Tuesday, May 29, 2018

ಕರಾವಳಿ ನಂಟು


*ಒಳ್ಳೆಯ ಸಮಯ, ಜನ, ಸಾಮಿಪ್ಯ ಕಳೆದುಕೊಳ್ಳಬಾರದು*

ಕರಾವಳಿ ನಂಟು ಇದ್ದೇ ಇದೆ. ಕಾರಣ ನೂರೆಂಟು.

ಹಿರಿಯ ಸಾಹಿತಿ ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠದ ಸಂಸ್ಥಾಪಕರಾದ ಡಾ.ನಾ.ಮೊಗಸಾಲೆ, ಮಂಗಳೂರು ನಿಡ್ಡೋಡಿಯ ಯುವ ಉದ್ಯಮಿ, ಜ್ಞಾನರತ್ನ ಎಜ್ಯುಕೇಶನ್ ಟ್ರಸ್ಟಿನ ಸಂಸ್ಥಾಪಕ ಭಾಸ್ಕರಗೌಡ ದೇವಸ್ಯ ಹಾಗೂ ಅವರ ಹತ್ತಾರು ಗೆಳೆಯರು ನನ್ನ ಬರುವಿಕೆ ಹಾಗೂ ಇರುವಿಕೆಗೆ ತುಡಿಯುವ ಸಹೃದಯ ಮನಸುಗಳು.

ಮಂಗಳೂರಿನ humidity, ಧೋ ಎಂದು ಸುರಿಯುವ ಮಳೆ, ಗೋಲ್ಡನ್ ಸ್ಟ್ರೀಕ್ ಅಪಾರ್ಟ್ಮೆಂಟಿನ ಬೆಚ್ಚಗಿನ ವಾಸ, ಹರಟೆ, ಬಿಸಿ ಬಿಸಿ ಗಂಜಿ, ಒಂದಿಷ್ಟು ಓದು-ಬರಹ.

ಇದೆಲ್ಲ ಪುಣ್ಯದ ಪ್ರತಿಫಲ. *ದೂರದ ಬಿಸಿಲನಾಡ ಮಗಲಾಯಿಗೆ ಇದೆಲ್ಲ ಹೇಗೆ ಸಾಧ್ಯ* ಅಂದುಕೊಳ್ಳುವದ ನಿಲ್ಲಿಸಿ,  ಕೇವಲ ಅನುಭವಿಸುತ್ತೇನೆ.

ಇದೆಲ್ಲ ಋಣಾನುಬಂಧ. ಅಲ್ಲಮನ ವಚನದ ಹಾಗೆ.*ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿದೆತ್ತ ಸಂಬಂಧವಯ್ಯ* ಎಂಬಂತೆ ಕೋಗಿಲೆಗೆ ಮಾಮರ ಸಿಕ್ಕೇ ಸಿಗುತ್ತದೆ.

ನಿನ್ನೆ ರಾತ್ರಿ ಸಾಹಿತ್ಯಾಸಕ್ತ ಬ್ಯಾಂಕರ್ *ಶ್ರೀನಿವಾಸ ದೇಶಪಾಂಡೆಯವರ* ಪರಿಚಯವಾಯಿತು.
ಮೂಲತಃ ಮುದಗಲ್ಲಿನವರಾದ ದೇಶಪಾಂಡೆ ತುಂಬಾ ಓದಿಕೊಂಡ ಜೀವನೋತ್ಸಾಹಿ.

ರಾತ್ರಿಯ ಬೈಟಕ್ ನಲ್ಲಿ ಸಾಹಿತ್ಯ, ಬದುಕು, ಖುಷಿ ತೇಲಿಹೋಯಿತು. ಅದರೊಟ್ಟಿಗೆ‌ ಸುಂದರ ಪರಿಸರ ಸುರಿಯುವ ಮಳೆ ನೋಡಲೆಷ್ಟು ಛಂದ.

ಕರಾವಳಿ ಜನ ಬರೀ ಜಾಣರಲ್ಲ. ಭಾಸ್ಕರ ಅವರಂಥ ಸಹೃದಯಿಗಳೂ ಇರುತ್ತಾರೆ. ಹುಡುಕುವುದು ಬೇಡ‌ ಆದರೆ ಸಿಕ್ಕಾಗ ಕಳೆದುಕೊಳ್ಳಬಾರದು ಅಷ್ಟೇ !

ಸುರಿಮಳೆಯ ಬೆರಗಿನಲಿ ಹೊರ‌ ಹೋಗುವುದು‌ ಅಸಾಧ್ಯ. ಭಾಸ್ಕರ್ ಪ್ರೀತಿಯಿಂದ ತಯಾರಿಸಿದ ಅನ್ನ-ಸಾಂಬಾರಿನಲಿ ಬರೀ ಒಲವಿತ್ತು.ಪ್ರೀತಿಯ ಮಸಾಲೆ ಇತ್ತು.

ಬದುಕುವುದಕ್ಕಾಗಿ ತಿನ್ನುವ ಮನಸ್ಥಿತಿ ಹೊಂದಿದವರಿಗೆ ಇರುವುದೆಲ್ಲ ಮೃಷ್ಟಾನ್ನ.

ಬಿಸಿ ಊಟವಾದ ಮೇಲೆ ಒಳನೋಟಕಿಳಿದು ಯೋಚಿಸಿ, ಹೊರಗೆ ಸುರಿವ ಮಳೆ ನೋಡುತ್ತ, ನೋಡುತ್ತ ಕರಗಿಹೋದೆ.

     *ಸಿದ್ದು ಯಾಪಲಪರವಿ*

No comments:

Post a Comment