Saturday, November 20, 2010

ಸಾಂಸ್ಕೃತಿಕ ಭಿನ್ನತೆಯ ವಿಚಿತ್ರಾನುಭವ

ಸಂಸ್ಕೃತಿಯ ಭಿನ್ನತೆಯನ್ನು ಬಾಲ್ಯದಿಂದ ಎದುರಿಸಿ, ಅನುಭವಿಸಿದ್ದೇನೆ. ಭಾರತದಂತಹ ಬೃಹತ್ ರಾಷ್ಟ್ರವನ್ನು ವಿವಿಧತೆಯಲಿ ಏಕತೆ ಎಂದು ಹೊಗಳುತ್ತೇವೆ. ಇದು ಪರಿಪೂರ್ಣ ಸತ್ಯ !
ಭಾಷೆ, ಉಡುಗೆ, ಅಡುಗೆ, ವಿನ್ಯಾಸ, ಧರ್ಮ, ಜಾತಿ, ಸಂಪ್ರದಾಯ, ಲೈಂಗಿಕ ಬದುಕು, ಸಾಮಾಜಿಕ ಆಯಾಮಗಳಲಿ ತೀವ್ರವಾದ ಭಿನ್ನತೆಯನ್ನು ಇಲ್ಲಿ ಇಂಡಿಯಾದಲಿ ಮಾತ್ರ ಕಾಣಲು ಸಾಧ್ಯ,
ಇದು ಪ್ರತಿ ಹತ್ತು ಕಿಲೋ ಮೀಟರಗಳ ಅಂತರದಲ್ಲಿ ಬದಲಾಗುತ್ತಾ ಹೋಗುತ್ತದೆ. ಇಂಗ್ಲೆಂಡಿನಂತಹ ಅಂಗೈಯಗಲದ ದೇಶದಲ್ಲಿಯೂ ಇದನ್ನು ಅನುಭವಿಸಿದೆ. ಈ ಎಲ್ಲ ತಲ್ಲಣಗಳನ್ನು ನನ್ನ ಇಂಗ್ಲೆಂಡ್ ಪ್ರವಾಸ ಕಥನ ಎತ್ತಣ ಮಾಮರದಲಿ ವಿವರಿಸಿದ್ದೇನೆ.
ಬಾಲ್ಯದಲ್ಲಿ ಕಾರಟಗಿಯಲ್ಲಿ ಹುಟ್ಟಿದೆ. ಕುಷ್ಟಗಿಯಲ್ಲಿ ಅರ್ಧ ಕಾಲ ಕಳೆದೆ. ಮುಂದೆ ಕಾಲೇಜು ಅಧ್ಯಯನಕ್ಕಾಗಿ ಧಾರವಾಡಕ್ಕೆ ಬಂದೆ, ಎಂ.ಎ. ಓದಲು ಮಹಾರಾಷ್ಟ್ರದ ಸಾಂಗ್ಲಿಗೆ ಹೋದೆ. ಕಾಲೇಜು ಕೆಲಸಗಳಿಗಾಗಿ ಬೃಹತ್ ಬೆಂಗಳೂರಿನಲ್ಲಿ ಓಡಾಡಿದೆ. ಪ್ರತಿ ತಿರುಗುವಿಕೆಯಲ್ಲೂ ವಿವಿಧತೆಯನ್ನು ಗಾಢವಾಗಿ ಅನುಭವಿಸಿದ್ದೇನೆ.

ಅಮ್ಮ ಸಣ್ಣವನಿದ್ದಾಗ ಪದೇ, ಪದೇ ಹೇಳುತ್ತಿದ್ದಳು, ಸಿದ್ದಪ್ಪ ನಿನ್ನ ಕಾಲಲಿ ನಾಯಿಗೆರೆ ಇವೆ ಅಂತ. ಹೀಗಿದ್ದವರು ಬರೀ ತಿರುಗುತ್ತಾರಂತೆ, ಸರಿಸುಮಾರು ಲಕ್ಷಾಂತರ ಕಿಲೋಮೀಟರ್ ಅಲೆದಾಡಿದ ಲೆಕ್ಕ ನನ್ನಲ್ಲಿದೆ. ದೇಶಸುತ್ತಿ, ಕೋಶವನ್ನು ಓದಿದ್ದೇನೆ. ಆದರೆ ಗಳಿಸಬೇಕಾದ ಜ್ಞಾನ ಸಂಪತ್ತನ್ನು ಗಳಿಸಿದ್ದೇನೋ ಇಲ್ಲವೋ ಗೊತ್ತಾಗುತ್ತಿಲ್ಲ.

ನವಾಬರ ಆಡಳಿತದ ಪ್ರಭಾವದಿಂದ ಹೈದ್ರಾಬಾದ ಕರ್ನಾಟಕ ಅಷ್ಟೊಂದು ಮುಂದುವರೆದ ಪ್ರದೇಶವಾಗಿರಲಿಲ್ಲ. ಈ ಪ್ರದೇಶಕ್ಕೆ ಸೇರಿಕೊಂಡ ಬಳ್ಳಾರಿ ಮಾತ್ರ ಮುಂದುವರೆದ ಪ್ರದೇಶವಾಗಲು ಕಾರಣ ಅದು ಮದ್ರಾಸ್ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಮುಂದೆ ಎಂ.ಪಿ.ಪ್ರಕಾಶ ಅವರು ಅಧಿಕಾರದಲ್ಲಿದ್ದಾಗ ಬಳ್ಳಾರಿಯನ್ನು ಅಧಿಕಾರಯುತವಾಗಿ, ಆರ್ಥಿಕ ಲಾಭಕ್ಕಾಗಿ ಹೈದ್ರಾಬಾದ್ ಕರ್ನಾಟಕದ ವ್ಯಾಪ್ತಿಗೆ ಬಳ್ಳಾರಿಯನ್ನು ಸೇರಿಸಿದರು.

ಬಳ್ಳಾರಿಗೆ ಬೆಂಗಳೂರು ಸಂಸ್ಕೃತಿ ಇತ್ತು, ಇಂಗ್ಲೀಷ ಮೀಡಿಯಂ ಶಾಲೆಗಳಿದ್ದವು ರಾಯಚೂರು ಹಾಗೂ ಬೀದರ್ ಜಿಲ್ಲೆಗಳೂ ತೀರಾ ಹಿಂದುಳಿದ ಪ್ರದೇಶಗಳಾಗಿದ್ದವು. ಆದರೆ ಅದೇ ರಾಯಚೂರು ಜಿಲ್ಲೆಯ ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ತಾಲುಕುಗಳು ಧಾರವಾಡ ಜಿಲ್ಲೆಯ ಗದುಗಿನ ಪ್ರಭಾವಕ್ಕೆ ಒಳಗಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದರೂ, ಆರ್ಥಿಕವಾಗಿ ಹಿಂದುಳಿದಿದ್ದವು.
ಅಂದಿನ ರಾಯಚೂರು ಜಿಲ್ಲೆಯ ಗಂಗಾವತಿ, ಸಿಂಧನೂರು, ಮಾನ್ವಿ ತಾಲೂಕುಗಳು ತುಂಗಭದ್ರಾ ನೀರಾವರಿ ಯೋಜನೆಯಿಂದಾಗಿ ಆರ್ಥಿಕವಾಗಿ ಚೇತರಿಸಿಕೊಂಡಿದ್ದರು. ಶೈಕ್ಷಣಿಕವಾಗಿ ಬೆಳೆದಿರಲಿಲ್ಲ.
೮೦ರ ದಶಕದಲ್ಲಿ ಕಾರಟಗಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಗದುಗಿನ ಜಗದ್ಗುರುಗಳು ಈ ಊರು ಪಂಜಾಬಿನಷ್ಟು ಶ್ರೀಮಂತವಾಗಿದೆ, ಆದರೆ ವಿದ್ಯೆಯಲ್ಲಿ ಬಿಹಾರನಂತೆ ಹಿಂದುಳಿದಿದೆ, ಎಂಬ ಮಾತುಗಳು ನನ್ನನ್ನು ತೀವ್ರವಾಗಿ ಅಪಮಾನಿಸಿದವು. ಅದು ದಿವ್ಯ ಸತ್ಯವಾಗಿತ್ತು.

ಕಾರಟಗಿಯ ಉರಿ ಬಿಸಿಲು, ಅರೆಬರೆ ಶಿಕ್ಷಣವನ್ನು ಸಣ್ಣವನಿದ್ದಾಗ ಎದುರಿಸಿದೆ. ಅವ್ವನ ತವರುಮನೆ ಕುಷ್ಟಗಿಗೆ ಹೋದಾಗ ಅದು ಸತ್ಯವೆನಿಸುತ್ತಿತ್ತು. ಕುಷ್ಟಗಿಗೆ ಗದುಗಿನ ಪ್ರಭಾವವಿತ್ತು. ಹೀಗಾಗಿ ಕುಷ್ಟಗಿಯ ಜನರನ್ನು ನಮ್ಮೂರಿನಲ್ಲಿ ಮ್ಯಾಗಡೆಯವರು ಎಂದು ಕರೆಯುತ್ತಿದ್ದರು.

ಪಾಪ ಮ್ಯಾಗಡೆಯವರು ಬಡವರು, ಶ್ಯಾಣ್ಯಾರು, ದುಡಿಯಾಕ ಬರ್ತಾರೆ ಹೀಗೆ ಹತ್ತು ಹಲವು ರೀತಿಯಲ್ಲಿ ವಿಷ್ಲೇಷಿಸುತ್ತಿ ದ್ದರು ಇದು ಟೀಕೆಯೋ, ಹೊಗಳಿಕೆಯೋ ನನಗೆ ಅರ್ಥವಾಗುತ್ತಿರಲಿಲ್ಲ.

ಈ ಸುಂಸ್ಕೃತಿಯ ಪಲ್ಲಟವನ್ನು ನಾನು ಕಾರಟಗಿಂದ ಕುಷ್ಟಗಿಗೆ ಬಂದಾಗಲೆಲ್ಲಾ ಅನುಭವಿಸುತ್ತಿದ್ದೆ. ಆಗ ಸಂಸ್ಕೃತಿ ಹಾಗೂ ಕುಟುಂಬದ ನಿರ್ವಹಣೆಯಲ್ಲಿ ವ್ಯತ್ಯಾಸವನ್ನು ಗ್ರಹಿಸಿದೆ.
ಅಮರಣ್ಣ ತಾತಾ, ಅವ್ವನ ಅಪ್ಪ ಗುರುಸಿದ್ದಪ್ಪ ಅಜ್ಜಾ ಅವರಲ್ಲಿನ ವ್ಯತ್ಯಾಸವನ್ನು ಗುರುತಿಸಿದೆ. ಕಾರಟಗಿಯಲ್ಲಿ ತಾತ ಎಂದರೆ, ಕುಷ್ಟಗಿಯಲ್ಲಿ ಅಜ್ಜ ಅನ್ನುತ್ತಿದ್ದೆ, ಇದೊಂದು ಭಾಷಾಭಿನ್ನತೆಗೆ ಸಾಕ್ಷಿ.
ಆಹಾರದ ವಿಷಯದಲ್ಲೂ ಅಷ್ಟೇ, ಊರಲ್ಲಿ ಸಿಹಿ, ಅನ್ನ ಹಾಲು, ಬ್ಯಾಳಿ ತಿಂದರೆ, ಕುಷ್ಟಗಿಯಲ್ಲಿ ಚಪಾತಿ, ರೊಟ್ಟಿ ತಿನ್ನುತ್ತಿದ್ದೆ. ಅನ್ನ ಮಾಡು ಎಂದು ಹಟ ಮಾಡಿದಾಗಲೆಲ್ಲ, ಕುಷ್ಟಗಿಯ ಕಾಶಮ್ಮಸುಮ್ಮನೆ ಕೊಟ್ಟಿದ್ದನ್ನು ತಿಂದು ಬೀಳು ಅನ್ನುತ್ತಿದ್ದಳು.
ಇದು ಬರಗಾಲದ ಊರು ಅಕ್ಕಿ ಸಿಗೋದಿಲ್ಲ ಭಾಡ್ಯಾ ಎಂದು ಜಬರಿಸಿದಾಗ ಸುಮ್ಮನಾಗುತ್ತಿದ್ದೆ.
ಅಡ್ಡಿ ಇಲ್ಲ ಬಿಡು ಬರಗಾಲದಲ್ಲೂ ಬಿಸಿ ಚಪಾತಿ ಮಾಡ್ತೀರಿ. ನಿಮ್ಮೂರಲ್ಲಿ ಸದಾ ಬರಗಾಲ ಇರ್ಲಿ ಅಂತಿದ್ದೆ, ಬರಗಾಲ ಅಂದರೆ ಬಡತನ ಅಲ್ಲ, ಬಿಸಿ ಚಪಾತಿ ಅಂತ ತಿಳಿದುಕೊಂಡಿದ್ದು ಬಾಲ್ಯದ ವಿಸ್ಮಯ ಮುಗ್ಧತೆಗೆ ಸಾಕ್ಷಿ.

1 comment:

  1. ಎದುರೀಗೇ ಕುಳಿತು ಮಾತನಾಡುತ್ತಿದ್ದೀರೇನೋ ಎನಿಸಿತು. ಬರಹ ಆತ್ಮೀಯವೆನಿಸಿತು.

    ReplyDelete