Monday, February 20, 2017

ಮನದಾಟ

ಮನದಾಟ

ಈ ಜಗದಲಿ ಮಿಲನವೆಂಬುದು
ಬರೀ ದೇಹದಾಟವಲ್ಲ
ಮನಸು ಮನಸು ಕೂಡಿದರೆ
ಸಾಕು ಕೂಡುವಾಟ ಮುಗಿಯುವುದಿಲ್ಲಿ 

ಚರಿತ್ರೆಯ ಬೆಂಬತ್ತಿ ಹೋದ
ಚಾರಿತ್ರ್ಯ ಬೀಳುವುದು
ಅಲ್ಲಿ ಇಲ್ಲಿ ಎಲ್ಲಿ ಮತ್ತೆಲ್ಲಿ

ಬೆನ್ನು ಬಾಗಿ ಗೂನು ಬಿದ್ದು
ಸುಕ್ಕು ಗಟ್ಟಿ ಮುದಿಯಾಗಿ
ಕೊಳೆತು ಹೆಣವಾಗಿ ನಾರುವ
ದೇಹಕಿಲ್ಲ ಮೂರು
ಕಾಸಿನ ಕಿಮ್ಮತ್ತು

ಬದುಕಿ ಬಾಳುವ
ಸವಿ ಅಡಗಿರುವುದು
ಮನದ ಮೂಲೆಯಲ್ಲಿ

ಮನಸ ಹಾರಲು ಬಿಟ್ಟು
ಕನಸಲಿ ಕೆಟ್ಟರೂ ಸಾಕು
ಮೈಗೆ ಚಾರಿತ್ರ್ಯ ಇನ್ನೆಲ್ಲಿ

ಚಾರಿತ್ರ್ಯ ಚರಿತ್ರೆಯ ಒಳಗುಟ್ಟು
ಬಲ್ಲ ಕೇವಲ ಮನದ ಕಳ್ಳ
ಮನಸ ಸಾಕ್ಷಿ ಸಾಕು
ಬದುಕ ಬವಣೆ ಎಲ್ಲ

ಕಳ್ಳರು ನಾವು ಬಲುಗಳ್ಳರು
ಹುಡುಕುತೇವೆ ಅವರಿವರ
ದೇಹದಾಟದ ಮಾಟ

ಕಳೆದುಕೊಂಡ ಕಳ್ಳ
ಮಳ್ಳರಾಗಿ ಮರೆಯಾಗುತೇವ
ಒಂದು ದಿವಸ.

---ಸಿದ್ದು ಯಾಪಲಪರವಿ

No comments:

Post a Comment