ಇಷ್ಟೇ ಅಲ್ಲ
ಬದುಕು ಎಂದರೆ ಇಷ್ಟೇ ಅಲ್ಲ
ಹೊಟ್ಟೆ ತುಂಬಾ ತಿಂದು
ಕಣ್ಣು ತುಂಬಾ ಮಲಗಿ
ಕಾಮನೆಗಳ ತಣಿಸಲು ಒಂದಿಷ್ಟು ಮುಲುಗಿ
ಬದುಕಿನ ಬವಣೆಗಳಲಿ ನಲುಗುವದಲ್ಲ
ಇನ್ನೂ ಏನೇನೋ ಇದೆ
ಓಡುವ ವಾಹನದ ಹಿಂದೆ ಜೋರಾಗಿ
ಬೆಂಬತ್ತಿ ಅಸಹಾಕತೆಯಿಂದ
ಏದುಸಿರು ಬಿಡುವ ಹಡಬೆ
'ನಾಯಿ ಪಾಡು ' ಅಲ್ಲ
ಕಂಗಳ ನೋಟಕೆ ಮಾತಿನ ಮಾಟಕೆ
ಮರುಳಾಗಿ ಜೊಲ್ಲು ಸುರಿಸಿ ಕಾಲಹರಣ
ಮಾಡುವುದೂ ಅಲ್ಲ
ಹಾಗೆ ಮಾಡಿದ್ದರೆ
ಗೌತಮ ಬುದ್ಧನಾಗುತ್ತಿರಲಿಲ್ಲ
ಅಲ್ಲಮ ಪ್ರಭುವಾಗುತ್ತಿರಲಿಲ್ಲ
ಬಸವಣ್ಣ ಅಣ್ಣನಾಗುತ್ತಿರಲಿಲ್ಲ
ಅಕ್ಕ ಮಹಾದೇವಿಯಾಗುತ್ತಿರಲಿಲ್ಲ
ಗಾಂಧಿ ಮಹಾತ್ಮನಾಗುತ್ತಿರಲಿಲ್ಲ
ಸಾವಿರ ವರುಷಗಳು ಉರುಳಿದರೂ
ಸಾವಿರದೆ ಬದುಕುತ್ತಿರಲಿಲ್ಲ
ನಮ್ಮ ಹಾಗೆ ಇದ್ದು ಸಾಯುತ್ತಿರಲಿಲ್ಲ
ನಿತ್ಯವೂ ಉದಯಿಸುವ ರವಿ
ನಗುವ ಚಂದಿರ ಹೊಳೆಯುವ
ಚುಕ್ಕಿಗಳಿಗೆ ದಣಿವೂ ಇಲ್ಲ
ಸಾವು ನೋವುಗಳ ಹಂಗಿಲ್ಲ
ಧ್ಯಾನಸ್ಥ ಸ್ಥಿತಿಯಲಿ ಒಳಗಿಳಿದಾಗ
ಕಾಡುವ ಎಚ್ಚರಿಸಿ ಕೆನ್ನೆಗೆ ಬಾರಿಸುವ
ಮಹನೀಯರಿಗೆ
ನಮೊ ನಮಃ
---ಸಿದ್ದು ಯಾಪಲಪರವಿ
No comments:
Post a Comment