Saturday, May 5, 2018

ಸಮಾಧಿಯಿಂದ ಸಮಾಧಿವರೆಗೆ

*ಲವ್ ಕಾಲ*

*ಸಮಾಧಿಯಿಂದ ಸಮಾಧಿವರೆಗೆ*

ನಮ್ಮಿಬ್ಬರ ಪರಿಚಯ ಅನಿರೀಕ್ಷಿತ. ನನ್ನದು ನಿಲ್ಲದ ಹುಡುಕಾಟ. ನಿನ್ನದೋ ನಿರಾಶೆಯಿಂದ ಅಪೂರ್ಣತೆಯಲಿ ನೆಲೆ ನಿಂತ ಬದುಕು.

'ಜೀವನ ಇಷ್ಟೇ ಬಿಡು, ನನ್ನ ಪಾಲಿಗೆ ಸುಖವೆಂದರೆ ಇದೇ' ಅಂದುಕೊಂಡ ಸಹನೆಯಲಿರುವಾಗ ನಾ ಬಂದೆ.

ಬಂದರೂ ಸುಮ್ಮನೇ ಬಿಡದೆ ಬೆನ್ನು ಬಿದ್ದ ಭೂತ.
ಅದೇನೋ ಭಂಡ ಧೈರ್ಯ. ನೇರ ಪ್ರಸ್ತಾಪದಲಿ ಕಾಣದ ಲಜ್ಜೆ, ಬಿಗುಮಾನ.

ನಿನಗಾಗಿಯೇ ಹುಟ್ಟಿದವನೆಂಬ ಭ್ರಾಂತು. ನನಗೂ ಏನೂ ತಿಳಿಯಲಿಲ್ಲ. ಒಂದೇ ಹಟ.ಸಾತ್ವಿಕತೆಯ ಸೊಗಡು. ಮೋಸ, ಮುಖವಾಡ ಏನೂ ಇಲ್ಲ.
ಬೇಕು ಅಂದರೆ ಬೇಕು ಅಷ್ಟೇ.

*ಈಗ ಆ ಇತಿಹಾಸ ಬೇಡ. ಕೂಡಿದ್ದಾಯಿತು*.

ಅದರೂ ಕಳೆದ ಕ್ಷಣಗಳ ಮಧುರ ನೆನಪುಗಳು ವರ್ತಮಾನದ ಚೇತನ.

                                ***

          *ದೇವಸಮಯದೊಳೆಂದು ಮಿಲನ*

ಅಂತೂ ಒಪ್ಪಿಕೊಂಡಾಗ ನೆಲಮುಗಿಲು‌ ಒಂದೇ.

ಕೇವಲ ನಿರ್ಮಲ ಸ್ನೇಹ, ನಿಸ್ವಾರ್ಥ ಪ್ರೀತಿ, ಅದಮ್ಯ ಒಲವಧಾರೆ. ಬೇರೇನೂ ಬೇಕಿರಲಿಲ್ಲ.‌ ಕಾಮದ ಸುಳಿವೂ ಇರದ ಅನುಸಂಧಾನ.

ಸುಂದರ ಸಂಜೆಯ ಪಯಣ. ಡೆಕ್ಕನ್ ಕಡೆಗೆ. ಮಾತು,ಮಂಥನ, ನೋಟದಾಟ,ಕಾಳಜಿ.
ಗುಟುಕ ನೀರಿಗಾಗಿ ನಿಲ್ಲದ ಹಟ.

ಮೈಮನಗಳಲಿ ಇನ್ನಿಲ್ಲದ ಸಡಗರ-ಸಂಭ್ರಮ.

ನಡುರಾತ್ರಿ ರೈಲು ಊರು ಸೇರಿಕೊಂಡಾಗ ನಾವಿಬ್ಬರೂ ಒಬ್ಬರಾಗಿದ್ದೆವು.

ರೂಮ್ ಸೇರಿದಾಗ ಮುಕ್ತ ಪರಿಸರ. ಯಾವುದೇ ಅಳುಕಿಲ್ಲ.

ಬೇಕಾದದ್ದು ಬರೀ ಮಾತು. ಆದದ್ದೇ ಬೇರೆ.

ಬಿಸಿಯಪ್ಪುಗೆಯಲಿ ಕರಗಿದಾಗ ದಿಕ್ಕೇ ತೋಚಲಿಲ್ಲ.
ನಿನಗೂ ಏನಾಗುತ್ತೆ ಎಂದು ಗೊತ್ತಿರಲಿಲ್ಲ.
ಯಾವ ಬಯಕೆಯೂ ಇರಲಿಲ್ಲ.

ಆದರೂ ಎಲ್ಲ ಶಿಷ್ಟಾಚಾರದ ಹಂಗು ಹರಿದು ನೀ ಕಾಪಾಡಿಕೊಂಡಿದ್ದ ,ಹಾಕಿಕೊಂಡಿದ್ದ ಗಡಿ ದಾಡಿದೆ.

ಆದರೆ ಅಲ್ಲಿ ಯಾವುದೇ ವಿಷಾದವಾಗಲೀ,ಪಶ್ಚಾತ್ತಾಪವಾಗಲೀ ಕಾಣಲಿಲ್ಲ.ಅದರ ಪರಿವು ಇಬ್ಬರಿಗೂ ಇರಲಿಲ್ಲ.

ಒಮ್ಮೆಲೇ ಆಹ್ವಾನಿಸಿ ಕಣ್ಣು ಮುಚ್ಚಿ, ಕೇವಲ ಸ್ಪರ್ಷಕೆ ಕೆರಳದೇ ಅರಳಿದ್ದು ನನಗೂ ಆಶ್ಚರ್ಯ!

ನಾನದನ್ನು ಊಹಿಸಿಯೂ ಇರಲಿಲ್ಲ. ಕಾಮದಾಚೆಗಿನ ಸಂಬಂಧ ಇದಾಗಿರಲಿ ಎಂದು ಬಯಸಿದ್ದೆ ಕೂಡಾ!

ಆದರೆ ಎಲ್ಲವೂ ವಿಧಿಲಿಖಿತ,ಪೂರ್ವನಿರ್ಧಾರಿತ.ದೈವಸಂಕಲ್ಪ ಈ ದೇಹಗಳ ಮಿಲನವೂ ನಮ್ಮ ಕೈಯಲ್ಲಿರುವುದಿಲ್ಲ ಎಂಬ ಸತ್ಯ ಗೋಚರವಾಯಿತು.

ಫ್ಲರ್ಟ್ ಗಳು ತೊಡೆ ಬದಲಿಸುವ ಕಥೆಗಳು ನಿತ್ಯ ಚುಚ್ಚುತ್ತಿರುವಾಗ ಕಾಮ ಅಸಹ್ಯ ಕ್ರಿಯೆಯೆನಿಸಿ ಪಾವಿತ್ರ್ಯತೆ ಕಳೆದುಕೊಂಡಿತ್ತು.

*ಕಾಮವೂ ಆಧ್ಯಾತ್ಮದ ಧ್ಯಾನಸ್ಥ ಸಮಾಧಿಯೋಗ ಎಂಬುದೊಂದು ಕಾಮದಾಟಕೆ ಹೂಡಿದ ಸಂಚು ಅಂದುಕೊಂಡ ಅಜ್ಞಾನಿ*

ಎರಡು ಮನಸುಗಳು ಮಿಲನಕಾಗಿ ಹಾತೊರೆಯುತ್ತ ಎಲ್ಲೋ ಕಾಯ್ದು ಕುಳಿತು ಆ ದೇವಸಮಯ ಬಂದ ಕೂಡಲೇ ಕರಗಿ ನೀರಾಗಬಹುದೆಂಬ ಸತ್ಯ ಎಲ್ಲ ಮುಗಿದ ಮೇಲೆ ಹೊಳೆಯಿತು.

ಈಗ ಎಲ್ಲ ಮಿಲನಮಹೋತ್ಸವದ ಸಡಗರದಲಿ ಸಮಾಧಿಯ ಸಮ್ಮಿಳಿತದ ಲಯವಿದೆ. ವೀಣಾ ವಾದನವಿದೆ. ತಬಲಾ ವಾದನವೂ ಇದೆ. ಸಂಗೀತದ ಆಲಾಪವೂ ಇದೆ.

ಸಂಭೋಗದಿಂದ ಸಮಾಧಿಗೇರಲೆಂದು ಅವನು ಹೂಡಿದ ಸಂಚಿದು.

ಆಧ್ಯಾತ್ಮದ ಮನೆಯ ಹೊಸ್ತಿಲಲಿರುವ ಈ ವಯೋಮಾನದಲಿ, ಕಾಮದ ಹಸಿವು ಅಳಿದ ಇಳಿಹೊತ್ತಲಿ ಇದು ಹೇಗೆ?
ಗೊತ್ತಿಲ್ಲ. ಗೊತ್ತಾಗುವುದು ಬೇಡ.

ಇಡೀ ಬದುಕಿನ ನೋವುಗಳ ಸಹಿಸಿಕೊಂಡು ಭಾವನೆಗಳು ತಾನೇ ತಾನಾಗಿ ಬತ್ತಿ ಹೋದಾಗ ಈಗ ಹೀಗೆ ನಡೆದುಹೋಯಿತೆಂಬ ಪಾಪಪ್ರಜ್ಞೆ ಬೇಡ. ನಿನ್ನ ಚರಿತ್ರೆ ಹಾಗೂ ಚಾರಿತ್ರ್ಯ ಗೊತ್ತು.

ಅಮೂಲ್ಯ ಮನಸುಗಳು ಕಳೆದರೂ ಸುಖವಿದೆ,ತಪ್ಪಿನಲೂ ಖುಷಿಯಿದೆ.

ಆದರೆ ಈ ತಪ್ಪು ಬೇರೆ ಕಡೆ ನಡೆದರೆ ಮಾತ್ರ *ಅಕ್ಷಮ್ಮ*.

ಇಬ್ಬರಿಗೂ ಆ ಅರಿವಿನ ಪರಿಪೂರ್ಣ ಎಚ್ಚರಪ್ರಜ್ಞೆ ಇದ್ದೇ ಇದೆ.

ಸಾಗುತಲೇ ಇರೋಣ ಒಲವ ಹಾದಿಯಲಿ ಸಮಾಧಿಯಿಂದ ಸಮಾಧಿವರೆಗೆ...

      *ಸಿದ್ದು ಯಾಪಲಪರವಿ*

No comments:

Post a Comment