Saturday, July 22, 2017

ಬೇರುಗಳತ್ತ ಜಾರುವೆ ಮನಸು

ಮನಸು ಒಮ್ಮೊಮ್ಮೆ ಬೇರುಗಳತ್ತ ಜಾರಿಬಿಡುತ್ತೆ

ಬಾಲ್ಯ ಅನನ್ಯ , ಸುಂದರ ಹಾಗೂ ರಮ್ಯ. ಅದನ್ನು ಮೆಲುಕು ಹಾಕುವುದು ಇನ್ನೂ ಗಮ್ಯ. ಅಂತಹ ದಿವ್ಯ ಬಾಲ್ಯದ ಸಡಗರಗಳನ್ನು ಮೇಲಿಂದ ಮೇಲೆ ನೆನಪಿಸಿಕೊಂಡು ಸಂಭ್ರಮಿಸುತ್ತ ದುಃಖಿಸುತ್ತೇನೆ.

' ಸಿದ್ದು ಕಾಲ ' ಎಂಬ ಬ್ಲಾಗಿನ ಮೂಲಕ ಮುಕ್ತವಾಗಿ ಬರೆಯುವ ಧೈರ್ಯ ಮಾಡಿದೆ . ಅಲ್ಲಿನ ' ಆಟೋಗ್ರಾಫ್ ' ಅಂಕಣ ಅಸಂಖ್ಯ ಓದುಗರನ್ನು ಸೃಷ್ಟಿಸಿತು.
ರಸವತ್ತಾದ ಬರಹಕ್ಕೆ ಪ್ರೇರೇಪಿಸಿ ಭಾವುಕ ಜಗತ್ತಿಗೆ ಕರೆದೊಯ್ದು ಆಟೋಗ್ರಾಫ್ ಸಿನೆಮಾಕ್ಕೆ ಚಿರಋಣಿ.

ನಿನ್ನೆ ಅವ್ವನ ತವರು ಕುಷ್ಟಗಿಯಲ್ಲಿ ಮತ್ತದೇ ಬಾಲ್ಯ ತೀವ್ರವಾಗಿ ಆವರಿಸಿತು.
ಕುಷ್ಟಗಿ ಅಜ್ಜನ attachment , ಅವರೊಂದಿಗೆ ಓಡಾಟ. ವಕೀಲರಾಗಿದ್ದ ಅವರು ಒಮ್ಮೊಮ್ಮೆ ಕೋರ್ಟ್ ಕಲಾಪಗಳನ್ನು ತೋರಿಸುತ್ತಿದ್ದ ಸನ್ನಿವೇಶ ನೆನಪಾಯಿತು . ನಾನು ಕಾಲೇಜು ಕಟ್ಟೆ ಹತ್ತುವುದರೊಳಗೆ ಕಣ್ಮರೆಯಾದರು.

ಆ ಎಲ್ಲ ನೆನಪುಗಳು ನಿನ್ನೆ ನನ್ನನ್ನು ಮತ್ತೆ ಕಾಡಿದವು. ನಾನು ಹುಟ್ಟಿದ ಮನೆ ನೋಡಲು ಹೋದೆ ಆದರದು ತನ್ನ ಸ್ವರೂಪವನ್ನೇ ಕಳೆದುಕೊಂಡಿದ್ದರಿಂದ ಫೋಟೋ ತೆಗೆಯುವ ಮನಸಾಗಲಿಲ್ಲ.
ಮನೆತನದ ಹಿರಿಯ ಶತಾಯುಷಿ ಅಜ್ಜಿ ಸಿಕ್ಕರು .
ಬೇಗನೇ ನಮ್ಮನ್ನು ಅಗಲಿದ ನಮ್ಮ ಪಾಲಕರ ನೆನಪು ತೆಗೆದಾಗ ಇನ್ನಿಲ್ಲದ ಯಾತನೆ.

ವ್ಯಕ್ತಿಗಳು ನಮ್ಮೊಂದಿಗಿದ್ದಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಕೂಗಾಡಿ ಸಂಬಂಧಗಳನ್ನು ಜಟಿಲಗೊಳಿಸಿ ಅವರು ಹೋದ ಮೇಲೆ ವ್ಯಥೆ ಪಡುವ ಇತಿಹಾಸದ ಪುನರಾವರ್ತನೆ ನಿಲ್ಲುವುದು ಯಾವಾಗ ?

ಈಗ ಬೇಕೆಂದಾಗ ಅವರು ಜಗಳಾಡಲೂ ಸಿಗುವುದಿಲ್ಲ , ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಇಟ್ಟುಕೊಂಡೇ ಖುಷಿಯಿಂದ ಬದುಕುವ ಕಲೆ ಕರಗತ ಮಾಡಿಕೊಳ್ಳಬೇಕೆನಿಸಿತು.

                    '                      ***  
1980 ರವರೆಗೆ ಹೈಸ್ಕೂಲಿನಲ್ಲಿ ಕನ್ನಡವನ್ನು ತಮ್ಮದೇ ಆದ ಶೈಲಿಯಲ್ಲಿ ಪಾಠ ಮಾಡುತ್ತಿದ್ದ ಕಾಡಬಸಪ್ಪ ಸರ್ ನಮ್ಮ ಪಾಲಿನ role model. ವ್ಯಂಗ್ಯ , ನವಿರು ಹಾಸ್ಯ , ವಿವರಿಸುವಾಗ ಅಬ್ಬರವಿಲ್ಲದ ಏರಿಳಿತ ಎಲ್ಲವೂ ಅದ್ಭುತ. ನಾವು ಕೆಲವು ಜನ ಸ್ನೇಹಿತರು ಶಿಕ್ಷಕರಾಗಲು ಅವರೇ ಪ್ರೇರಣೆ.

ಅವರು ನಮ್ಮೂರಿಂದ transfer ಆಗಿ ಕುಷ್ಟಗಿಯಲ್ಲಿ ನೆಲೆಸಿದ್ದಾರೆ ಎಂದು ಗೊತ್ತಿತ್ತು ಆದರೆ ನಂತರ ಭೇಟಿ ಆಗಲು ಸಾಧ್ಯವಾಗಿರಲಿಲ್ಲ.
ನಿನ್ನೆ ನನ್ನ ಭಾಷಣದ ನಂತರ ವೇದಿಕೆ ಏರಿ ಅಭಿನಂದಿಸಿದಾಗ ತಬ್ಬಿಬ್ಬು . ತಕ್ಷಣ ಗುರುತು ಹಿಡಿಯದೇ ತಡವರಿಸಿದೆ.
ನಂತರ ನಿಧಾನ ಗುರುತಿಸಿ ಅವರಿದ್ದಲ್ಲಿಗೆ ಹೋದೆ. ಅಪರಿಚಿರಂತೆ ಬಹುವಚನದಲಿ ಮಾತನಾಡಿದರು. ' ನೀವು ಓಶೋನನ್ನು ಓದಿಕೊಡಿದ್ದೀರಾ ?' ಎಂಬ ಪ್ರಶ್ನೆಗೆ ಉತ್ತರಿಸಲು ವಿಚಾರಿಸದೆ.
ಯಾಕೆಂದರೆ ತಮ್ಮ ಬದುಕಿನ 37 ವರ್ಷಗಳ ವೃತ್ತಿಯಲ್ಲಿ ಸಾವಿರಾರು ವಿಧ್ಯಾರ್ಥಿಗಳನ್ನು ರೂಪಿಸಿದ ಶಿಲ್ಪಿ , ನನ್ನಂತಹ ಸಾಧಾರಣ ವಿಧ್ಯಾರ್ಥಿಗೆ ಯಾಕೆ ಈ ಪ್ರಶ್ನೆ  ಹಾಕಿರಬಹುದು ಎಂದು ಕೆಲ ಕ್ಷಣ ಯೋಚಿಸಿದೆ. 'ಅಷ್ಟಿಷ್ಟು ಓದಿದೇನೆ ಸರ್ ' ಎಂದೆ .
ತಮ್ಮ ಬಳಿ ಇದ್ದ ನೋಟ್ಸ್ ತೆಗೆದು ನಾನು ಮಾತನಾಡುವಾಗ ಬಳಸಿದ ಪ್ರಮುಖ ಸಂಗತಿಗಳನ್ನು ತೋರಿಸಿದರು.
ಎಪ್ಪತ್ತೊಂದರ ಪ್ರಾಯದಲ್ಲಿ ತಮಗಿರುವ ಶಿಸ್ತನ್ನು ನಿರೂಪಿಸಿದರು. ' ಏನಾದರೂ ತಪ್ಪಾಯ್ತಾ ಸರ್ ' ಎಂದೆ .

ಇಲ್ಲ you have grown , ತುಂಬಾ ಓದಿಕೊಡಿದ್ದೀರಾ good ' ಎಂದಾಗ ಸಮಾಧಾನ.

ತಕ್ಷಣ ಸೆಲ್ಫಿ  fb ಯಲ್ಲಿ ಮೂಡಿದ ಕೂಡಲೇ ಗತಕಾಲದ ಗೆಳೆಯರ ಪ್ರತಿಕ್ರಿಯೆ ಮತ್ತೆ ಬೆಸೆದ ಬಾಂಧವ್ಯ .

ಅನೇಕಾನೇಕ ವಿಷಯಗಳ ಮೇಲೆ ಪ್ರೀತಿಯಿಂದ ಮಾತನಾಡಿದರು.
ನನ್ನ ಪುಸ್ತಕಗಳನ್ನು ಕಳಿಸಲು ಹೇಳಿ ಮನೆಗೆ ತೆರಳಿದಾಗ ಮನಸು ಭಾರವಾಯಿತು.
ನನ್ನ ಶಿಕ್ಷಕ ವೃತ್ತಿಗೆ ಈಗ 28 ರ ಪ್ರಾಯ , ಸಾಹಿತ್ಯ ಸಾಂಗತ್ಯಕೆ 20 .
ಆದರೆ ನನ್ನ ವಿದ್ಯಾ ಗುರುಗಳ ಶಿಸ್ತನ್ನು ನೋಡಿದಾಗ ಕಲಿಯೋದು ತುಂಬಾ ಇದೆ ಅನಿಸಿತು.

ಮೂವತ್ತೆಂಟು ವರ್ಷಗಳ ಹಿಂದೆ ಕಲಿಸಿದ ಗುರುಗಳು ಇವತ್ತಿಗೂ ಉಳಿಸಿಕೊಂಡಿರುವ ಬದ್ಧತೆಗೆ ಮೌನವಾದೆ. ನಮ್ಮನ್ನು ಅಗಲಿ ಹೋದ ಪಾಲಕರು , ಕಳೆದು ಹೋದ ಸಂಬಂಧಗಳು , ರೂಪಾಂತರಗೊಂಡ ಕಟ್ಟಡಗಳು , ನಶಿಸಿಹೋಗುತ್ತಿರುವ ಶೈಕ್ಷಣಿಕ ಗುಣಮಟ್ಟ ಹಾಗೂ ಇತರ ಸಂಗತಿಗಳು ಮನೋಪಟಲದಿಂದ ಮುಖಪುಸ್ತಕದ ಮೇಲೆ ಸಾಗಿ ಈಗ ನಿಮ್ಮೆದುರು.

---ಸಿದ್ದು ಯಾಪಲಪರವಿ

No comments:

Post a Comment