Thursday, September 9, 2010

ಹೆಳವ ಹೇಳಿದ ಕತೆ

ದಾಂಡೇಲಿ ಹತ್ತಿರ ಹಳ್ಳಿಯಲಿ ವಾಸಿಸುತ್ತಿರುವ ನಮ್ಮ ಮನೆತನದ ಹೆಳವ ಫಕೀರಪ್ಪನ ಮೇಲೆ ಎಲ್ಲಿಲ್ಲದ ಪ್ರೀತಿ.

ಕಳೆದ ಇಪ್ಪತ್ತು ವರ್ಷದಿಂದ ಅವನು ಹೇಳುವ ಏಕತಾನತೆಯ ಓದುವಿಕೆಯನ್ನು ಹೊಸತನದಿಂದ ಕೇಳುತ್ತಲೇ

ಇದ್ದೇನೆ.

ಬೇರುಗಳ ಬಗ್ಗೆ ಇರುವ ಕುತೂಹಲ ಸಹಜವಲ್ಲವೆ? ಶತಮಾನಗಳ ಹಿಂದೆ ಬಿಜಾಪೂರ ಜಿಲ್ಲೆಯ ಮುಳುಗಿಹೋದ

ಊರು ಗೋದಿಬನ್ನೂರು ನಮ್ಮ ಮೂಲ ಊರಂತೆ. ಹೀಗೆ ಅನೇಕರಿಗೆ ಗೋದಿಬನ್ನೂರು ಮೂಲ ಸ್ಥಳವಂತೆ,

ನದಿ ತೀರದ ಊರುಗಳು

ಮುಳುಗುವಾಗ ವಾಸಿಗಳು ಚದುರಿ ಹೋಗುವುದು ಸಹಜ.

ಗೌಡಕಿ ಮನೆತನದ ನಾವು ನದಿಯಲಿ ಮುಳುಗಿದ ಊರನ್ನು ತೊರೆದು ಯಾಪಲಪರವಿಗೆ ಬಂದದ್ದನ್ನು,

ಅಲ್ಲಿ ಶರಣಾರತಿ ಮನೆತನದವರಾಗಿ ಬಾಳಿದ್ದನ್ನು ಹೆಳವ

ಫಕೀರಪ್ಪ ರಸವತ್ತಾಗಿ ವರ್ಣಿಸುತ್ತಾನೆ. ನಾನು ಬರೆಯಬೇಕೆಂದಿರುವ ಬಾಲ್ಯದ ನೆನಪುಗಳಿಗೆ ಹೆಳವನ

ಮಾತುಗಳು ಪ್ರೇರಣೆ ನೀಡುತ್ತವೆ.

ಹರಿವ ನದಿಗೆ ಮೈಯೆಲ್ಲ ಕಾಲು' ಇದು ನನ್ನ ಮನದಲಿ ಮೂಡಿದ ಶೀರ್ಷಿಕೆ. ಬಾಲ್ಯದ ಅನೇಕ ಘಟನೆಗಳು

ವ್ಯಕ್ತಿತ್ವವನ್ನು ರೂಪಿಸಿವೆ. ಆ ಎಲ್ಲ ಘಟನೆಗಳು ದಾಖಲಾದರೆ ಅರ್ಥಪೂರ್ಣ.

ಬಾಲ್ಯದ ವಿದ್ಯಾರ್ಥಿ ಜೀವನದ ನೆನಪುಗಳು ನಿತ್ಯ

ಕಾಡುತ್ತಲಿವೆ. ಅವುಗಳನ್ನು ಒಪ್ಪ ಓರಣವಾಗಿ ದಾಖಲಿಸಬೇಕಿದೆ.

ಅಮರಣ್ಣ ತಾತ ಕಾರಟಗಿಯಲ್ಲಿ ಗಳಿಸಿದ ಹಣ, ಅಪಾರ ಆಸ್ತಿ, ಬಾಲ್ಯದ ಶ್ರೀಮಂತಿಕೆಯ ನೆನಪುಗಳು ಕಾಡುತ್ತಲೇ

ಇರುತ್ತವೆ. ಕರಗಿ ಹೋದ ಶ್ರೀಮಂತಿಕೆ, ಹಣಕ್ಕಾಗಿ ಪರದಾಟ, ಮತ್ತೆ ಮಾಡಿದ ಸಣ್ಣ ಪುಟ್ಟ ವ್ಯಾಪಾರಗಳು. ಆದರೆ

ಕರಗಿದ್ದನ್ನು ಗಳಿಸಲು ಸಾಧ್ಯವಾಗದೇ ಇದ್ದಾಗ ಲಕ್ಮಿಯನ್ನು ಕೈ ಬಿಟ್ಟು, ಸರಸ್ವತಿಗೆ ಬೆನ್ನು ಹತ್ತಿ ಶೈಕ್ಷಣಿಕ

ಸಂಸ್ಕಾರ ಪಡೆದದ್ದು....... ಈಗ ಮಿಂಚಿ ಮರೆಯಾದ ಅನುಭವಗಳು. ಆದರೆ ಅವುಗಳನ್ನು ಹಾಗೆ ಬಿಡಬಾರದು.

ಆತ್ಮವಿಶ್ವಾಸ ತುಂಬಿದ ಘಟನೆಗಳನ್ನು ಅಕ್ಷರಿಸುವುದರಲ್ಲಿ ಅರ್ಥವಿದೆ.

ಒಂದರಿಂದ ಏಳರವರೆಗೆ ಸರಿಯಾಗಿ ಶಾಲೆಗೆ ಹೋಗಲಾಗಲಿಲ್ಲ. ವ್ಯಾಪಾರ ಮನೆತನದ ಹುಡುಗರಿಗೆ ಅಂಗಡಿ,

ವ್ಯಾಪಾರ, ಹಣವೆಂದರೆ ಎಲ್ಲಿಲ್ಲದ ಸಂಭ್ರಮ. ಗಲ್ಲೆ ಮೇಲೆ ಕುಳಿತುಕೊಂಡು ಹಣ ಎಣಿಸುವುದು, ಅಕ್ಷರ

ಸಂಸ್ಕಾರವನ್ನು ದೂರಾಗಿಸುತ್ತದೆ ಎಂಬ ಸತ್ಯ ಗೊತ್ತಾಗಿದೆ.

ಈಗಲೂ ಅಷ್ಟೇ ವಿದೇಶಕ್ಕೆ ಹೋಗಿ ವಿದ್ಯಾರ್ಜನೆ ಮಾಡಿದ ಶ್ರೀಮಂತರ, ರಾಜಕಾರಣಿಗಳ ಮಕ್ಕಳು ವ್ಯಾಪಾರಕ್ಕೆ,

ರಾಜಕಾರಣಕ್ಕೆ ಮರಳುತ್ತಾರೆ. ವಿದ್ಯೆಗೆ ತಕ್ಕ ವೃತ್ತಿಗೆ ಅಂಟಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಅದಕ್ಕೆ

ಬಾಲ್ಯದಲ್ಲಿನ ಘಟನೆಗಳೇ ಕಾರಣ. ಹೀಗೆ ಕಾರಟಗಿ - ಧಾರವಾಡ - ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ

ಅಧ್ಯಯನ ನೆನಪುಗಳನ್ನು ಒಂದೆಡೆ ಕಟ್ಟಿಕೊಡುವ ಇರಾದೆ ಬೇಗ ಕೈಗೂಡಲಿ ಎಂದು ಆಶಿಸುತ್ತೇನೆ.

No comments:

Post a Comment