Thursday, September 23, 2010

ಗಾನ ವಿದ್ಯಾ ಬಡೀ ಕಠಿಣ ಹೈ !

ಪರಮ ಪೂಜ್ಯ ಪಂಡಿತ ಪುಟ್ಟರಾಜ ಗವಾಯಿಗಳು ೯೭ರ ಪ್ರಾಯದಲ್ಲಿ ಲಿಂಗೈಕ್ಯರಾದ ಸಂದರ್ಭದಲ್ಲಿ ಅಂಧಕಲಾವಿದನೊಬ್ಬ ಮರದ ಕೆಳಗೆ ನಿಂತು ಅನಾಥವಾಗಿ ರೋಧಿಸುತ್ತಿದ್ದ. ಹೆತ್ತವರಿಗೆ ಬೇಡವಾದ, ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಕುರುಡ ಬಾಲಕನನ್ನು ವಿರೇಶ್ವರ ಪುಣ್ಯಾಶ್ರಮಕ್ಕೆ ಕರೆತಂದು ಸಾಕಿ, ಸಲುಹಿ, ಸಂಗೀತ ಅಭ್ಯಾಸ ನೀಡಿ ಬೆಳೆಸಿದರು. ಪರಿಣಾಮ ಈಗ ಈ ಕಲಾವಿದ ನಾಗಯ್ಯ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಸ್ವಾಭಿಮಾನಿ ಬದುಕು ಸಾಗಿಸುತ್ತಿದ್ದಾನೆ.
ಇಂತಹ ಸಾವಿರಾರು ಉದಾಹರಣೆಗಳನ್ನು ಡಾ. ಪಂ. ಪುಟ್ಟರಾಜ ಕವಿಗವಾಯಿಗಳು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ. ಭಕ್ತರ ಪಾಲಿನ ನಡೆದಾಡುವ ದೇವರೆಂದು, ಸಂಗೀತಗಾರರಿಗೆ ಉಭಯಗಾನ ವಿಶಾರದರೆಂದು ಖ್ಯಾತಿ ಪಡೆದಿದ್ದ ಡಾ. ಪುಟ್ಟರಾಜ ಕವಿ ಗವಾಯಿಗಳು ಮೂಲತಃ ಹಾನಗಲ್ ತಾಲೂಕಿನ ದೇವರ ಹೊಸಪೇಟೆಯವರು.

ಬಾಲ್ಯದಲ್ಲಿ ಆಕಸ್ಮಿಕವಾಗಿ ಕಣ್ಣುಕಳೆದುಕೊಂಡ ಪುಟ್ಟಯ್ಯ ಅಂಧ ಅನಾಥರ ಕುಬೇರರೆನಿಸಿಕೊಂಡಿದ್ದ ಪಂಚಾಕ್ಷರಿ ಗವಾಗಳವರ ಕೃಪೆಗೆ ಪಾತ್ರರಾದರು. ಸಮರ್ಥ ಗುರುಗಳ ಸಾಧಕ ಶಿಷ್ಯರಾಗಿ ಸಂಗೀತ ಅಭ್ಯಾಸ ಮಾಡಿದರು.
ಬಾಹ್ಯದ ನೋಟವಿರದಿದ್ದರು ಅಂತರಂಗದ ಕಣ್ಣನ್ನು ಸದಾ ಜಾಗೃತವಾಗಿಟ್ಟುಕೊಂಡು ಸಂಗೀತಾಭ್ಯಾಸ ಮಾಡಿ ಸಾಧಕರಾದರು. ಬಸರಿಗಿಡದ ವಿರಪ್ಪನವರು ದಾನ ಮಾಡಿದ ಗದುಗಿನ ಜಾಗೆಯಲ್ಲಿ ವಿರೇಶ್ವರ ಪುಣ್ಯಾಶ್ರಮ ತಲೆ ಎತ್ತಿ ನಿಂತಿತ್ತು. ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪಂಚಾಕ್ಷರಿ ಗವಾಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಈ ಕ್ರಿಯೆ ೨೦ನೆಯ ಶತಮಾನದ ಪವಾಡವೇ ಸರಿ.
ಅಪಾರ ಶೃದ್ಧೆ, ಸತತ ಪರಿಶ್ರಮ, ಗುರು ಭಕ್ತಿ ಹಾಗೂ ಇಷ್ಟಲಿಂಗ ಪೂಜಯನ್ನು ತಪಸ್ಸೆಂದು ಭಾವಿಸಿದ ಪುಟ್ಟರಾಜ ಗವಾಗಳು ಪಂಚಾಕ್ಷರ ಗವಾಗಳ ಮನ ಗೆದ್ದರು. ತಮ್ಮ ಉತ್ತರಾಧಿಕಾರಿಯನ್ನಾಗಿ ವಿರೇಶ್ವರ ಪುಣ್ಯಾಶ್ರಮದ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಪುಟ್ಟರಾಜರಿಗೆ ಇದೆ ಎಂದು ಅರಿತ ಗುರುಗಳು ಅಂಧ ಅನಾಥರ ಬಾಳಿಗೆ ಬೆಳಕು ನೀಡುವ ಹೊಣೆಯನ್ನು ಪುಟ್ಟಯ್ಯಜ್ಜ ಅವರ ಹೆಗಲಿಗೆ ಹೊರಿಸಿದರು.
೧೯೪೪ ರ ಜೂನ ೧೧ ರಿಂದ ವಿರೇಶ್ವರ ಪುಣ್ಯಾಶ್ರiದ ಜವಾಬ್ದಾರಿ ಹೊತ್ತ ಪುಟ್ಟಯ್ಯಜ್ಜ ಅವರು ಪುಟ್ಟ'ರಾಜ'ರಾಗಿ ಮೆರೆದರು. ನಿರಂತರ ೬೬ ವರ್ಷಗಳ ಕಾಲ ಲಕ್ಷಾಂತರ ಅಂಧರ ಬಾಳಿಗೆ ಬೆಳಕು ನೀಡಿದರು.
ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ನಿರಂತರ ಸಾಧನೆಯ ಮೂಲಕ ಒಲಿಸಿಕೊಳ್ಳಬೇಕು. ಹಾಗೆ ಒಲಿಸಿಕೊಂಡವರು ವೈಯುಕ್ತಿಕ ಕೀರ್ತಿ, ಹಣ ಸಂಪಾದಿಸುತ್ತಾರೆ. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಠೆಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಯೂ ಪಾಲಿಸಿಕೊಂಡು ಸ್ವತಃ ದೇವರಾದರು.
ಒಂದು ಅದ್ದೂರಿ ಸಮಾರಂಭದಲ್ಲಿ ಡಾ. ಪಂ. ಪುಟ್ಟರಾಜ ಗವಾಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮಠಾಧೀಶರೊಬ್ಬರು ಪಕ್ಕದಲ್ಲಿ ಕುಳಿತಿದ್ದ ನನ್ನನ್ನು ಪ್ರಶ್ನಿಸಿದರು. 'ಅಲ್ಲಾ ಸಾರ್ ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರಗಳನ್ನು ಧರಿಸಿದ್ದು ಯಾಕೆ ಎಂದು ಅರ್ಥವಾಗುತ್ತಿಲ್ಲ.' ಎಂದರು. ನಾನು ನಕ್ಕು ಸುಮ್ಮನಾದೆ. ಪುಟ್ಟರಾಜರ ನಿರ್ಲಿಪ್ತತೆಯನ್ನು , ಮುಗ್ಧತೆಯನ್ನು ಅರಿಯದ ಸ್ವಾಮಿಗಳ ಬಗ್ಗೆ ವಿಷಾದವೆನಿಸಿತು.
ಪುಟ್ಟ ಮಗುವನ್ನು ತಾಯಿ ಸಿಂಗರಿಸುತ್ತಾಳೆ. ಶುಭ್ರವಾಗಿ ಸ್ನಾನ ಮಾಡಿಸಿ ಸುಂಧರ ಬಟ್ಟೆಗಳನ್ನು ಹಾಕಿ ಬೆಲೆಬಾಳುವ ಬಂಗಾರದೊಡವೆಗಳನ್ನು ತೊಡಿಸುತ್ತಾಳೆ ಆದರೆ ಅದನ್ನೆಲ್ಲ ಧರಿಸಿದ ಮಗುವಿಗೆ ಸಿಂಗಾರ ಬಂಗಾರ ಬೇಕಾಗಿರುವದಿಲ್ಲ. ತಾ ಸಂಭ್ರಮಿಸಿದಾಗ ಮಗು ಮುಗ್ಧವಾಗಿ ನಗುತ್ತದೆ ಅಷ್ಟೇ!.
ಆ ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವನ್ನು ನಾನು ಡಾ. ಪಂ ಪುಟ್ಟರಾಜ ಗವಾಗಳ ವ್ಯಕ್ತಿತ್ವದಲ್ಲಿ ಕಂಡೆ, ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕು ಎಂದು ಆ ಸ್ವಾಮಿಗಳಿಗೆ ಉತ್ತರಿಸಿದೆ. ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.
ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. 'ನಾನು ಮೊದಲೆ ಹೇಳಿ ಕೇಳಿ ಪುಟ್ಟಯ್ಯ, ಸಣ್ಣಾಂವ ಎನ್ನುತ್ತಲೇ ತಮ್ಮ ಮೊನಚು ಶೈಲಿಯ ಮಾತುಗಳನ್ನು ಆರಂಬಿಸಿ ಕೇಳುಗರ ಗಮನ ಸೆಳೆಯುತ್ತಿದ್ದರು.
ಹಿಂದಿ, ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಆರು ತಾಸುಗಳ ಧ್ಯಾನ ಪೂಜೆಗಳಲ್ಲಿ ಸಂಗೀತದ ಗಾನ ಲಹರಿಯನ್ನು ಆಸ್ವಾದಿಸುತ್ತ ಕ್ರಿಯಾ ಶೀಲ ಕೃತಿಗಳಿಗೆ ರೂಪನೀಡುತ್ತಿದ್ದರು. ಬ್ರೈಲ್ ಲಿಪಿಯನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳುವದಲ್ಲದೆ ಶಿಷ್ಯರಿಗೆ ವಿವರಿಸಿ ಅನೇಕ ಕೃತಿಗಳಿಗೆ ಜೀವ ತುಂಬಿದರು. ಹಿಂದಿಯಲ್ಲಿ 'ಬಸವ ಪುರಾಣ' ಬರೆದು ಅದನ್ನು ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರಿಗೆ ಅರ್ಪಿಸಿ, ತನ್ಮೂಲಕ ಬಸವ ತತ್ವದ ಜ್ಯಾತ್ಯಾತೀತ ಮೌಲ್ಯಗಳಿಗೆ ರಾಷ್ಟ್ರವ್ಯಾಪಿ ಮನ್ನಣೆಯನ್ನು ದೊರಕಿಸಿಕೊಟ್ಟರು.
ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು.
ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ಕಿಂಚಿತ್ತು ಅಹಃ ಇಲ್ಲದೆ ಎನಗಿಂತ ಕಿರಿಯರಿಲ್ಲ ಎಂಬ ಕಿಂಕರತ್ವ ಅವರ ವ್ಯಕ್ತಿತ್ವವನ್ನು ಮುಗಿಲೆತ್ತರಕ್ಕೆ ಎರಿಸಿತು.
ಅವರೆಂದೂ ಪ್ರಚಾರ ಬಯಸಲಿಲ್ಲ. ನೆಲದ ಮರೆಯ ನಿಧಾನದಂತೆ ಸದ್ದಿಲ್ಲದೆ ಶಿಷ್ಯ ಪ್ರಶಿಷ್ಯರನ್ನು ನಾಡಿಗೆ ಪರಿಚುಸಿದರು. ಗುರು ಶಿಷ್ಯ ಪರಂಪರೆಯನ್ನು ಸಂಗೀತ ಕ್ಷೇತ್ರದಲ್ಲಿ ಜೀವಂತವಾಗಿಟ್ಟರು. ಪ್ರತಿ ಸಂಗೀತ ಕಾರ್ಯಕ್ರಮಗಳಲ್ಲಿಯೂ ಅವರ ಶಿಷ್ಯರು ತಾವು ಪುಟ್ಟರಾಜ ಗವಾಗಳ ಶಿಷ್ಯರೆಂದು ಹೆಮ್ಮೆಂದ ಹೇಳಿಕೊಳ್ಳುತ್ತಾರೆ. ಹಾಗೆ ಪರಿಚುಸಿಕೊಳ್ಳುವುದು ಅವರಿಗೆ ಅಭಿಮಾನದ ಸಂಗತಿ.
ಕಳೆದ ದಶಕದಿಂದ ಅವರ ವೈಯುಕ್ತಿಕ ಸಂಪರ್ಕ ಬಂದು ಅವರ ಆಗಾಧ ವ್ಯಕ್ತಿತ್ವವನ್ನು ಹತ್ತಿರದಿಮದ ಅರಿಯಲು ಸಾಧ್ಯವಾತು. ಈ ವಿಚಿತ್ರ ಪ್ರಪಂಚದಲ್ಲಿ ಯಾರ್‍ಯಾರೋ ಪ್ರಚಾರಕ್ಕೆ ಬರುತ್ತಾರೆ. ಅನಗತ್ಯ ಕೀರ್ತಿ ಸ್ಥಾನಮಾನ ಸಂಪಾದಿಸುತ್ತಾರೆ. ಅವರು ಈ ರೀತಿ ಗಳಿಸುವ ಕೀರ್ತಿಯಲ್ಲಿ ಸಾಧನೆಗಿಂತ ವ್ಯವಸ್ಥಿತ ಪಿತೂರಿ ಇರುತ್ತದೆ ಎಂದರಿತು ಈ ಕುರಿತು ಒಮ್ಮೆ ಅವರಿಗೆ ಕೇಳಿದೆ. ಗುರುಗಳೆ ಈ ರೀತಿಯ ಖೊಟ್ಟಿ ಸಾಧಕರನ್ನು ನೋಡಿದರೆ ನಿಮಗೇನೆನಿಸುತ್ತದೆ. ಆಗ ಅವರು ನಾನ್ಯಾಕೆ ಅವರನ್ನು ಖೊಟ್ಟಿ ಅನ್ನಲಿ, ಅವರನ್ಯಾಕೆ ನಾನು ನೋಡಲಿ ಎಲ್ಲವನ್ನು ಗುರು ಕುಮಾರೇಶ, ಸಿದ್ಧಲಿಂಗ ಯತಿಗಳು ನೋಡುತ್ತಾರೆ. ನಮ್ಮ ಸಾಧನೆಯನ್ನು ಅವರು ನೋಡಿದರೆ ಸಾಕು. ಈ ಪ್ರಶಸ್ತಿಗಳು ತಮ್ಮ ಕಿಮ್ಮತ್ತು ಹೆಚ್ಚಿಸಿಕೊಳ್ಳಾಕ ಬರ್‍ತಿದ್ರ ಬರ್‍ಲಿ ಇಲ್ಲಂದ್ರ ಬ್ಯಾಡ. ಎಂದಾಗ ದಂಗಾಗಿ ಹೋದರೆ
ಅವರ ದರ್ಶನಕ್ಕೆ ಬರುತ್ತಿದ್ದ ಅಸಂಖ್ಯ ಭಕ್ತರು ಗವಾಯಿಗಳಿಗೆ ಅನೇಕ ಪ್ರಶಸ್ತಿಗಳು ಬರಲಿ ಎಮದು ಬಯಸುವದರಲ್ಲಿ ತಪ್ಪಿರಲಿಲ್ಲ. ಆದರೆ ಈ ವ್ಯವಸ್ಥೆಯಲ್ಲಿ ಅವುಗಳನ್ನು ಹೇಗೆ ತಪ್ಪಿಸಬೇಕು ಎಂಬ ಲೆಕ್ಕಾಚಾರವಂತೂ ಇರುತ್ತಿತ್ತು.
ಸಂಗೀತ - ಸಾಹಿತ್ಯ ಬಲ್ಲವರು ಅವರನ್ನು ಮಠಾಧೀಶರೆಂದು ಪೂಜ್ಯರೆಂದು ಗೌರವಿಸುತ್ತಲೇ ಅವರ ಹತ್ತಿರ ಪ್ರಶಸ್ತಿಗಳು ಸುಳಿಯದಂತೆ ಜಾಣ ಭಕ್ತಿಯನ್ನು ತೋರಿದರು. ಇನ್ನು ಮಠಾಧೀಶರಾದರೂ ಅವರನ್ನು ಒಪ್ಪಿಕೊಂಡಿದ್ದರೆ ಖುಷಿ ಎನಿಸುತ್ತಿತ್ತು. ಅವರೊಬ್ಬ ಗವಾಯಿ, ಸಂಗೀತ ಸಾಧಕ ಅಷ್ಟೇ. ಅವರು ಹೇಗೆ ಮಠಾಧೀಶರಾಗಲು ಸಾಧ್ಯ ಎಂದು ಲೆಕ್ಕಹಾಕುತ್ತಾ ಪುಟ್ಟರಾಜರನ್ನು ಹತ್ತಿಕ್ಕಲು ನೋಡಿದರು ಆದರೆ ತಮ್ಮ ಪ್ರತಿಭಾ ಸಂಪನ್ನತೆಂದ ಪುಟ್ಟರಾಜರು ಎಲ್ಲವನ್ನು ಹಿಮ್ಮೆಟ್ಟಿಸಿದರು.
ಹಾಗೆ ನಿಧಾನವಾಗಿ ಡಾ. ಪುಟ್ಟರಾಜರು ತಮ್ಮಷ್ಟಕ್ಕೆ ತಾವೆ ಗಟ್ಟಿಯಾಗಿ ಬೇರು ಬಿಡುತ್ತಾ ಬಾನೆತ್ತರಕ್ಕೆ ಬೆಳೆದರು. ಅವರನ್ನು ಅಲುಗಾಡಿಸಲು ಬಂದವರು ಹಾಗೆಯೇ ಹಿಂದಿರುಗಿದರು. ಅದೇ ಗವಾಯಿಗಳ ಶಕ್ತಿ! ಧೀ ಶಕ್ತಿ!.
ಅವರು ಹಿಂದಿ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಬರೆದ ಕೃತಿಗಳ ಚರ್ಚೆ ಆಗಲೇ ಇಲ್ಲ. ಯಾಕೆಂದರೆ ಆಧುನಿಕ ಸಾಹಿತ್ಯದ ಮೇಧಾವಿಗಳಿಗೆ ಡಾ. ಪುಟ್ಟರಾಜ ಗವಾಯಿಗಳು ಕೇವಲ ಸಂಗೀತ ಸಾಧಕರೆಂದೆ ಕಂಡರು. ಅವರ ವಚನಗಳನ್ನು ಅವರ ಶಿಷ್ಯಂದಿರು ಹಾಡಿ ಅವುಗಳ ಸತ್ವ ವನ್ನು ಸಾರಿದರು. ಅವರ ಭಾಷಾ ಜ್ಞಾನದ ಮೇಲೆ ಬೆಳಕು ಚೆಲ್ಲುವ ಕ್ರಿಯೆ ಆರಂಭವಾಗಲೇ ಇಲ್ಲ. ಬರುಬರುತ್ತ ಅವರು ಒಬ್ಬ ಲಿವಿಂಗ್ ಲೆಜೆಂಡ್ ಎನಿಸಿಕೊಂಡರು. ಸಾವಿರಾರು ತುಲಾಭಾರಗಳ ಮೂಲಕ ಆಶ್ರಮದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ೨೨೭೧ ತುಲಾಭಾರ ಕಾರ್ಯಕ್ರಮಗಳ ಮೂಲಕ ಸಂಗ್ರಹವಾದ ನಿಧಿಯನ್ನು ನಿರಂತರ ದಾಸೋಹಕ್ಕಾಗಿ ಬಳಸಿಕೊಂಡರು. ಡಾ. ಪುಟ್ಟರಾಜರು ಜನಸಾಮಾನ್ಯರಿಗೆ ಹತ್ತಿರವಾಗಲು ತುಲಾಭಾರಗಳು ಕಾರಣವಾದವು. ಈ ಪುಟ್ಟಯ್ಯನ ಜೋಳಿಗೆಗೆ ನಿಮ್ಮ ಅಂಧ ಅನಾಥ ಮಕ್ಕಳನ್ನು ಹಾಕ್ರಿ ಎಂದು ಭಾವುಕರಾಗಿ ನುಡಿಯುತ್ತಿದ್ದರು.
'ಶರಣರ ಮಹಿಮೆಯನ್ನು ಮರನದಲ್ಲಿ ನೋಡು' ಎಂಬ ಮಾತನ್ನು ಡಾ. ಪುಟ್ಟರಾಜ ಗವಾಗಳು ಸಾಬೀತು ಪಡಿಸಿದರು. ಈ ತಿಂಗಳ ೧೩ ರಂದು ಪುಟ್ಟರಾಜರು ನಮ್ಮನ್ನು ಅಗಲಿದ್ದಾರೆ ಎಂಬ ಹುಸಿ ಸಂದೇಶಗಳನ್ನು ಭಕ್ತರನ್ನು ತಲ್ಲಗೊಳಿಸಿದವು. ಬೆಳಗಾವಿಯಲ್ಲಿ ವೈದ್ಯಕೀಯ ಚಿಕಿತ್ಸೆ ಫಲಿಸದೇ ಅವರನ್ನು ಗದುಗಿಗೆ ಕರೆ ತರುವ ವ್ಯವಸ್ಥೆಯಾಗಿತ್ತು. ಅವರ ವಿಷಮ ಸ್ಥಿತಿ ಅರಿತ ವೈದ್ಯರು ಅವರು
ಗದಗ ತಲುಪುವದರೊಳಗೆ ಇಲ್ಲವಾಗುತ್ತಾರೆ ಎಂಬ ಸಂದೇಶವನ್ನು ಸರಕಾರಕ್ಕೆ ರವಾನಿಸಿದ್ದರು. ಆ ಮನೋಭಾವ ಇಟ್ಟುಕೊಂಡೇ ಜಿಲ್ಲಾಡಳಿತ ಸ್ಟೇಡಿಯಂ ನಲ್ಲಿ ಎಲ್ಲ ತಯಾರಿ ಮಾಡಿತ್ತು. ಆದರೆ ಆಶ್ರಮಕ್ಕೆ ಕಾಲಿಟ್ಟ ಕೂಡಲೇ ಪುಟ್ಟರಾಜ ಗವಾಗಳು ಚೇತರಿಸಿಕೊಂಡು ವೈದ್ಯರಿಗೆ ಅಚ್ಚರಿ ಮೂಡಿಸಿದರು. ಪ್ರತಿದಿನ ಹಗಲು ರಾತ್ರಿ ಭಕ್ತರು ಪೂಜ್ಯರ ದರ್ಶನ ಮಾಡಿದರು.
ಐದು ದಿನಗಳ ಕಾಲ ಭಕ್ತರಿಗೆ ಮುಕ್ತ ದರ್ಶನ ನೀಡುವ ಇಚ್ಚಾ ಶಕ್ತಿ ಅವರಲ್ಲಿತ್ತೆಂದು ತೋರುತ್ತದೆ. ಆಸ್ಪತ್ರೆ ಯಲ್ಲಿ ದೇಹತ್ಯಾಗ ಮಾಡುವ ಮನಸ್ಸಿಲ್ಲದೆ ತಾವು ಕಟ್ಟಿ ಬೆಳೆಸಿದ ಆಶ್ರಮದಲ್ಲಿ ನಿಶ್ಚಿಂತೆಯಿಂದ ದೇಹ ಬಿಟ್ಟರು. ಅಂದು ಎಂಟು ಲಕ್ಷ ಜನ ಅಂತ್ಯ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜಕಾರಣಿಗಳು ಜನರನ್ನು ಕಂಡು ಬೆರಗಾದರು. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿದ ಉದಾಹರಣೆಗಳಿಲ್ಲವಂತೆ. ಯಾವುದೆ ರೀತಿಯ ಗಲಾಟೆ ಇಲ್ಲದೆ ಭಕ್ತರು ನೆರದಿದ್ದ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದರು. ದಾನಿಗಳ ಈ ಸ್ವಯಂ ಪ್ರೇರಿತ ಸೇವೆಯಲ್ಲಿ ಗವಾಗಳ ಸಾಧನೆ ಇದೆ, ಆಧುನಿಕ ಪವಾಡವಿದೆ. ಲಕ್ಷ ದುಡಿದವರು ಐವತ್ತು ಸಾವಿರ ರೂಪಾ ಖರ್ಚು ಮಾಡಿದರೆ ಹತ್ತು ರೂಪಾ ದುಡಿದವರು ಐದು ರೂಪಾ ಖರ್ಚು ಮಾಡಿ ತಮ್ಮ ಭಕ್ತಿ ಮೆರೆದರು. ಒಂದು ರೂಪಾಯಿಗೆ ಜಗಳವಾಡುವ ಆಟೋದವರು ಪುಕ್ಕಟೆಯಾಗಿ ಜನರನ್ನು ಕರೆತಂದರು. ಹಣಕೊಟ್ಟರೂ ಸೇರದ ಜನ ಅಪಾರ ಸಂಖ್ಯೆಯಲ್ಲಿ ನೆರೆದು ರಾಜಕಾರಣಿಗಳನ್ನು ಬೆಚ್ಚಿಬಿಳಿಸಿದರು.
ಇಂತಹದೆ ಒಂದು ಘಟನೆ ೨೦೦೮ ರ ಚುನಾವಣೆಯಲ್ಲಿ ನಡೆದಿತ್ತು. ಒಂದು ಖಾಸಗಿ ಕಾರ್ಯಕ್ರಮದಲ್ಲಿ ಗವಾಯಿಗಳು ಈ ಬಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ. ಗೆಲ್ಲುತ್ತದೆ ಎಂಬ ಅರ್ಥದಲ್ಲಿ ನುಡಿದದ್ದು ಕಾಂಗ್ರೆಸ್ಸಿಗರನ್ನು ಆತಂಕಕ್ಕೆ ಈಡು ಮಾಡಿತ್ತು. ಅದು ಹೇಗೊ ಸ್ಥಾನಿಕ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ಅನಿರೀಕ್ಷಿತ ಹೇಳಿಕೆಯ ಲಾಭವನ್ನು ಪಡೆಯಲು ರಾಜಕಾರಣಿಗಳು ಹೆಣಗಾಡಿದರು. ಗಾಬರಿಗೆ ಬಿದ್ದ ಭಕ್ತರು ಬಿ.ಜೆ.ಪಿ.ಗೆ ಓಟು ಹಾಕುವ ಮನಸ್ಸಿತ್ತೊ ಇಲ್ಲವೋ ಗವಾಯಿಗಳ ವಾಣಿ ಸುಳ್ಳಾಗಬಾರದು, ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರಬಾರದೆಂದು ಪತ್ರಿಕೆಯ ಝರಾಕ್ಸ ಪ್ರತಿ ಇಟ್ಟುಕೊಂಡು ಓಡಾಡಿ ಬಿ.ಜೆ.ಪಿ.ಯನ್ನು ಗೆಲ್ಲಿಸಿದರು. ಇದು ಮುಗ್ಧ ಭಕ್ತರ ಗೆಲುವಾದರೆ ರಾಜಕಾರಣಿಗಳು ತಮ್ಮ ಗೆಲುವು ಎಂದು ಸಂಭ್ರಮಿಸಿದರು.
ಕಳೆದ ಒಂದು ದಶಕದಿಂದ ಮಾಧಮದವರು ಗವಾಯಿಗಳ ವ್ಯಕ್ತಿತ್ವವನ್ನು ಸಮಾಜಕ್ಕೆ ಪ್ರತಿಬಿಂಬಿಸಿದರು ಆದರೆ ಕಾಲ ಮಿಂಚಿತ್ತು. ಅವರಿಗೆ ಸಿಗಬೇಕಾದ ಮಾನ ಸಮ್ಮಾನ ಸಿಗಲಿಲ್ಲ ಎಂಬ ವಿಷಾದ ಹಾಗೆಯೇ ಉಳಿತು.
ಕರ್ನಾಟಕ ರತ್ನ ನೀಡಲು ಸರಕಾರಕ್ಕೆ ಇದ್ದ ತೊಂದರೆ ಏನು ಎಂಬುದಕ್ಕೆ ಯಾರು ಉತ್ತರಿಸಬೇಕು?. ಇದೀಗ ಎಚ್ಚೆತ್ತ ಸರಕಾರ ಅವರ ಸ್ಮಾರಕಕ್ಕೆ ಐದು ಕೋಟಿ ರೂಪಾಯಿ ಬಿಡುಗಡೆಯನ್ನು ಘೋಸಿದೆ. 'ಭಾರತ ರತ್ನ'ದ ಮಾತನ್ನು ಆಡಿದೆ. ಆದರೆ ಅದಕ್ಕೆ ಮುಂಚೆ 'ಕರ್ನಾಟಕ ರತ್ನ' ನೀಡಲಿ.
ಅವರ ಎಪ್ಪತ್ತಕ್ಕೂ ಹೆಚ್ಚು ಕೃತಿಗಳು ಪುನರ್ ಮುದ್ರಣಗೊಳ್ಳುವ ವ್ಯವಸ್ಥೆ ಕಲ್ಪಿಸಿ ಸಾಹಿತ್ಯ ಚರ್ಚೆಗೆ ಅಕಾಡೆಮಿ ಮೂಲಕ ವೇದಿಕೆ ರೂಪಿಸಲಿ. ಕೇವಲ ಭಾವುಕ ಭಕ್ತರಿಂದ ಇತಿಹಾಸ ನಿರ್ಮಾಣವಾಗುವದಿಲ್ಲ. ಎಂಬ ಸತ್ಯ ಎಲ್ಲರಿಗೆ ಗೊತ್ತಿಲ್ಲವೆ? ಮತ್ತೆ ಹುಟ್ಟಿ ಬಾ ಪುಟ್ಟಯ್ಯ ಎಂಬ ಭಕ್ತರ ಅಂಧ ಅನಾಥರ ಕೂಗು ಕಿವಿ ಇದ್ದವರಿಗೆ ಕೇಳಿಸಲಿ ಎಂದು ಆಶಿಸುತ್ತೇನೆ.

1 comment:

  1. Good one siddu,,,
    often send me updates pls...
    God bless u..
    Regards:
    Shivaraj
    shivrajkoti@gmail.com

    ReplyDelete