Thursday, May 10, 2018

ಫೇಕು ಫೇಸುಗಳಿಂದ ಕೊಂಚ ದೂರ ಇರೋಣ

ಲವ್ ಕಾಲ

*ಫೇಕು ಫೇಸುಗಳಿಂದ ಕೊಂಚ ದೂರ ಇರೋಣ*

ಅದೇ ನಗು. ಬರೀ ಮುಖವಾಡಗಳು, ಹಿಂದೊಂದು ಮುಂದೊಂದು. ಎಷ್ಟು ದಿನ ಅಂತ ನಂಬೋದು.

ನಮ್ಮ ಅಮಾಯಕ ಒಳ್ಳೆಯತನದ ದುರುಪಯೋಗ. ನಮಗೋ ನಮ್ಮ ನೆಮ್ಮದಿ ಹಾಳು. ಈ ಫೇಕುಗಳ ಕುರಿತು ಮಾತಾಡಿ ನಮ್ಮ ಪ್ರೀತಿಯ ಸಮಯ ಹಾಳು. ಮನಸಿಗೂ ನಿಲ್ಲದ ಕಳವಳ.

ನೂರಾರು ತಾಸುಗಳನು ಈ ರಕ್ಕಸರು ಕುತಂತ್ರದಿಂದ ಪರೋಕ್ಷವಾಗಿ ನುಂಗಿ ಹಾಕಿದ್ದಾರೆ.
ಅವರಿಗೆ ನಮ್ಮಿಬ್ಬರ ಅನುಸಂಧಾನಕೆ ಕೊಳ್ಳಿ ಇಡುವ ಸಂಚು. ಆದರೆ ಅದನ್ನು ನೇರವಾಗಿ ಹೇಳದೇ ಸಮಯ ಕಸಿಯುವ ಹುನ್ನಾರ.

ನಮಗದರ ಅರಿವಿರಲಿ. ನಮ್ಮ ಸಮಯ ನಮ್ಮ ಮನದ ಮಾತಿಗೆ ಬೇರೆಯವರ ಅಪಸ್ವರ ಬೇಡ.

ಒಂದು ಕಾಲ ಘಟ್ಟದಲ್ಲಿ ಮನಸಿನ ಹುಡುಕಾಟ ನೆಲೆ ನಿಂತ ಹೊತ್ತಲಿ, ನಮ್ಮ ಸಂಭ್ರಮ, ಸಾಮಿಪ್ಯ,ಸಾಂಗತ್ಯ ಅನುರಣನಗೊಳಲು  ಫೇಕುಗಳ ಉಸಾಬರಿ ನಿಲ್ಲಿಸಿಬಿಡಬೇಕು.

ಹೊಗಳಿ ಮರ ಹತ್ತಿಸಿ ಸಸುನಗುತ ಅಭಿಮಾನ ತೋರಿಸುವ ನೆಪದಲಿ ನಮಗರಿವಿಲ್ಲದಂತೆ ನಮ್ಮ ನೆಮ್ಮದಿಗೆ ಕೊಳ್ಳಿ ಇಟ್ಟುಬಿಡುತ್ತಾರೆ.

ಅವರಿವರ ಓಲೈಕೆಯ ಜಂಟ್ಲ್ ಸಿಂಡ್ರೋಮಾದಲಿ ನಾವು ಕಳೆದುಹೋಗುವುದು ಬೇಡ ಕೂಸೆ.

ನಮ್ಮ ಒಳ್ಳೆಯತನ ಅವರಿಗೆ ಉಡಾಫೆ ಅನಿಸಿದಾಗಲಾದರೂ ನಾವು ದೂರ ಸರಿಯಬೇಕು.

ಮಾತುಕತೆ-ಬರಹಗಳ‌ ಮೂಲಕ ನಮ್ಮ ಬಾಂಡೇಜ್ ಗಟ್ಟಿಗೊಳಿಸಿಕೊಳ್ಳುವಲ್ಲಿ ನಾವು ಹೈರಾಣಾಗಿ ಬಿಡುತ್ತೇವೆ.

ಈ ಹಂತದಲ್ಲಿ ಅದರ ಅಗತ್ಯವಿಲ್ಲ ನಮ್ಮ ಪಾಡಿಗೆ ನಾವು ನಿರುಮ್ಮಳಾಗಿರಬೇಕು. ನಾವೀಗ ತುಂಬಾ ದಣಿದಿದ್ದೇವೆ.
*ಜವಾಬ್ದಾರಿಗಳೂ ಜರ್ಜರಗೊಳಿಸಿವೆ*.
ಉಸಾಬರಿಗೆ ಒಂದಿಷ್ಟು ವಿರಾಮ ನಾವೇ ಕೊಡೋಣ.

ಈಗ ಸಂತೃಪ್ತ ಬದುಕು ನಮ್ಮದು. ಹೀಗಿರುವಾಗ ಉಳಿದವರ ಸೆಳೆತದಿಂದ *ನಾವೇ ಸ್ವಯಂ ನಿರ್ಬಂಧ ಹೇರಿಕೊಳ್ಳೋಣ*.

*ಮಾತುಗಳ ಮಂಥನದಲಿ‌ ಬರೀ ಒಲವ ವರತೆ ಉಕ್ಕಿ ಹರಿಯಬೇಕು. ವಿವಾದಗಳಲ್ಲ*.

ಸಾಕು ಚಿನ್ನ ಸಾಕು ಈ ಫೇಕುಗಳ ಉಸಾಬರಿ. ದೂರ ಬಹು ದೂರದಲಿರುವ ನಾವು ಸೇರಲು ಹರಸಾಹಸ. ಮಾತಿಗೂ ಸರಳವಾಗಿ ಸಮಯ ಅಲಭ್ಯ. ಹೀಗಿರುವಾಗ ಸಮಯದ ಸದ್ಭಳಕೆಯಲಿ‌ ಸಾಮಿಪ್ಯ ಸಂಭ್ರಮಿಸೋಣ.

ಸಿಕ್ಕ ಅಮೂಲ್ಯ ಸಮಯವನ್ನು ಈ ಪೋಕರಿಗಳು ನುಂಗುವುದಕ್ಕೆ ಅವಕಾಶ ಮಾಡಿಕೊಡಬೇಡ.

*ಮುಂದೆ ನಮ್ಮ ಮಾತುಕತೆ ನಮಗಾಗಿ ಮಾತ್ರ ಮೀಸಲಾಗಿರಲಿ*.

ಯಾರೋ ನಮ್ಮ ನೆಮ್ಮದಿ ಕಸಿಯದಂತೆ *ತೋಳ ತೋರಣದ ಚಪ್ಪರದಡಿ ಹಾಯಾಗಿ ಮಲಗಿ ಮೈಮರೆತು ದಣಿವಾರಿಸಿಕೊಳ್ಳೋಣ*.

        *ಸಿದ್ದು ಯಾಪಲಪರವಿ*

No comments:

Post a Comment