*ಪ್ರೀತಿ ಪರಮಾಪ್ತ ಆದರೆ ಭಕ್ತಿ ಪರಮಾತ್ಮ*
ಪ್ರೀತಿ ನದಿಯಂತೆ ಕೆಳಮುಖವಾಗಿ ಶಾಂತವಾಗಿ ಹರಿದು ಸಮುದ್ರ ಸೇರಿ ಮುಕ್ತಿ ಹೊಂದಿ ಲೀನವಾಗುತ್ತದೆ.
ಎಷ್ಟೇ ಕಷ್ಟ,ಅಡೆ ತಡೆ ಬಂದರೂ ಹರಿಯುವುದು ಮಾತ್ರ ನಿಲ್ಲುವುದಿಲ್ಲ.
ಕಲ್ಲು-ಮುಳ್ಳು,ಕಾಡು-ಬೆಟ್ಟ,ಮನುಷ್ಯ-ಪ್ರಾಣಿಗಳ ಸ್ಪರ್ಷಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುತ್ತ ಸಾಗಿಯೇ ಸಾಗುತ್ತದೆ. ಪ್ರೀತಿಯಿಂದ ಹರಿಯುವುದು ಮಾತ್ರ ನಿಲ್ಲುವುದಿಲ್ಲ.
ತನ್ನ ಮೂಲ ನೆಲೆಬಿಟ್ಟು, ದೂರ ಬಹುದೂರ ಹರಿಯುತ್ತಲೇ ಸಹನೆ ರೂಪಿಸಿಕೊಳ್ಳುತ್ತದೆ.
ಪ್ರೀತಿಯೂ ಹಾಗೇಯೇ ಎಲ್ಲ ಸಂಕಷ್ಟ ಎದುರಿಸಿ ಸುಖದ ಹಾದಿ ಹಿಡಿಯುತ್ತದೆ.
ನಿರ್ಮಲ ಪ್ರೀತಿಗೂ ನದಿಗಿರುವ ಸಹಿಸುವುಕೆ ಅನಿವಾರ್ಯ. ಏಕೆಂದರೆ ಅದೂ ದಡ ಸೇರಲೇಬೇಕು. ಹಾಗೆ ಸೇರುತ್ತದೆ ಕೂಡಾ!
ಪ್ರೀತಿಗೆ ಅನೇಕ ಬಗೆಯ ತಡೆಗಳು,ವಿಘ್ನಗಳು ಹಾಗಂತ ಪ್ರೀತಿಸುವುದನ್ನು ಬಿಡಲಾಗದು, ಹರಿಯುವ ನದಿಯಂತೆ.
***
ಭಕ್ತಿಯೂ ನದಿಯಂತೆ ಆದರೆ ಅದು ಮೇಲ್ಮುಖವಾಗಿ ಹರಿದು ಸಮುದ್ರದಿಂದ ಮೂಲ ಸ್ಥಾನ ಸೇರುತ್ತದೆ. ಅದೇ ಪ್ರೀತಿಗೂ ಭಕ್ತಿಗೂ ಇರುವ ಬಹುದೊಡ್ಡ ಅಂತರ. ಉದ್ದೇಶ ಒಂದೇ. ರೀತಿ ಬೇರೆ,ಬೇರೆ.
*ಪ್ರೀತಿ ನದಿಯಂತೆ ಕೆಳಮುಖವಾಗಿ ಹರಿದು ಸಮುದ್ರ ಸೇರಿದರೆ,ಭಕ್ತಿ ಮೇಲ್ಮುಖವಾಗಿ ಹರಿದು ಮೂಲ ಸ್ಥಾನ ಅಂದರೆ ದೇವರ ಸನ್ನಿಧಿ ಸೇರುತ್ತದೆ*
ಮನುಷ್ಯನೂ ಅಷ್ಟೇ ತನ್ನ ಒಳ್ಳೆಯತನದಿಂದ ಪ್ರೀತಿಸುತ್ತಾನೆ.ಪ್ರೀತಿಸುವ ಹಾಗೂ ಪ್ರೀತಿಸುವ ವ್ಯಕ್ತಿಗಳಿಗೆ ಪರಮಾಪ್ತನಾಗುತ್ತಾನೆ.
ನಿಷ್ಕಾಮ ಪ್ರೀತಿಯೂ ಭಕ್ತಿಯ ಮೂಲವೇ.ಆದರೆ ಭಕ್ತಿ ಮಾರ್ಗ ನೀಡುವ ಧನ್ಯತೆಗೆ ಮುಪ್ಪೇ ಇಲ್ಲ.
ಪ್ರೀತಿ ಕೆಲವೊಮ್ಮೆ ದೇಹ ಅವಲಂಬಿತವಾದರೆ ಭಕ್ತಿ ಆತ್ಮಾವಲಂಬಿತ.
ಎರಡಕ್ಕೂ ಮೈಮನಗಳ ನಿಷ್ಟೆ ಹಾಗೂ ಸದೃಢತೆ ಅಗತ್ಯ.
ನಿಸ್ವಾರ್ಥದಿಂದ ಪ್ರೀತಿಸಲಾಗದ ಮನಸು, ಶ್ರದ್ಧೆಯಿಂದ ಪೂಜಿಸಲೂ ಆಗದು.
ನಿಸ್ವಾರ್ಥ ಎರಡರಲ್ಲೂ ಬೇಕು ಹರಿಯುವ ಜೀವ ಜಲದಂತೆ.
ಪ್ರೀತಿಸಿ ವ್ಯಕ್ತಿಗಳ ಒಲವು ಅನುಭವಿಸಿದರೆ, ಭಕ್ತಿಯಿಂದ ಭಗವಂತನ ಸಾನಿಧ್ಯದ ಧನ್ಯತೆ ಅನುಭಾವಿಸುತ್ತೇವೆ.
ಪ್ರೀತಿಮಾರ್ಗದಿಂದ ಭಕ್ತಿಮಾರ್ಗದೆಡೆಗೆ ಸಾಗೋಣ.
No comments:
Post a Comment