Saturday, August 25, 2018

ಅಕ್ಷರಶಕ್ತಿ

*ಅಕ್ಷರ ಶಕ್ತಿ ಮತ್ತು ಜಾಲತಾಣಗಳು*

ಸ್ಟಾರ್ ಗಿರಿ ಯಾವ ರೂಪದಲ್ಲಾದರೂ ದಕ್ಕಬಹುದು ಆದರೆ ಸಹನೆಯಿಂದ ಕಾಯಬೇಕು.

ಮೂರು ದಶಕಗಳ ಅಕ್ಷರ ವ್ಯಾಮೋಹ ನನಗೆ ಅಷ್ಟೇನು ಖ್ಯಾತಿ ತಂದುಕೊಡಲಿಲ್ಲ ಎಂಬ ಸಣ್ಣ ಅಳುಕಿತ್ತು.

ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಓದುಗರಿಗೆ ತಲುಪಲು ನೂರು ದಾರಿಗಳು. ಹಾಗೆ ಬ್ಲಾಗ್ ಮೂಲಕ ಓದುಗರಿಗೆ ತಲುಪಿ ಈಗ ಎಲ್ಲಾ ದಕ್ಕುತ್ತಲಿದೆ.

ಸಾಹಿತ್ಯೇತರ ವಿದ್ಯಾರ್ಥಿಗಳು ಈಗ ಹೆಚ್ಚು ಬರೆಯಲಾರಂಭಿಸಿದ್ದಾರೆ. ಅದರಲ್ಲೂ ಇಂಜನಿಯರಿಂಗ್ ಹಿನ್ನೆಲೆ ಇರುವ ಹೊಸ ತಲೆಮಾರಿನ ಯುವಕರು ಕನ್ನಡದ ಅಸ್ಮಿತೆಯ ವ್ಯಾಮೋಹ ಬೆಳೆಸಿಕೊಂಡು ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿರುವುದು ಅಭಿನಂದನೀಯ.

ಹೊಸ ಬಗೆಯ ರೂಪಕಗಳು ಕವಿತೆ, ಕತೆಗಳಲಿ ಹೊರ ಹೊಮ್ಮುತಲಿವೆ.

ಹತ್ತಾರು ಹೊಸ ಬಗೆಯ ತಂಡ, ಹೊಸ ವಿನ್ಯಾಸದ ಅ್ಯಾಪ್ ಗಳು ಬರತೊಡಗಿ ಓದುಗರಿಗೆ ಬೇಗ ತಲುಪಿಸುವ ಕ್ಷಿಪ್ರತೆ.

ಈಗ ವೇಗವಾಗಿ ಬೆಳೆಯುತ್ತಿರುವ yourquote app ಹೆಚ್ಚು ಬರಹಗಾರರನ್ನು ಪ್ರೇರೇಪಿಸುತ್ತದೆ.

ಈ ತರಹದ ತಾಣಗಳು, ಇತ್ತೀಚಿನ ನನ್ನ ಶುಭೋದಯ ಕರ್ನಾಟಕದ ಸುದೀರ್ಘ ಸಂದರ್ಶನ, ಮತ್ತದರ YouTube reach ಯುವಕರ ಗಮನ ಸೆಳೆದಿದೆ.

ಅನೇಕ ಹೊಸಬರು ಪರಿಚಯವಾಗಿ ಅಷ್ಟೇ ಆತ್ಮೀಯರೂ ಅಗಿರುವುದು ಈ ಜಾಲತಾಣಗಳ ಮಹಿಮೆ.

ಹೀಗೆ ಪರಿಚಯವಾದ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಜ್ಯೋತಿ ಪಾಟೀಲ, ಅಭಿಶೇಕ್ ಅಲ್ಲಿನ Authorcraft ಪದಾಧಿಕಾರಿಗಳು. ಅವರಿಗೆ ನನ್ನ ಸಂದರ್ಶನ ಆಯೋಜಿಸಿ, ಬರೆಯುವ ಯುವಕರಿಗೆ ಮಾರ್ಗದರ್ಶನ ಸಿಗಲೆಂಬ ಉದ್ದೇಶದಿಂದ ಅಪರೂಪದ ವಿಡಿಯೋ ಶೂಟಿಂಗ್ ನೊಂದಿಗಿನ ಸಂದರ್ಶನ, ಮಾತುಕತೆ, ನನ್ನ ಅನುಭವ ಹೇಳುವ ಸಂದರ್ಭ ಒದಗಿಸಿದ್ದು ಇವೇ ತಾಣಗಳು.

ಹುಬ್ಬಳ್ಳಿ ಮೂಲದ ಜ್ಯೋತಿ, ಕಾರವಾರ ಮೂಲದ ಅಭಿಶೇಕ್ ಸಂಪರ್ಕಿಸಿ ಕಾರ್ಯಕ್ರಮ ನಡೆಸಿಯೇ ಬಿಟ್ಟರು.

ಇಂದಿನ ಹೊಸ ಟ್ರೆಂಡ್ ಕುರಿತು ಮಾಹಿತಿ ಒದಗಿಸಿ, ನನ್ನ ಸುದೀರ್ಘ YouTube ಸಂದರ್ಶನವನ್ನು ವಿಂಗಡಿಸಿ ಎಡಿಟ್ ಮಾಡಿದ ಆಸಕ್ತಿ ಈ‌ ಅಭಿಶೇಕ್ ಹಾಗೂ ಅವನ ತಂಡದ್ದು. ಎರಡು ದಿನ ಬಿಟ್ಟು ಬಿಡದೇ ನನ್ನೊಂದಿಗಿದ್ದು yourquote ಮೂಲಕ ಬರೆಯುವ ವಿಧಾನ ಹೇಳಿಕೊಟ್ಟರು.

‌ಎಷ್ಟಾದರೂ ಕಲಿಯುವುದು ಮುಗಿಯುವುದೇ ಇಲ್ಲ. ಪ್ರತಿನಿತ್ಯ ತಂತ್ರಜ್ಞಾನದ ಬೆಳವಣಿಗೆ. ಹೊಸ ಹೊಸ ಹೊಳಹು ಹಾದಿಗಳು.

*ಜ್ಯೋತಿಯ ಜೊತೆ ಮಾತುಕತೆ* ಪರಿಕಲ್ಪನೆ ಚಂದವಿತ್ತು. ಗೆಳೆಯರೆಲ್ಲ ಕೂಡಿಕೊಂಡು ಕ್ಯಾಮರಾ ಹಿಡಿದು ತುಂಬ ಪ್ರೊಫೆಶನಲ್ ಆಗಿ ಶೂಟ್ ಮಾಡಿದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಅಷ್ಟೇ ವಿಶೇಷ.

ಎರಡು ದಿನ ನನ್ನೊಂದಿಗೆ ಕಾಲ ಕಳೆದು ನೆನಪಿಡುವ, ವಿಡಿಯೋ ಮೂಲಕ ದಾಖಲಾಗುವ ಮಾತುಕತೆ ಅವಿಸ್ಮರಣೀಯ.

ಬದುಕಿನ ಪಯಣವೇ ಹೀಗೆ. ಹೊಸ ವಿನ್ಯಾಸ, ಹೊಸ ಆವಿಷ್ಕಾರ, ಹೊಸ ಜನ, ಹೊಸ ಅನುಭವಗಳ ದಕ್ಕಿಸಿಕೊಳ್ಳುತ್ತ ಮನಸಿಗೆ ಮುಪ್ಪು ತಂದುಕೊಳ್ಳಬಾರದು‌.

ಸಿಕ್ಕವರ ಬಾಚಿ ತಬ್ಬಿ, ದೂರ ದೂಡಿದವರ ಮರೆತು ಹೋಗುತಲಿರುವುದೇ ಜೀವನ.

ಜೀವನ ಎಂದೂ ಮುಗಿಯದ ಪಯಣ. ಆದರೊಮ್ಮೆ ರಪ್ ಅಂತ ನಮ್ಮನ್ನು ಮುಗಿಸಿಬಿಡುತ್ತದೆ. ನಾವು ಹಾಗೆ ಹೋಗುವ ಅರಿವು ಇಟ್ಟುಕೊಂಡೇ ಉಳಿಯುವುದ ಬಿಟ್ಟು ಹೋಗಬೇಕು…

ಅಕ್ಷರದ ಮಹಿಮೆ ಅನೇಕರನ್ನು ಇನ್ನೂ ಜೀವಂತವಾಗಿಟ್ಟಿದೆ.

 ಸಿದ್ದು ಯಾಪಲಪರವಿ

Friday, August 24, 2018

Hi! Check out YourQuote app, where I express myself through words, voice, and videos. Click here:
https://yq.app.link/FNNJNo6ADP

Thursday, August 23, 2018

ಪ್ರವಾಹ ಮತ್ತು ರಾಜಕಾರಣ

*ಅಮಾನವೀಯ ರಾಜಕಾರಣ ಮತ್ತು ‌ಪ್ರವಾಹ*

ಏನಾಗಿದೆ ನಮ್ಮ ರಾಜಕಾರಣಿಗಳಿಗೆ ? ನೋವಿನಲೂ ಕೀಳು ಮಾತುಗಳು. ‘ನೀವು ಓಟೇ ಹಾಕಿಲ್ಲ ಆದರೂ ನಾ ಹೆಲ್ಪ್ ಮಾಡ್ತೀನಿ’ ಅನ್ನೋ ಮಹಾ ಔದಾರ್ಯ!

ಇನ್ನೊಬ್ಬರು ಮಹಾರಾಜ ಶೈಲಿಯಲ್ಲಿ ಬಿಸ್ಕಿಟ್ ಒಗಿತಾರೆ.
‘ಈ ಸರಕಾರ ಕೆಲಸ ಮಾಡ್ತಿಲ್ಲ ಅದಕೆ ಪ್ರವಾಹ’ ಅಂತ ಇನ್ನೋರ್ವ ನಾಯಕರು  ಬಡಬಡಿಸ್ತಾರೆ.

ಕಾಡಿನ ವಿಷಯದಲ್ಲಿ ಪ್ರಾಣಿಗಳ ಹಾಗೆ ಭೂ ಕಬಳಿಸಿದ ಕಾರಣದಿಂದಾಗಿ ಪರಿಸರ ಹಾಳಾಗಿದೆ.
ಕಾಡು ಕಡಿದು ಮಣ್ಣು ತಿನ್ನುವುದರಲಿ ಇವರು ಪಕ್ಷಾತೀತರು.
ಕಾಡು ಕಡಿದು ರೆಸಾರ್ಟ್‌ ಕಟ್ಟಿ ಮೋಜು ಮಾಡುವವರು ಇವರೇ ಉಳ್ಳವರು. ಉಳ್ಳವರೆಂದರೇ ಇದೇ ಬಿಟ್ಟಿ, ಬೇನಾಮಿ ಬಂಡವಾಳಶಾಹಿಗಳು.

ಈಗ ಹಣವೆಂದರೆ ರಾಜಕಾರಣ, ರಾಜಕಾರಣವೆಂದರೆ ಹಣ. ಯಾರ ಹೆಣ ಬಿದ್ದರೂ ಅಷ್ಟೇ. ಬರೀ ರಾಜಕಾರಣ.
ಅಪಾರ ಆಸ್ತಿ ಮಾಡುವ ಅನಾರೋಗ್ಯಕರ ಪೈಪೋಟಿ.
ಒಬ್ಬರಿಗೂ ಮಾತನಾಡುವ ನೈತಿಕತೆ ಇಲ್ಲ ಆದರೂ ಬಾಯಿಗೆ ಬಂದಂತೆ ಮಾತನಾಡುವ ಭಂಡ ಧೈರ್ಯ.

ಕಾರಣ ಪ್ರಜ್ಞಾಹೀನ ಪ್ರಜೆಗಳ ಮೌನ. ಮತದಾರ ಏನನ್ನೂ ಕೇಳಲಾರ ಅವನೂ ಮಾರಿಕೊಂಡಿದ್ದಾನೆ. ಮಾರಿಕೊಂಡವನಿಗೆ ಮಾತೇ ಹೊರಡುವುದಿಲ್ಲ.

ಈಗ ಪ್ರಕೃತಿ ಮಾತೆ ಎಲ್ಲರಿಗೂ ಪಾಠ ಕಲಿಸಲು ತೀರ್ಮಾನಿಸಿ ಕೆಂಡಾಮಂಡಲವಾಗಿದ್ದಾಳೆ.
ಅವಳ ಸಹನೆಯ ಕಟ್ಟೆ ಒಡೆದಿದೆ.
ಮಲೆನಾಡಲಿ ಅತೀವೃಷ್ಟಿ, ಬಯಲು ಸೀಮೆಯಲ್ಲಿ ಅನಾವೃಷ್ಟಿ. ಕಾರಣ ನಮ್ಮ ಅಜ್ಞಾನ, ಅವಿವೇಕತನ.

ಕೃಷಿ ಹಾಳಾಗಿ ಹೋಗಿ, ಕಾಡು ಬೆಳೆಸದ ನಮ್ಮ ಅವಿವೇಕತನಕೆ ಪರಿಸರ ದಿನವೆಂಬ ಶೋಕಾಚರಣೆ.
ಹೋಗಲಿ ಈಗಿನ ಅನಾಹುತಗಳಿಗೆ ವೈಜ್ಞಾನಿಕ ಕಾರಣ ಹುಡುಕಿ ಮುಂದೆ ಎಚ್ಚತ್ತುಕೊಳ್ಳದೇ ಹೋದರೆ ನಾವು ಉಳಿಯುವುದಿಲ್ಲ.

ಸದ್ಯದ ಪರಿಸ್ಥಿತಿಯನ್ನು ಪಕ್ಷಭೇದ ಮರೆತು ನಿಭಾಯಿಸುವ ಸೂಕ್ಮತೆಯನ್ನು ನಮ್ಮ ರಾಜಕಾರಣಿಗಳು ಕಳೆದುಕೊಳ್ಳಬಾರದಿತ್ತು, ಇದು ಪ್ರವಾಹಕ್ಕಿಂತಲೂ ಭೀಕರ, ಕೆಂಡದ ಮಳೆಗಿಂತಲೂ ಭಯಾನಕ.

ಈಗ ನಮ್ಮ ನಾಯಕರುಗಳು ಈ ಅನಾಗರಿಕ ಪೈಪೋಟಿ ನಿಲ್ಲಿಸಿ ಜನಪರ ಮಾತುಗಳನ್ನಾಡುವ ಸೌಜನ್ಯ ಬೆಳೆಸಿಕೊಳ್ಳಬೇಕು.

ನಮಗೂ ಈ ಅವಘಡಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮಾತಾಡುವದಾಗಲೀ, ನಾವು ನಮ್ಮ ಮನೆ ಹಣ ತಂದು ನಿಮ್ಮನ್ನು ಸಾಕುತ್ತೇವೆ ಎಂಬ ಉಡಾಫೆಯೂ ಅಕ್ಷಮ್ಯ.

ಮಾಧ್ಯಮಗಳು ಅಷ್ಟೇ, ಬರೀ ಚೀರಾಟದ ಮಾತುಗಳು. ಏಕಪಕ್ಷೀಯ ನಿಲುವು. ಪಕ್ಷಾತೀತ ಪರಿಕಲ್ಪನೆಗಿಲ್ಲಿ ಜಾಗವಿಲ್ಲ.
ಈ ಭೀಕರ ಜಲಪ್ರಳಯದಲಿ ಬಲಿಯಾದ ಅಮಾಯಕರ ಅಸಹಾಯಕತೆಯ ಕೇಳಲು ಯಾರಿಗೂ ಪುರುಸೋತ್ತಿಲ್ಲ ಬರೀ ವೈಯಕ್ತಿಕ ಮೈಲೇಜ್ ಪಡೆಯುವ ಹುನ್ನಾರ.

ನಮಗೆ ರಾಜಕಾರಣ, ನಿಮಗೆ ಟಿ.ಆರ್.ಪಿ. ಸಾಕಲ್ಲ ಎಂಬ ಒಳೊಪ್ಪಂದದ ಛಾಯೆಯ ಕರಿನೆರಳು.
ಪೊಯಟಿಕ್ ಜಸ್ಟಿಸ್ ಇನ್ನೂ ಭೀಕರ ಪಾಠ ಕಲಿಸುವ ಮೊದಲೇ ಎಲ್ಲರೂ ಎಚ್ಚತ್ತುಕೊಳ್ಳುವ ಅನಿವಾರ್ಯತೆ ಇದೆ.
ಜಸ್ಟಿಸ್ ಆಫ್ ನೇಚರ್, ತನ್ನ ಪರಿಸರ ಸಮತೋಲನ ಉಳಿಕೊಳ್ಳಲು ಮನುಷ್ಯನಿಗೆ ಎಷ್ಟೇ ಎಚ್ಚರಕೊಟ್ಟರು ನಮ್ಮದು ಸ್ಮಶಾನ ವೈರಾಗ್ಯದ ನಿರ್ಲಜ್ಯತನ ಇನ್ನು ಮುಂದಾದರೂ ಇಳಿದು, ನಾವು ಉಳಿಯಬೇಕಾಗಿದೆ.

   ಸಿದ್ದು ಯಾಪಲಪರವಿ

ಕಳೆದು ಹೋಗುವ ಹಳವಂಡ ಹಾಗೂ ಮೇಘಸಂದೇಶ

ಲವ್ ಕಾಲ

*ಕಳೆದು ಹೋಗುವ ಹಳವಂಡ ಹಾಗೂ ಮೇಘಸಂದೇಶ*

ಈ ಭಾವಲೋಕವೇ ಹೀಗೆ, ಸಮಯ ಹಾಳು. ಮುಟ್ಟುವ ಗುರಿ ಮರೆಸುವ ಹುನ್ನಾರ. ಕಾಲ ಯಾರಿಗೂ ಕಾಯದೇ ನಿಲ್ಲುವುದಿಲ್ಲ ಆದರೂ ನಾವು ಕೆಲವರಿಗಾಗಿ ಕಾಯುತ್ತೇವೆ ಹುಚ್ಚರ ಹಾಗೆ ಮಾಡುವ ಕೆಲಸ ಬಿಟ್ಟು.

ಊಟ-ನಿದ್ರೆ-ಕಾಮ ಬದುಕಿನ ಅವಿಭಾಜ್ಯ ಅಂಗಗಳು. ಹಾಗಾದರೆ ಈ ಹುಚ್ಚು ಪ್ರೀತಿ ಮತ್ತದವರ ಧಾವಂತಕೆ ಏನನ್ನಬೇಕು?

ಅತ್ತ ಕಾಮವೂ ಅಲ್ಲದ ಬರೀ ದೂರ ದೂರದ ಕಹಿ ಯಾತನೆಯೊಂದಿಗಿನ ಕಾಮವಿಲ್ಲದ ಕಾಲಹರಣಕೆ ಏಕೆ ?

ಭ್ರಮೆಯೋ, ತಲ್ಲಣವೋ, ಅವಾಸ್ತವ ಕಾಲಹರಣವೋ.
ಏನೇ ವ್ಯಾಖ್ಯಾನಿಸಿದರೂ ಭಾವುಕ ಮನಸಿಗೆ ಮುದ ಸಿಗುವುದಂತೂ ಗ್ಯಾರಂಟಿ.

ಅದಕೆ ನಾವು ಭಾವ ಪ್ರಪಂಚದಲ್ಲಿ ತೇಲಾಡಿ ಸಮಯ ಹಾಳಾದರೂ ಖುಷಿಪಡುತ್ತೇವೆ.
ಒಂದು ಕಾಲಕೆ ಪ್ರೇಮಿಗಳು ನಿಗೂಢ ಭಾಷೆಯಲ್ಲಿ ಪತ್ರ ಬರೆದು ನಿವೇದಿಸುತ್ತಿದ್ದರು.

ಇನ್ನೂ ಹಿಂದೆ ಸಾವಿರ ವರ್ಷಗಳ ಹಿಂದೆ ಮೇಘ ಸಂದೇಶ.
ಕಾಳಿದಾಸನ ಕಾಲದಿಂದಲೂ ಇರುವ ಈ ಹುಚ್ಚು ಇಂದಿಗೂ ಜೀವಂತ ಮತ್ತೆ ಹೊಸ ಹೊಸ ರೂಪದಲ್ಲಿ, ಹೊಸ ಆವಿಷ್ಕಾರಗಳೊಂದಿಗೆ.

ಕಾಳಿದಾಸನ ಮೇಘಸಂದೇಶ ಖಂಡಿತ ಕಲ್ಪನೆಯಲ್ಲ.
ಆಧುನಿಕ ತಂತ್ರಜ್ಞಾನದ ಸೆಟ್ ಲೈಟ್ ನೆಟ್ ವರ್ಕ್, ಅಂದರೆ ಈಗಿನ ಇಂಟರ್ ನೆಟ್.
ನಮ್ಮ ಎಲ್ಲ ದಾಖಲೆಗಳ ಶೇಖರಣೆ ಗೂಗಲ್ cloud ನಲ್ಲಿರುವಂತೆ ಆ ಕಾಲದ ಮೇಘಸಂದೇಶ ಇರಬಹುದಲ್ಲ ಅನಿಸುತ್ತದೆ.

ನೂರು ವರ್ಷಗಳ ಹಿಂದೆ ರಾವಣನ ಪುಷ್ಪಕ ವಿಮಾನವೂ ಕಲ್ಪನೆ ಅನಿಸುತಿತ್ತು ಆದರೆ ಈಗಿನ ಹೆಲಿಕ್ಯಾಪ್ಟರ್ ಹಾಗೂ ಚಾರ್ಟರ್ ಫ್ಲೈಟ್ ನೋಡಿದಾಗ ಹೌದಲ್ಲ ಎನಿಸುತ್ತದೆ.

ಮನುಷ್ಯ ತನ್ನ ಉತ್ಕಟ ಪ್ರೇಮಾಭಿವ್ಯಕ್ತಿಗೆ ಕಲ್ಪಿಸಿಕೊಂಡಿದ್ದನ್ನೆಲ್ಲ ವಿಜ್ಞಾನ ತಂತ್ರಜ್ಞಾನ ಮೂಲಕ ನನಸಾಗಿಸಿಕೊಂಡಿದ್ದಾನೆ. ಅದಕ್ಕೆ ಕಾರಣ ಈ ಜೀವನೋತ್ಸಾಹದ ಪ್ರೀತಿ-ಪ್ರೇಮ-ಪ್ರಣಯ.

ಮನುಷ್ಯನ ಖಾಸಗಿ ಗುಟ್ಟೆಂದರೆ ಪ್ರೇಮ ಮತ್ತು ಯುದ್ಧ. ಇವೆರಡು ಗುಟ್ಟಾಗಿರಲಿ ಎಂದು ಬಯಸಿ ಹೊಸ ಮಾರ್ಗ ಕಂಡು ಹಿಡಿಯುತ್ತಾನೆ.
ಪ್ರೇಮಭಾಷೆ ಹಾಗೂ ಯುದ್ಧಭಾಷೆ ಗುಟ್ಟಾಗಿದ್ದು ಸಂಬಂಧಿಸಿದವರಿಗೆ ಮಾತ್ರ ಅರ್ಥವಾಗಲಿ ಎಂಬ ಖಾಸಗಿತನದಿಂದಾಗಿ ನೂರಾರು ಆವಿಷ್ಕಾರಗಳು.

ಫೋನ್, ಮೆಸೆಜುಗಳು, ಇಮೋಜಿಗಳು, ಫೇಸ್ ಬುಕ್, ವಾಟ್ಸ್ ಅ್ಯಾಪ್, ವಿಡಿಯೋ ಕಾಲ್, ಮೆಸೆಂಜರುಗಳು… ಇನ್ನೂ ಏನೇನೋ ಆವಿಷ್ಕಾರಗಳು ಸಾಗಿವೇ ಇವೆ.
ಎಲ್ಲದಕು ಕಾರಣ ಅದೇ ಪ್ರೀತಿ ಮತ್ತು ಯುದ್ಧ. ಎರಡಲ್ಲೂ ತಾನೇ ಗೆಲ್ಲಬೇಕೆಂಬ ಹಟ.

ಅದೇ ಸಾತ್ವಿಕ ಹಟದ ಜಾಡ ಹಿಡಿದು ಆಧುನಿಕ ಮೇಘಸಂದೇಶದ ಮೂಲಕ ನಿನ್ನ ಹಿಡಿದುಬಿಟ್ಟೆ. ಆಧುನಿಕ ಜಾತಾಣದಲಿ ಸೆರೆ ಸಿಕ್ಕ ನಿನ್ನ ಅದೇ ಸಾತ್ವಿಕ ಹಟದ ಮೂಲಕ ಯುದ್ಧ ಗೆದ್ದಂತೆ ಎದೆಗವಚಿಕೊಂಡ ಕತೆ ಈಗ ಹೊಸ ಇತಿಹಾಸ.
ಇನ್ನೂ ಗೆಲುವ ಸದಾ ಹತ್ತಿರ ಇಟ್ಟುಕೊಳುವ ಧಾವಂತಕೆ ಕೊನೆ ಎಂಬುದೇ ಇಲ್ಲ.

ಆದರೂ ಗೂಗಲ್ ಮೇಘಸಂದೇಶ ನಮ್ಮನ್ನು ಹತ್ತಿರ ಇರುವಂತೆ ಮಾಡಿದೆ. ವಿಡಿಯೋ ಕಾಲ್ ಎಂಬ ಜಾದೂ ಲೋಕದಲಿ ಎದುರು ಬದುರಾಗಿ ಹರಟೆ ಹೊಡೆಯುವುದು ತಂತ್ರಜ್ಞಾನದ ಪವಾಡವಲ್ಲದೇ ಇನ್ನೇನು?
ನಾವು ದೂರ ಇದ್ದೇವೆ ಎಂಬ ಭಾವ ದೂರಾಗಿ, ಜೊತೆಗಿದ್ದ ರಸಾನುಭವ. *ಪರಸ್ಪರ ಮುಟ್ಟದಿದ್ದರೂ ಮನಸುಗಳು ತಟ್ಟುತ್ತಲೇ ಇರುತ್ತವೆ*.

ಸಂಪರ್ಕ ಕಡಿದು ಹೋದರೆ ಮನುಷ್ಯ ಮಾನಸಿಕವಾಗಿಯೂ ದೂರಾಗುವ ಅಪಾಯವಿದೆ. ನಿರಂತರ ಸಂಪರ್ಕ ನಿಂತು ಹೋದರೆ ನೆನಪು ಮಸುಕಾಗಿ ಸಂಬಂಧ ಮರೆಯಾಗುತ್ತದೆ.

Out of sight is out of mind… ಎಂಬ ಮಾತು ಸುಳ್ಳಲ್ಲ.
ಮರೆವು ವರ ಹೇಗೇಯೋ ಹಾಗೆ ಶಾಪವೂ ಹೌದು.
*ಮರೆಯುವ ಮಾತ ಮರೆತುಬಿಡು* ಎನ್ನಲು ನೆರವಾಗುವ ಈ ಆಧುನಿಕ ಮೇಘಸಂದೇಶಕೆ ನಾವು ಸದಾ ಚಿರರುಣಿ.
ಹತ್ತಿರ ಇನ್ನೂ ಹತ್ತಿರ ಈ ಲೋಕದ ಹಂಗ ಹರಿದು...

  *ಸಿದ್ದು ಯಾಪಲಪರವಿ*

Tuesday, August 21, 2018

ಬಚ್ಚಿಡುವೆ

*ಎದೆಯ ಗೂಡಲಿ ಬಚ್ಚಿಡುವೆ*

ಎಷ್ಟು ಅಂತ ಎದೆಯ ಗೂಡಲಿ
ಬಚ್ಚಿಡಲಿ ನಿನ ಹೀಗೆಯೇ ಬೆಚ್ಚಗೆ
ಅನಲಾರೆ ನಾ ಚಿನ್ನ

ಹೊರಗೆ ಬಿಟ್ಟರೆ ಹಾಯಾಗಿ ಹಾರಿ
ಬಿಡುವೆ ಬಿಡಲಾರೆ ನಿನ್ನ ಚಿನ್ನ

ಒಳಗೊಳಗೆ ಖುಷಿಯಿಂದ
ನಲಿದಾಡು ಚಿನ್ನ ಇದು ಅಲ್ಲ
ಪಂಜರ ನಿನಗಿಲ್ಲ ಬಂಧನ

ಎದೆಯ ತುಂಬ ಬರೀ
ಒಲವ ಜೇನು ಸುರಿಯುತಿರಲು
ಸವಿ ನೀ ಏಕಾಂತದಿ ಹರಸಿ ನನ್ನ

ಹಾಯಾಗಿ ಮಲಗು ನೀ ನನ್ನ
ಜೀವ ಚೈತನ್ಯ ಬಿಟ್ಟಿರಲಾರೆ
ನಿನ್ನ ನಾ ನೀ ನನ್ನ ಉಸಿರ
ರಾಗಕೆ ಲಯ ತಾಳ ಮೇಳ
ಎಲ್ಲ ಎಲ್ಲಾ ನೀನೇ

ಬಚ್ಚಿಡುವೆ ಬೆಚ್ಚಗೆ ಕೊನೆತನಕ
ನಾ ಅಳಿದರೂ ನೀ ಉಳಿಯುವಂತೆ
ನೂರಾರು ಜನುಮಕೆ ಸಾವಿರದ
ಸಾವೇ ಬಾರದ ಜನುಮಕೆ

  *ಸಿದ್ದು ಯಾಪಲಪರವಿ*

Monday, August 20, 2018

ಬಾಳ ದಡ ಸೇರೋಣ

ಬಾಳ ದಡ ಸೇರೋಣ

ಹೇಳುವದೆಲ್ಲ ಹೇಳಿ ಕೇಳುವುದೆಲ್ಲ
ಕೇಳಿದರೂ ಮಾತು
ಮುಗಿಯುವುದಿಲ್ಲ

ಭಾವಯಾನ ಪಯಣದಲಿ
ವಿಷಾದದ ಅಪಸ್ವರವಿಲ್ಲ

ಬದುಕಿನ ಪಯಣದಲಿ ಸಿಗಬಹುದಾದ
ತಿರುವಿಗೆ ಹಂಬಲಿಸಿದ ಮನಕೊಮ್ಮೆ
ದೊರೆಯುವದು ಮೋಕ್ಷ

ಬಳಸಿ ಬಿಸಾಡಿ , ಅಂಜಿ-ಅಳುಕಿ
ಅವಮಾನಿಸಿ ಅನುಮಾನಿಸದರೆ
ನೂರು ಮಾರು ದೂರ
ಒಲವ ಬೆಳಗು

ಸಾವಿರದ ಬಂಧನಗಳ ಮುಷ್ಟಿಯಲಿ
ಬಿಗಿಹಿಡಿದು ಅನುಸಂಧಾನದ 
ಅನನ್ಯತೆ ಅನುಭವಿಸುವ
ನಿರಹಂಕಾರದ ನಿಜಸ್ವರೂಪದ
ವೈಭವ

ಅನುರಾಗದ ಅರಮನೆಯ ರಾಜ-ರಾಣಿ
ಬೇಕಿಲ್ಲ ಅರಸೊತ್ತಿಗೆ ಸಿರಿ ಸಂಪದದ ಹಂಗು

ಅವರಿಗೆ ಅವರದೇ ಆದ
ಹಂಗಿಲ್ಲದ ಒಲವ ಒಡೆತನ
ಸಾಕು ಈ
ವ್ಯವಹಾರಿಕ ಲೋಕದಿ

ಗೇಣು ಹೊಟ್ಟೆಯ ಚೀಲದ ಚಿಂತೆಗೆ
ನಶಿಸಿ ಮಣ್ಣ ಸೇರುವ ಹೇಸಿ ದೇಹದ
ವ್ಯಾಮೋಹದಲಿ ಒಲವ ಮಾರುವ
ಹಂಗಿಲ್ಲದ ಅರಸರು ನಾವು

ಸಮರಸದ ಸರಸದಲಿ ನಿಷ್ಕಾಮ
ವಿರಸದಲಿ ಬೇಕು-ಬೇಡಗಳ
ಹುಡುಕಾಟ ಹುಡುಗಾಟ

ನಿಲ್ಲದೀ ನಿಲ್ಲದ  ಪಯಣ
ನಿರ್ಲಿಪ್ತದಿ  ಸಾಗುತ
ಬಾಳ ಸರೋವರದ
ದಡ ಸೇರೋಣ.

---ಸಿದ್ದು ಯಾಪಲಪರವಿ

Sunday, August 19, 2018

ಶಬ್ದಸೂತಕ ಮಾತು

ಲವ್ ಕಾಲ

*ಶಬ್ದ ಸೂತಕವಾಗುವ ಮೊದಲು ಮಾತು ಮುಗಿಯಲಿ*

ಮಾತು ಮಾತು ಬರೀ ಮಾತು. ಹೇಳಿದ್ದೇ ಸಾವಿರ ಸಲ ಹೇಳುವ ಧಾವಂತ.‌ ಬದಲಾಯಿಸಿ ದಕ್ಕಿಸಿಕೊಳ್ಳುವ ಸ್ವಾರ್ಥದ ಪೊಸೆಸ್ಸಿವ್.

‘ ನೀ ಎಷ್ಟೇ ಹೇಳು ನನಗೆ ಸರಿ ಅನಿಸಿದಾಗ ಮಾತ್ರ ಒಪ್ಪಿಕೊಳ್ಳುತ್ತೇನೆ ‘ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರೂ ನಿಲ್ಲದ ನಿರ್ಲಜ್ಯ.

ಈ ಸುಡುಗಾಡು ವ್ಯಮೋಹವೇ ಹೀಗೆ, ಮತ್ತೊಬ್ಬರ ಸ್ವಾತಂತ್ರ್ಯ ಕಸಿದುಕೊಳ್ಳುವ ಕೆಟ್ಟ ಹುನ್ನಾರ.

ಅದು ಗೊತ್ತಿದ್ದೂ ನಾ ಅದನ್ನೇ ಮಾಡಿ ನಿನ್ನ ಬಲಿ ತೆಗೆದುಕೊಂಡೆ.‌ ಧಿಕ್ಕಾರವಿರಲಿ ನನ್ನ ನಿರ್ಲಜ್ಯ ಸ್ವಾರ್ಥ ವ್ಯಾಮೋಹಕೆ.

ಸರಾಸರಿ ದಿನಕ್ಕೆರಡು ತಾಸು ಹೇಳಿದ್ದಾದರೂ ಏನು ?

ಅವೇ ಮಾತುಗಳು. ಪ್ರಯೋಜನ ? ಅತ್ಯಮೂಲ್ಯ ಸಮಯ ಹಾಳು ಮಾಡಿ ಮನಸು ಮಲಿನ ಮಾಡಿಕೊಂಡದ್ದು.‌ ಪರಿಣಾಮ ಶೂನ್ಯ ಸಂಪಾದನೆ.

*ಅನುಮಾನಿಸಿ ಅವಮಾನಿಸುವವನಿಗೂ ನನಗೂ ಏನೂ ವ್ಯತ್ಯಾಸ ಇಲ್ಲ* ಅನಿಸಿಕೊಂಡುಬಿಟ್ಟೆ. ನಾನೂ ಒಬ್ಬ ‘ಸಂಶಯ ಪಿಶಾಚಿ’ ಎಂಬ ಪಟ್ಟ ಕಟ್ಟಿಕೊಂಡು ಕಾಲ ಗರ್ಭದಲಿ ಶಬ್ದಗಳ ಸೂತಕ ಮಾಡಿಬಿಟ್ಟೆ.

*ಪರಿವರ್ತನೆ ನಮ್ಮಲ್ಲಿ ಬರಬೇಕು ಅದನ್ನು ಬೇರೆಯವರಿಂದ ನಿರೀಕ್ಷಸಬಾರದು* ಎಂಬ ಸಾಲುಗಳು ವೇದಾಂತದಲಿ ಉಳಿದುಬಿಟ್ಟವು. ಬದುಕಲಿ ಅಳವಡಿಸಿಕೊಳ್ಳಲು ವ್ಯಾಮೋಹ ಅಡ್ಡಬರಬಾರದಿತ್ತು. ನಾನು ಸೋತೆ. ನನ್ನ ಮೌಲ್ಯಗಳೂ ಸೋತು ಮಾತು ಸೂತಕವಾದವು.

ಬದಲಾಯಿಸಲಾಗದು ಯಾರನ್ನೂ ಎಂಬುದೊಂದು ಶಾಶ್ವತ ಸತ್ಯ ಆದರೂ ಪ್ರಲೋಭನೆಗೆ ಒಳಗಾಗಿ ಆ ಪ್ರಯತ್ನವ ಮನಸು ಬಿಡಲಿಲ್ಲ.

ಪ್ರತಿಯೊಬ್ಬರಿಗೂ ಅವರದೇ ಆದ ಆಯ್ಕೆಗಳಿರುತ್ತವೆ ಅವುಗಳನ್ನು ಕಸಿದುಕೊಂಡಾಗ ಮನಸು ವ್ಯಗ್ರವಾಗುವುದು ಸಹಜ. ಆ ವ್ಯಗ್ರಕ್ಕೆ ನನ್ನ ಪ್ರೀತಿ ಬಲಿಯಾಗಬಾರದಿತ್ತು.

ಅದಕ್ಕೆ ಕಾರಣ ನಾನೇ. ನನ್ನ ಸ್ವಾರ್ಥದ ಹಟಮಾರಿ ಧೋರಣೆ.

ಈಗಲೂ ಕಾಲ ಮಿಂಚಿಲ್ಲ ಅವನಿಗಾದ ಗತಿ ನನಗೂ ಬರಬಾದೆಂದರೆ ನಾನು ಬದಲಾಗಬೇಕು.

ಅವನು ಮಾಸಿಕವಾಗಿ ದೂರಾದಂತೆ ನಾನೂ ದೂರಾಗಬಾದೆಂಬ ಅರಿವಿರಬೇಕು.

ವ್ಯಕ್ತಿ ಒಮ್ಮೆ ರೋಸಿ ಹೋದರೆ ಎಲ್ಲವನ್ನು ತಿರಸ್ಕರಿಸುವುದು ಸಹಜ. ಅದು ನನಗೆ ಚನ್ನಾಗಿ ಗೊತ್ತು.

ಆದರೂ ನಾ ವಿಪರೀತ ಹಟ ಮಾಡಿದೆ. ಆ ಹಟಕ್ಕೆ ಸಾತ್ವಿಕ ಮುಖವಾಡ ಬೇರೆ!

ಆದರೆ ಉದ್ದೇಶ ನಿನ್ನ ಸ್ವಾತಂತ್ರ್ಯ ಕಸಿಯುವ ನೀಚತನ.

ಮನುಷ್ಯ ಅತ್ಯಂತ ಕೊಳಕು ಪ್ರಾಣಿ ಎಲ್ಲಾ ತನ್ನ ಮೂಗಿನ ನೇರಕ್ಕೆ ಆಲೋಚಿಸುವ ದುರಾತ್ಮ. ಅದಕ್ಕೆ ನಾನೂ ಹೊರತಾಗಲಿಲ್ಲ. ನಿನ್ನ ಹಿಂಡಿ ಹಿಪ್ಪೆ ಮಾಡಿ ಘಾಸಿ ಮಾಡಿ  ವಿನಾಕಾರಣ ಮಾನಸಿಕವಾಗಿ ದೂರ ಮಾಡಿಕೊಂಡೆ.

ನನ್ನ ಮಿತಿ ಅರಿತುಕೊಂಡರೂ ದುಡುಕಿ ನಿನ್ನ ಭಾವನೆಗಳ ಮೇಲೆ ಸವಾರಿ ಮಾಡಿ ಸ್ವಾತಂತ್ರ್ಯ ಹರಣಕೆ ಮುಂದಾಗಿ ನಾನೂ *ಅವನಾದೆ*.

ಅವನಿಗೂ ನನಗೂ ಏನೂ ವ್ಯತ್ಯಾಸವೇ ಇಲ್ಲ. ಮುಖ ಬೇರೆ ಮುಖವಾಡ ಒಂದೇ. ಅದೇ ಸ್ವಾರ್ಥ.

ನಾವು ಕ್ರಮಿಸಬೇಕಾದ ಹಾದಿಯಲಿ ನಮ್ಮದೇ ಆದ ಯೋಜನೆಗಳಿರುತ್ತವೆ. ಯೋಚನೆಗಳಿರುತ್ತವೆ. ಅದರಲಿ ತೃಪ್ತಿಯೂ ಇರುತ್ತದೆ. ಅದನ್ನು ಯಾರಾದರೂ ಕಸಿಯಲು ಪ್ರಯತ್ನಿಸಿದಾಗ ಮನಸು ಮುದುಡಿ, ಕಸಿದುಕೊಂಡವರ ದೂರ ದೂಡುವುದು ಸಹಜ.

ರೋಸಿ ಹೋದ ಜೀವಕೆ ಸುಖವ ಕೊಡುವ ಬದಲು ಮತ್ತದೇ ನೋವ ಕೊಟ್ಟೆ, ಕ್ಷಮಿಸು ಎನಲೂ ಸಂಕೋಚ.

ನನ್ನ ತಪ್ಪು ನನಗೂ ಗೊತ್ತು. ನಿನಗೂ ಗೊತ್ತು.

ಹೀಗಿರುವಾಗ ಹೇಳುವದು ನಿಷ್ಪ್ರಯೋಜಕ.

ಆದರೂ ಹೇಳಿದ್ದೇ ಹೇಳಿ ಶಬ್ದ ಸೂತಕ ಮಾಡಿದೆ.

ನನ್ನ ಕ್ಷಮಿಸು *ಅಲ್ಲಮ* ನೀ ಹೇಳಿದ್ದು ಸರಿಯಾಗಿ ಆಲಿಸದೇ ಶಬ್ದ ಸೂತಕ ಮಾಡಿಬಿಟ್ಟೆ.

*ಮುಂದೆ ಹೀಗಾಗದಂತೆ ಎಚ್ಚರವಹಿಸಲು ನಿಶಬ್ದದ ಮೊರೆ ಹೋಗಿ ನನ್ನ ನಾ ಧೇನಿಸಿ ಬದಲಾಗುತ್ತೇನೆ*

ಅಲ್ಲ ಅಲ್ಲ ಪರಿವರ್ತನೆಯಾಗುತ್ತೇನೆ.

ಏಕಾಂತದ ಹಾದಿ ಹಿಡಿದು ಕರಾವಳಿ ತೀರದ ಬೆಟ್ಟ ಏರಿ ಲೀನವಾಗಿ ಮೌನದ ಮಹಿಮೆ ಅರಿಯುವೆ.

*ಬುದ್ಧ-ಅಲ್ಲಮರ* ಹಾದಿ ಹಿಡಿದು ಪಾಪ ಕಳೆದುಕೊಳ್ಳುವೆ.

ಸದ್ಯ ನನ್ನ ಕ್ಷಮಿಸಿ ಮತ್ತೊಂದು ಅವಕಾಶ ಕೊಡು ಸಾಕು.

  *ಸಿದ್ದು ಯಾಪಲಪರವಿ*