Friday, July 14, 2017

ಕನ್ನಡಿ ಹೇಳಿದ ಕಥೆ

ಮುಂಜಾನೆ ಕನ್ನಡಿ ಹೇಳುವ ಕಥೆ

ಕೆದರಿದ ಕೂದಲು , ಕಣ್ಣ ಸುತ್ತಲೂ
ಮುತ್ತಿಕೊಂಡಿರುವ ಕಪ್ಪು
ಬಿಳಿ ಗಡ್ಡದ ಇಣುಕು ನೋಟ
ಒಂದಿಂಚು ಊದಿಕೊಂಡ ಹೊಟ್ಟೆ
ಸೋತಂತೆ ನಿಸ್ತೇಜಗೊಂಡ ತೊಡೆ
ಆಯುಷ್ಯ ಲೆಕ್ಕಾಚಾರದ ಆತ್ಮಾವಲೋಕನದ
ಸತ್ಯ ಹೇಳುವ ನಿತ್ಯದ ಸಂಗಾತಿ

ಮತ್ತೆ ನಿಧಾನ ಒಂದೊಂದೆ ಅಂಗಾಂಗಗಳ
ತಿದ್ದಿ ತೀಡಿ ಮೆರುಗುಗೊಳಿಸಿ ಹೊರಬೀಳಲು
ಸಜ್ಜಾಗಿಸುವ ಸೆಳೆತದ ಹೊಳಪು

ಅಡಿಯಿಂದ ಮುಡಿಯವರೆಗೆ ಬೆತ್ತಲಾಗಿ
ಸಿಂಗಾರಗೊಂಡು ಮತ್ತೆ ಹತ್ತು-ಹಲವು
ಉಡುಗೆ-ತೊಡುಗೆಗಳ ಒಪ್ಪಾಗಿಸಲು
ಸಾಥಿಯಾಗುವ ಮನ ಮೋಹಕ ಸರದಾರ

ಎಲ್ಲರನು ಮತ್ತೆ ಮತ್ತೆ ತನ್ನತ್ತ
ಸೆಳೆದು ಒಮ್ಮೆ ದಿಟ್ಟಿಸಿ ನಸು
ನಕ್ಕು ಬೀಳ್ಕೊಡುವ ಹಸನ್ಮುಖಿ

ನೀನಿರದೆ ಬೆಳಗಿಲ್ಲ ಬೆಳಕಿಲ್ಲ ಹೊಳಪಿಲ್ಲ
ಬೆಳಗು ಹರಿಯುವದಿಲ್ಲ ಜೀವಪಯಣ
ಸಾಗುವುದೇ ಇಲ್ಲ

ನಕ್ಕಾಗ ನಗುವ ಅತ್ತಾಗ ಅಳುವ ಸದಾ
ಇರುವ ಸತ್ಯ ಅರಹುವ ಜೀವದ ಗೆಳೆಯ.

---ಸಿದ್ದು ಯಾಪಲಪರವಿ

No comments:

Post a Comment