ನನ್ನ ಬಾಲ್ಯದಲ್ಲಿ ಇಬ್ಬರು ಅಜ್ಜಂದಿರು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದರು. ಅಪ್ಪನ ದೊಡ್ಡಪ್ಪ ಅಮರಣ್ಣ ತಾತ ತಮ್ಮ ಚಾಣಾಕ್ಷತನ, ವ್ಯಾಪಾರಿ ಬುದ್ಧಿ, ಕೌಟುಂಬಿಕ ವಿಶಾಲತೆಯಿಂದಾಗಿ ನನ್ನ ನೆನಪಲಿ ಅಚ್ಚಳಿಯದೇ ಉಳಿದಿದ್ದಾರೆ.
ಯಾಪಲಪರವಿ ತಲೆಮಾರಿನ ಹಿರಿಯ ವ್ಯಕ್ತಿ.
ನಮ್ಮ ತಂದೆಯ ತಂದೆ, ಅಪ್ಪನ ಬಾಲ್ಯದಲ್ಲಿಯೇ ನಿಧನರಾಗಿದ್ದರು. ಅಪ್ಪ ಹಾಗೂ ಅತ್ತೆಮ್ಮರನ್ನು ಸಾಕಿ ಬೆಳೆಸುವ ಜವಾಬ್ದಾರಿಯೂ ಅಮರಣ್ಣ ತಾತನ ಮೇಲೆಯೇ ಇತ್ತು. ಅಂದಿನ ಕುಟುಂಬ ವ್ಯವಸ್ಥೆಯಲ್ಲಿ joint family system ಗೆ ವಿಶೇಷ ಮಹತ್ವವಿತ್ತು. ಗುರುಪಾದಪ್ಪ ಯಾಪಲಪರವಿ ಅವರಿಗೆ ಮೂರು ಜನ ಗಂಡುಮಕ್ಕಳು ಮೊದಲನೆಯವರು, ಅಮರಣ್ಣ, ಎರಡನೆಯವರು ಗುಂಡಪ್ಪ, ಮೂರನೆಯವರು ನಮ್ಮ ತಾತ (ಅಪ್ಪನ ಅಪ್ಪ) ಬಸಣ್ಣ.
ಇಬ್ಬರು ತಮ್ಮಂದಿರು ಅಕಾಲಿವಾಗಿ ನಿಧನರಾದಾಗ ಅಮರಣ್ಣ ತಾತ ಒಬ್ಬರೇ ಇಡೀ ಯಾಪಲಪರವಿ ಪರಿವಾರದ ಜವಾಬ್ದಾರಿಯನ್ನು ನಿರ್ವಹಿಸಿದ್ದು ಸಣ್ಣ ತ್ಯಾಗವೇನಲ್ಲ.
ತಮ್ಮ ಮೂರು ಜನ ಗಂಡು ಮಕ್ಕಳೊಂದಿಗೆ, ತಮ್ಮಂದಿರ ಮಕ್ಕಳನ್ನು ಅಷ್ಟೇ ಪ್ರೀತಿಯಿಂದ ಬೆಳೆಸಿದರು.
ನಮ್ಮ ಅಪ್ಪ ಹಾಗೂ ಅಮರಣ್ಣ ತಾತನ ಮಕ್ಕಳು 1972 ರವರೆಗೆ ಒಂದೆ ಸೂರಿನಡಿಯಲ್ಲಿ ಬಾಳಿದರು.
ಸರಿ ಸುಮಾರು - 80 ವರ್ಷ ಬಾಳಿದ ಅಮರಣ್ಣ ತಾತನದು ಬಹಳ ದೊಡ್ಡ ಕುಟುಂಬ, ತಮ್ಮ ಏಳು ಜನ ಮಕ್ಕಳಲ್ಲದೆ, ಅಪ್ಪ ಹಾಗೂ ಶಂಬಮ್ಮ ಅತ್ತೆಮ್ಮ ನನ್ನು, ಗುಂಡಪ್ಪ ತಾತನ ನಾಲ್ಕು ಜನ ಮಕ್ಕಳನ್ನು ಬೆಳೆಸಿ ಜೋಪಾನ ಮಾಡಿದ್ದು ರೋಚಕ ಕತೆಯೇ ಆಗಿದೆ.
ನಾನು ಸಣ್ಣವನಿದ್ದಾಗ ಬೆಳೆದ ಮನೆಯಲ್ಲಿ ನೂರಾರು ಜನರಿದ್ದೇವು. ಅಪ್ಪ, ಅತ್ತೆಮ್ಮ ನಮ್ಮ ಪರಿವಾರವಲ್ಲದೇ, ಅಮರಣ್ಣ ತಾತನ ಎಲ್ಲ ಮೊಮ್ಮಕ್ಕಳು ಒಟ್ಟಿಗೆ ಬೆಳೆದವು. ತುಂಬಾ ದೊಡ್ಡ ವ್ಯಾಪಾರವಿದ್ದುದರಿಂದ ಮನೆತನದ ನಿರ್ವಹಣೆ ಅವರಿಗೆ ಸಮಸ್ಯೆಯಾಗಲಿಲ್ಲ. ಪರಸ್ಪರ ಒಗ್ಗಟ್ಟಿನಿಂದ ದುಡಿಯುತ್ತಿದ್ದರು. ಸಂಪೂರ್ಣ ನಿಯಂತ್ರಣ ಅಮರಣ್ಣ ತಾತನ ಕೈಯಲ್ಲಿತ್ತು.
ಕೌಟುಂಬಿಕ ಸಾಮರಸ್ಯವನ್ನು ಅಂದಿನ ಕಾಲದಲ್ಲಿ ಅರ್ಥಪೂರ್ಣವಾಗಿ ನಿಸ್ವಾರ್ಥದಿಂದ ನಿರ್ವಹಿಸುವ ವಿಶಾಲತೆ ಇತ್ತು.
ಕಿರಾಣಿ ಅಂಗಡಿ ಅಮರಣ್ಣ ತಾತನ ಕಾಲದಲ್ಲಿ ಭರ್ಜರಿಯಾಗಿತ್ತು. ಅಪ್ಪ ಅಮರಣ್ಣ ತಾತ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರೆ. ಅಮರಣ್ಣ ತಾತನ ದೊಡ್ಡ ಮಗ ಬಸಣ್ಣ ದೊಡ್ಡಪ್ಪ ಖರೀದಿಗಾಗಿ ಅಡ್ಡಾಡುತ್ತಿದ್ದ. ಉಳಿದ ಇಬ್ಬರು ಚಿಕ್ಕಪ್ಪನವರು ನಮ್ಮ ಸಮಕಾಲೀನರಾಗಿ ಬೆಳೆದರು.
ಒಂದುವೇಳೆ 1972 ರಲ್ಲಿ ನಮ್ಮ ಕುಟುಂಬ ವಿಭಜನೆಯಾಗದಿದ್ದಲ್ಲಿ ಅದೇ ಗತವೈಭವ ಇರುತ್ತಿತ್ತು.
" ಸಾವಿರ ವರ್ಷ ಬಾಳಿದರೂ ಸಾಯುವುದು ತಪ್ಪಲಿಲ್ಲ. ನೂರು ವರ್ಷ ಕೂಡಿದ್ದರೂ ಬೇರೆ ಆಗುವುದು ತಪ್ಪಲಿಲ್ಲ" ಎಂಬ ಗಾದೆಯಂತೆ ನಾವು ಬೇರೆ ಯಾಗುವುದು ತಪ್ಪಲಿಲ್ಲ. ಆಗಲೇ ಗುಂಡಪ್ಪ ತಾತನ ಮಗ ಬಸವಲಿಂಗಪ್ಪ ದೊಡ್ಡಪ್ಪ ಬೇರೆ ಆಗಿದ್ದ ನಮ್ಮ ಎರಡು ಪರಿವಾರಗಳು ಒಟ್ಟಾಗಿದ್ದವು.
ಅಪ್ಪನಿಗೂ ಬೇರೆ ಆಗುವ ಮನಸ್ಸಿರಲಿಲ್ಲ. ಅಮರಣ್ಣ ತಾತನಿಗೂ ಬೇರೆ ಹಾಕುವ ಮನಸ್ಸಿರಲಿಲ್ಲ.
ಆದರೆ ಕುಟುಂಬದ ಸ್ವಾರ್ಥದಲ್ಲಿ ಸುಸುಳಿದ ಕಹಿಭಾವನೆಗಳು ಅಪ್ಪನನ್ನು ಹೊರಗೆ ಹಾಕಲು ಪ್ರಚೋದಿಸಿದವು.
ಅಪ್ಪನನ್ನು ಹೊರಗೆ ಹಾಕಿದರೆ, ಕೇವಲ ಅಮರಣ್ಣ ತಾತನ 3 ಜನ ಮಕ್ಕಳು - ತಾತ ಒಟ್ಟಿಗೆ ಇರಬಹುದಿತ್ತು. ಹೆಚ್ಚು ಹಣ ಗಳಿಸಬಹುದು, ಅನಗತ್ಯ ಸೋದರ ಸಂಬಂಧಿಗಳಿಗೆ ಯಾಕೆ ಹೆಚ್ಚಿನ ಆಸ್ತಿ ಎಂಬ ಜಿಜ್ಞಾಸೆ ಉಂಟಾಗಿರಬೇಕು.
ಇಪ್ಪತ್ತೇಳು ವರ್ಷ ತನ್ನೊಂದಿಗೆ ಬೆಳೆದ ತಮ್ಮನ ಮಗ ಅಂದರೆ ನಮ್ಮ ಅಪ್ಪನನ್ನು ಹೊರಹಾಕುವ ಮನಸ್ಸಿರಲಿಲ್ಲ. ಆದರೆ ಕುಟುಂಬದ ಒತ್ತಡದಿಂದ ಅನಿವಾರ್ಯವಾಗಿ 1972 ರಲ್ಲಿ ಅಪ್ಪನನ್ನು ಹೊರಹಾಕಿದರು.
ಬೇರೆ ಆಗುವ ಸಂದಂರ್ಭದಲ್ಲಿ ನಡೆದ ಆಸ್ತಿ ವಿಭಜನೆಯ ವಿಚಿತ್ರ ಘಟನೆಗಳನ್ನು ಮತ್ತೆ ವಿವರಿಸಿವೆ.
ಎಂಬತ್ತರ ಹರೆಯದ ಅಂಚಿನಲ್ಲಿದ್ದ ಅಮರಣ್ಣ ತಾತ ನನಗೆ ಇಂದಿಗೂ ಆದರ್ಶಪ್ರಾಯ.
ಕಿರಾಣಿ ವ್ಯಾಪಾರದ ಸಂಭ್ರಮ ನೆನದರೆ ಅಚ್ಚರಿಯೆನಿಸುತ್ತದೆ. ಅಂದಿನ ಕಾಲದಲ್ಲಿ ದಿನಕ್ಕೆ 30 ರಿಂದ 40 ಸಾವಿರ ರೂಪಾಯಿ ವ್ಯಾಪಾರ ವಾಗುತ್ತಿತ್ತು. ಹತ್ತಾರು ಹಳ್ಳಿಗಳಲ್ಲಿ ಜನ ನಮ್ಮ ಅಂಗಡಿಯನ್ನೆ ಅವಲಂಬಿಸಿದ್ದರು.
ಬಂಗಾರದ ಆಭರಣಗಳನ್ನು ಒತ್ತೆ(ಗಿರವಿ) ಇಟ್ಟುಕೊಂಡು ಸಾಲ ಕೊಡುತ್ತಿದ್ದ ಬಹುದೊಡ್ಡ ಬಡ್ಡಿವ್ಯಾಪಾರಿಯಾಗಿದ್ದರು.
ಹತ್ತಾರು ಆಳುಗಳನ್ನು, ನೂರಾರು ಕೂಲಿ ಕೆಲಸಗಾರರನ್ನು ನಿಭಾಯಿಸುತ್ತಿದ್ದರು. ಎಲ್ಲರಿಗೂ ನಮ್ಮ ಮನೆಯಲ್ಲಿ ಊಟದ ವ್ಯವಸ್ಥೆ ಇರುತ್ತಿತ್ತು.
ಎಲ್ಲ ಅತ್ತೆಯಂದಿರು ಮದುವೆಯಾಗಿ ಹೋಗಿದ್ದರು. ರಜೆಯಲ್ಲಿ ಅವರ ಮಕ್ಕಳು ಕಾರಟಗಿಗೆ ಬರುತ್ತಿದ್ದರು.
ಎಲ್ಲರೂ ಸೇರಿದರೆ ಸಂಖ್ಯೆ ನೂರಕ್ಕೆ ಏರುತ್ತಿತ್ತು. ಎಲ್ಲ ಮೊಮ್ಮಕ್ಕಳನ್ನು ತಾತ ಸಮಾನವಾಗಿ ಕಾಣುತ್ತಿದ್ದರು.
ಒಂದು ರೂಮಿನಲ್ಲಿ ಒತ್ತೆ ಇಟ್ಟುಕೊಂಡ ಬಂಗಾರವನ್ನು ಚೀಲದಲ್ಲಿ ಸಂಗ್ರಹಿಸಿ ಇಟ್ಟಿರುತ್ತಿದ್ದರು. ಲಕ್ಷಾಂತರ ರೂಪಾಯಿ ವ್ಯವಹಾರವನ್ನು ಅಮತಣ್ಣ ತಾತ ನೆನಪಿಟ್ಟುಕೊಂಡಿರುತ್ತಿದ್ದರು.
ನನ್ನ ಎಳೆಯ ಪ್ರಾಯದಲ್ಲಿ ನಾನು ತಾತನೊಂದಿಗೆ ಮುಕ್ತವಾಗಿ ಚರ್ಚಿಸಿದ ನೆನಪು. ತಾತ ಎಂದಿಗೂ ಸಿಟ್ಟಿಗೇಳುತ್ತಿರಲಿಲ್ಲ.
ನಾನು ಏಳು ವರ್ಷದವನಿದ್ದಾಗ ಕುಟುಂಬ ವಿಭಜನೆಯಾಯಿತು.
ನಾವೊಂದು ಬೇರೆ ಅಂಗಡಿ ಮಾಡಿದೆವು. ಎರಡು ಅಂಗಡಿಗಳ ಪೈಪೋಟಿಯ ಮಧ್ಯೆ ವ್ಯಾಪಾರ ವಿಫಲವಾಯಿತು.
ಬೇರೆ ಆಗುವ ಸಂದರ್ಭದಲ್ಲಿ ಉಂಟಾದ ಜಗಳ ತಾತನಿಗೆ ಬೇಸರ ಉಂಟುಮಾಡಿತು. ಕೇವಲ ಒಂದೆರಡು ವರ್ಷದಲ್ಲಿ ವ್ಯಾಪಾರ ಇಳಿಮುಖವಾಯಿತು.
ಆಳುಗಳು ಗುಂಪು ಗುಂಪಾದರು. ಕೆಲವೊಬ್ಬರು ಅಪ್ಪನ ಜೊತೆಗೆ ಬಂದು, ಕೆಲವರು ತಾತನ ಜೊತೆಗೆ ಉಳಿದರು. ಕುಟುಂಬದ ಸಾಮರಸ್ಯ ಹಾಳಾಗಿದ್ದಕ್ಕೆ ತಾತ ವಿಚಲಿತರಾದರು.
ಆಗಿನ ಕಾಲದಲ್ಲಿ ಉಪಪತ್ನಿಯರು ಸಂಬಂಧ ಜಗಜ್ಞಾಹಿರ ವಾಗಿರುತ್ತಿತ್ತು. ತಾತ ತನ್ನ ಉಪಪತ್ನಿಯ ಮಕ್ಕಳಿಗೂ ಆಸ್ತಿ, ಹಣ ನೀಡಿದ. ಅವರ ಏಳ್ಗೆಯನ್ನು ಬಯಸಿದ. ತಾತನ ಉಪಪತ್ನಿ ಈರಾಸಾನಿಗೂ, ಅಜ್ಜಿಗೂ ಸಾಮರಸ್ಯವಿದ್ದು, ಯಾವುದೇ ರೀತಿಯ ಜಗಳವಿರುತ್ತಿರಲಿಲ್ಲ.
ಅದಕ್ಕೆ ತಾತನ ಚಾಣಾಕ್ಷತನವೂ ಕಾರಣವಿರಬಹುದು.
ಈ ರಾಸಾನಿಯ ಮಕ್ಕಳನ್ನು ನಾವು ಅತ್ತೆಯಂದು ಕರೆಯುತ್ತಿದ್ದೆವು. ಕುಟುಂಬ ವಿಭಜನೆ ತಾತನಿಗೆ ಬೇಸರವಾಗಿ ಅದೇ ಬೇಸರದಲ್ಲಿ ನಾಲ್ಕೇ ವರ್ಷದ ನಂತರ ಅವರು ನಿಧನರಾದರು. ಕುಟುಂಬ ವಿಭಜನೆಯೇ ಅದಕ್ಕೆ ಕಾರಣ ಎಂದು ನನಗೆ ಈಗಲೂ ಅನಿಸುತ್ತದೆ.
No comments:
Post a Comment