Friday, March 17, 2017

ಸಂಬಂಧನ

ಸಂಬಂಧನ

ಸಂಬಂಧಗಳು ಎಂದರೆ ಹಸಿದ ನಾಯಿ
ಹಳಸಿದ ಅನ್ನದ ಕಥೆಯಲ್ಲ

ಬೇಕು ಬೇಡಗಳ ವ್ಯಥೆಯ ಕಥೆ
ಮನಸು ಭಾವನೆಗಳ ಮಧುರ ಮಿಲನ
ಕಡು ಕಷ್ಟಗಳ ಸಹಯೋಗ

ನೂಕು ನುಗ್ಗಲಿನ ಸಂತೆಯಲಿ ನಂಬಿ ಕೈ ಹಿಡಿದು
ಮುನ್ನಡೆಸುವ ಸಂಗಾತಿ

ಮೈಮನಗಳ ಪುಳಕಗೊಳಿಸಿ ಬದುಕ ಬವಣೆಗಳ
ಕೊಂಚ ದೂರ ದೂಡುವ ಸಾಂಗತ್ಯ

ಮೈ ಸೋಲುವ ಭ್ರಮೆಯಲ್ಲ ಮನ ಸೋಲುವ
ಅನನ್ನ ನಿರ್ಭಾವ ಲೋಕ

ತೆರೆದಷ್ಟೇ ಬಾಗಿಲು ಆಕಾಶ ನೋಡಲು ಇಲ್ಲ
ನೂಕು ನುಗ್ಗಲು

ಹೊಸ ಹುಮ್ಮಸ್ಸು ಉಳಿಯುವ ಭರವಸೆಯ
ಮಹಾ ಬೆಳಗು

ತಬ್ಬಿ ಬಿಗಿದಪ್ಪಿ ಮನಸು ಹಗುರಾಗಿಸುವ
ಜೀವಸೆಲೆ ಹೊಸದೊಂದು ನೆಲೆ

ಹಿಡಿದು ಬಿಡುವುದು ಬೇಡ  ಭಗವಂತನ
ದಯೆಯಲಿ ಸಿಕ್ಕ ವರ ಪ್ರಸಾದ

ದಕ್ಕಿದಷ್ಟು ದಕ್ಕಲಿ ಸಿಕ್ಕಷ್ಟು ಸಿಗಲಿ
ಧನಾತ್ಮಕ ಭಾವ ಬಂಧನ

ದೂರಾಗುವುದು ಬೇಡ ದೂರುವುದು ಬೇಡ
ಹೆಣ್ಣು-ಹೊನ್ನು-ಮಣ್ಣು ಋಣಾನುಬಂಧದ
ಹಂಗ ಹರಿಯುವುದು ಬೇಡ

ಒಲ್ಲೆನೆಂಬುದು ಇಲ್ಲದ ವೈರಾಗ್ಯ
ಒಲಿದುದು ಇರಲಿ ಬದುಕಲಿ ಎಂಬುದು
ಕಾಯ ಋಣ ಒಲಿದು ಒಲಿಸಿಕೊಂಡು
ಒಮ್ಮೆ ನಿಶ್ಚಿಂತರಾಗೋಣ.

---ಸಿದ್ದು ಯಾಪಲಪರವಿ

No comments:

Post a Comment