ಮರೆತಿದ್ದೇವೆ. ಆದರೂ ಗೆಳೆಯರ ಒತ್ತಾಯಕ್ಕೆ ನೋಡಿದ ಸುದೀಪ್ ನಟಿಸಿ,
ನಿರ್ದೇಶಿಸಿದ 'ಆಟೋಗ್ರಾಫ್' ತುಂಬಾ ಇಷ್ಟವಾಯಿತು. ಬಾಲ್ಯದ ಸವಿನೆನಪುಗಳನ್ನು
ಇಷ್ಟೊಂದು ರಸವತ್ತಾಗಿ ಮೆಲಕು ಹಾಕಲು ಸಾಧ್ಯವಾ? ಎನಿಸಿತು. 'ಸವಿನೆನಪು
ಸಾವಿರ ನೆನಪು' ಎಂಬ ಹಾಡಿನಲ್ಲಿ ಎಂತಹ ಅರ್ಥವಿದೆ. ನೆನಪುಗಳು ಕಹಿಯಾಗಿದ್ದರೂ
ಅವುಗಳನ್ನು ಮೆಲಕು ಹಾಕುವುದರಲ್ಲಿನ 'ಸವಿ' ರುಚಿಕರ.
'My sad thoughts are the sweetest songs' ಎಂಬ John keats ನ
ಸಾಲುಗಳಲ್ಲಿ ಅದೆಂಥ ಮಾಧುರ್ಯವಿದೆ. ಅನುಭವಗಳು ಕಹಿಯಾಗಿದ್ದರೆ ಏನಂತೆ,
ಅದನ್ನು ನೆನಪಿಸಿಕೊಳ್ಳುವುದರಲ್ಲಿ ಸಿಹಿ ಇದೆ.
ಅದರಲ್ಲೂ ಬಾಲ್ಯದ ಅನುಭವಗಳಿಗೆ ಯಾವುದೇ logic ಇರುವುದಿಲ್ಲ. ಮಾಡಿದ್ದೇ ಸರಿ
ಆಡಿದ್ದೇ ಆಟ ಎಂಬ ಧೋರಣೆ ಈಗಲೂ ಹಚ್ಚ ಹಸಿರು.ಶಾಲೆಯಲ್ಲಿ ದಡ್ಡನಿದ್ದರೂ ನನ್ನ ಭಾಷಾ ಜ್ಞಾನ ಚೆನ್ನಾಗಿತ್ತು .
ನಮ್ಮೂರಲ್ಲಿ ಇಂದಿಗೂ 'ಅ' ಕಾರ, 'ಹ' ಕಾರ ದ ತೊಂದರೆ ಇದೆ. ಅಣ್ಣು, ಆಲು, ಊ
ಎಂದು ಉಚ್ಛರಿಸುತ್ತೇವೆ. ಹಣ್ಣು, ಹಾಲು, ಹೂ ಅನ್ನಬೇಕು ಎಂದೆನಿಸುವುದಿಲ್ಲ.
ಆದರೆ ನನಗಿದು ತಪ್ಪು ಅನಿಸುತ್ತಿತ್ತು.
ನಾವು ಸಣ್ಣವರಿದ್ದಾಗ ಮನೆತನದ್ದು ದೊಡ್ಡ ವ್ಯಾಪಾರ, ಕಿರಾಣಿ ಅಂಗಡಿ ನೂರಾರು
ಆಳುಗಳು, ಹತ್ತಾರು ವಾಹನಗಳು, ಗೋದಾಮುಗಳು, ಹೀಗೆ ಸಮೃದ್ಧಿಯ ಸಂಭ್ರಮ.
ಶಾಲೆಗೆ ನಮ್ಮನ್ನು ಕಳಿಸಲು, ಊರುರು ಅಲೆಯಲು ಹಳೆಯ ಜೀಪೊಂದು ಇತ್ತು.
ಡ್ರೈವರನಿಗೆ ಕನ್ನಡ ಬರುತ್ತಿರಲಿಲ್ಲ. ತೆಲಗು ಅಥವಾ ಹಿಂದಿಯಲ್ಲಿ ಮಾತನಾಡಬೇಕು
ನಮಗೆ ಕನ್ನಡ ಬಿಟ್ಟರೆ ಇನ್ನೊಂದು ಭಾಷೆ ಗೊತ್ತಿರಲಿಲ್ಲ. ಅವನು ತೆಲುಗಿನಲ್ಲಿ
ಮಾತನಾಡಿದರೆ ನಾವು ಕನ್ನಡದಲ್ಲಿಯೇ ಮಾತನಾಡುತ್ತಿದ್ದೆವು. ಜೀಪಿನಲ್ಲಿ ಹತ್ತಿ
ದಾಂಧಲೇ ಮಾಡಿದರೆ ಸಾಕು ದಿಗು, ದಿಗು ಅನ್ನುತ್ತಿದ್ದ. ಇಳಿಯಿರಿ ಅಂತ
ಅರ್ಥವಾಗುತ್ತಿತ್ತು ಅಷ್ಟೇ .ಕನ್ನಡದಲ್ಲಿ ನನ್ನ ಜ್ಞಾನ ಚೆನ್ನಾಗಿತ್ತು ಅಂತ ಈಗ
ಅನಿಸುತ್ತದೆ. ನಮ್ಮ ಲಾರಿ, ಜೀಪು ಅಂಗಡಿಯ ಬಾಗಿಲಿಗೆ ಮನೆ ದೇವರ ಹೆಸರು
ಬರೆಯುವುದು ಸಾಮಾನ್ಯ. ನಮ್ಮ ಲಾರಿಯ ಮೇಲೆ ದಪ್ಪ ಅಕ್ಷರಗಳಲ್ಲಿ ಶ್ರೀಗುರು
ಅಳ್ಳದ ಬಸವೇಶ್ವರ ಎಂದು ಪೇಂಟರ್ ಬರೆದಿದ್ದ ಇದು ತಪ್ಪು ಎಂದು ನಾನು
ವಾದಿಸಿದೆ. ನಾನು ಆಗ 2 ನೇ ಕ್ಲಾಸಿನ ವಿದ್ಯಾರ್ಥಿ. ನನ್ನ ವಾದವನ್ನು ಯಾರು
ಲೆಕ್ಕಿಸಲಿಲ್ಲ. ಅದೇ ರೀತಿ ಎಲ್ಲ ಕಡೆ ಬರೆಸಿದರು. ಅದು 'ಶ್ರೀಗುರು ಹಳ್ಳದ ಬಸವೇಶ್ವರ'
ಆಗಲಿ ಎಂಬ ನನ್ನ ವಾದವನ್ನು ಯಾರು ಕೇಳಲಿಲ್ಲ.
ಶಾಲೆಯಲ್ಲಿ ಕನ್ನಡ ಕಲಿಸುತ್ತಿದ್ದ ಶಿಕ್ಷಕರಿಗೆ ಕೇಳಿದೆ. ನಿನ್ನ ವಾದ ಸರಿ ಇದೆ. ಆದರೆ
ನಾವು ಹೇಗೆ ಮಾತನಾಡುತ್ತೇವೆಯೋ ಹಾಗೆಯೇ ಬರೆದಿದ್ದಾರೆ ಅಷ್ಟೇ ಎಂದು
ಸಮಾಧಾನಿಸಿದರು. ಆದರೂ ಹಾಗೆ ಬರೆದದ್ದು ತಪ್ಪು ಎಂದು ನಿತ್ಯ ಲಾರಿ
ನೋಡಿದಾಗಲೆಲ್ಲ ಕಾಡುತ್ತಲೇ ಇತ್ತು.
ಮುಂದೆ ನಾನು ಹೈಸ್ಕೂಲಿಗೆ ಬಂದು ಅಂಗಡಿ ಪ್ರಾರಂಭಿಸಿದ ಮೇಲೆ ಶ್ರೀಗುರು ಹಳ್ಳದ
ಬಸವೇಶ್ವರ ಎಂದು ಬರೆಸಿ ಖುಷಿ ಪಟ್ಟೆ. ಆಗ ನನಗೆ ಸಮಾಧಾನವಾಯಿತು. ಈಗ
ಗಂಗಾವತಿಯ ಬಿ. ಪ್ರಾಣೇಶ ಹೇಳುವ ಜೋಕುಗಳನ್ನು ಕೇಳಿದಾಗಲೆಲ್ಲ ನಮ್ಮೂರ
ಘಟನೆಗಳು ನೆನಪಾಗುತ್ತವೆ.
ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬಿಟ್ಟು ಬೇರೆ ವಿಷಯಗಳನ್ನು ಕಲಿಯಲು
ಸಾಧ್ಯವಾಗಲೇ ಇಲ್ಲ. ಗಣಿತವಂತು ತಲೆಗೆ ಹೋಗಲೇ ಇಲ್ಲ. ಹೀಗಾಗಿ ಗೊತ್ತಿದ್ದ
ಕನ್ನಡವನ್ನೇ ಗಟ್ಟಿಯಾಗಿ ಹಿಡಿದುಕೊಂಡೆ.
joint family ವ್ಯೆವಸ್ಥೆಯಲ್ಲಿ ನೂರಾರು ಜನರಿದ್ದೆವು. ತಾತ, ಅಮ್ಮ, ಅಪ್ಪ, ದೊಡ್ಡಪ್ಪ,
ಚಿಕ್ಕಪ್ಪಂದಿರು,ಸೋದತ್ತೆಯರು ಹೀಗೆ ದೊಡ್ಡ ದಂಡೆ ಇತ್ತು. ಯಾರಿಗೂ ಶಿಕ್ಷಣದ ಬಗ್ಗೆ
ಕಾಳಜಿ ಇರಲಿಲ್ಲ. ನಮಗದರ ಅಗತ್ಯವೂ ಕಂಡು ಬರಲಿಲ್ಲ.
ಅಪ್ಪ, ಅವ್ವರಿಗೆ ನಾನು ಅಪ್ಪ ಅವ್ವ ಅನ್ನಲೇ ಇಲ್ಲ. ನನ್ನ ಸೋದರತ್ತೆ ಸುಮಂಗಲಾ
ಅತ್ತೆ ಅಪ್ಪನಿಗೆ ಅಣ್ಣ, ಅವ್ವಗೆ ಅತ್ತಿಗೆ ಅನ್ನುತ್ತಿದ್ದಳು. ನಾನು ಹಾಗೆ ಅನ್ನಲು ಶುರು
ಮಾಡಿದೆ. ನಿಮ್ಮಣ್ಣ ಎಲ್ಲಿ, ನಿಮ್ಮ ಅತ್ತಿಗೆ ಎಲ್ಲಿ ಎಂದು ಅತ್ತೆ ಕಾಡುತ್ತಲೆ ಇದ್ದರು.
ಮುಂದೆ 1972 ರಲ್ಲಿ ನಮ್ಮ ಕುಟುಂಬ ವಿಭಜನೆಯಾದಾಗ ಮನೆಯ ಪರಿಸರ
ಬದಲಾಯಿತು. ಸೋದರತ್ತೆ ಮದುವೆಯಾಗಿ ಹೋದಳು. ಅಣ್ಣ, ಅತ್ತಿಗೆ ಅನ್ನಬಾರದು
ಎಂದು ಎಲ್ಲರೂ ಕೀಟಲೆ ಮಾಡಿದ ಮೇಲೆ ಅವ್ವ ಎನ್ನಲು ಶುರು ಮಾಡಿದೆ. ಅಪ್ಪನಿಗೆ
ಅಪ್ಪ ಎನ್ನಲು ಸಾಧ್ಯವಾಗಲೇ ಇಲ್ಲ. 1972 ರಿಂದ ಜೀವನ ಬೇಸರವೆನಿಸಿತು.
ಅವಿಭಕ್ತ ಕುಟುಂಬ ವ್ಯೆವಸ್ಥೆಯೇ ಸುಂದರವೆನಿಸಿತು.ಕಾರಟಗಿ ಬೇಸರವಾಗಿ, ಅವ್ವಳ
ತವರು ಮನೆ ಕುಷ್ಟಗಿಗೆ ಹೆಚ್ಚು ಹೋಗಲು ಶುರು ಮಾಡಿದೆ. ಕುಷ್ಟಗಿಯ ದೊಡ್ಡ ಮನೆ ,
ಅಜ್ಜನ ಪ್ರೀತಿ ,ಕಕ್ಕಿಯ ಕಕ್ಕುಲತೆ ಹಿತವೆನಿಸಿತು. ಅಜ್ಜನೊಂದಿಗೆ ಕೋರ್ಟಿಗೆ
ಹೋಗುತ್ತಿದ್ದೆ. ಅಜ್ಜನ ಸೂಟು, ಕಾನೂನು ಪುಸ್ತಕಗಳು ಬೆರಗು ಮೂಡಿಸುತ್ತಿದ್ದವು.
ತಿಂಗಳುಗಟ್ಟಲೇ ಶಾಲೆ ತಪ್ಪಿಸಿ ಕುಷ್ಟಗಿಯಲ್ಲಿ ಇರುವುದು ಶೈಕ್ಷಣಿಕ
ಹಿನ್ನಡೆಯಾಯಿತು. ಶ್ರೀಮಂತರ ಮಕ್ಕಳು ಎಂಬ ಕಾರಣಕ್ಕೆ ಯಾರೂ ನಮ್ಮನ್ನು
ಶಿಕ್ಷಿಸಲಿಲ್ಲ.
 
 
 
 Posts
Posts
 
 
No comments:
Post a Comment