Saturday, May 19, 2018

ಬಸವಪ್ರಜ್ಞೆ-ಜೋಳಿಗೆಯ ಹರಿಕಾರ

*ಬಸವಪ್ರಜ್ಞೆ-ಜೋಳಿಗೆಯ ಹರಿಕಾರ: ಮಹಾಂತ ಅಪ್ಪಗಳು*

ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ದೈಹಿಕವಾಗಿ ದೂರವಾದರಷ್ಟೇ.

ಬಾಲ್ಯದಿಂದ ಮನದ ಮೇಲೆ ಮರೆಯಲಾಗದ ಪ್ರಭಾವಳಿ. ಬಸವಪ್ರಜ್ಞೆ ಬಿತ್ತಿ ಬೆಳೆಸಿ, ಭಾಷಣ ಮಾಡಲು ಕರೆದು ವೇದಿಕೆಯನೇರಿಸಿ ಹರಸಿದವರು.

ಮೊದಲ ಸಾರ್ವತ್ರಿಕ ಕಾರ್ಯಕ್ರಮ 90 ರ ದಶಕದಲಿ.

ಈಗ ಸಾವಿರದ ಗಡಿ. ನನ್ನ ವಚನ ಚಳುವಳಿಯ ಮಾತು ಮಂಥನ ಚಿಂತನೆಗೆ.

ಪೂಜ್ಯರದು ಮುಖವಾಡವಿಲ್ಲದ ಬಸವ ನಿಷ್ಟೆ. ಅಂಜದ ಅಳುಕದ  ಚೇತನ.

ಉತ್ತರಾಧಿಕಾರಿ ವಿಷಯವಾಗಿ ತೆಗೆದುಕೊಂಡ ನಿರ್ಣಯ ಅವಿಸ್ಮರಣೀಯ.

ಪಂಪಿಗಳ ಕೆರಳಿಸಿದ ಮೊಟ್ಟ ಮೊದಲ ಘಟನೆ.
ಕಲ್ಲುಗಳ ತೂರಾಟದಂಥ ಹೀನ ಕೆಲಸ.
ಆಚಾರ-ವಿಚಾರಗಳಲಿ ಕಟ್ಟರ್ ನಿಲುವು. ಮಾತೂ ಹಾಗೆ.ಒಮ್ಮೊಮ್ಮೆ ನುಂಗಲಾಗದ ಬಿಸಿ ತುಪ್ಪ.

                            ***

ನನ್ನ ಮದುವೆಯ ಘಟನೆ ನೆನಪಾಗುತ್ತದೆ.
ಸಂಪ್ರದಾಯವಾದಿಗಳು ಇಲಕಲ್ ಅಜ್ಜಾ ಅವರು ಬರುವದರೊಳಗೆ ಸುರಗಿ ಸುಡುಗಾಡು ಮಾಡಿ ತಮ್ಮ ಹಟ ತೀರಿಸಿಕೊಂಡರು.

ಅಜ್ಜಾ ಅವರು ಬಂದ ಮೇಲೆ ಎಂದಿನಂತೆ ಹೂ ಹಾಕಿ ಶರಣ ಪರಂಪರೆಯ ಕಲ್ಯಾಣದ ಸೋಗು.
ನಾನು ಅಸಹಾಯಕ. ಸಹಿಸಿಕೊಂಡೆ.

ಮದುವೆ ಮುಗಿದ ಒಂದೇ ವಾರದಲ್ಲಿ ಬಾಗಲಕೋಟೆಯ ಶಿರೂರಿನಲ್ಲಿ ಶಿವಾನುಭವ ತರಬೇತಿ ಶಿಬಿರ.
ನಾನು ಸಂಪನ್ಮೂಲ ವ್ಯಕ್ತಿ. ಒಳಗೊಳಗೆ ಇನ್ನಿಲ್ಲದ ಪಾಪಪ್ರಜ್ಞೆ.

*ಎನ್ನ ತಪ್ಪು ಅನಂತ ಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲ* ಎನ್ನುತ್ತಲೇ ಮಾತನಾಡುತ್ತ ವಾರದ ಹಿಂದಿನ ನನ್ನ ಮದುವೆಯ ಅಪರಾಧ ಒಪ್ಪಿಕೊಂಡೆ.

*ಪೂಜ್ಯರ ಕಣ್ಣಾಲೆಯಲಿ ನೀರು*
'ಕ್ಷಮಿಸಿದೆ ಮಗನೇ' ಎಂಬಂತೆ.

ಅವರಿಗೂ ವಿಷಯ ಗೊತ್ತಿದ್ದರೂ ಹೇಳದೇ ಸಹಿಸಿಕೊಂಡು, ನಾನು ಒಪ್ಪಿಕೊಳ್ಳುತ್ತೀನೋ ಇಲ್ಲವೋ ಎಂಬ ಕುತೂಹಲ.
ಒಪ್ಪಿಕೊಂಡ ಕೂಡಲೇ ಭಾವುಕರಾದರು.

ನಿರಂತರ ಒಡನಾಟ. ಅನೇಕರು ನನ್ನ ಬಗ್ಗೆ ಪೂಜ್ಯರಿಗೆ ದೂರಿದರು.

*ನಾನು ಇಷ್ಟಲಿಂಗ ಪ್ರೇಮಿಯಲ್ಲ ಲಿಂಗ ಧಾರಣೆ,ಲಿಂಗ ಪೂಜಕನಲ್ಲ ಇತ್ಯಾದಿ ಇತ್ಯಾದಿ...*

ಹೌದು ಈಗಲೂ ಅಷ್ಟೇ ತೋರಿಕೆಯ ಬಸವ ನಿಲುವು ನನ್ನದಲ್ಲ.
ಅಪ್ಪಟ ಬಸವಪ್ರಜ್ಞೆ.

ಒಲವು, ನಿಲುವು, ಭಕ್ತಿ, ಭಾವ. ಎಲ್ಲದರಲ್ಲೂ.
ಅದಕೆ ಕಾರಣ ನೀವೇ. ನಿಮ್ಮ ಕ್ಷಮಾ ಗುಣ.*ತಾಯಿ ಪ್ರೀತಿ ಮರೆಯಲಾದೀತೇ?*

                            ***

ನಾಲ್ಕಾರು ತಿಂಗಳ ಹಿಂದೆ ಅನಾರೋಗ್ಯದ ಸ್ಥಿತಿಯಲ್ಲೂ ಅದೇ ವಾತ್ಸಲ್ಯ ತೋರಿ ಹೆಸರು ಉಂಡಿ ತಿನಿಸಿದರು.

                             ***

*ಗುರುಮಹಾಂತ ಅಪ್ಪಗಳ‌ ಸೇವೆಯೂ ಅನನ್ಯ*
ಪೂಜ್ಯರನ್ನು ಮಗುವಿನಂತೆ ಜೋಪಾನ ಮಾಡಿದರು.

ಅವರ ಶ್ರದ್ಧೆ ಅನುಪಮ. ಅವಿಸ್ಮರಣೀಯ.

ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಧ್ಯವಾದಷ್ಟು ನಡೆಯುವ ಶಕ್ತಿ, ತಾಕತ್ತು ಉಳಿದರೆ ಸಾಕು.

ನಿಮ್ಮ ಆಶಿರ್ವಾದ ನಮ್ಮ ಮೇಲೆ ಇದ್ದೇ ಇದೆ. ಅದಕ್ಕೆ ಇನ್ನೂ ಜೀವಂತವಾಗಿದ್ದೇವೆ. ಇರುತ್ತೇವೆ ಕೂಡಾ.

ನೀವು ಅಷ್ಠೇ.  ಈಗ ದೈಹಿಕ ನಿರ್ಗಮನ. ಮೌಲಿಕ ಚೈತನ್ಯವಾಗಿ ಸದಾ ನಮ್ಮ ಒಡಲೊಳಗೆ.

ಈಗಲೂ ನಾವು ಸ್ವಾರ್ಥಿಗಳು. ತಮ್ಮ ಕೃಪೆ ಸದಾ ನಮ್ಮ ಮೇಲಿರಲಿ ಎಂದೇ ಬೇಡುತ್ತೇವೆ.

*ಶರಣರಿಗೆ ಮರಣವೇ ಮಹಾನವಮಿ*
*ಭಕ್ತರಿಗೆ ನಿಮ್ಮ ನೆನಹೆ ಶಿವರಾತ್ರಿ*

        *ಸಿದ್ದು ಯಾಪಲಪರವಿ*

No comments:

Post a Comment