Friday, May 25, 2018

ಕಾವ್ಯಾಮೃತ

ಕಾವ್ಯಾಮೃತ

ನೀ ಕೊಟ್ಟದ್ದು ವಿಷ ಎಂದು
ಗೊತ್ತಿದ್ದರೂ ಗಟ ಗಟನೆ ಕುಡಿದೆ
ನನ್ನ ಮೈತುಂಬ ನಿನ್ನೊಲವ ಅಮೃತವಿತ್ತು.

***

ನೀ ನಿಲ್ಲದೇ ಓಡಿ ಹೋಗುವೆ
ಇಲ್ಲದ ನೆಪ ಹೇಳಿ ಎಂದು
ಗೊತ್ತಿದ್ದೂ ನಂಬಿದೆ
ನಾ ಓಡಿ ಹೋಗುವುದಿಲ್ಲ
ಎಂಬ ನಂಬಿಗೆಯಿಂದ.

***

ಕನಸುಗಳಿಗೆ ಬಣ್ಣ ತುಂಬಿ
ಸುಂದರವಾದ ಚಿತ್ರ ಬಿಡಿಸಿ
ಹೆಸರು ಹಾಕದೆ ಮರೆಯಾದೆ
ಆಗಲೇ ಹೆಸರು ಅಚ್ಚೊತ್ತಿತ್ತು
ನನ್ನೆದೆಯ ಗೋಡೆಯಲಿ.

***

ಕಣ್ಣಲ್ಲಿ ಆಟ ಆಡಿದೆ ಮನದಲಿ
ತಳ ಹೂಡಿದೆ
ಶಬ್ದಗಳಲಿ ಮಾತು ಕೊಡದೆ
ನಿಶಬ್ದವಾದೆ
ಮಾತಿಗೆ ಮೀರಿದ ಮಮಕಾರದಿ
ಮರೆಯಾದೆ.

***

ಅಪರಿಚಿತಳಾಗಿ ಉಳಿಯುವ ಹುನ್ನಾರ
ಅರಿತೂ ನಿತಾಂತವಾಗಿ ಆಟವಾಡಿದೆ
ಮೊದಲೇ ಒಪ್ಪಿಕೊಂಡ ಸೋಲೆಂಬಂತೆ.

***

ಈ ಕಳ್ಳಾಟವೇ ಹೀಗೆ ತುಂಬಾ ರುಚಿ
ತಿನ್ನಲು ಬಾರದು ಬಿಡಲು ಬಾರದು
ತಿಂದುದ ಮೀರಿಸುವ ಅಪರಿಮಿತ ಸಿಹಿ.

***

ನೀ ಹೋದ ಮೇಲೆ ನಾ ಸುಖಿ
ಅಂದುಕೋ ಬೇಡ ಸಖಿ
ಚೂರಿದ ಗಾಯ ಮರೆಯಾಗದಿರಲಿ
ಎಂದು ನಿತ್ಯ ಕೆರೆಯುತಲಿರುವೆ.

***

ಹಗಲು ಕತ್ತಲೆ ಬೇಕೆನಿಸುತ್ತದೆ
ರಾತ್ರಿ ಹಗಲಾಗುತ್ತದೆ ನಿನ್ನ
ಬೆಳದಿಂಗಳ ಬೆಳಕಿನ ಹೊಳಪಲಿ
ಮರೆಯುವದಾದರೂ ಹೇಗೆ
ಈ ನೆಳಲು-ಬೆಳಕಿನಾಟದಲಿ.

***

---ಸಿದ್ದು ಯಾಪಲಪರವಿ

No comments:

Post a Comment