*ಕಲಿಯಲು ಸಾವಿರ ಸಂಗತಿಗಳು*
ಹೊಸ ಪ್ರಯಾಣ.
ಕೊನೆಯವರೆಗೆ ಕಲಿಯುತ್ತಲೇ ಇರಬೇಕು. ಏನಾದರೂ ತಿಳಿದುಕೊಳ್ಳುತ್ತಲೇ ಇರಬೇಕು. ಕಲಿಸುವವರು ಯಾರು ಎಂಬುದು ಅಮುಖ್ಯ.
ಈಗ ಬರೆಯಲು ಹಿಡಿತ ಸಿಕ್ಕಿದೆ, ಸಾಧ್ಯವಾದಷ್ಟು ಬರೆಯಬೇಕೆಂಬ ತುಡಿತ.
ಸಿನೆಮಾ ನನಗೆ ಬರಹದಷ್ಟೇ ಪ್ರೀತಿ ಮಾಧ್ಯಮ ಆದರೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ.
*ಒಂದು ಬಿರುಗಾಳಿಯ ಕಥೆ* ಬರೆದ ಮೇಲೆ ಗದ್ಯದ ಮೇಲೆ ಹಿಡಿತ ಬಂತು. ಪಟ್ಟು ಹಿಡಿದು ಕುಳಿತರೆ ನೂರಾರು ಪುಟ ಸರಾಗವಾಗಿ ಬರೆಯಬಲ್ಲೆನೆಂಬ ಭರವಸೆ.
ಇದನ್ನು ಗ್ರಹಿಸಿದ ಸಹೃದಯಿ ಸಿನಿತಂತ್ರಜ್ಞ ಮಂಜುನಾಥ ಪಾಂಡವಪುರ ನನಗೊಂದು ಹೊಸ ಅವಕಾಶ ಕೊಟ್ಟರು.
*ಶರೀಫನ ತಂಬೂರಿ* ಎಂಬ ಕಲಾತ್ಮಕ ಸಿನೆಮಾಕ್ಕೆ ಸ್ಕ್ರೀನ್ ಪ್ಲೇ ಮಾಡಿ ಸಂಭಾಷಣೆ ಬರೆಯಲು ಕೇಳಿದಾಗ ಸಾರಾಸಗಟ ನಿರಾಕರಿಸಿದೆ. ಅನುಭವ ಇಲ್ಲದ ಕ್ಷೇತ್ರದಲ್ಲಿ ಕೆಲಸ ಒಪ್ಪಿಕೊಳ್ಳುವುದು ಅಸಂಗತ.
ಕಂಪ್ಲಿಯ ಬರಹಗಾರ ಪತ್ರಕರ್ತ W.ಬಸವರಾಜ ಅವರ ಕಥೆ ಇದು. ಸಾಹಿತಿ, ಪ್ರಾಧ್ಯಾಪಕ ಡಾ.ರಾಜಶೇಖರ ಜಮದಂಡಿ ಸಂಭಾಷಣೆ ರೂಪಿಸುವಲ್ಲಿ ನೆರವಾಗುತ್ತಾರಂತೆ.
ಮುಂದೆ ಮಂಜು ಬಿಡಲೇ ಇಲ್ಲ. ' ನಿಮ್ಮ ಅನುವಾದ ಚಿತ್ರಕಥೆ ಇದ್ದಂಗೆ ಸರ್ ' ಎಂಬ ದುಂಬಾಲು.
ಕವಿಯಾಗಿ, ಲವ್ ಕಾಲ ಗದ್ಯದ ಮೂಲಕ ಒಂದು ಲಯಗಾರಿಕೆಯಲಿ ಹೊರಟ ನನಗೆ disturbance ಬೇಡವಾಗಿತ್ತು.
ನಿರ್ಮಾಪಕ ಡಾ.ನಾರಾಯಣ ವೃತ್ತಿಯಿಂದ ಅರ್ಥೋ ವೈದ್ಯರು, ಪ್ರವೃತ್ತಿ ಅದ್ಭುತ.
ಒಂದೆರಡು ಸುತ್ತಿನ ಚರ್ಚೆಯ ನಂತರ ಮೌನವಾದೆ.
ಆಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಾಗ ನನ್ನ ಕೆಮಿಸ್ಟ್ರಿ ಮ್ಯಾಚ್ ಆಯಿತು.
ಕೆಮಿಸ್ಟ್ರಿ ಮ್ಯಾಚ್ ಆಗದೇ ಏನೂ ಮಾಡಬಾರದು. ಒಂದು ಹನಿ ನೀರು ಕುಡಿಯಲು ವಿಚಾರಿಸುವ ಸ್ಥಿತಿ ತಲುಪಿದ್ದೇನೆ. ಕಹಿ ಅನುಭವಗಳು ಚಿಂದಿ ಮಾಡಿವೆ.
ಮತ್ತದೇ ರಿಪೀಟ್ ಆದರೆ ನಾನೊಬ್ಬ ಶುದ್ಧ ಮುಠ್ಠಾಳ.
ಮುಂದೆ ಮತ್ತೊಂದು ಆಘಾತ. ನಿರ್ದೇಶಕ ಹೆಸರು ಕೇಳಿ ಬೆವತು ಹೋದೆ.
ಸಿನಿಯರ್ ಮೋಸ್ಟ್ ಕಂಪೋಜರ್, ಹಿರಿಯ ನಿರ್ದೇಶಕ ವಿ.ಮನೋಹರ ಸಿನಿಮಾ ಡೈರೆಕ್ಟ್ ಮಾಡ್ತಾರೆ ಅಂದಾಗ ಸುಸ್ತಾದೆ.
ಇದರ ಸಹವಾಸವೇ ಬೇಡವೆನಿಸಿತು.
ಮನೋಹರ ಅವರ ಹಿರಿತನ, ಅನುಭವ ದೂರದಿಂದ ಗಮನಿಸಿದ್ದೆ. ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ. ಕಾಶಿನಾಥ ಅವರ ಶಿಷ್ಯ, ಪತ್ರಿಕೋದ್ಯಮಿ, ಕವಿ, ಸಂಗೀತಗಾರ, ನಟ ಸಿನೆಮಾದ ಎಲ್ಲಾ ಆಯಾಮ ಅರಿತ ನಿಪುಣ.
' ನೀವು ಒಳ್ಳೆಯ ಚಿತ್ರಕಥೆ ಬರೆದರೆ ಮಾತ್ರ ಸಿನೆಮಾ ಗೆಲ್ಲುತ್ತೆ ಇಲ್ಲದಿದ್ದರೆ ಎಲ್ಲಾ ಮುಳುಗುತ್ತೆ,' ಅಂದಾಗ ಚಿತ್ರಕಥೆ ಮಹತ್ವ ಅರಿತೆ.
ಬದುಕಿನ ತಲ್ಲಣಗಳ ಅನುಭವಿಸಿ ಎದುರಿಸಲು ನನ್ನಂಥವರಿಗೆ *ಲಂಕೇಶ್* ಆದರ್ಶ.
ಪರಿಪೂರ್ಣತೆಗೆ ಶ್ರೀಕಾರ. ಬರಹ, ಸಿನೆಮಾ, ಪತ್ರಿಕೋದ್ಯಮ ಎಲ್ಲದರಲ್ಲೂ ಸೈ ಅನಿಸಿಕೊಂಡ ಚೈತನ್ಯ.
ಅವರನ್ನೊಮ್ಮೆ ಸ್ಮರಿಸಿ ಜೈ ಅಂದೆ.
ಈಗ ಈ ಯೋಜನೆಯಲೂ ಪರಕಾಯ ಪ್ರವೇಶದ ಸಿದ್ಧಾಂತ ಹಿಡಿದು, ಬಿರುಗಾಳಿ ಹಾಗೂ ಜುಗಲ್ ಮಾದರಿ ಅನುಸರಿಸಿ ತಾರ್ಕಿಕ ಅಂತ್ಯ ಕಾಣಿಸುವೆ ಎಂಬ ಭರವಸೆಯ ಮಹಾಬೆಳಕು.
ಪ್ರೇರೆಪಿಸಿ ಹುರಿದುಂಬಿಸಲು *ಅವನಿದ್ದಾನೆ* , ಮೆಚ್ಚಿ ಹಾರೈಸಲು ನೀವಿದ್ದೀರಿ.
*ಸಿದ್ದು ಯಾಪಲಪರವಿ*
No comments:
Post a Comment