Monday, February 27, 2017

ಮುಂದೆ ಸಾಗುವೆ

ಮುಂದೆ ಸಾಗುವೆ

ಗಮ್ಯದ ಕಡೆ ಗಮನವಿಟ್ಟು ನಿರಂತರ
ದುಡಿಯುವ ಮೈಮನಗಳ ಓಟಕ್ಕೆ
ಬೇಕು ಕೊಂಚ ವಿಶ್ರಾಂತಿ
ಆದರೆ ವಿರಾಮವಲ್ಲ

ವಿಶ್ರಾಂತಿ ಬಯಸಿದ ಮನಕೆ
ಜೀವಸೆಲೆ ತುಂಬುವ
ಸ್ಪೂರ್ತಿಯ ಚಿಲುಮೆಯಾಗಿ
ಎನ್ನ ಮುನ್ನಡೆಸಲಿ ಎಂಬ ಬಯಕೆ
ಅಪರಾಧವಲ್ಲ

ಎನ್ನ ಮನದ ಬಯಕೆ
ಮುಟ್ಠಾಳ ದೌರ್ಬಲ್ಯವೆಂದು
ನಿನಗನಿಸಿ ನನ್ನ ಭಾವನೆಗಳೊಂದಿಗೆ
ಚಲ್ಲಾಟವಾಡಿದರೆ ನಾ ಸಹಿಸಬಹುದು
ಆದರೆ ಸಮಯ ಸಹಿಸುವುದಿಲ್ಲ

ಧ್ಯಾನಸ್ಥ ಮನಸಿಗೆ ಅದರೆ ಆದ ತಾಕತ್ತು
ಉಕ್ಕಿ ಹರಿಯುತಿರುವಾಗ ತಡೆಯುವ
ಗಮ್ಮತ್ತು ಹೇಗೆ ಸಾಧ್ಯ ?

ಪವಿತ್ರ ಭಾವನೆಗಳು  ಪ್ರೀತಿ-ಪ್ರೇಮ-ಪ್ರಣಯ
ಸಂತೆಯಲಿ ಹರಾಜಿಗಿಟ್ಟ ಹಳೆ ಪಾತ್ರೆಯಲ್ಲ
ಗಿಲೀಟು ಮಾಡಿದ ನಕಲಿ ಆಭರಣಗಳಲ್ಲ

ಭಾವನೆಗಳೊಂದಿಗೆ ಒಂದಿಷ್ಟು ಆಟ
ಆಡಿ ಮೋಜು ಮಾಡಿ ಮಜಾ ಉಡಾಯಿಸಿ
ಧೂಳೆಬ್ಬಿಸಿ ಕಣ್ಣು ಮಂಕಾಗಿಸಬಹುದು

ನಂಬಿದ ಮೌಲ್ಯಗಳು ಕಾಯುವ ಗುರು
ಕಾಡುವ ಅಗಮ್ಯ ಅಪ್ರತಿಮ ಗಮ್ಯಗಳು
ಮುನ್ನಡೆಸುವದನು ತಡೆಯುವುದು
ನನ್ನಿಂದಲೇ ಅಸಾಧ್ಯ

ಬರೆಯುವ ಲೇಖನಿ ಕಿತ್ತಿಕೊಳಬಹುದು
ನುಡಿಯುವ ನಾಲಿಗೆ ಕತ್ತರಿಸಬಹುದು
ಉಸಿರುಗಟ್ಟಿ ಸಾಯಿಸಬಹುದು

ಮೋಡದಂತೆ ನಿತಾಂತವಾಗಿ
ಚಲಿಸುವ ಭಾವನೆಗಳ ನಿತ್ಯ
ನದಿಯಂತೆ ನಿಧಾನವಾಗಿ
ಹರಿಯುವ ವಿಚಾರಗಳ
ಯಾರೂ ತಡೆಯಲಾರರು

ಮುಂದೆ ಗುರಿಯಿದ್ದು ಹಿಂದೆ ಗುರು
ಇರುವಾಗ ನಿನ್ನ ಆಟದ ಮಾಟ
ಇನ್ಯಾವ ಲೆಕ್ಕ

ಬೈಯ್ಯಲಾರೆ ಶಪಿಸಲಾರೆ ದೂರಿ
ದೂರಮಾಡಲಾರೆ ಗೊಣಗಲಾರೆ
ಹಳಿಯಲಾರೆ ಅರಚುತ ಕಿರುಚುತ
ಕರುಬುತ ಕುದಿಯಲಾರೆ

ಒಂದಿಷ್ಟು ಅತ್ತು
ನನ್ನ ಆಸೆಗಾಗಿ ವ್ಯಥೆ ಪಟ್ಟು
ಹರಿವ ಕಣ್ಣ ನೀರು ಬಿದ್ದ ಧೂಳು
ಕಣಗಳ ದೂರ ಮಾಡಿದಕೆ ನಸು ನಕ್ಕು
ಸುಮ್ಮನಾಗಿ ಮುಂದೆ ಸಾಗುವೆ

ಒಳ್ಳೆಯದಾಗಲಿ ನನಗೆ ಪಾಠ ಕಲಿಸಿದ
ನಿನಗೆ ಎಂದು ಹಾಡುತ ಮುಂದೆ ಸಾಗುವೆ.
---ಸಿದ್ದು ಯಾಪಲಪರವಿ

No comments:

Post a Comment