ. ಇಂದು ನಡೆದದ್ದು ಆಚಾರಗಳನ್ನು ಮೀರಿದ ವಿಚಾರದ ಮದುವೆ ಎಂದ ನಿನ್ನ ಭಾಷೆ ಅರ್ಥವಾಗಲಿಲ್ಲ.
ಪರಸ್ಪರ ಕೈ ಹಿಡಿದು ಏಳಲ್ಲ ಹತ್ತಾರು ಸುತ್ತು ದೇವರಿಗೆ ಸುತ್ತು ಹಾಕಿದರೂ ಸುಸ್ತಾಗಲಿಲ್ಲ. ದೇವರಿಗೆ ನಮಿಸುವ ಭಕ್ತಿ. ಶ್ರದ್ಧೆ ಇರದಿದ್ದರೂ ಪ್ರೀತಿಗೊಂದು ಏಕಾಂತವನ್ನು ದೇವರು ದೇವಾಲಯ ಸೃಷ್ಟಿಸಿತ್ತು.
ಇರುವ ಒಂದು ವಾರ ದಿನಾ ಭೇಟಿ ಆಗೋಣ-ಮನಸ್ಸನ್ನು ತಿಳಿಗೋಳಿಸಿಕೋ, ಹೊಸ ಬದುಕಲಿ ಯಶಸ್ವಿ ಪಡೆದು ನನ್ನ ಪ್ರೀತಿಯ ನೆನಪನ್ನು ಚಿರಸ್ಥಾಯಿಗೊಳಿಸು ಒಂದು ವೇಳೆ ನೀನು ಬದುಕಲ್ಲಿ ವಿಫಲನಾದರೆ ನನ್ನನ್ನು ಕೊಂದಂತೆ ಎಂಬುದನ್ನು ಮರೆಯಬೇಡ ಎಂದಾಗ ಸುರಿದ ಕಣ್ಣೀರ ಧಾರೆ ಕೇವಲ ಮೂಕ ಸಾಕ್ಷಿಯಾದವು
Subscribe to:
Post Comments (Atom)
ಬರಹ ತನ್ನ ನೈಜತೆಯನ್ನು ಉಳಿಸಿಕೊಂಡಿದೆ. ಮುತ್ತಿನಲ್ಲೂ ಮೌಲ್ಯ ಹುಡುಕುವ ಪರಿ ಕೌತುಕವೆನಿಸಿದೆ. ಒಟ್ಟಿನಲ್ಲಿ ಬರಹ ಓದಿಸುತ್ತಾ ಹೋಗುತ್ತದೆ. ಥ್ಯಾಂಕ್ ಯೂ
ReplyDelete