*ಕಟಗ ರೊಟ್ಟಿ-ಕಡ್ಲಿ ಪುಡಿ ಮತ್ತು ಹಸಿವು*
ಹಸಿವು ಎಲ್ಲರಿಗೂ. ಇದ್ದವರಿಗೆ ಇಲ್ಲದವರಿಗೂ.
ಕೆಲವರಿಗೆ ಬೇಕೆಂದ ಕೂಡಲೇ ಸಿಗುತ್ತದೆ, ಮತ್ತೆ ಕೆಲವರಿಗೆ ಬೇಕೆಂದಾಗಲೂ ಸಿಗುವುದಿಲ್ಲ.
ಬಡತನ-ಹಸಿವು ಬಡ ರಾಷ್ಟ್ರಗಳ ಚಿತ್ರಣ. ಹಸಿವೇ ಮಹಾಕಾವ್ಯ.
ನಮ್ಮ ಗುರುಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ತಮ್ಮ ಕವಿತೆಯೊಂದರಲ್ಲಿ ' ಬಡತನ ತಿಳಿದಿರಲಿ ಆದರೆ ಬಾರದಿರಲಿ' ಎಂದು ಮಗಳಿಗೆ ಹಾರೈಸುತ್ತಾರೆ.
ಆದರೆ ತಿಳಿದವರು,ಅನುಭವಿಸಿದವರೂ ಅಹಂಕಾರದ ಕಾರಣದಿಂದ ಹಸಿವನ್ನು ಮರೆತವರಂತೆ ಆಡುತ್ತಾರೆ.
ಮದುವೆಗಳಲಿ ಹತ್ತಾರು ಜನರಿಗೆ ಬೇಕಾಗುವಷ್ಟು ತಟ್ಟೆಯಲ್ಲಿ ಹಾಕಿಸಿಕೊಂಡು ಹಾಗೆಯೇ ಕೆಡಿಸಿ ವಿಕೃತ ಅಜ್ಞಾನ ಮೆರೆಯುತ್ತಾರೆ.
ವಿದೇಶಗಳಿಗೆ ಹೋದಾಗ,ಕಾಡಿನ ಸಂಚಾರದಲಿ,ನಡು ಮಾರ್ಗದಲ್ಲಿ ಜೇಬಿನಲ್ಲಿ ಸಾಕಾಗುವಷ್ಟು ಹಣ ಇದ್ದರೂ ತುತ್ತು ಅನ್ನ ಸಿಗದೇ ಪರದಾಡುವ ಸ್ಥಿತಿ ಬಂದಾಗ ಅನ್ನ ಪ್ರಸಾದವೆನಿಸುತ್ತದೆ.
ನಮ್ಮ ಶರಣರು ತುಂಬ ಅನುಭವಿಗಳು,ವಾಸ್ತವವಾದಿಗಳು. ನಮ್ಮ ಬದುಕು ಹಸನಾಗಿರಲು ಕಾಯಕ-ದಾಸೋಹ ಸಾಕು ಎಂದವರು. ಅವೇ ತತ್ವಗಳನ್ನು ಉದ್ಧರಿಸುತ್ತ ಎರಡನ್ನು ಅರಿಯದ ಮೂಢರು ನಾವು.
ಮೈತುಂಬ ಅನ್ ಪ್ಲ್ಯಾನ್ಡ್ ಕೆಲಸಗಳ ಒತ್ತಡದಿಂದ ಒಮ್ಮೆ ರಾತ್ರಿ ಊಟ ಮಾಡದೇ ರೈಲು ಹತ್ತಿದೆ. ನಡುರಾತ್ರಿ ಹನ್ನೆರಡರ ನಂತರ ಹಸಿವು ಇರಿಯಲಾರಂಭಿಸಿತು.ಅಷ್ಟೊತ್ತಿನಲ್ಲಿ ಎಷ್ಟೇ ರೊಕ್ಕ ಕೊಟ್ಟರೂ ಏನೂ ಸಿಗುವುದಿಲ್ಲ. ಕಣ್ಣು ಮುಚ್ಚಿ ಧೇನಿಸಿ ಊಟ ಸಿಗಲಿ ಎಂದು ಕಾಣದ ಕೈಗಳ ಬೇಡಿದೆ.
ಅಲ್ಲಿ ಕೆಲಸ ಮಾಡುವ ಹುಡುಗ 'ಏನಾದರೂ ಬೇಕಿತ್ತಾ?' , ತಕ್ಷಣ ಊಟ ಎಂದುಬಿಟ್ಟೆ.
' ನನಗೆ ತಂದ ಊಟ ಉಳಿದಿದೆ ಸರ್, ನೀವು ಏನೂ ಅನ್ಕೊಳಲ್ಲ ಅಂದ್ರೆ ಅದನ್ನೇ ಕೊಡ್ತೀನಿ.'
' ಅಯ್ಯೋ ಕೊಡು ಮಾರಾಯ ' ಅಂದು ಗಬ ಗಬನೆ ತಿಂದು ಸಂತೃಪ್ತನಾದೆ. ತಕ್ಷಣ ಹಣ ಕೊಟ್ಟರೆ ಅಹಂಕಾರ ಅಂದುಕೊಳ್ಳಬಾರದೆಂದು ಸುಮ್ಮನಾದೆ.
ಮರುದಿನ ಪರೋಕ್ಷವಾಗಿ ಟಿಪ್ಸ್ ನೆಪದಲಿ ಥ್ಯಾಂಕ್ಸ್ ಹೇಳಿ ಮುಕ್ತನಾದೆ.
***
ನಿನ್ನೆ ಜೋರು ಮಳೆ. ಮನೆಯಲ್ಲಿ ಒಡತಿಯೂ ಇಲ್ಲ. ಹೊರಗೆ ಹೋಗುವದು ಅಸಾಧ್ಯ.
ಫ್ರಿಜ್ ಖಾಲಿ. ಗ್ಯಾಸ್ ಬಂದ್. ನನಗೆ ಏನೂ ಬರಲ್ಲ.
ಬುಟ್ಟಿಯಲಿ ತಂಗಳು ರೊಟ್ಟಿ ಅರಳಿ ನಿಂತು ಕೈಮಾಡಿ ಅವ್ವನ ಹಾಗೆ ಕರೆದವು.
ಹಲ್ಲಿ ಓಡಾಡಿರುತ್ತವೆ ಎಂಬ ಗುಮಾನಿ ಬೇರೆ.
ರೊಟ್ಟಿಗಳನ್ನು ತೊಳೆದೆ.
ಮುರಿದು ಹಾಕಿ ಕಡ್ಲಿಪುಡಿ ಸುರುವಿ ಮೇಲೊಂಚೂರು ಎಣ್ಣೆ ಹಾಕಿಕೊಂಡು ನಿಧಾನವಾಗಿ ಒಂದು ತಾಸು ಖುಷಿಯಿಂದ ತಿಂದಾಗ ಏನೋ ಸಾಧಿಸಿದ ಸಂತೃಪ್ತ ನಿರಾಳ ಭಾವ.
ಅನ್ನ,ಮದುವೆ,ಅಹಂಕಾರ, ಆಹಾರ ಕೆಡಿಸುವ ಅಜ್ಞಾನ, ಹಣ,ಬಡತನ, ಹಸಿವು ಹೀಗೆ ಹತ್ತಾರು ಸಂಗತಿಗಳು ಕಣ್ಣ ಮುಂದೆ ಸುಳಿದಾಡಿದವು.
*ಆಹಾರವ ಕಿರಿದು ಮಾಡಯ್ಯ* ಎಂದು ಹಾಡಿದ ಮಹಾದೇವಿ ಅಕ್ಕ, *ತಾನುಂಬುವ ಊಟ* ಎಂದ ಬಸವಣ್ಣ. ಅನುಭವ ಮಂಟಪ, ದಾಸೋಹ. ಕಾಡಿನಲ್ಲಿ ಸರಿಯಾದ ಅನ್ನ ನೀರು ಸಿಗದೆ ಧ್ಯಾನ ಮಾಡಿ ಕಾಲ ಕಳೆಯುವ ಮುನಿಗಳು... ಎಲ್ಲರೂ ಎಲ್ಲವೂ ಅರಳಿ ನಿಂತವು.
ಅನ್ನ ನಮ್ಮ ಅರಿವಾದಾಗ ಪ್ರಸಾದವಾಗುತ್ತದೆ.
ಅಹಂಕಾರ ಮಾಯವಾದಾಗ ಸರಳತೆ ಅವತರಿಸುತ್ತದೆ.
ಊಟದ ವಿಷಯದಲ್ಲಿ ಸರಳತೆ ಅಗತ್ಯ. 'ಅದು ಬೇಕು, ಇದೇ ಬೇಕು' ಎಂದು ಊಟದ ವಿಷಯವಾಗಿ ಅರಚಾಡಿ ತಟ್ಟೆ ತೂರುವ ಜಂಬದವರು ಹಸಿವಿನ ಮಹತ್ವ ಅರಿತಿರಲಿ ಅನಿಸಿತು.
*ಹಸಿವನೊಮ್ಮೆ ನೀವೂ ಅನುಭವಿಸಿ ಆನಂದಿಸಿ*
*ಸಿದ್ದು ಯಾಪಲಪರವಿ*
No comments:
Post a Comment