Friday, September 24, 2010

ನಿನೆಮಾ ಗೀಳು - ಶಂಕರ ಪ್ರಸಂಗ

ಬಾಲ್ಯದಲ್ಲಿ ವಿಪರೀತ ಸಿನೆಮಾ ಹುಚ್ಚು. ರಜೆಯಲ್ಲಿ ಗದುಗಿಗೆ ಬಂದರೆ ನಾನು, ಶರಣು, ಸಿದ್ದಲಿಂಗಣ್ಣ ಒಂದೇ

ದಿನದಲ್ಲಿ ಮೂರು ಸಿನೆಮಾ ನೋಡಿದ ದಾಖಲೆ. ನೋಡಿದ ಸಿನೆಮಾದ ಕತೆಯನ್ನು ರಸವತ್ತಾಗಿ ಸಂಗೀತ ಸಮೇತ

ವರ್ಣಿಸುವುದೊಂದು ವಿಶೇಷ ಕಲೆಯಾಗಿತ್ತು. ಸಿನೆಮಾ ನೋಡಿ ಬಂದ ಮೇಲೆ ಸ್ನೇಹಿತರ ಪಡೆ ಕತೆ ಕೇಳಲು

ನನ್ನ ಸುತ್ತ ಇರುತ್ತಿತ್ತು.

ನಮ್ಮೂರ ಅಕ್ಕಿ ಲಾರಿ ಹಿಡಿದು 8ನೇ ಕ್ಲಾಸಿನಲ್ಲಿದ್ದಾಗ ಬೆಂಗಳೂರಿಗೆ ಹೋಗಿ ಕಂಠೀರವ ಸ್ಟುಡಿಯೋದಲ್ಲಿ

ಶೂಟಿಂಗ್ ನೋಡಿ ನೆಚ್ಚಿನ ನಟರನ್ನು ಭೇಟಿ ಆಗಿದ್ದೆ. ಅಷ್ಟೊಂದು ಕಿರಿವಯಸ್ಸಿನ ಹುಚ್ಚು ನೆನಪಾದರೆ ಈಗ ಅಚ್ಚರಿ.

ಕಂಠೀರವ ಸ್ಟುಡಿಯೋ ಗಾರ್ಡಗೆ ಹಣ ನೀಡಿ ಸ್ಟುಡಿಯೋದ ಒಳಗೆ ನುಗ್ಗಿದ್ದೆ.

ವಿದ್ಯಾರ್ಥಿಯಾಗಿದ್ದಾಗ ಶಂಕರ್ ನಾಗ್ ನೆಚ್ಚಿನ ನಟ. ಸೀತಾರಾಮು ಅಭಿನಯಕ್ಕೆ ಬೆರಗಾಗಿದ್ದೆ. ಶಂಕರ್ ನಾಗ್

ವಿಳಾಸ ಪತ್ತೆ ಹಚ್ಚಿ ಪತ್ರ ಬರೆದಿದ್ದೆ. ಮುಂದೆ ಒಂದೆರೆಡು ತಿಂಗಳಲ್ಲಿ ಅನಿರೀಕ್ಷಿತ ಸಂತೋಷ.

ಶಂಕರ್ ನಾಗ್ ಫೋಟೋ ಇರುವ ಕಾರ್ಡ ತಲುಪಿದಾಗ ಆದ ಸಂತಸಕ್ಕೆ ಲೆಕ್ಕವೇ ಇಲ್ಲ. ಗೆಳೆಯರಿಗೆಲ್ಲ ತೋರಿಸಿ

ಸಂಭ್ರಮಿಸಿದ್ದೆ. ನನ್ನ ಸಿನೆಮಾ ಹುಚ್ಚು, ಓದಿನ ಅಲಕ್ಷ, ವ್ಯಾಪಾರದಲ್ಲಿನ ನಿರಾಸಕ್ತಿ ಮನೆಯಲ್ಲಿ ಬೇಸರ

ಉಂಟುಮಾಡಿತ್ತು. ತಮ್ಮ ಜಗದೀಶನಿಗೆ ಇಂಗ್ಲಿಷ್ ಶಿಕ್ಷಣ ನೀಡುವುದಲ್ಲದೆ ಅವನ ಬಗ್ಗೆ ಮಮಕಾರ, ನನ್ನ ಬಗ್ಗೆ

ತಿರಸ್ಕಾರವನ್ನುಂಟು ಮಾಡಿತ್ತು.

ಹೀಗಿರುವಾಗ ಜಗದೀಶ ಶಂಕನಾಗ್ ಬರೆದ ಪತ್ರವನ್ನು ಹರಿದು ಹಾಕಿ ನನ್ನ ಭಾವನೆಗಳಿಗೆ ಬೆಂಕಿ ಇಟ್ಟ. ಏನೋ

ಕಳೆದುಕೊಂಡವರ ಹಾಗೆ ಜೋರಾಗಿ ಅಳಲು ಮಾಡಿದೆ.

ಮನೆಯಲ್ಲಿ ಅನುಕಂಪ ಗಳಿಸಲು ವಿಫಲನಾದೆ. ಅದೇನು ಮಹಾ ಅಂತ ತಮ್ಮನಿಗೆ ಬೈಯ್ಯುತ್ತೀ. ನೀನಂತು

ಓದಲ್ಲ, ಬರಿಯಲ್ಲ, ಸಿನೆಮಾ ನೋಡಿ ಹಾಳಾಗ್ತಿ, ಅದನ್ನು ಹರಿದ್ರ ಏನ್ ಆತು ಎಂದು ನನ್ನನ್ನೇ ಬೈದರು.

ಚೂರಾದ ಪತ್ರವನ್ನು ಜೋಡಿಸಿ ನೋವನ್ನು ಸಹಿಸಿಕೊಂಡೆ. ಮನೆಯಲ್ಲಿ ಎಲ್ಲರೂ ಅಲಕ್ಷಿಸಿದ್ದಕ್ಕೆ ಬೇಸರವಾಗಿ

ಜಗದೀಶನ ಮೇಲೆ ಸಿಟ್ಟು ಉಕ್ಕಿ ಬಂತು. ಏನು ಮಾಡೋದು ಅವನು ಅಪ್ಪಾನ ಮುದ್ದಿನ ಮಗ ಬೇರೆ.

ಈ ಪ್ರಸಂಗದಲ್ಲಿ ಅಸಹಾಯಕನಾದೆ. ಒಬ್ಬನೇ ರೋಧಿಸಿದೆ. ವಿದ್ಯಾರ್ಥಿಗಳ ಸಿನೆಮಾ ಹುಚ್ಚನ್ನು ಯಾರೂ

ಬೆಂಬಲಿಸುವುದಿಲ್ಲವಾದ್ದರಿಂದ ಈ ಘಟನೆಯಿಂದ ಕುದ್ದು ಹೋದೆ. ಆದರೆ ಸಿನೆಮಾ ಹುಚ್ಚು ಕಡಿಮೆ ಆಗಲಿಲ್ಲ.


No comments:

Post a Comment