ಕುಲದ ಮೂಲ ಅರಿತ ಧೀರ ನಮ್ಮ ಕನಕ
ಮೈತುಂಬಾ ಆದ ಗಾಯ ಮಾಯಬಹುದು
ಆದರೆ ಎದೆಯಾಳದ ನೋವ ಮರೆಯಲಾಗದು
ಎಂಬ ದಿಟ ಸತ್ಯವ ಲೋಕಕೆ ಅರುಹಿದ
ದಾಸ ಶ್ರೇಷ್ಠ
ಮೇಲು-ಕೀಳು ಮಡಿ-ಮೈಲಿಗೆಗಳ ಜಾತಿ ಸೂತಕವ
ಶಬ್ದಗಳಲಿ ನಿಶಬ್ದಗೊಳಿಸಿ ಪಾಡಿ ನಲಿದ ಸಹನಶೀಲ
ಅನ್ನ ದೇವೋಭವ ಎಂದು ಬೀಗುತ ಶೂದ್ರರ ಹೊಟ್ಟೆಯ
ಬೆನ್ನಿಗಂಟಿಸಿ ಮೋಜು ನೋಡಿದ ಡೊಳ್ಳು ಹೊಟ್ಟೆಯ
ಧೂರ್ತರಿಗೆ ರಾಗಿ ಪಾಠ ಹಾಡಿ ಹೊಗಳಿ ಬೆಚ್ಚಿ ಬೀಳಿಸಿದ
ಮಹಾ ಜ್ಞಾನಿ
ಕುಲದ ನೆಲೆಯನರಿಯದೆ ಕುಣಿದು ಕುಪ್ಪಳಿಸಿ ಕೇಕೆ ಹಾಕಿ
ದೂರ ದೂಡಿದ ದುರುಳರನು ಜ್ಞಾನಾಸ್ತ್ರವ ಬೀಸಿ ಮಗ್ಗಲು
ಮುರಿದ ಯೋಧ
ಪಾಪ-ಪುಣ್ಯ ಸ್ವರ್ಗ-ನರಕಗಳ ಭ್ರಮೆ ಹುಟ್ಟಿಸಿ ಪಾಪದಲಿ
ನರಳುವ ಹುನ್ನಾರವಳಿಸಿ ಧರೆಯಲಿ ನೆಮ್ಮದಿ ತೋರಿದ
ಜಾದೂಗಾರ
ಅಂಗೈಯಲಿ ಅರಮನೆ ತೋರಿಸಿ ರಾಜ
ಮಹಾರಾಜರುಗಳಿಗೆ ಮಳ್ಳು ಹಿಡಿಸಿ ಬಡವರ ಕಳ್ಳು
ಹಿಂಡಿದ ಮಳ್ಳರ ಮಂಗನಾಟವ ಬೆತ್ತಲಾಗಿಸಿದ
ಮಂತ್ರ ದಂಡ
ಕುಲದ ಕಸವ ಬೇರು ಸಹಿತ ಕಿತ್ತಿ ಹರಗಿ ಮನದ
ಮಣ್ಣ ಹದಗೊಳಿಸಿದ
ಜಾಣ ರೈತ
ನಮಿಸುವೆ ನಿನಗೆ ನಿನ್ನ ಕೀರ್ತನವ ಹಾಡಿ-ಪಾಡಿ
ಕುಣಿದು-ನಲಿದು ಮನದ ಕೊಳಕ ಕಳೆಯಲು...
----ಸಿದ್ದು ಯಾಪಲಪರವಿ
No comments:
Post a Comment