ಬದುಕ ಪಾಠ-ಪಾಕ ಶಾಲೆ
ಬದುಕ ಶಾಲೆಯಲಿ ಪಾಠ
ಕಲಿಸಲು ಅಸಂಖ್ಯ ಗುರುಗಳು
ಕಲಿಯಲು ಸಾವಿರಾರು ವಿಷಯಗಳು
ಬದುಕ ಪಾಕ ಶಾಲೆಯಲಿ ಬಗೆ ಬಗೆಯ
ಬಗೆ ಬಗೆಯ ನೂರೆಂಟು ಪಾಕಗಳು
ಸವಿಯಬೇಕು ಹಿತ-ಮಿತ
ಬರೆಯದೇ ಓದದೇ ಕಲಿಯುವ ನೂರು
ವಿಧಾನಗಳು
ಯಾಕೆಂದರೆ ಇದು ಬದುಕೆಂಬ ಮಹಾಶಾಲೆ
ಗುರಿಯಿಲ್ಲದ ಪಯಣದಲಿ ಹಿಂದೆ ಗುರುವಿಲ್ಲ
ಮುಂದೆ ಎಲ್ಲವೂ ಶೂನ್ಯ ಆದರೂ ನಿಲ್ಲದ ಪಯಣ
ಸದ್ದಿಲ್ಲದೆ ಬಂದವರು ದೊಡ್ಡ ಸುದ್ದಿ ಮಾಡಿ ತಮಗೆ
ಬೇಕಾದಂತೆ ಆಟ ಆಡಿ ಮರದ ತೊಗಟೆಗೆ ಮೈ ತಿಕ್ಕಿ
ತುರಿಕೆ ತೀರಿಸಿಕೊಂಡಂತೆ ನಡೆದು ಬಿಡುತ್ತಾರೆ
ಬಿಡುತ್ತಾರೆ ನಮ್ಮನು ಅರ್ಧ ದಾರಿಯಲಿ
ಉಳಿದ ದಾರಿಯ ಕ್ರಮಿಸುವ ಹೊಣೆ ಹೆಗಲಿಗೆ ಹೊರಿಸಿ
ನಿಲ್ಲಬಾರದು ನಿಲ್ಲಲಾಗದು
ಹೋಗುತ್ತಲಿರಲೇಬೇಕು
ನಿಂತರೆ ಮಲಿತು
ಮೈಲಿಗೆ ಕೊಳೆತ ನಾತ
ಅವರಿವರನು ಶಂಕಿಸಿ ಶಪಿಸಿ ದೂರಿ ದೂಡುವುದು
ಬೇಡ ಎಲ್ಲರೂ ಪಾತ್ರಧಾರಿಗಳು ದೇವನಾಡಿಸುವ
ಬಣ್ಣವಿರದಾಟದಲಿ
ನವರಸಗಳ ರಸಗವಳವ ಮೀಯಬೇಕು ಬದುಕಿನ
ಹದವರಿತು
ಮನದ ಬಾಗಿಲು ತಟ್ಟುತ್ತಾರೆ ನೂರೆಂಟು ಜನ ತಮ್ಮ
ಅನೂಕೂಲಕ್ಕಾಗಿ
ತೆಗೆದು ತೋರುವ ಮುನ್ನ ಇರಲಿ ಮನದಂಕಿತದ
ಲಗಾಮು ಓಡಿಸುವ ಮುನ್ನ
ಎಲ್ಲಿಯೇ ಹುಟ್ಟಿ ಎಲ್ಲಿಗೋ ಹರಿಯುವ ಜೀವನದಿ
ಅನುಭವಿಸುವ ಅಂಕು ಡೊಂಕುಗಳ ಅನುಭವಿಸದೇ
ಸೇರಲಾದೀತೇ ಮುಕ್ತಿ ಸರೋವರ
ಹೀಗೆ ಹರಿಯುತ್ತ ಹರಿಯುತ್ತ ತಿರುವುಗಳ ಎದುರಿಸುತ
ಕಲಿತ ಪಾಠಗಳ ಮೆಲುಕುತ ಮೆಲುಕುತ್ತ ಬಂದ
ಕುತ್ತುಗಳ ಎದುರಿಸಿ ಪಾರಾಗುತ್ತ ಒಮ್ಮೆ ದಡ
ಸೇರೋಣ , ಒಮ್ಮೆ ದಡ ಸೇರಿ ಬಿಡೋಣ.
---ಸಿದ್ದು ಯಾಪಲಪರವಿ
No comments:
Post a Comment