Sunday, July 30, 2017

ಹೂಮನೆ-ನಾನು-ಭಾವುಕತೆ

ಹೂಮನೆ-ನಾನು-ಭಾವುಕತೆ

ಬಯಲುಸಿಮೆಯ ಅಮಾಯಕ , ಅಸೂಕ್ಷ್ಮ ಪೆದ್ದು ಹುಡುಗ ಬಾಗಿಲು ತಟ್ಟಿದ್ದು ಮಹಾ ಮೇಧಾವಿಗಳ ಮನೆ ಬಾಗಿಲು  ಎಂದು ಗೊತ್ತಿಲ್ಲ.
ತುಂಬಾ ಕಷ್ಟಪಟ್ಟು ಹತ್ತನೇ ಕ್ಲಾಸ್ ಪಾಸಾಗಿ ಧಾರವಾಡ ಸೇರುವುದು ಎಂಬತ್ತರ ದಶಕದಲ್ಲಿ ಸಣ್ಣ ಸಂಗತಿಯಲ್ಲ.
ಹೊರಗೆ ಜಿಟಿ , ಜಿಟಿ ಮಳೆ ಸಂಜೆಗತ್ತಲು. ವಿದ್ಯಾಗಿರಿಯ ಶ್ರೀದೇವಿ ನಗರದ ಒಂಟಿ ಮನೆ ' ಹೂಮನೆ ' ಬಾಗಿಲು ಬಡಿದೆ. ಕೆಂಪು ದಿರುಸಿನ ಸಂತರು ಬಾಗಿಲು ತೆರೆದು ' ಬರ್ರಿ ' ಎಂದು  ಹಿರಿಯರೊಬ್ಬರು ಸಣ್ಣ ಹುಡುಗನಿಗೆ ಬಹುವಚನದಲಿ ಕರೆದದ್ದು ,  ಊ ಹೂಂ ಖಂಡಿತ ಅನಿರೀಕ್ಷಿತ !

ಮುದುಡಿಕೊಂಡು ಬಂದ ಕೆಲಸ ಹೇಳಿದೆ. ಸಕಾರಾತ್ಮಕವಾಗಿ ಸ್ಪಂದಿಸಿ ಅಲ್ಲೇ ಉಳಿಯಲು ಹೇಳಿದಾಗ ಮೌನವಾಗಿ ತಲೆಯಾಡಿಸಿದೆ.

ಮರುದಿನ ಧಾರವಾಡದ ಅತ್ಯಂತ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಪ್ರವೇಶ. ಮುಂದಿನದು ಈಗ ಇತಿಹಾಸ.

ನಾನು ಹೇಳುವ ಘಟನೆಗೆ ಈಗ 36 ವರ್ಷ.
ಆ ಅಮಾಯಕ ನಾನೇ , ಆ ಮೇಧಾವಿಗಳೇ ಖ್ಯಾತ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು.
ನಂತರ ಪ್ರತಿ ಹಂತದಲ್ಲಿ ಹೂಮನೆ ನನ್ನ ಪಾಲಿನ ಸಾಂಸ್ಕೃತಿಕ ಗರಡಿ ಮನೆಯಾಯಿತು.

ಹಂತ ಹಂತವಾಗಿ ಪ್ರತಿದಿನ ಅತ್ಯಂತ ಸಹನೆಯಿಂದ ನನ್ನ ಅಮಾಯಕ ಅಜ್ಞಾನ ಸಹಿಸಿಕೊಂಡು ನನ್ನನ್ನು ತಿದ್ದಿ ಬೆಳೆಸಿದರು.

ಹೇಮಾ ಅಂಟಿಯವರ ಬೌದ್ಧಿಕ ರಭಸಕೆ ಹೆದರಿ ಮುದ್ದೆಯಾದಾಗ ಸರ್ ನನ್ನನ್ನು ಸಮಾಧಾನಿಸಿ ಧೈರ್ಯ ತುಂಬುತ್ತಿದ್ದರು .

ಅವರ ಮೇಧಾವಿತನದ ಮುಂದೆ ಕುಬ್ಜನಾಗಿ ಕುಗ್ಗುತ್ತಲೇ ವ್ಯಕ್ತಿತ್ವ ರೂಪಿಸಿಕೊಂಡೇ  ತುಂಬಾ ಪ್ರಯಾಸದಿಂದ.
ಶ್ರೇಷ್ಠ , ಕ್ರಿಯಾಶೀಲ ಬರಹಗಾರರು ಇಷ್ಟೊಂದು ಭಾವುಕರು , ಸೂಕ್ಷ್ಮ ಜೀವಿಗಳಾಗಿರುತ್ತಾರೆ ಎಂದು ಕನಸಿನಲಿಯೂ ಊಹಿಸಿರಲಿಲ್ಲ.

ಪಟ್ಟಣಶೆಟ್ಟರು ವೈಯಕ್ತಿಕವಾಗಿ ವಿಪರೀತ ಭಾವುಕರು , ಅವರಷ್ಟು ಭಾವ ಜೀವಿಗಳನ್ನು ಇಲ್ಲಿಯವರೆಗೆ ನಾನು ನೋಡಲೇ ಇಲ್ಲ.

ಪ್ರತಿಯೊಂದು ಸಣ್ಣ ಸಂಗತಿಗಳನ್ನು ತುಂಬಾ keen ಆಗಿ ಅವಲೋಕಿಸುತ್ತಿದ್ದರು.
ಅವ್ವ ಅವರ ಭಾವನಾ ಲೋಕದ ದೇವರು.
ಮಗಳು ಹೂ , ಅವರ ಪ್ರೀತಿಯ ನಾಯಿ ಅಲ್ಲಲ್ಲ ಬೆಳ್ಳಿ , ಬಳಸುವ ಕಾಗದ , ಪೆನ್ನು ,  ಕರವಸ್ತ್ರ ಯಾವುದರಲ್ಲೂ ಹೆಚ್ಚು ಕಮ್ಮಿ ಆಗಬಾರದು.
ಅವರ ಪ್ರತಿ ಚಲನವಲನಗಳು , ಆಲೋಚನಾ ಲಹರಿ ಎಲ್ಲವನ್ನೂ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತ ನಾನೂ ಬದಲಾಗಿ ವಿಪರೀತ ಭಾವುಕನಾಗಿ ಸಾಹಿತ್ಯ , ಭಾಷೆಯ ಮಹತ್ವ ಅರಿತುಕೊಂಡೆ.

ಹೂಮನೆ ಅಂದರೆ ಭಾಷೆ-ಭಾವನೆಗಳದೇ ಕಾರುಬಾರು.
ತುಂಬಾ ಹೆಸರು ಮಾಡಿದ ಸಾಹಿತಿಗಳೇ ದಂಡೇ ಅಲ್ಲಿರುತ್ತಿತ್ತು. ಅವರ ಸೇವೆ ಮಾಡುತ್ತ ಸಾಹಿತ್ಯದ ಸೂಕ್ಷ್ಮತೆಗಳನ್ನು ಪರೋಕ್ಷವಾಗಿ ಕೇಳಿಸಿಕೊಂಡು ಅರ್ಥಮಾಡಿಕೊಂಡೆ. ಯಾವುದೇ ಸಂಗತಿಗಳನ್ನು ನೇರವಾಗಿ ಕೇಳುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ತುಂಬ ಬೆರಗಿನಿಂದ ಊಹಿಸುತ್ತಿದ್ದ ಶ್ರೇಷ್ಠ ಬರಹಗಾರರನ್ನು ಹತ್ತಿರದಿಂದ ನೋಡಿ ಮಾತನಾಡುವ ಅವಕಾಶ ಪಿಯುಸಿ ಹಂತದಲ್ಲಿ ನನಗೆ ಲಭಿಸಿದ್ದು ಹೂಮನೆಯ ಅಂಗಳದಲಿ.

ಎಂ.ಪಿ.ಪ್ರಕಾಶ , ನಜೀರ್ ಸಾಬ್ , ಗಿರೀಶ ಕಾರ್ನಾಡ ಹಾಗೂ ಬೆಂಗಳೂರಿನ ಅಸಂಖ್ಯರು ನನ್ನನ್ನು ಗುರುತಿಸಲಾರಂಭಿಸಿದ್ದು ಇಲ್ಲಿಂದಲೇ .

ಹೂಮನೆ ನನ್ನ ಪಾಲಿನ ವರವಾಯಿತು. ಸರ್ ವಿಷಯವಾಗಿ ನಾನೂ ಅಷ್ಟೇ ಎಚ್ಚರಿಕೆವಹಿಸುತ್ತಿದ್ದೆ. ಎಲ್ಲಿಯೂ ಲೋಪವಾಗದ ಹಾಗೆ ನಡೆದುಕೊಂಡೆ.
ಅವರು ಕಟು ವಿಮರ್ಶೆಗೆ ಹೆಸರುವಾಸಿ , ಕಾವ್ಯವನ್ನು ಸಾರ್ವತ್ರಿಕರಿಸುವ ಬಗೆಯನ್ನು ಅದ್ವೀತಿಯವಾಗಿ ವಿವರಿಸುತ್ತಿದ್ದರು. ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕರಿಸುವ ವಿಧಾನ ಅನನ್ಯ ಅವರ ಅನನ್ಯ ಪ್ರಕಾಶನದ ಹಾಗೆ !
ಭಾವನಾತ್ಮಕ ಸಂಗತಿಗಳನ್ನು ವಿವರಿಸುವಾಗ ಮಗುವಿನ ಹಾಗೆ ಅತ್ತು ನಮ್ಮನ್ನು ಗಾಭರಿಗೊಳಿಸುತ್ತಿದ್ದರು. ನಾಲ್ಕೈದು ವರ್ಷ ಅವರೊಂದಿಗೆ ಅನ್ಯೋನ್ನವಾಗಿ ಇದ್ದು ಪ್ರಾಣ ಕಳೆದುಕೊಂಡ ನಾಯಿಯ ಅಂತ್ಯಕ್ರಿಯೆಯನ್ನು ತಮ್ಮ ಕಂಪೌಂಡಿನಲ್ಲಿ ನೆರವೇರಿಸಿದ್ದರು. ಎಂದಿಗೂ ಯಾರನ್ನೂ ನೋಯಿಸದ ಮಾನವೀಯ ಅಂತಃಕರಣ ಅವರದು.

  ಅವರು ಪ್ರೀತಿಯಿಂದ ಸಾಕಿದ ಬೆಳ್ಳಿ ಕಳೆದು ಹೋದಾಗ ಮಗು ಕಳೆದುಕೊಂಡ ತಾಯಿಯ ಹಾಗೆ ಊರೆಲ್ಲ ಹುಡುಕಿ ಸಿಗದೇ ಹೋದಾಗ ದುಃಖಿಸಿ ಮಗುವಿನ ಹಾಗೆ ಅತ್ತಿದ್ದು , ಅನೇಕರ ಮುಂದೆ ಬೆಳ್ಳಿ ಕಳೆದ ಕಥೆ ವಿವರಿಸುತ್ತಲೇ ಇದ್ದರು.

ನವಿರು ಹಾಸ್ಯ , ವ್ಯಂಗ್ಯ , ವಿಡಂಬನೆಯ ಮೂಲಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅವರ ಶೈಲಿ...
ಒಂದೇ ಎರಡೇ ಹೂಮನೆಯ ಸುವಾಸನೆಯ ಸವಿಗಾನ.

ಇಂದು ಸಂಜೆ ತುಂಬಾ ದಿನಗಳ ನಂತರ ಹೂಮನೆಗೆ ಹೋದಾಗ ಮತ್ತೊಂದು ಸಣ್ಣ ಆಘಾತ.
ಹನ್ನೊಂದು ವರ್ಷ ಸರ್ ಅವರ ಸಂಗಾತಿಯಾಗಿದ್ದ ಬೆಳ್ಳಿ ತೀರಿಕೊಂಡು ಮೂರು ದಿನ .
ಅದೇ ಸೂತಕದ ಮಾನವೀಯ ಮಿಡಿತ-ತುಡಿತ.
ಎಪ್ಪತ್ತೆಂಟರ ಪ್ರಾಯದ ಸರ್ ಮಗುವನ್ನು ಕಳೆದುಕೊಂಡ ಅವ್ವನ ಹಾಗೆ ಬೇಸರಲಿದ್ದರು.
  ತಾಯಿಯ ಹಾಗೆ ಬೆಳ್ಳಿಯ ಗುಣಗಾನ. ಕಂಪೌಂಡಿನಲ್ಲಿ ಚಿರನಿದ್ರೆಗೆ ಜಾರಿದ ಬೆಳ್ಳಿಯನ್ನು ನೆನಪಿಸಿಕೊಂಡೆ.
ಹೂಮನೆ ಎಂದರೆ ಭಾಷೆ-ಭಾವನೆ-ಭಾವುಕತೆ.
ಭಾರದ ಮನಸಿನಿಂದ ಹೊರ ಬಂದು ಮನೆ ಸೇರಿ ಮೂರು ದಶಕಗಳ ಹಿಂದೆ ಜಾರಿ ಹೋದೆ ನಾನೂ ಮಗುವಾಗಿ ಬೆಚ್ಚಗೆ ಮಲಗಿದೆ.

---ಸಿದ್ದು ಯಾಪಲಪರವಿ

No comments:

Post a Comment