Friday, May 4, 2018

ನಿತ್ಯವೂ ಮಧುಚಂದ್ರ

*ಲವ್ ಕಾಲ*

*ನಿತ್ಯವೂ ಮಧುಚಂದ್ರ*

ಪ್ರೀತಿಸುವ ವ್ಯಕ್ತಿ ಜೊತೆಗಿದ್ದರೆ ನಿತ್ಯವೂ ಮಧುಚಂದ್ರ.

ಕುಲು-ಮನಾಲಿ,ಊಟಿ-ಕೊಡೈಕೆನಲ್, ಕಾಶ್ಮೀರ ಕಣಿವೆ, ಸ್ವಿಜರ್ಲ್ಯಾಂಡ್ ಹಾಗೂ ಅಮೇರಿಕಾದ ಕಣಿವೆಗಳಿಗೆ ಪ್ರೇಮಿಗಳು ಪ್ರೀತಿ ಉಕ್ಕಿದಾಗಲೆಲ್ಲ ಓಡಿ ಹೋಗಿ ಆನಂದ ಅನುಭವಿಸಬಹುದೆಂಬ ಭ್ರಾಂತು.

ಹನಿಮೂನ್ ಎಂಬ ಮಧುಚಂದ್ರ ಮನುಷ್ಯನ ಸುಂದರ ಕಲ್ಪನೆ. ಅಪರಿಮಿತವಾದ ಒಲವ ಭಾವಗಳಿಗೆ ಜೀವ ತುಂಬುವ ಕಲ್ಪನಾ ವಿಲಾಸ.

ಆದರೆ ವಾಸ್ತವ ಹಾಗಲ್ಲ. ಪ್ರೀತಿ-ಪ್ರೇಮ-ಪ್ರಣಯ ಎಂಬುದೊಂದು ಧ್ಯಾನಸ್ಥ ಮನಸ್ಥಿತಿ.

ಮನಸನ್ನು ನಾವು ಎಲ್ಲಿದ್ದರೂ ನಿಗ್ರಹಿಸಬಹುದು. ಮನೋನಿಗ್ರಹ ಹಿಮಾಲಯಕ್ಕೆ ಹೋದವರಿಗೆ,ಸನ್ಯಾಸ ಸ್ವೀಕರಿಸಿದವರಿಗೆ ಮಾತ್ರ ಎಂಬುದು ಅರ್ಧಸತ್ಯ.

ಹಿಮಾಲಯದ ಗುಹೆಯೊಳಗೆ ಸಮಾಧಿಸ್ಥಿತಿಯಲ್ಲಿ ಎಲ್ಲವನ್ನೂ ನಿರಾಕರಿಸಿದ Hermit souls ಎಂಬ ದೇವಮಾನವರಿಗೆ ಬೇರೇನು ಬೇಡವಾಗಿರುತ್ತೆ.
ತಮ್ಮದೇ ಆದ ಲೋಕ ಸೃಷ್ಟಿಸಿಕೊಂಡು, ಈ ಲೋಕದ ಏಳಿಗೆ ಬಯಸುತ್ತಾರೆ

ಆದರೆ ನಾವು ಸಾಮಾನ್ಯರು ಇಲ್ಲಿದ್ದೇ ಎಲ್ಲವನ್ನೂ ಸಾಧಿಸಿ Star souls ಆಗಬೇಕು.

ಯೋಗ-ಧ್ಯಾನದ ಮೂಲಕ Friendly souls ಆಗಿ ಬದುಕುವ ಅಗತ್ಯವೂ ಇದೆ.

ಈ ಮಧುಚಂದ್ರವೂ ಉಳ್ಳವರ ಪರಿಕಲ್ಪನೆ. ಅಹಮಿಕೆಯ ಸಂಕೇತ. ಮದುವೆಯೆಂಬುದು ಕೇವಲ ದೈಹಿಕ ಮಿಲನದ ಸಡಗರವಲ್ಲ.

ದೈಹಿಕ ಮಿಲನ ಐಷಾರಾಮಿ ವಾತಾವರದಲ್ಲಿ, ಸ್ಟಾರ್ ವೈಭವಗಳಲ್ಲಿ ಮಾತ್ರ ಉತ್ತೇಜಿಸುತ್ತದೆ ಎಂಬುದೂ ಅಪ್ರಸ್ತುತ.

ದೊಡ್ಡ ದೊಡ್ಡ ಶ್ರೀಮಂತ ದಂಪತಿಗಳು ವೈಯಕ್ತಿಕ ಅಹಮಿಕೆ,ಒಣಪ್ರತಿಷ್ಟೆ, ಪುರುಷ ಪ್ರಧಾನ ಮನೋಧರ್ಮದಲ್ಲಿ ಶೀತಲ ಸಮರದಲಿ ತಮಗರಿವಿಲ್ಲದಂತೆ ಕಳೆದುಹೋಗಿರುತ್ತಾರೆ.

ಮುಸುಕಿನ ಗುದ್ದಾಟದಲ್ಲಿ, ಜ್ಞಾನದ ಅಹಮಿಕೆಯಲಿ ಸುಖಿಸದೇ ದೇಹ-ಮನೋಮಿಲನಗಳಿಂದ ದೂರ ಸರಿದುಬಿಡುತ್ತಾರೆ.

ಮದುವೆ ವಾರ್ಷಿಕೋತ್ಸವದ ಬೆಳ್ಳಿ-ಬಂಗಾರದ ಆಚರಣೆಗಳಲಿ ಬರೀ ಢಾಂಬಿಕತೆಯ ಸೋಂಕು.‌

*ಮನೆ-ಮನಗಳಲಿ* ಇಲ್ಲದ ಒಲವು ಮಧುಚಂದ್ರದಲಿ ಹೇಗೆ ತಾನೇ ಸಿಕ್ಕೀತು?

ಆದರೂ ನೀ ಹೋಗ  ಬಯಸಿದ್ದು ನನಗೇನು ಬೆರಗುಂಟು ಮಾಡಿಲ್ಲ.

ನಮ್ಮ ಧ್ಯಾನಸ್ಥ ಸಮಾಧಿ ಸ್ಥಿತಿಯಲ್ಲಿ ನಾವು ಅನುಭವಿಸಿದ್ದು ಯಾವ ಮಧುಚಂದ್ರಕೆ ಕಡಿಮೆ ಹೇಳು?

ಪರಸ್ಪರರ ಮಿಲನಮಹೋತ್ಸವದ ಸಡಗರವನೊಮ್ಮೆ ಮೆಲುಕು ಹಾಕು.
ಆ ದಿವ್ಯಾನುಭವಕೆ ನಮಗೆ ನಾವೇ ಸಾಟಿ.

ಈಗ ಹೇಳು. ಇಲ್ಲಿ ಇದ್ದು ಎಲ್ಲ ಅನುಭವಿಸಿದ ನಮಗೆ ಅಲ್ಲಿ ಇನ್ನೇನಿರಲು ಸಾಧ್ಯ?

ಇಲ್ಲಿಯೇ ಇದ್ದು ನಮ್ಮೀ ಸಡಗರದ ಮಿಲನದ ಕಾವು ಕಾಪಿಟ್ಟುಕೊಂಡು ಸಮಾಧಿ ಸ್ಥಿತಿಯ ಸನ್ನಿಧಿಯಲಿ ಸಮರ್ಪಿತರಾಗಿ ಇರೋಣ.

      *ಸಿದ್ದು ಯಾಪಲಪರವಿ*

No comments:

Post a Comment