ಬಾಲ್ಯದಲ್ಲಿ ಧೈರ್ಯ ಕಲಿಸಿದ ಸೋದರ ಹಣವಾಳ ಸಿದ್ದಲಿಂಗಣ್ಣ ಮತ್ತೆ, ಮತ್ತೆ ನೆನಪಾಗುತ್ತಾನೆ.
ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣ ಮುಗಿದರೂ ನನ್ನ + ಅವನ ಸ್ನೇಹ ನಿರಂತರವಾಗಿತ್ತು.
ನನಗಿಂತ 10 ವರ್ಷ ಹಿರಿಯನಾದ ಸಿದ್ದಣ್ಣ, ಸಮಕಾಲೀನ ಸೋದರ ಶರಣು, ಎರಡು ವರ್ಷ ದೊಡ್ಡವನಿದ್ದ ಅರಳಿ ಅಪ್ಪಣ್ಣ ತುಂಬಾ ಆಪ್ತರಾಗಿದ್ದೆವು. ಸ್ನೇಹಕ್ಕೆ ವಯಸ್ಸಿನ, ಅಂತಸ್ತಿನ ಅಂತರ ಅಡ್ಡಿಯಾಗದು ಎಂಬುದನ್ನು ನನ್ನ ಬಾಲ್ಯ ನೆನಪಿಸುತ್ತದೆ.
ಬೆನ್ನಿಗೆ ಈಜು ಗುಂಬಳಕಾಯಿ ಕಟ್ಟಿ ಜವಳಿಯವರ, ಅರಳಿಯವರ ಭಾವಿಯಲ್ಲಿ ಈಜು ಕಲಿಸಿದ. ನಂತರ ದೊಡ್ಡ ಕಾಲುವೆಯಲ್ಲಿ ತೇಲಾಡುವುದನ್ನು ಕಲಿಸಿದ ಹೆಗ್ಗಳಿಕೆ ಸಿದ್ದಣ್ಣನಿಗೆ ಸಲ್ಲುತ್ತದೆ.
ಶಾಲಾ ಅಧ್ಯಯನದ ನಿರಾಸಕ್ತಿಯನ್ನು ಸಿದ್ದಣ್ಣನ ಒಡನಾಟ ಮರೆಸಿತ್ತು. ಗದುಗಿನಲ್ಲಿ ಓದುತ್ತಿದ್ದ ದೊಡ್ಡಪ್ಪನ ಮಗ ಶರಣು ಶಾಲೆಯಲ್ಲಿ rank student. ದುಂಡಾಗಿ ಅಕ್ಷರ ಬರೆಯುತ್ತಾ ಅಭ್ಯಾಸದಲ್ಲಿ ಜಾಣನಿದ್ದರೂ ನಮ್ಮ ಸ್ನೇಹಕ್ಕೆ ಮಾರುಹೋಗಿದ್ದ.
ಶರಣುನ ಆಕರ್ಷಣೆಯಿಂದಾಗ ಗದುಗಿಗೆ ಹೋಗುತ್ತಿದ್ದೆ. 1978 ರಿಂದ ಗದುಗಿನ ತೋಂಟದಾರ್ಯ ಅಜ್ಜಾ ಅವರ ಸಂಪರ್ಕ ಹೆಚ್ಚಾದಂತೆಲ್ಲ ಗದುಗು-ಶರಣುನ ನಂಟು ಹೆಚ್ಚಾಯಿತು. ಶರಣು-ಅಪ್ಪಣ್ಣ-ಸಿದ್ದಣ್ಣ-ನಾನು ಸದಾ ಚರ್ಚಿಸುತ್ತಾ ಹರಟೆ ಹೊಡೆಯುತ್ತಿದ್ದೆವು. ಸಿನೆಮಾ ಚಟ ಎಲ್ಲರಲ್ಲೂ ಇದ್ದ ಸಮಾನ ಹವ್ಯಾಸ.
ಹಣವಾಳ ಸಿದ್ದಣ್ಣ ಆರ್ಥಿಕವಾಗಿ ಕಷ್ಟದಲ್ಲಿದ್ದರೂ, ಸದಾ ಖುಷಿಯಲ್ಲಿರುತ್ತಿದ್ದ ಅವನ ಜೀವನೋತ್ಸಾಹ ಮಾದರಿ ಎನಿಸುತ್ತಿತ್ತು. ತುಂಡು ರೊಟ್ಟಿ-ಚಟ್ನಿ ತಿಂದರೂ ಸಂತಸದಿಂದ ಇರಬಹುದು ಎಂಬುದನ್ನು ಅವನ ಹಾಸ್ಯ ಪ್ರಜ್ಞೆ ಸಾಬೀತುಪಡಿಸಿತ್ತು.
ನಮ್ಮೂರಲ್ಲಿ ಸಣ್ಣವರಿದ್ದಾಗ ಹೋಟೆಲ್ಲಿಗೆ ಹೋಗುವುದನ್ನು ದುಶ್ಚಟ ಎಂದು ಪರಿಗಣಿಸುತ್ತಿದ್ದರು. ಹಿರಿಯರ ಕಣ್ಣು ತಪ್ಪಿಸಿ ಹೋಟೆಲ್ಲಿಗೆ ಹೋದರೆ ಅಂಗಡಿ ಮಾಲಕರೇ ಎಚ್ಚರಿಸುತ್ತಿದ್ದರು. ಧಣಿ ನಿಮ್ಮಂತವರು ಚಾದ ಅಂಗಡಿಗೆ ಬರಬಾರದಪ ಇಲ್ಲಿ ಸುಮಾರು ಜನ ಬರ್ತಾರ ಅಂತ ತಿಳಿ ಹೇಳುತ್ತಿದ್ದರು.
ನಮಗೆ ಕಾರಟಗಿ ಹೋಟೆಲ್ ಗಳಿಗೆ ನುಗ್ಗಿ ಮಂಡಾಳು-ಡಾಣಿ, ಮೆಣಸಿನಕಾಯಿ ಪುರಿ, ಚಪಾತಿ -ಚಟ್ನಿ ತಿನ್ನುವ ಆಸೆಯಾಗುತ್ತಿತ್ತು. ಊರ ಹೊರಗಿನ ಗುಡಿಸಲು ಚಹಾ ಅಂಗಡಿಗೆ ಸಿದ್ದಣ್ಣ ಕರೆದುಕೊಂಡು ಹೋಗಿ ನಮ್ಮ ಆಸೆ ತೀರಿಸುತ್ತಿದ್ದ. ಅಂಗಡಿಯ ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗುತ್ತಿದ್ದ.
ನಮ್ಮದು ಲಿಂಗಾಯತ ಮಡಿವಂತ ಪರಿವಾರ ತತ್ತಿ ತಿನ್ನಲು ಅವಕಾಶವಿರುತ್ತಿರಲಿಲ್ಲ. ಆದರೆ ನನಗೆ ತಿನ್ನಬೇಕೆನ್ನಿಸಿತು.
ಈ ರೀತಿ ಮಾಂಸಹಾರ ತಿನ್ನುವುದನ್ನು ಕಪ್ಪು-ಕಡಿ ತಿನ್ನುವುದು ಎಂದು ಟೀಕಿಸುತ್ತಿದ್ದರು.
ಹೈಸ್ಕೂಲಿನಲ್ಲಿದ್ದಾಗ ಸಿದ್ದಣ್ಣ ಎರಡು ರೀತಿಯ ತತ್ತಿ ತಿನ್ನಿಸಿದ. ಹಸಿಹಾಲಿನಲ್ಲಿ ತತ್ತಿ . ನಂತರ ಕುದಿಸಿದ ತತ್ತಿಯನ್ನು ತಿನ್ನಿಸಿ ನಮ್ಮ ಜನ್ಮ ಸಾರ್ಥಕ ಮಾಡಿದ.
ತತ್ತಿ ತಿಂದರೆ ಹೊರಗಡೆ ನಿಲ್ಲಿಸಿ ನೀರು ಸುರುವಿ ಮಡಿ ಮಾಡಿ ಮನೆಯಲ್ಲಿ ಕರೆದುಕೊಳ್ಳುವ ಸಂಪ್ರದಾಯವಿತ್ತು. ಸ್ನಾನ ಮಾಡಿ ಮನೆಯಲ್ಲಿ ಹೋಗದಿದ್ದರೆ ಮನೆಯ ಜಂತಿಯಿಂದ ಚೇಳು ಬೀಳುತ್ತವೆ. ಮೈಲಿಗೆ ಆಗಿದೆ ಎಂದು ಮನೆ ಮೈಲಿಗೆಗೆ ಕಾರಣ ರಾದವರನ್ನು ಪತ್ತೆ ಹಚ್ಚುವಾಗ ನನಗೆ ಅಪರಾಧಿ ಭಾವನೆ ಕಾಡುತ್ತಿತ್ತು.
ಹೀಗಾಗಿ ಮುಂದೆ ಕದ್ದು - ಮುಚ್ಚಿ ತತ್ತಿ ತಿಂದಾಗಲೆಲ್ಲ ಕಾಲುವೆಯಲ್ಲಿ ಬೆತ್ತಲೆ ಸ್ನಾನ ಮಾಡಿ ಮಡಿಯಾಗಿ ಬಿಸಿಲಲ್ಲಿ ಮೈ ಒಣಗಿಸಿಕೊಂಡು ಮನೆಗೆ ಬರುತ್ತಿದ್ದೆ. ಇದಕ್ಕೆ ಅಲ್ಲವೇ ಭಕ್ತಿ- ಭಯ ಅನ್ನುವುದು.
ಪುರಿ,ಚಪಾತಿ ಆಸೆಗಾಗಿ ಹೋಟೆಲ್ ಗೆ ಅಲೆದು ಹೊಸ ಚಟ ರೂಪಿಸಿಕೊಂಡೆ. ಕಾಲುವೆ ದಾಟುವಾಗ ಹೆದರಿಕೆಯಾದರೆ ಸಿದ್ದಣ್ಣ ನನ್ನನ್ನು ಹೆಗಲ ಮೇಲೆ ಕೂಡಿಸಿಕೊಂಡು ದಾಟುತಿದ್ದ.
ಪ್ರತಿ ವರ್ಷ ಗದುಗಿನ ಜಾತ್ರೆಯಲ್ಲಿ ನಾನು, ಸಿದ್ದಣ್ಣ, ಶರಣು ಸಿನೆಮಾ ನೋಡುವ ಕಾರ್ಯಕ್ರಮ ಹಾಕಿಕೊಂಡು ಒಂದು ದಿನಕ್ಕೆ 3-4 ಸಿನೆಮಾ ನೋಡುತ್ತಿದ್ದೆವು. ಮುಂದೆ ಕೆಲ ವರ್ಷ ದುಡಿಯಲು ಆಂದ್ರ ಪ್ರದೇಶಕ್ಕೆ ಹೋದ. ರಜೆಗೆ ಬಂದಾಗಲೆಲ್ಲ ಒಟ್ಟಿಗೆ ಸೇರುತ್ತಿದ್ದೆವು.
ಕುಳ್ಳ ವ್ಯಕ್ತಿತ್ವದ ಹಸನ್ಮುಖಿ ಸಿದ್ದಣ್ಣ ಈಗ ಕೇವಲ ನೆನಪಾಗಿದ್ದಾನೆ. ಕೆಟ್ಟ ಕಾಯಿಲೆಗೆ ಸಿದ್ದಣ್ಣ ಬಲಿಯಾಗಿ ಏಳೆಂಟು ವರ್ಷಗಳ ಹಿಂದೆ ತೀರಿಕೊಂಡಾಗ ಎಲ್ಲಿಲ್ಲದ ವ್ಯಥೆ. ತೀವ್ರ ಅನಾರೋಗ್ಯದಲ್ಲಿದ್ದಾಗ ಗದುಗಿಗೆ ಚಿಕಿತ್ಸೆಗಾಗಿ ಬಂದಿದ್ದ. ಆಗ ಸ್ವಲ್ಪ ನೆರವು ನೀಡಿದ್ದೆ. 3 ಹೆಣ್ಣು ಮಕ್ಕಳು, ನಮ್ಮಂತಹ ಹತ್ತಾರು ಸ್ನೇಹಿತರನ್ನು ಅಕಾಲಿವಾಗಿ ಅಗಲಿದಾಗ ಯಾರಿಗೆ ತಾನೇ ವ್ಯಥೆಯಾಗುವುದಿಲ್ಲ.
ಇತ್ತೀಚಿಗೆ ಊರಿಗೆ ಹೋದಾಗ ಆತನ ಮಕ್ಕಳನ್ನು ಕಂಡಾಗ ಸಿದ್ದಣ್ಣನ ಬಾಲ್ಯದ ದಿನಗಳು ನೆನಪಾದವು.
ತಾನು ಅನೇಕ ಕೆಟ್ಟ ಚಟಗಳಿಗೆ ಬಲಿಯಾದರೂ, ನಮ್ಮನೆಂದು ಆ ಕೂಪಕ್ಕೆ ತಳ್ಳಲಿಲ್ಲ. ಅದೇ ಅವನ ದೊಡ್ಡತನ. ತನ್ನ ಅನಾಹುತಕಾರಿ ಕಾಯಿಲೆಯಲ್ಲೂ ಆತ ಜೀವನೋತ್ಸಾಹ ಕಳೆದುಕೊಂಡಿರಲಿಲ್ಲ.
ಆತನ ಕೊನೆಯ ದಿನಗಳನ್ನು ನಮ್ಮೊಂದಿಗೆ ಕಳೆಯಲು ಬಯಸಿದ. ನಾನು, ಅಪ್ಪಣ್ಣ, ಶರಣು ಸಾಧ್ಯವಾದಷ್ಟು ನೆರವು ನೀಡಿದೆವು ಎಂಬುದು ಕೇವಲ ನೆಪ. ಕೋಟಿಗಟ್ಟಲೆ ಹಣ ಸುರಿದರೂ ಕಳೆದು ಹೋದ ಇತಿಹಾಸವನ್ನು ಮರಳಿ ಕೊಳ್ಳವುದು ಅಸಾಧ್ಯ.
ಹಾಗೆ ಬಾಲ್ಯದ ನೆನಪುಗಳನ್ನು ದಿವ್ಯವಾಗಿಸಿ ಸಿದ್ದಣ್ಣ ನಮ್ಮೂರ ಮಧ್ಯೆ ಹರಿಯುವ ಕಾಲುವೆ ನೋಡಿದಾಗ, ಹಳೆ ಸಿನೆಮಾಗಳನ್ನು ನೋಡಿದಾಗ ನೆನಪಾಗುತ್ತಾನೆ.
ಬಾಲ್ಯದ ಕಾಲು ಭಾಗವನ್ನು ನಾನು ಆತನೊಂದಿಗೆ ಕಳೆದೆ. ಅಷ್ಟೇನು ವಿದ್ಯೆ ಕಲಿಯದಿದ್ದರೂ ಅವನ ಲೋಕಾನುಭವ ಚನ್ನಾಗಿತ್ತು. ಬಾಲ್ಯದ ಸ್ನೇಹದಷ್ಟು ಭಾವನಾತ್ಮಕತೆ ಈಗಿನ ಸ್ನೇಹದಲ್ಲಿ ಇರುವುದಿಲ್ಲ. ಎಲ್ಲರೂ ಅವರವರ ಪಾಡಿಗೆ busy ಅಗಿ ಬಿಡುತ್ತೇವೆ. ಅಪ್ಪಣ್ಣ ,ಶರಣು ಈಗ ಕೇವಲ mobile ಗೆಳೆಯರಿದ್ದಾರೆ ಅಷ್ಟೇ! ಈಗ ನಮಗೆ ಸಮಯವೂ ಇಲ್ಲ, ಭಾವನೆಗಳು ಇಲ್ಲ ಎನ್ನುವಂತಾಗಿದೆ.
Subscribe to:
Post Comments (Atom)
No comments:
Post a Comment