ಪೂರ್ಣ ಮಿಲನ
ನಗುತಿರುವ 'ಪೂರ್ಣ 'ಚಂದಿರ
ಮೋಸ ಮಾಡಲಾರ ನಗುವಲಡಗಿರುವ
ಆಳದ ಮುಗ್ಧತೆಯ ಸಿರಿಯ ಕದಿಯಲಾಗದು
ಉಕ್ಕಿ ಹರಿಯುವ ಅಲೆಗಳ ದಕ್ಕಿಸಿಕೊಳುವ ತವಕ
ಬಿದಿಗೆ ಚಂದಿರೆಗೆ
ಮೇಲಿರುವ ಆಗಸಕೆ ಧರೆಗಿಳಿದು
ಭುವಿಯ ಸೇರುವಾಸೆ
ಭುವಿಗೂ ಬಾನೆತ್ತರಕೆ ಹಾರುವಾಸೆ
ಮಿಲನ ಸುಖಕೆ ತುಡಿಯುವ ಜೀವಗಳ
ಹಿಡಿದು ತಡೆಯುವವರು ಯಾರಿಹರು
ಈ ಜಗದಲಿ
ಭಾನು-ಭೂಮಿ
ಚಂದ್ರ-ಕಡಲಲೆಗಳ ಮಿಲನಮಹೋತ್ಸವಕೆ
ಮೂಕಸಾಕ್ಷಿ ನೀನೇ ದೇವಾ
ದೇಹಮೀರಿದ ಆತ್ಮಗಳ ಸಚ್ಛಿದಾನಂದವ
ಸವಿಯುವ ಎನ್ನಳಲ ಕೇಳು ದೊರೆಯೇ
ನೀನೊಲಿಯದೆ ಸವಿಯಲಾರೆ ಕಬ್ಬಲಡಗಿರುವ
ಸವಿಯ , ಹೂವಲವಿತಿರುವ ಮಧುವ.
ಭಾವ-ಜೀವಗಳ ತಳಮಳಕೆ ತೋರು
ಗುರುವೆ ಹೊಸದೊಂದು ಹೊಳೆವ ಬೆಳಕ.
---ಸಿದ್ದು ಯಾಪಲಪರವಿ
No comments:
Post a Comment