ಬರೀ ತಿರುವುಗಳು
ಈ ಬದುಕಿಗೆ ಬರೀ ತಿರುವುಗಳದೇ ಸೆಳೆತ
ಮೈಮಾಟದ ವಿಧಿಯಾಟದ ನೂರೆಂಟು ಮಿಳಿತ
ಹರಿಯುವ ನದಿ ತನ್ನ ಹಾದಿ ಸೀಳಿಕೊಂಡು
ಹರಿವ ಪರಿ ನಿಲಿಸಲುಂಟೆ
ಎಲ್ಲವೂ ಎಲ್ಲರೂ ಅನಿರೀಕ್ಷಿತ ಯೋಜನೆ
ಯೋಚನೆ ಆಲೋಚನೆ ಬರೀ ಒಂದು ಲೆಕ್ಕದಾಟ
ಕೂಡಿಸಿ ಕಳೆದು ಗುಣಿಸಿ ಭಾಗಿಸುವ ಹುಮ್ಮಸ್ಸು
ಪರಿಣಾಮ ಅಗಣಿತ ಅಗೋಚರ
ಆದರೂ ನಿಲ್ಲದ ಲೆಕ್ಕಾಚಾರ
ಕಾಲನ ಹೊಡೆತಕೆ ಎಲ್ಲ ಉಲ್ಟಾ-ಪಲ್ಟಾ
ಮತ್ತದೇ ತಿರುವಿನ ತಿರುಗುಣಿಯ ಸುತ್ತ ತಿರುಗಾಟ
ಎಲ್ಲವೂ ಪೂರ್ವ ಲಿಖಿತ ದೇವನಾಟದಲಿ
ನಾ ಮಾಡಿದೆ ಹೀಗೆ ಮಾಡುವೆನೆಂಬ ಜಂಬದೂಟ
ಕಳೆದವರು ಕೂಡುತ್ತ , ಕೂಡಿದವರು ಕಳೆಯುತ್ತ
ಭಾಗವಾಗುವ ಹೊತ್ತು ನಾವೇ ಹೊರಗೆ ಬರೀ ಶೂನ್ಯ
ಆದರೂ ಹುಡುಕುತ್ತೇವೆ ಹೊಸ ಹಾದಿ ತಿರುವಿನೆದುರು
ತಳಮಳಿಸಿ ಎಲ್ಲಿಗೆ ಈ ದಾರಿ ಗೊತ್ತಿಲ್ಲ
ಆದರೂ ನಿಲ್ಲಲಾಗದು ಹೋಗಲೇಬೇಕು
ಸಾಗಲೇಬೇಕು ಕಾಲುಗಳು ಕಾಲನ
ಹೊಡೆತಕೆ ಸಿಕ್ಕು ದಣಿಯುವತನಕ
ಉಸಿರು ಹೆಸರಾಗಿ ಉಳಿಯುವತನಕ...
---ಸಿದ್ದು ಯಾಪಲಪರವಿ
No comments:
Post a Comment