Wednesday, May 16, 2018

ಖಾಲಿತನ-ಧ್ಯಾನ ಮತ್ತು ಏಕಾಂತ


*ಖಾಲಿತನ-ಧ್ಯಾನ ಮತ್ತು ಏಕಾಂತ*

ತುಂಬಾ ಆತ್ಮೀಯರು, ಇನ್ನರ್ ಸರ್ಕಲ್ ನಲ್ಲಿ‌ ಇದ್ದವರೂ ಅರಿವಿಲ್ಲದಂತೆ ನೋಯಿಸಿಬಿಡುತ್ತಾರೆ ಯಾವುದೇ ದುರುದ್ದೇಶವಿಲ್ಲದೇ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ನಮ್ಮನ್ನು ಕಿತ್ತು ತಿನ್ನುತ್ತವೆ. ಹತ್ತಿರವಿದ್ದವರು ಬೇಗನೇ ಆರೋಪಿಸಿಬಿಡುತ್ತಾರೆ.

ನಾವೇ ಸರಿ ಎಂಬ ಅಹಮಿಕೆಯಲಿ ಮನಸು ಮುರಿಯಬಾರದು. ಹಾಗೆ ಮುರಿಯುವ ಪ್ರಸಂಗ ಎದುರಾದಾಗ ಯಾರಾದರು ಒಬ್ಬರು ಮೌನವಹಿಸಬೇಕು‌‌.

ಆದರೆ ಕೆಲವೊಮ್ಮೆ ಮೌನ ಮುರಿಯುವ ಅನಿವಾರ್ಯತೆ. ಮುರಿಯುವ ಮನಸು ಮುರಿಯದಂತೆ ಎಚ್ಚರವಹಿಸಬೇಕು.

ಆ ತಲ್ಲಣ ಚಡಪಡಿಕೆ ಒಮ್ಮೆಲೇ ತಣ್ಣಗಾಗುವುದಿಲ್ಲ.
ತಣ್ಣಗಾಗಲಾರದು.

ಸರಿ, ತಕ್ಷಣದ ಶಮನಕೆ ಜಾಗ ಬದಲಿಸಬೇಕು.
ಆ ಜಾಗದಲಿ ನಮ್ಮ ವಾದವನು ಸಮರ್ಥಿಸುವ ಅಥವಾ ಅಲ್ಲಗಳೆಯುವ ಜನರ ಮಧ್ಯೆ ಇರಬಾರದು.‌

ನಾವೇ ಏಕಾಂತವಾಗಿದ್ದುಕೊಂಡು ಸರಿ ತಪ್ಪುಗಳ ಆತ್ಮಾವಲೋಕನಕಿಳಿಯಬೇಕು.

ಏಕಾಂತದಲಿ ಮನಸನು ಪೊಸೆಟಿವ್ ಆಲೋಚನೆಯಲ್ಲಿ ತೊಡಗಿಸಬೇಕು.

' ನಮ್ಮ ಅಭಿಪ್ರಾಯಗಳನ್ನು ಪ್ರಶ್ನಿಸಿ ವಿರೋಧಿಸಿದವರನ್ನು ನೀಚರು, ಅಧಮರು' ಎಂದು ಬೈಯುತ್ತ ಹಲ್ಲು ಕಡಿಯಬಾರದು.

ಎಲ್ಲರೂ ಅವರವರ ನೆಲೆಯಲ್ಲಿ ತಪ್ಪಿದ್ದರೂ ಸರಿ ಎಂದೇ ಆಲೋಚಿಸಿ ತಪ್ಪು ಮಾಡುತ್ತಾರೆ.

ಆತ್ಮೀಯರ ಭಿನ್ನ ವಿಚಾರಧಾರೆಗಳ‌ ಸಹಿಸುವ ಮನಸ್ಥಿತಿ ರೂಪಿಸಿಕೊಳ್ಳಲು *ಏಕಾಂತ* ನೆರವಾಗುತ್ತದೆ.

                             ***

ಹಾಗಾದರೆ ಏಕಾಂತದಲಿ‌ ಏನು‌ ಮಾಡಬೇಕು. ಏಕಾಂತ ಒಂಟಿತನವೆನಿಸಿ ಇನ್ನೂ ಹಿಂಸೆಯಾದರೆ?

ಹಾಗಾಗಲು ಬಿಡಬಾರದು. ನಮಗಿಷ್ಟವಾದ ಮನೋಲ್ಲಾಸ ಹೆಚ್ಚಿಸುವ ಪುಸ್ತಕ ಓದಬೇಕು.
ಓದುವ ಹವ್ಯಾಸ ಇರದಿದ್ದರೆ ಸಂಗೀತ ಆಲಿಸಬೇಕು.
ಮನೋರಂಜನಾತ್ಮಕ ಸಿನೆಮಾ ನೋಡಬೇಕು.

ಧ್ಯಾನ ಮಾಡುವ ಪ್ರವೃತ್ತಿ ಇದ್ದರೆ ದೀರ್ಘಕಾಲದ ಧ್ಯಾನ ಮಾಡಬೇಕು. ಧ್ಯಾನಸ್ಥ ಸ್ಥಿತಿ ನಮ್ಮ ಆಲೋಚನಾ ದಿಕ್ಕನ್ನೇ ಬದಲಿಸಿ ಮನಸನ್ನು ಪ್ರಫುಲ್ಲಗೊಳಿಸುತ್ತದೆ.

ಏಕಾಂತದಷ್ಠೇ ಪ್ರಿಯವಾಗುವ ಸಂಗಾತಿಗಳ ಸಾಮಿಪ್ಯ ಸುಖ ಇನ್ನೂ ಉತ್ತಮ. ಆದರೆ ಆ ಸಂಗಾತಿಗಳು 'ನೀನು ಮಾಡಿದ್ದು ಸರಿಯಲ್ಲ' ಎಂಬ ಅಪ್ರಿಯ ಹಿತೋಪದೇಶ ಮಾಡುವ ಮನೋಭಾವ ಹೊಂದಿರದೇ ನಾವು ಮಾಡಿದ್ದೇ ಸರಿ ಎಂದು ಒಪ್ಪಿಕೊಳ್ಳುವ ಉದಾರಿಗಳಾಗರಬೇಕು.

ಮೈಮನಗಳಿಗೆ ಚೈತನ್ಯ ತುಂಬುವ ಪಾರ್ಟನರ್ ಆಗಿದ್ದರೆ ಇನ್ನೂ ಎಕ್ಸಲೆಂಟ್. ಮೈಮನಗಳ ಹಗುರಾಗಿಸುವ ಸಾಮಿಪ್ಯ ಇದಾಗಿರಬೇಕು.ಮತ್ತಿಷ್ಟು ಭಾರ ಹೆಚ್ಚಿಸಬಾರದು‌.

*ಗಾನ-ಧ್ಯಾನ-ಕಾಮ‌* ಸೂತ್ರ ಸೂಕ್ಷ್ಮಾತಿ ಸೂಕ್ಷ್ಮ. ಸಹ್ಯವಿರದಿದ್ದರೆ ಮಾತ್ರ ಹಿತಕರ. ಇಲ್ಲದಿರೆ ಇನ್ನೂ ಅಸಹ್ಯ.

*ಹಾಡಿದರೆ ಎನ್ನೊಡೆಯನ ಹಾಡುವೆ
ಬೇಡಿದರೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ‌ ತೋರಿ ಬಡತನವ
ಬಿನ್ನಹಿಸುವೆ* ಎಂಬ ಅಣ್ಣನ ವಚನದ ಸಾಲುಗಳ ಧೇನಿಸುತ ಒಂದೆರಡು ದಿನ ಕಾಲ ಕಳೆದು ಮತ್ತೆ ಯಥಾಪ್ರಕಾರ ನಮ್ಮ ಗೂಡ ಸೇರೋಣ.

ಇನ್ನರ್ ಸರ್ಕಲ್ ನವರು ಹೊರಗೆ ಹೋಗಿದ್ದಾರೆ  ಅನಿಸಿದರೆ ಒಳಗೆಳೆದು ಕಟ್ಟಿ ಹಾಕೋಣ.‌

     *ಜಾಯ್ ಫುಲ್ ಲಿವಿಂಗ್‌*

          *ಸಿದ್ದು ಯಾಪಲಪರವಿ*

      

No comments:

Post a Comment