Friday, October 12, 2018

ಮನಸು ಖಾಲಿ ಕೊಡ

*ಮನಸು  ಖಾಲಿ ಕೊಡ ಖಾಲಿ*

ಮನಸು ತುಂಬಿದ ಕೊಡವಾಗಲೆಂಬ
ಬಯಕೆಯಲಿ ಎಲ್ಲವೂ ಖಾಲಿ ಖಾಲಿ
ಖಾಲಿಯಾಗದೇ ತುಂಬುವುದಾದರೂ
ಹೇಗೆ ?

ತುಂಬದ ಪೂರ ಖಾಲಿಯೂ
ಆಗದ ಕೊಡದ ಗತಿ ಏನು ?

ಬೇಕೆನಿಸಿದ್ದು ಬೇಕಾದಾಗ
ಪಡೆಯುತ ಸಾಗಿದರೂ ಮುಗಿಯದ
ಆಸೆಯ ಹಂಗು

ಬೇಡುವ ಭರದಲಿ ಕೊಟ್ಟವರು
ಕಳೆದು ಹೋದ ಪರಿವೇ ಇಲ್ಲ !

ಕೋಡಂಗಿಯಾದ ಕೊಟ್ಟವ ಆಸೆಗಣ್ಣಿಂದ ಇಸಗೊಂಡವನ ಬಾಗಿಲ
ಕಾಯ್ದರೆ ಒಳಗೆ ಬಿಡುವ
ಭರವಸೆಯೂ ಇಲ್ಲ

ಕಾಯುವ , ಬೇಡುವ ತೊಳಲಾಟದಿ
ಬತ್ತದ ಬಯಕೆಗಳ ಬೆಂಬತ್ತಿ
ಬೆಟ್ಟಕ್ಕೆ ಬೊಗಳುವ ನಾಯಿ
ಕುಂಯ್ ಗುಟ್ಟು ಬಾಲ ಮುದುರಿ
ಓಡಿ ಹೋಗುವಾಗ ಬೀಳುವ
ಕಲ್ಲುಗಳ ಲೆಕ್ಕ ಬೇಡ

ಮನಸು ಮಾಡಿ ಸಿಗದುದ ಪಡೆಯಲು ಚಡಪಡಿಸದೆ ನಡೆದರೆ ಕೊಡ
ತುಂಬೀತು , ಬದುಕು ಬದುಕೀತು.

---ಸಿದ್ದು ಯಾಪಲಪರವಿ

Thursday, October 11, 2018

ಅಮಿತಾಬ್ ಎಂಬ ಎತ್ತರದ ಮನುಷ್ಯ

*ಅಮಿತಾಬ್ ಎಂಬ ಎತ್ತರದ ಮನುಷ್ಯ*

ಭಾರತೀಯ ಸಿನಿರಂಗದಲಿ ಸೂಪರ್ ಸ್ಟಾರ್ ಪಟ್ಟ ಈ ತನಕ ಉಳಿಸಿಕೊಂಡಿರುವ ಏಕೈಕ ಎತ್ತರದ ನಟ ಅಮಿತಾಬ್ ಬಚ್ಚನ್. Tall man ಪದದ ಅನ್ವರ್ಥಕ ಈ ಅಮಿತಾಬ್.

ಹಿರಿಯ ಕವಿಯ ಮಗನಾಗಿ, ದೇಶದ ಪ್ರಭಾವಿ ನೆಹರು ಮನೆತನದ ಸ್ನೇಹಿತನಾಗಿ ಮನಸು ಮಾಡಿದರೆ ಏನೆಲ್ಲ ಆಗಬಹುದಿತ್ತು, ಉನ್ನತ ಹುದ್ದೆಯನ್ನು ಅಲಂಕರಿಸಬಹುದಿತ್ತು.
But he gave preference to his passion of acting.

ಆದರೆ ಅಮಿತಾಬ್ ದೇಹ,ಧ್ವನಿ ಅದಕ್ಕೆ ಪೂರಕವಾಗಿರಲಿಲ್ಲ ಎಂದು ತಿರಸ್ಕರಿಲ್ಪಟ್ಟರೂ ಹಿಡಿದ ಹಟ ಬಿಡಲಿಲ್ಲ.
ನಟನಾಗಬೇಕೆಂಬ ಪಣ ತೊಟ್ಟ ಸಾಧಕ.

ಇಡೀ ಇತಿಹಾಸ ನಮ್ಮ ಕಣ್ಣ ಮುಂದಿದೆ. ಅವನ ಸಿನೆಮಾ ಪಯಣ ಇಡೀ ಜಗತ್ತಿಗೆ ಗೊತ್ತಿದೆ.
ಸಣ್ಣಪಾತ್ರಗಳಿಂದ ಆರಂಭವಾಗಿ ಸೂಪರ್ ಸ್ಟಾರ್ ಆದ ಮೇಲೆ ಅನುಭವಿಸಿದ ಯಾತನೆ, ಅವಮಾನ, ಅನಾರೋಗ್ಯ ಯಾರೂ ಅನುಭವಿಸಿಲ್ಲ.

ಕೆಲವರು ಅನುಭವಿಸಿ ನರಳಿ ಕಣ್ಮರೆಯಾಗಿ ನಾಶವಾಗಿದ್ದರೆ.
ಅಮಿತಾಬ್ ನಾಶವಾಗಲು ಅವಕಾಶ ಕೊಡಲಿಲ್ಲ. ಖಾಸಗಿ ಬದುಕಿನಲ್ಲಿಯೂ ಹೀರೊ ಆಗಿ ಇಂದಿಗೂ ಮೆರೆಯುತ್ತಲೇ ಇದ್ದಾರೆ.

ಸೋಲು, ಅವಮಾನ, ಆರ್ಥಿಕ ಸಂಕಷ್ಟ, ಅನಾರೋಗ್ಯ, ವಿಫಲ ಪ್ರೇಮ, ಸಾರ್ವಜನಿಕ ಬದುಕಿನ ವೈಫಲ್ಯದಂತಹ ನೇತಾತ್ಮಕ ಸಂಗತಿಗಳು ಘಟಿಸಿದಾಗ ಎದೆ ಒಡೆದು ಸತ್ತವರೇ ಹೆಚ್ಚು, ಅವರೆಂದು ನಮಗೆ ಆದರ್ಶಪ್ರಾಯರಾಗಲಾರರು, ಆಗಲೂಬಾರದು.

ನಾವು ಅಬ್ಬಬ್ಬ ಅಂದರೆ ಆರೋಗ್ಯ ಪೂರ್ಣವಾಗಿ ಎಪ್ಪತ್ತು ವರ್ಷ ಬದುಕುತ್ತೇವೆ. ನಂತರದ್ದೆಲ್ಲ ಬರೀ ಬೋನಸ್.
ಆ ಹಂತದೊಳಗೆ ಅನಿರೀಕ್ಷಿತವಾಗಿ ಅಪ್ಪಳಿಸುವ ಸಂಕಷ್ಟಗಳನ್ನು ಎದುರಿಸಿ ಬದುಕಿ, ಹೊಸ ಬದುಕನ್ನು ಕಟ್ಟಿಕೊಳ್ಳಲೇಬೇಕು. ಹಾಗೆ ಬದುಕಲು ಕೆಲವರು ಪ್ರೇರಕರಾಗುತ್ತಾರೆ.

*ನಾನು ದಶಕದಿಂದ ನಡೆಸಿಕೊಡುತ್ತಿರುವ Joyful Living ಎಂಬ Life skill ತರಬೇತಿಯಲ್ಲಿ ಅಮಿತಾಬ್ ನೆನಪಾಗಿ ಕಾಡುತ್ತಾನೆ*.

ತನಗೆ ಆದ ಅನೇಕ ಅವಮಾನಗಳನ್ನು ನೇರವಾಗಿ ಹೇಳಿಕೊಳ್ಳವ ಎದೆಗಾರಿಕೆ ಇದೆ. ನೈತಿಕ ವಿಶ್ವಾಸ ಕಳೆದುಕೊಳ್ಳದೇ ಅಮಿತಾಬ್ ವಯಸ್ಸಾದ ಮೇಲೂ ಬದುಕು ಕಟ್ಟಿಕೊಂಡದ್ದು ಪವಾಡವೇ ಸರಿ.

ಕಲಾವಿದರು, ಕ್ರಿಯಾಶೀಲ ವ್ಯಕ್ತಿಗಳಿಗೆ ಭಂಡತನ ಇರುವುದಿಲ್ಲ. ಸಣ್ಣ ಸಮಸ್ಯೆಗಳನ್ನು ಭಾವನಾತ್ಮಕವಾಗಿ ಸ್ವೀಕರಿಸಿ ನರಳುತ್ತಾರೆ.

ಅನೇಕ ಕಲಾವಿದರು ಎದುರಿಸಲಾಗದೇ ಆತ್ಮಹತ್ಯೆಗೆ ಶರಣಾಗಿ ಕೆಟ್ಟ ಆದರ್ಶವಾಗುತ್ತಾರೆ.
ಅಂತಹ ಅನೇಕ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಿ ಮತ್ತೆ ಇನ್ನೂ ಬಾನೆತ್ತರಕೆ ಬೆಳೆದವನೇ ಈ ಬಚ್ಚನ್.

ಅದರಲ್ಲೂ ಸೆಲಿಬ್ರಿಟಿಗಳಿಗೆ ಸಂಕಷ್ಟ ಬಂದಾಗ ಅದು ಬೇಗ ಬಯಲಾಗಿ ದೊಡ್ಡ ದುರಂತ ಎಂಬಂತೆ ಬಿಂಬಿಸಲಾಗುತ್ತದೆ.

ಅದಕ್ಕಾಗಿ ವಿಲಿಯಂ ಶೇಕ್ಸ್‌ಪಿಯರ್‌ ತನ್ನ ದುರಂತ ನಾಟಕಗಳಲಿ ದೊಡ್ಡವರ ಸಂಕಷ್ಟಗಳನ್ನು ತೋರಿದ್ದಾನೆ.
ಜನಸಾಮಾನ್ಯರ ಸಂಕಷ್ಟಗಳಿಗೆ ಬೆಲೆ ಬರದೇ ಹಾಗೆ ಮಾಯವಾಗಿ ಇತಿಹಾಸ ಸೇರಿ ಬಿಡುತ್ತವೆ.

ಆರಂಭದ ಅವಮಾನಗಳನ್ನು ಮೆಟ್ಟಿ ಬೆಳೆದ ಮೇಲೆ ಅಮಿತಾಬ್ ಅನಗತ್ಯ ರಿಸ್ಕ್ ಎಳೆದುಕೊಂಡರು.

ಸ್ನೇಹಿತನನ್ನು ಬೆಂಬಲಿಸಲು ರಾಜಕೀಯ ಸೇರಿದ್ದು ಮೊದಲನೇ ತಪ್ಪು.
ಕ್ರಿಯಾಶೀಲ ಕಲಾವಿದರಿಗೆ ರಾಜಕಾರಣ ಸುಲಭವಾಗಿ ಜೀರ್ಣವಾಗುವುದಿಲ್ಲ. ಅಸೂಕ್ಷ್ಮ ಭಂಡತನವೂ ಬೇಕಾಗುತ್ತದೆ. ಥಳುಕು ಬಳುಕಿನ ಅಭಿನಯದ ನಟರೇ ನಾಚುವಂತ ನಟನೆ ರಾಜಕಾರಣದಲ್ಲಿರುತ್ತದೆ.

ಮುಖವಾಡದ ಬದುಕಿನ ಕಹಿ ಕಂಡು ಬೇಗ ಹೊರಗೆ ಓಡಿ ಬಂದ ಬಚ್ಚನ್ ಎದುರಿಸಿದ ಎರಡನೇ ದೊಡ್ಡ ಸಂಕಷ್ಟ ABCL, ನಿಜ ಕಲಾವಿದರು ವ್ಯಾಪಾರಿಗಳಾಗುವುದು ಬಹಳ ಕಷ್ಟ ಎಲ್ಲೋ ಸಾವಿರಕೊಬ್ಬರು ವ್ಯವಹಾರ ಚಾಣಾಕ್ಷತನ ರೂಪಿಸಿಕೊಂಡಿರುತ್ತಾರೆ.

ತಮ್ಮ ಸೂಪರ್ ಸ್ಟಾರ್ ಖ್ಯಾತಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಲೆಕ್ಕಾಚಾರ ತಲೆಕೆಳಗಾಗಿ ಅಪಾರ ಹಾನಿ ಅನುಭವಿಸುತ್ತಾರೆ.

ಆರ್ಥಿಕ ಸಂಕಷ್ಟ  ಕಲಾವಿದನಿಗೆ ಭೀಕರ ಅನಿಸಿಬಿಡುತ್ತದೆ. ರಾಜಕಾರಣದ ಸ್ನೇಹಿತರು ಮನಸು ಮಾಡಿದ್ದರೆ ಅದು ದೊಡ್ಡ ಸಂಗತಿಯಾಗುತ್ತಿರಲಿಲ್ಲ. ಆದರೆ ಅವರ ನೆರವು ಬೇಡ ಎನಿಸಿದ್ದು ಸಹಜ.
ಏನೇ ಆಗಲಿ ತನ್ನ ಪ್ರತಿಭೆಯ ಮೂಲಕ ಕಳೆದುಕೊಂಡದ್ದು ಮರಳಿ ಪಡೆಯುವ ಪಣ ತೊಡುತ್ತಾರೆ.

ಈ ಮಧ್ಯೆ ಕೂಲಿ ಶೂಟಿಂಗ್ ಸಂದರ್ಭದ ಆಘಾತ ಎಲ್ಲಕ್ಕಿಂತ ಭೀಕರ. ನಟರು ದೈಹಿಕವಾಗಿ ಊನವಾದರೆ ಮುಗಿಯಿತು, ಜೀವಂತ ಹೆಣ.

ದೈಹಿಕವಾಗಿ ಬಹುಬಾಗ ಜರ್ಜರಿತಗೊಂಡರೂ ಮನಸು ಗಟ್ಟಿಯಾಗಿತ್ತು, ಹಾಗೆ ಇಚ್ಛಾಶಕ್ತಿ ಕೂಡ. ಅಮಿತಾಬ್ ಕತೆ ಮುಗಿಯಿತು ಅಂದುಕೊಂಡರು. ಆದರೆ ಅದು ಮುಗಿಯಲು ಅಮಿತಾಬ್ ಅವಕಾಶ ನೀಡಲೇ ಇಲ್ಲ. ಅದೇ ಅವನ ಅದಮ್ಯ ಶಕ್ತಿ.

ಇಷ್ಟೇ ಸಾಲದು ಎಂಬಂತೆ ಖಾಸಗಿ ಬದುಕು ಛಿದ್ರವಾಗಿತ್ತು. ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ತಾವೇ ಮಾನಸಿಕವಾಗಿ ದೂರ ಮಾಡಿಕೊಂಡು, ಮೋಹಕ ನಟಿ ರೇಖಾಳನ್ನು ಹತ್ತಿರ ಎದೆ ಮೇಲೆ ಎಳೆದುಕೊಂಡಿದ್ದರು.

ಈ ಗಾಸಿಪ್ ಸರಳವಾಗಿ ತೆಗೆದುಕೊಳ್ಳುವ ತಾಕತ್ತು ಇಬ್ಬರಲ್ಲೂ ಮೇಲ್ನೋಟಕ್ಕೆ ಮಾತ್ರ ಕಾಣಿಸುತ್ತಿತ್ತು ಆದರೆ ಆಂತರಿಕವಾಗಿ ದೂರ ಸರಿದಿದ್ದರು. ಅಮಿತಾಬ್-ರೇಖಾ ಆನ್ ಸ್ಕ್ರೀನ್ ಜೋಡಿಯನ್ನು ಅಭಿಮಾನಿಗಳೂ ಒಪ್ಪಿಕೊಂಡಿದ್ದರು.

ಈ ಬೇಗುದಿ ಜ್ವಾಲಾಮುಖಿಯಾಗುವ ಮೊದಲೇ ಅಪಘಾತದ ನಂತರ ಅಮಿತಾಬ್ ಅಸಹಾಯಕರಾಗಿ ಕುಟುಂಬದ ಪಾಲಾದರು. ಇದೇ ಕತೆ ಸಿಲ್ ಸಿಲಾ ಸಿನೆಮಾ ಕೂಡಾ ಆದದ್ದು ಇತಿಹಾಸ.
ರೇಖಾ ಬಲಿಪಶುವಾಗಿ ಚಿರಯೌವ್ವನೆಯಂತೆ ಕಾಯುತ್ತಲೇ ಇದ್ದಾರೆ.
ಸೂಕ್ಷ್ಮವಾಗಿ ಅನುಭೂತಿಯಿಂದ ಗಮನಿಸಿದರೆ ಆ ಸತ್ಯ ಕಂಡೇ ಕಾಣುತ್ತದೆ. ಮಾನಸಿಕವಾಗಿ ಅಮಿತಾಬ್-ರೇಖಾ ಈಗಲೂ ಒಂದಾಗಿಯೇ ಇದ್ದಾರೆ.

*ಈ ಬದುಕೇ ಒಂದು ಮಹಾಕಾವ್ಯ. ದೂರವಿದ್ದವರು ಎದೆಯೊಳಗೆ ಅಡಗಿ ಕುಳಿತುಬಿಡುತ್ತಾರೆ. ಜೊತೆಗಿದ್ದವರು ದೂರಾಗಿ ಇರುತ್ತಾರೆ. ಸತ್ಯ ಕಣ್ಣಿಗೆ ಕಾಣದ ಮನದ ಮಾತಾಗಿ ತೆರೆ ಮರೆಯ ಆಟವಾಗಿ ಕಾಡುತ್ತಲೇ ಇರುತ್ತೆ*.

ಈ ನೋವನ್ನು ಕುಟುಂಬದ ನೆಮ್ಮದಿಗಾಗಿ ನಂಜುಂಡ ಬಚ್ಚನ್ ಹೊಸ ಇನ್ನಿಂಗ್ಸ್ ಆರಂಭಿಸಿದರು.

ದೊಡ್ಡ ಪರದೆಯ ಸೂಪರ್ ಸ್ಟಾರ್ ಆದವರು ಕಿರು ತೆರೆ ಮೇಲೆ ಕಾಣಿಸಿಕೊಳ್ಳುವುದು ಅವಮಾನ ಅಂದುಕೊಂಡ ಅನೇಕ ನಟರು ನೇಪತ್ಯಕೆ ಸರಿದಿದ್ದರು.
ಬಚ್ಚನ್ ಹಾಗೆಂದುಕೊಳ್ಳದೇ ಭಿನ್ನ ಆಯಾಮದ ಮೂಲಕ ಕರೋಡಪತಿ ಒಪ್ಪಿಕೊಂಡು ಹೊಸ ಭಾಷ್ಯ ಬರೆದರು, ಅವರು ಅಲ್ಲಿಯೂ ಸೂಪರ್ ಸ್ಟಾರ್.

ವೈಯಕ್ತಿಕವಾಗಿ ಕರೋಡಪತಿಯೂ ಆದರು. ಮಹಾನ್ ದಿವಾಳಿಕೋರ ಪಟ್ಟದಿಂದ ಕೆಳಗಿಳಿದು ಸಾವಿರ ಕೋಟಿಯ ಸಿಂಹಾಸನ ಏರಿದರು.

ಸಾಲು ಸಾಲು ಸಿನೆಮಾಗಳು, ಸಾವಿರಾರು ಜಾಹಿರಾತುಗಳು ಸಿಕ್ಕ ಸಣ್ಣ ಅವಕಾಶಗಳನ್ನು ಧಿಕ್ಕರಿಸದೇ ಸದು ವಿನಯ ಮೆರೆದರು.

ಈಗ ಅವರಿಗೆ ಹಣ ಮುಖ್ಯ ಅಲ್ಲ, ಅದು ಬೇಕಾಗಿಯೂ ಇಲ್ಲ. ಬೇಕಾದದ್ದು ಮೈತುಂಬ ಕೆಲಸ, ಅಪಾರ ಖ್ಯಾತಿ, ಕೊನೆ ಉಸಿರು ಇರೋ ತನಕ ಕಲಾವಿದ ತೆರೆ ಮೇಲೆ ಅಮರನಾಗಿರಲಿ ಎಂಬ ಜೀವಚೈತನ್ಯ, ಜೀವನೋತ್ಸಾಹ.

ಒಂದು ವೇಳೆ ಅಸಹಾಯಕರಾಗಿ ಕೈಕಟ್ಟಿ ಕುಳಿತಿದ್ದರೆ, ಆತ್ಮಹತ್ಯೆ ಮಾಡಿಕೊಂಡಿದ್ದರೆ ಲೋಕಕ್ಕೆ ಹೀರೋ ಆಗುತ್ತಿರಲಿಲ್ಲ.

ಅಮಿತಾಬ್ ಬರೀ ಪರದೆ ಮೇಲೆ ಸೂಪರ್ ಸ್ಟಾರ್ ಅಲ್ಲ ಖಾಸಗಿ ಬದುಕಿನಲ್ಲಿಯೂ ಸೂಪರ್ ಹೀರೊ.

ಸೆಲೆಬ್ರಿಟಿ ಆಗುವ ಕನಸು ಕಾಣುವ ಯುವಕರು ನಾಚುವಂತೆ ಸೆಟ್ ಮೇಲೆ ಕಾಣಿಸಿಕೊಳ್ಳುವ ಸರಳತೆಯನ್ನೂ ಕಾಪಿಟ್ಟುಕೊಂಡಿದ್ದು ಅನುಕರಣೀಯ ಆದರ್ಶ.

ಬೊಗಸೆಗಟ್ಟಲೇ ಮಾತ್ರೆ ದೇಹ ಸೇರುತ್ತಿದ್ದರೂ, ನೋವು ಹಿಂಡಿ ಹಿಪ್ಪೆ ಮಾಡಿದರೂ ಅದನ್ನೆಲ್ಲ ಮರೆ ಮಾಚಿ ನಸು ನಗುತ್ತ ನಟಿಸುತ್ತಲೇ ಇದ್ದಾರೆ.
ಇರಲಿ ಹೀಗೆ ನೂರಾರು ಕಾಲ ನಮಗೆಲ್ಲ ಆದರ್ಶಪ್ರಾಯರಾಗಿ. 

ಹೋದವರು ಹೋಗಿಯೇ ಬಿಡುತ್ತಾರೆ ಆದರೆ ನಟರು ಬೆಳ್ಳಿ ಪರದೆ ಮೇಲೆ ಸದಾ ನಕ್ಷತ್ರಗಳ ಹಾಗೆ ಹೊಳೆಯುತ್ತ ಅಮರರಾಗಿ ಅಜರಾಮರವಾಗಿರುತ್ತಾರೆ.
*ಅದಕ್ಕೆ  You are the Star Soul…*

*Many happy returns of the day Amithab Ji…*

   *ಸಿದ್ದು ಯಾಪಲಪರವಿ*

Wednesday, October 10, 2018

ಕಾಯಬೇಡ ಯಾರಿಗೂ

ಕಾಯಬೇಡ ಯಾರಿಗಾಗಿ

ಮಾಡಿದರೆ ಉಂಟು ನೂರೆಂಟು ಕೆಲಸಗಳು
ಭಾವನೆಗಳೊಂದಿಗೆ ಚಲ್ಲಾಟವಾಡುವವರ
ನಂಬಬೇಡ ನೀ ನಂಬಿದವರ ಮರೆತು

ಇತಿಹಾಸದಲಿ ಕಳೆದವರ ಭವಿಷ್ಯದಲಿ
ಹುಡುಕಿದರೂ ಸಿಗಲಾರರು
ಸಿಗಬಾರದೆಂದು ಹೋದವರ
ಮಲಗಿದಂತೆ ನಟಿಸುವವರ
ನಂಬಬಾರದು

ದಟ್ಟಡವಿಯಲಿ ಪಶು-ಪಕ್ಷಿಗಳ
ಒಡನಾಟ ಹಿತವಪ್ಪುವುದು
ಆದರೆ ನಸುನಗುತ ಹಿತಕಾಯದ
ಮನಜರೊಡನಾಟಕಿಂತ

ನಾಟಕದ ಆಟದಲಿ ಏನೂ
ನಾಟುವುದಿಲ್ಲ ಬರೀ ನಟನೆಯ
ಬಿಟ್ಟು
ಬಿಡು ಮನವೆ ಜಂಜಡದ ಬಂಧವ
ನೂಕಾಚೆ ಇಲ್ಲಸಲ್ಲದ ಭ್ರಮೆಯ

ಸಿಗಲಾರದ ಇತಿಹಾಸ
ಗೊತ್ತಿರದ ಭವಿಷ್ಯದ
ಕಳ್ಳಾಟದ ತಳ್ಳಾಟದಲಿ
ಕಳೆದುಕೊಳ್ಳುವುದು ಬೇಡ
ವರ್ತಮಾನದ ಸವಿಸುಖವ.

----ಸಿದ್ದು ಯಾಪಲಪರವಿ

ಭಕ್ತಿ ಮತ್ತು ಪ್ರೀತಿ

*ಭಕ್ತಿ ಮತ್ತು ಪ್ರೀತಿ: ಅಗೋಚರ ಅನಂತ*

ಪ್ರತಿಯೊಬ್ಬರೂ ಸಂಕಟ ಬಂದಾಗ ವೆಂಕಟರಮಣ ಎಂತಲೋ , ಆಸ್ತಿಕ   ಶೃದ್ಧೆಯಿಂದಲೋ ಭಕ್ತಿಯಿಂದ ತಾವು ಸಂಬಿದ ಕಾಣದ ಶಕ್ತಿಯನ್ನು ಆರಾಧಿಸುತ್ತಾರೆ, ಕೆಲವೊಮ್ಮೆ ಗುಟ್ಟಾಗಿ.

ದೇವರು , ಧರ್ಮ ಮತ್ತು ನಂಬಿಕೆ ತುಂಬ ವೈಯಕ್ತಿಕ ಸಂಗತಿಗಳು.
ತನ್ನಾಸೆಯ ರತಿ ಸುಖ , ತಾನುಂಬುವ ಊಟದಂತೆ ದೈವ ಭಕ್ತಿಯೂ ಖಾಸಗಿ ಸಂಗತಿ ಮತ್ತು ವೈಯುಕ್ತಿಕ ನಂಬಿಕೆ.

ಮೌಢ್ಯತೆ ಮತ್ತು ನಂಬಿಕೆಗೆ ತುಂಬ ಅಂತರ , ಆದರೆ ನಾವು ಎರಡನ್ನೂ ಕಲಸು ಮೇಲೋಗರ ಮಾಡಿ ಮಾತಾಡುವುದು ಅಸಮಂಜಸ.

ಭಕ್ತಿಯ ಇನ್ನೊಂದು ರೂಪವೇ *ಧ್ಯಾನ* .
ಧ್ಯಾನಾನುಭವಕ್ಕೆ ಕೊನೆಯೆಂಬ ದಣಿವಿಲ್ಲ.

ಮನಸನು ನಿಗ್ರಹಿಸಿ ಅಪ್ರತಿಮ ಲೋಕಕೆ ಕೊಂಡೊಯ್ಯುವ ಚೈತನ್ಯವೇ ಧ್ಯಾನ.

ನಾವು ಮಾಡುವ ಪ್ರತಿ ಕೆಲಸದಲ್ಲಿ ಆಸಕ್ತಿ ಹುಟ್ಟಿ , ಗಂಭೀರವಾಗಿ ಪೂರೈಸುವುದೇ ಧ್ಯಾನಸ್ಥ ಮನಸ್ಥಿತಿ.

*ಪ್ರೀತಿ ಮತ್ತು ಭಕ್ತಿ* ಪರಸ್ಪರ  ಪೂರಕ .
ಪ್ರೀತಿಯಿಲ್ಲದೆ ಭಕ್ತಿ ಅಸಾಧ್ಯ.

ಎರಡೂ ಅನನ್ಯ ಹಾಗೂ ಅಮೂರ್ತ. ವಿವರಿಸಲಾಗದ ಭಾವನೆಗಳು.

ತಾಯಿ-ಮಗು , ಪ್ರೇಮಿ-ಪ್ರಿಯಕರ , ಗುರು-ಶಿಷ್ಯ ಹೀಗೆ ತೀವ್ರವಾಗಿ ಬೆಸೆದುಕೊಂಡಿರುವ ಭಾವನೆಗಳಲಿ ಭಕ್ತಿ ಹುದುಗಿರುತ್ತದೆ.

*ಭಕ್ತಿ ಮತ್ತು ಪ್ರೀತಿ* ಸಂಪೂರ್ಣ ಬಯಸುವುದು  ಸಮರ್ಪಣೆ ಹಾಗೂ ಶೃದ್ದೆ.

ಈ ಪ್ರಕ್ರಿಯೆಯಲ್ಲಿ ಬೇಸರ ಹಾಗೂ ನಿರಾಸೆಯ ಸೋಂಕಿರುವುದಿಲ್ಲ.

ಪಡೆದಷ್ಟು ಬೇಕೆನಿಸುವ ಬತ್ತದ ಚಿಲುಮೆ.
ಬೇಡವೆನಿಸದ ಜೀವನೋತ್ಸಾಹ.

ಶೃದ್ಧೆಯಿಂದ ಪ್ರೀತಿಸೋಣ , ಆರಾಧಿಸೋಣ , ಬದುಕಿನ ಪ್ರತಿ ಕ್ಷಣ ಪ್ರೀತಿಯಿಂದ.

( Joyful living in personal and profession life )

---ಸಿದ್ದು ಯಾಪಲಪರವಿ

ಓಶೋ ಎಂಬ ವಿಚಿತ್ರ ಅತಿಮಾನುಷ ಶಕ್ತಿ

ಓಶೋ ಎಂಬ ವಿಚಿತ್ರ ಅತಿಮಾನುಷ ಶಕ್ತಿ

ಆಚಾರ್ಯ ರಜನೀಶ್ ಉರ್ಫ್ ಓಶೋ ಇಡೀ ಜಗತ್ತು ಕಂಡ ಅಪರೂಪದ ಚಿಂತಕ.

Sex to superconscios ಪುಸ್ತಕ ಬರೆಯುವ ತನಕ ಒಳ್ಳೆಯ ಹೆಸರಿತ್ತು ಆದರೆ ಸೆಕ್ಸ್ ಪದ ಬಳಸಿದ ಕೂಡಲೇ ಮಡಿವಂತ ಸನ್ಯಾಸಿಗಳು ಹೌ ಹಾರಿಬಿಟ್ಟರು. ಸಾಲದ್ದಕ್ಕೆ ಸಾವಿರಾರು ರಂಜನೀಯ ಕತೆಗಳನ್ನು ಕಟ್ಟಿದರು.

ನಾನು ಡಿಗ್ರಿ ಓದುವಾಗ ಟೇಪ್  ಜಮಾನಾದಲ್ಲಿ ಒಂದೆರಡು ಟೇಪ್ ಕೇಳಿ ಸಂಭ್ರಮಿಸಿದ್ದೆ. ಲವ್, ಪ್ರೀಡಮ್ ಹಾಗೂ ಜಜ್ಮೆಂಟ್ ಕ್ಯಾಸೆಟ್ಟುಗಳನ್ನು ಹರಿದು ಹೋಗುವವರೆಗೆ ಕೇಳಿದೆ. ಮುಂದೆ ಇಂಗ್ಲಿಷ್ ಹಾಗೂ ಕನ್ನಡದ ಪುಸ್ತಕಗಳನ್ನು ಓದಲಾರಂಭಿಸಿದೆ.

ಬದುಕು ಮತ್ತು ಆಧ್ಯಾತ್ಮ ಗೊತ್ತಿರದ ಹೊರತು ಓಶೋ ಅರ್ಥ ಆಗುವುದೇ ಇಲ್ಲ.

ಧರ್ಮ, ರಿಲಿಜನ್, ದೇಶಪ್ರೇಮ, ದೇವರು, ದೇವಾಲಯ, ಚರ್ಚು, ಮಸೀದಿ ಮತ್ತು ಅಲ್ಲಿ ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಪೂಜಾರಿಗಳೆಂಬ ಮಧ್ಯವರ್ತಿಗಳ ಬಗ್ಗೆ ಜನಸಾಮಾನ್ಯರಿಗೆ ತುಂಬಾ ಗೊಂದಲಗಳಿವೆ.

ದೇವರನ್ನು ಒಲಿಸಿಕೊಳ್ಳಲು ಮಧ್ಯವರ್ತಿಗಳ ಅಗತ್ಯವೇ ಇಲ್ಲ ಎಂದು ಸಾರಿದ ಶರಣರು ಅನುಭವ ಮಂಟಪ ಎಂಬ ಸಂಸತ್ತಿನ ಮೂಲಕ ಇಷ್ಟಲಿಂಗ ಕೈಗಿತ್ತರೂ ನಮಗೆ ಆತ್ಮವಿಶ್ವಾಸವಿಲ್ಲ.

ಎಲ್ಲ ಧರ್ಮದ ಮೂಲಭೂತವಾದಿಗಳು ದೇವರು ಹಾಗೂ ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಮೋಸ ಮಾಡುವುದು ಸಾಗಿಯೇ ಇದೆ. ಮಹಿಳೆಯರ, ಕೆಳವರ್ಗದ ಜನರ ಶೋಶಣೆಗೂ ಈ ದೇವರು ಮತ್ತು ಧರ್ಮವೆಂಬ ಅಸ್ತ್ರಗಳ ಬಳಕೆ.

ಅದಕ್ಕೆ ಬೇಕಾಗಿರುವ ಸಾವಿರಾರು ಕಟ್ಟು ಕತೆಗಳು. ಅವುಗಳ ನಿವೇದನೆ ಮೂಲಕ ಭಯದ ಬೀಜ ಬಿತ್ತಿ, ಬೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ  ಪುರೋಗಾಮಿ ವ್ಯವಸ್ಥೆ ಜಗತ್ತಿನ ಎಲ್ಲ ಕಡೆ, ಎಲ್ಲಾ ಧರ್ಮಗಳಲ್ಲಿಯೂ ಇದೆ.

ಧ್ಯಾನದ ಮೂಲಕ ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲದೇ ದೇವರಾಗುವ ಬಗೆ ಹೇಳಿಕೊಟ್ಟವನು ಬುದ್ಧ, ಅಲ್ಲಮ ಹಾಗೂ ಓಶೋ.

ಆದರೆ ಈ ತರಹದ ಮಾತುಗಳನ್ನು ಒಪ್ಪಿಕೊಳ್ಳಲು ನಮ್ಮ ಪೂರ್ವಾಗ್ರಹ ಮನಸ್ಥಿತಿ ಅಡ್ಡ ಬರುತ್ತಿದೆ.

ಒಳಗೆ, ಆಳದೊಳಗಿರುವ ಭಯ-ಭಕ್ತಿ ಅದನ್ನು ಒಪ್ಪಿಕೊಳ್ಳಲು ಅವಕಾಶ ಮಾಡಿಕೊಡುವುದೇ ಇಲ್ಲ.

ಬಲ-ಎಡ ಪಂಥಗಳ‌ ಆರ್ಭಟದಲ್ಲಿ ಮಧ್ಯಮ ಆಧ್ಯಾತ್ಮ ಮಾರ್ಗ ಮಂಕಾಗುತ್ತಲೇ ಇದೆ.

ಇದಕೆ ಕಾರಣ ಆಧ್ಯಾತ್ಮವೂ ವ್ಯಾಪಾರವಾಗಿಬಿಡುವುದು.

ಕೆಲವರು ದೇವರ ಹೆಸರಿನಲ್ಲಿ ಶೋಶಣೆ ಮಾಡಿದರೆ ಮತ್ತೆ ಕೆಲವರು ಆಧ್ಯಾತ್ಮದ ಹೆಸರಿನಲ್ಲಿ ಮಹಾ ಮಾಂತ್ರಿಕರಾಗಬಯಸುತ್ತಾರೆ.

ಈ ಎಲ್ಲ ಅಪಾಯಗಳ ಮಧ್ಯೆ ಓಶೋ ಭಿನ್ನ ಎನಿಸುತ್ತಾನೆ. ಸತ್ಯದ ನಿಷ್ಠುರ ಪ್ರತಿಪಾದನೆ ಮಾಡಿದರೂ  ಯಾವುದೋ ಕಮರ್ಶಿಯಲ್ ತಂತ್ರದ ಮೂಲಕ ಕೋಟ್ಯಾಂತರ ಅನುಯಾಯಿಗಳನ್ನು ಇಂದಿಗೂ ಉಳಿಸಿಕೊಂಡಿದ್ದಾನೆ.

ಅವನನ್ನು ದ್ವೇಶಿಸುವವರು ಕಾಮದ ಆರೋಪ ಮಾಡಿ ಅವನ ನಿಜವಾದ ಜ್ಞಾನ ಮತ್ತು ತಾಕತ್ತನ್ನು ಮರೆಮಾಚುತ್ತಾರೆ.

ಓಶೋ ತುಂಬಾ ಜಾಣ, ವಾಸ್ತವವಾದಿ, ಅವನು ಹೇಳಿದ ಪ್ರತಿ ಮಾತುಗಳನ್ನು ವಿಡಿಯೋ ಮೂಲಕ ದಾಖಲಿಸಿದ್ದಾನೆ. ಊಹಾಪೋಹಕೆ ಅಲ್ಲಿ ಅವಕಾಶವೇ ಇಲ್ಲ.

ಹೈಟೆಕ್ ಸಾಮರ್ಥ್ಯ ಇರುವ ಕ್ಯಾಮರಾ ಆ ಕಾಲದಲ್ಲಿ ಬಳಸಿದ ಹೆಗ್ಗಳಿಕೆ ಅವನಿಗೆ ಸಲ್ಲುತ್ತದೆ.

ಮನುಷ್ಯನ ಬದುಕಿನ ಪ್ರತಿಯೊಂದು ಸಂಗತಿಗಳನ್ನು ದಾಖಲೆ ಸಮೇತ ವಿವರಿಸುವ ಮಹಾಜ್ಞಾನಿ.

ಕೃಷ್ಣ, ಬುದ್ಧ, ಮಹಾವೀರ, ಹಿಮಾಲಯದ ಸಂತರು ಹಾಗೂ ಝೆನ್ ಸಿದ್ಧಾಂತಗಳನ್ನು ಆಳವಾಗಿ ಗ್ರಹಿಸಿದ ಏಕೈಕ ಸಂತ. ಗ್ರಹಿಕೆ ಹಾಗೂ ನಿರೂಪಣೆಯಲ್ಲಿ ಯಾವುದೇ ರೀತಿಯ ಗೊಂದಲಗಳೇ ಇಲ್ಲ.

ಗೀತೆಯ ಸಾರ, ಬುದ್ಧನ ಧ್ಯಾನ ಸೂತ್ರ, ಮಹಾವೀರನ ಅಹಿಂಸಾವಾದ ಅವನ ಮಾತಿನ ಸೆಳೆತಗಳು.

ಎದುರಗಡೆ ಅಮೆರಿಕದ ಭಕ್ತರನ್ನು ಕೂಡಿಸಿಕೊಂಡು, ಅವರಿಂದ ಪ್ರಶ್ನೆ ಕೇಳಿಸಿಕೊಂಡು ಉತ್ತರ ಕೊಡುವ ನೆಪದಲ್ಲಿ ಕ್ರಿಶ್ಚಿಯನ್ ಧರ್ಮದ ಮೂಲಭೂತವಾದವನ್ನು ಹಣಿಯುತ್ತಾನೆ.

ಕ್ರಿಶ್ಚಿಯನ್ ಧರ್ಮದ ಪ್ರೀಸ್ಟ್‌ ಹಾಗೂ ಅವರು ನಿಲ್ಲಿಸುವ ಕನ್ಫೆಸ್ ಬಾಕ್ಸನ್ನು ಲೇವಡಿ ಮಾಡುತ್ತಾನೆ. ಸಿನ್ ಎಂಬ ಪದ ಮನುಷ್ಯನ ಮನಸಿನಲಿ ಬಿತ್ತುವ ಭಯದ ಬೀಜವನ್ನು ಪ್ರಶ್ನಿಸಿದ್ದಕ್ಕಾಗಿ ಅಮೇರಿಕಾ ಅವನಿಗೆ ಸ್ಲೋ ಪಾಯಿಸನ್ ನೀಡಿ ಕೊಂದದ್ದು ಇತಿಹಾಸ.

ಭಾರತಕ್ಕೆ ಮರಳಿದ ಮೇಲೆ ಒಂದು ನಿಮಿಷ ವಿರಮಿಸದೇ ನಿರಂತರ ಪ್ರವಚನಗಳ ಮೂಲಕ ತನ್ನ ಆಕ್ರೋಶ ಹೊರ ಹಾಕಿದ್ದಾನೆ.

ಸಾವು ಹೊಟ್ಟಯಲಿ ಹರಿಯುತ್ತಿದ್ದರೂ ಲೆಕ್ಕಿಸದೇ ಮಾತನಾಡುತ್ತಲೇ ಪ್ರಾಣ ಬಿಟ್ಟ ಧೀಮಂತ, ಧೀರ.

ವಿಷಪ್ರಾಸನ ಮಾಡದಿದ್ದರೆ ಇನ್ನೂ ಕೆಲವು ಕಾಲ ನಮ್ಮೊಂದಿಗೆ ಬದುಕುತ್ತಿದ್ದ.

ಬದುಕಿರುವ ತನಕ ಹೇಳುವ ಎಲ್ಲ ಸಂಗತಿಗಳನ್ನು ಹೇಳಿ ಹೋಗಿದ್ದಾನೆ.

ಈಗ ಅವನ ಆಶ್ರಮದ ಅನುಯಾಯಿಗಳು YouTube ಮೂಲಕ ಅವನ ಚಿಕ್ಕ ಭಾಷಣಗಳನ್ನಾಗಿ ವಿಂಗಡಿಸಿದ್ದಾರೆ. ಆಧ್ಯಾತ್ಮ ಹಾಗೂ ಧರ್ಮದ ವ್ಯಾಖ್ಯಾನಗಳನ್ನು ಧಾರಾಳವಾಗಿ ಆಲಿಸಬಹುದು.

ಇತ್ತೀಚೆಗೆ ಒಬ್ಬ ಜನಪ್ರಿಯ ಮಠಾಧೀಶರೊಬ್ಬರು ಮಾತನಾಡುವಾಗ ಓಶೋ ಓದಿನ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡರು.

ಮಠದಲ್ಲಿ ಇವರು ಓಸೋ ಪುಸ್ತಕ ಓದುವುದನ್ನು ಕಂಡ ಹಿರಿಯ ಭಕ್ತರೊಬ್ಬರು ಪುಸ್ತಕ ಓದದಂತೆ ತಾಕೀತು ಮಾಡಿದರಂತೆ.

‘ ಅದಕ್ಕೆ ನಾನೀಗ ಮೇಲೆ ಕವರ್ ಹಾಕಿ ಏಕಾಂತದಲಿ ಓಶೋ ಪುಸ್ತಕ ಓದುತ್ತೇನೆ’ ಅಂದರು.

ಆ ಸ್ವಾಮಿಗಳ‌ ಅಸಹಾಯಕತೆ ಹಾಗೂ ಭಕ್ತರ ಅಜ್ಞಾನಕೆ  ಮರುಕಪಟ್ಟೆ.

ನನ್ನ ಪ್ರಾಮಾಣಿಕ ಅನುಭವವನ್ನು ನಿರ್ವಂಚನೆಯಿಂದ ಇಲ್ಲಿ  ದಾಖಲಿಸ ಬಯಸುತ್ತೇನೆ.

*Love a sacred experience* ಎಂಬ ಮಾತುಗಳಲ್ಲಿ ಕಾಮದ ಬಗ್ಗೆ ಓಶೋ ನೀಡುವ ಕಟು ವಾಸ್ತವದ ವಿವರ ಕೇಳಿ ಮುಟ್ಟಿ, ಚಿವುಟಿ ನೋಡಿಕೊಂಡೆ.

ಧರ್ಮದ ಹೆಸರಿನಲ್ಲಿ ಲೈಂಗಿಕ ಶಿಕ್ಷಣ ನೀಡದೇ ಜನರನ್ನು ಅಜ್ಞಾನದಲ್ಲಿಟ್ಟ ಕಾರಣದಿಂದ ಉಂಟಾಗುವ ಎಲ್ಲ ಅಸಂತೋಷ, ಅತೃಪ್ತಿಗಳನ್ನು ವಿವರಿಸುತ್ತಾನೆ.

ಕೇಳಿದ ನಾವೆಲ್ಲ ನಿಜವಾದ  ಕಾಮಾನುಭವದ ವಂಚಿತರೆನಿಸಿತು.

ಮದುವೆಯಾದ ಹೊಸದರಲ್ಲಿ ಈ ವಿಡಿಯೋ ನೋಡಿದ್ದರೆ ಎಷ್ಟೊಂದು ಚಂದಿತ್ತು ಎಂದು ಮರುಗಿದೆ.

ಈ ಕುರಿತು ಪ್ರಶ್ನೆ ಕೇಳಿದ ವಿದೇಶೀ ಮಹಿಳೆ ಮುಖ ಕೆಂಪಾಗಿ ಹೋಗುತ್ತದೆ.

ಕಾಮಾನುಭವ ಒಂದು ಸೆಲಿಬ್ರೇಶನ್ ಆಗಬೇಕೆಂಬ ಅವನ ವಿವರಣೆ ಪುಳಕಗೊಳಿಸಿ ಉತ್ತೇಜಿಸುವುದು ಸಹಜ.

ಇಂತಹ ಕೆಲವು ವಿವರಣೆ ಕದ್ದು ಕೇಳಿದ ಮೂಲಭೂತ ಮನೊಸ್ಥಿತಿ ಉಳ್ಳವರು ಅವನನ್ನು ಕಾಮುಕನೆಂದು ಬಿಂಬಿಸುತ್ತಾರೆ. ಅವನ ವಿರಣೆಯಲಿ ಯಾವುದೇ ರೀತಿಯ ವಿಕಾರವಿಲ್ಲದ ನಿಶ್ಚಲ, ನಿರ್ಮಲ ನಿರೂಪಣೆ ನನ್ನ ಪುಳಕಗೊಳಿಸಿತು.

ಈ ಭೂಮಿ ಮೇಲಿರುವ ಲಕ್ಷಾಂತರ ದಂಪತಿಗಳು ಅತೃಪ್ತ ಕಾಮದಿಂದಾಗಿ ಕಚ್ಚಾಡಿ ಸಾಯುತ್ತಾರೆ.

ಅದೇ ಅತೃಪ್ತ ಭಾವ ಮಾನಭಂಗ ಹಾಗೂ ಅನೈತಿಕ ಸಂಬಂಧಗಳಿಗೆ ಕಾರಣವಾಗುವುದು ಅಷ್ಟೇ ಸತ್ಯ.

ಮಡಿವಂತಿಕೆ ಹಾಗೂ ಧರ್ಮದ ಚೌಕಟ್ಟಿನಲ್ಲಿ ನಮ್ಮನ್ನು ಕೂಡಿ ಹಾಕಿ ಅತೃಪ್ತ ಆತ್ಮಗಳಾಗಿ ಸಾಯಿಸಿಬಿಡುತ್ತಾರೆ. ಚಾರಿತ್ರ್ಯದ ಹೆಸರಿನಲ್ಲಿ ಮನುಷ್ಯ ಪಾಪ ಪ್ರಜ್ಞೆಯಲಿ ಸಾಯುವಂತೆ ಮಾಡುತ್ತಾರೆ.

ಕಾಮದ ವಿವಿಧ ಆಯಾಮ ಹಾಗೂ ಲೈಂಗಿಕ ‌ ವಾತಾವರಣದ ವಿವರಣೆ ಕೇಳಿದಾಗ ಕಾಮ ಅಲ್ಲ ಅದು ಮಿಲನ ಮಹೋತ್ಸವ ಆಗುವುದರಲ್ಲಿ ಸಂಶಯವೇ ಇಲ್ಲ.

ಗಂಡು-ಹೆಣ್ಣು, ಚರಿತ್ರೆ-ಚಾರಿತ್ರ್ಯ ಎಂಬ ಸಂಕೋಲೆಯಲ್ಲಿ ಮನುಷ್ಯನ ಇತಿಹಾಸ ಬರೆಯುತ್ತ ವರ್ತಮಾನ ಸಾಯಿಸಿಬಿಡುವ ಸ್ಯಾಡಿಸಂ ಅರ್ಥವಾಗುತ್ತದೆ.

ಹೆಣ್ಣಿನ ಇಡೀ ದೇಹದ ಸೌಂದರ್ಯದ ತಾಕತ್ತನ್ನು ಹಾಗೂ ಗಂಡಿಗಿರುವ ಜೆಂಟಾಲಿಯದ ಮಿತಿಯನ್ನು ಲೇವಡಿ ಮಾಡಿ ಪುರುಷ ಪ್ರಧಾನ ವ್ಯವಸ್ಥೆ ಹುಟ್ಟು ಹಾಕಿದ ಪುರುಷರನ್ನು ಅಲ್ಲಾಡಿಸುತ್ತಾನೆ.

ಹೀಗೆ ಇಡೀ ವ್ಯವಸ್ಥೆಯ ಸಾವಿರಾರು ಲೋಪದೋಷಗಳನ್ನು ತನ್ನ ಮಾತುಗಳ ಮೂಲಕ ಜಾಡಿಸುತ್ತಾನೆ.

ಓಶೋ ಕಾಮದಾಚೆಗಿರುವ ಅನೇಕ ವಾಸ್ತವಗಳನ್ನು ತೆರೆದಿಟ್ಟಿದ್ದಾನೆ. ನಿಮ್ಮ ಕುತೂಹಲಕ್ಕಾಗಿ ಮೇಲಿನ ಒಂದು ಮಾತಿನ ಪ್ರಸಂಗ ಹಂಚಿಕೊಂಡೆ.

ಉಳಿದ ವಿಷಯಗಳ ಆಗಾಗ ಹಂಚಿಕೊಂಡು ಹಗುರಾಗುವೆ.

  *ಸಿದ್ದು ಯಾಪಲಪರವಿ*

Saturday, October 6, 2018

ಭಾವತೀವ್ರತೆಗೆ ವಿದಾಯ

ಲವ್‌ ಕಾಲ

*ಭಾವತೀವ್ರತೆಗೆ ವಿದಾಯ*

ಅದೆಷ್ಟು ಚಡಪಡಿಸಿ ಒದ್ದಾಡಿದೆ ಸಾವಿರದ ಹಗಲು ರಾತ್ರಿಗಳಲಿ.
ತಲೆಚಿಟ್ಟು ಹಿಡಿಸುವಷ್ಟು ಭಾವುಕ ಎನಿಸಿಕೊಂಡು ಬಿಟ್ಟೆ. ಆದರೆ ಆ ತೀವ್ರತೆಯಲಿ ಪ್ರೀತಿ-ಕಾಳಜಿ ಬಿಟ್ಟರೆ ಬೇರೇನೂ ಇರಲಿಲ್ಲ, ನೀ ಅದನು ಯಾಕೋ ಬೇಗ ಅರ್ಥಮಾಡಿಕೊಳ್ಳದೇ ಅತಿರೇಕದ ಹುಚ್ಚಾಟ ಅಂದುಕೊಂಡುಬಿಟ್ಟೆ.

ಬದುಕಿನ ಪ್ರತಿಯೊಂದು ಘಟನೆಗಳನ್ನು, ಭೇಟಿಯಾದ ವ್ಯಕ್ತಿಗಳನ್ನು ತುಂಬ ಅಂದರೆ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತ ಬೆಳೆದದ್ದು ತಪ್ಪಾಗಿ ಹೋಯಿತು.

ಎಲ್ಲರೂ ಒಳ್ಳೆಯವರು, ಹಿತೈಷಿಗಳು ಎಂದು ನಂಬುತ್ತಲೇ ನಡೆದೆ. ಆ ನಂಬಿಕೆ ಯಾಕೋ ಕೈ ಕೊಡುತ್ತಲೇ ಹೋಯಿತು. ನಾನದನ್ನು ಸಹಿಸುತ್ತಲೇ ಬಂದೆ. ಸಹಿಸಿಕೊಳ್ಳಲೇಬೇಕು, ಏಕೆಂದರೆ ತಪ್ಪಿತಸ್ಥ ನಾನು.

ಆದರೂ ನಾ ಪಾಠ ಕಲಿಯದೇ ವಿಲಿ ವಿಲಿ ಒದ್ದಾಡುತ್ತಲೇ ಬೆಳೆದೆ, ಬುದ್ಧಿ ಬೆಳೆಸಿಕೊಳ್ಳದೇ.
‌
ದಾರಿಯಲಿ ಸಿಕ್ಕವರ ಮಾತ ಕೇಳಿ ಮರ ಹತ್ತಿದೆ, ನೀರಿಗೆ ಹಾರಿದೆ, ಹಳ್ಳದಲಿ ಧುಮುಕಿದೆ, ಆಕಾಶದಲ್ಲಿ ತೇಲಾಡಿದೆ ಯಾಕೋ ಈ ಖೋಡಿ, ಕೊಟ್ಟಿ ವಾಸ್ತವ ನನಗೆ ಭೇಟಿಯಾಗಲಿಲ್ಲ. ನಾ ಜಾಣನಾಗಲೇ ಇಲ್ಲ.

ಇನ್ನೇನು ಸೋತು ತಣ್ಣಗಾಗಿ ಹೋದಾಗ ನೀ ಭೇಟಿಯಾದದ್ದು ಹೊಸ ಇತಿಹಾಸ ಆದರೆ ಪರಿಣಾಮ ಒಂದೇ.
ಭಾವತೀವ್ರತೆಯ ಗಡಿ ಮೀರಲೇ ಇಲ್ಲ. ಮತ್ತದೇ ಹಳೆಯ ಹಳವಂಡಗಳ ಮಾನದಂಡದಲಿ ನಿನ್ನ ಓಲೈಸಲು ಒದ್ದಾಡಿದೆ.

ನೀ ವಾಸ್ತವದ ಸವಾರಿ ಮೇಲಿದ್ದಾಗ ಯಾಕೋ ನನ್ನ ಸಂಬಂಧ ತಲೆಚಿಟ್ಟು ಹಿಡಿಸಿದ್ದು ಸಹಜ. ನನಗೆ ಅರ್ಥವಾಯಿತಾದರೂ ಹೊರ ಬರಲಾಗಲಿಲ್ಲ, ಭಾವತೀವ್ರತೆಯ ಸುಳಿಯಿಂದ.

ಬಂಧನದಿ ಬಿಡಿಸಿಕೊಂಡು ಬಚಾವಾಗಿ ನಾ ಹಗುರಾಗಲು ನಿರ್ಧರಿಸಿದ ಬೆನ್ನಲ್ಲೇ ನೀ ನನ್ನ ತೀವ್ರತೆಯ ಗ್ರಹಿಸಿ ಸಹಿಸಿಕೊಳ್ಳಲಾರಂಭಿಸಿದೆ.
ತಲೆ ಚಿಟ್ಟು ಅನಿಸಿದರೂ ಪ್ರೀತಿಯ ಆಳವ ಇಣುಕಿ ನೋಡುವ ಸಹನೆ ರೂಢಿಸಿಕೊಂಡಿದ್ದಕ್ಕೆ ನಾ ಸಂಪೂರ್ಣ ದಕ್ಕಿಬಿಟ್ಟೆ.

ಮಿತಿ, ಶಕ್ತಿ, ಆಳ, ಅಗಲ, ಅನನ್ಯ ಜೀವಪ್ರೇಮದ ಮುಂದೆ ಈ ತೀವ್ರತೆ ಸಹನೀಯ, ಸ್ವೀಕೃತ ಅನಿಸಿಬಿಟ್ಟಿತು. ಇಬ್ಬರಿಗೂ.

ನೀ ಇದಾವುದನ್ನು ಬಾಯಿ ಬಿಟ್ಟು ಹೇಳಲಿಲ್ಲವಾದರೂ ನಾ‌ ಎರಡನೇ ವ್ಯಕ್ತಿಯಾಗಿ ಗಮನಿಸಿ ತಿಳಿದುಕೊಳ್ಳುತ್ತ ಹೋದೆ. *ಎಲ್ಲ ಓಕೆ, ಈ ತೀವ್ರತೆ ಏಕೆ* ಎಂಬ ಭಾವ ನಿನ್ನ ಸದಾ ಇರಿಯುತ್ತಲೇ ಇತ್ತು.

ಈ ತೀವ್ರತೆಯನ್ನು ಪೊಸೆಸ್ಸಿವ್ ಅಂತಲೂ ಕರಿತಾರೆ. ಪೊಸೆಸ್ಸಿವ್ ಇಲ್ಲದೇ ಪ್ರೀತಿ ಉಳಿಯಲಾರದು ಕೂಡ!

ಆದರೆ ಬಾಂಡೇಜಿನಲ್ಲಿ ಪ್ರಬುದ್ಧತೆ ಹೆಚ್ಚಾದಂತೆ ಪೊಸೆಸ್ಸಿವ್ ಮನಸ್ಥಿತಿ ಕಡಿಮೆಯಾಗುತ್ತ ಹೋಗುತ್ತದೆ.

*ಆದರೆ ಅದು ಕಡಿಮೆ ಆಗುವುದರೊಳಗೆ ರೋಸಿ ಹೋದರೆ, ತಲೆ ಚಿಟ್ಟು ಹಿಡಿಸಿಕೊಂಡರೆ ಬಾಂಡೇಜ್ ಕತೆ ಮುಗಿದಂತೆ*.

ನಮ್ಮ ಪುಣ್ಯ ಎಷ್ಟೇ ರೋಸಿ ಹೋದರೂ ನಾವಿಬ್ಬರೂ ಹಗ್ಗ ಜಗ್ಗಾಟದಲಿ ಪರಸ್ಪರ ಬಿಗಿದುಕೊಂಡು ಗಟ್ಟಿಯಾಗಿ ಉಳಿದದ್ದು, ಅಪರೂಪ, ಅನುರೂಪ, ಅನನ್ಯ ಹಾಗೂ ಅವನ ಲೀಲೆ.

*ಅವನು ಕೈ ಬಿಡದಿರಲು ಕಾರಣ ಇಷ್ಟೇ, ನಮ್ಮಿಬ್ಬರ ನಿಷ್ಟೆ*.
ನಮ್ಮ ಚಾರಿತ್ರ್ಯ ಹಾಗೂ ಚರಿತ್ರೆಯನು ಅಳೆದು ತೂಗಿದ *ಅವನು* ಇವರು ಉಳಿಯಲಿ ಎನಿಸಿ ತಥಾಸ್ತು ಅಂದಾಗ ನಾವು ಗೆದ್ದು ಬಿಟ್ಟೆವು.
‌
*Now I'm totally free from possessiveness but…*

  *ಸಿದ್ದು ಯಾಪಲಪರವಿ*

Thursday, October 4, 2018

ಹೆಳವರ ಫಕೀರಪ್ಪ

*ಹೆಳವರ ಫಕೀರಪ್ಪ-ತಾತ-ಅಪ್ಪ-ಇತಿಹಾಸ ಮತ್ತು ನಾನು*

ಕುಟುಂಬದ ಇತಿಹಾಸ ಹೇಳುವ *ಹೆಳವರು* ದಾಂಡೇಲಿ ಹಳಿಯಾಳದ ಹತ್ತಿರವಿರುವ ಹೊಸಹಡಗಲಿಯಲಿ ವಾಸಿಸುತ್ತಾರೆ.

ಇಡೀ ಉತ್ತರ ಕರ್ನಾಟಕ ಸಂಚರಿಸಿ ತಮ್ಮ ಪಾಲಿಗೆ ಬಂದಿರುವ ಮನೆತನಗಳ ಇತಿಹಾಸ ಹೇಳಿ ಜೀವನ ನಿರ್ವಹಿಸುತ್ತಾರೆ.

ಇವರು ಎರಡು ವರ್ಷಕ್ಕೆ ಒಮ್ಮೆ ಬಂದು ಹೇಳುವ ಇತಿಹಾಸ ಮತ್ತೆ ಮತ್ತೆ ಕೇಳಿದಾಗಲೆಲ್ಲ ಸೋಜಿಗ.

ಮುಂಚೆ ಫಕೀರಪ್ಪ ಈಗವನ ತಮ್ಮ ಮಲ್ಲಪ್ಪ ಬಂದಿದ್ದ. ದೇಸಿಯ ಪರಂಪರೆಯನ್ನು ಉಳಿಸಲು ನಮ್ಮೊಡನೆ ಇವರನ್ನು ಕರೆದುಕೊಂಡು ಹೋಗಬೇಕು.

ಕೊಟ್ಟಷ್ಟೇ ಹಣ ಪಡೆದು ಹೋದರು ಕೊಂಚ ಕಾಡುತ್ತಾರೆ.

ನಮ್ಮ ಪುರಾತನ wikipedia ದಂತಿರುವ ಇವರನ್ನು ನಮ್ಮ ಹಿರಿಯರಂತೆ ಗೌರವಿಸೋಣ.
ಮುಂದಿನ ಸಲ ಬಂದಾಗ *ಬಂಗಾರ ಕೊಡಲೇಬೇಕು* ಎಂದು ಇಪ್ಪತ್ತು ವರ್ಷಗಳಿಂದ ಕೇಳುತ್ತಲೇ ಇದ್ದಾನೆ.

ಕೊಟ್ಟಷ್ಟು ಪಡೆದು ಖುಷಿಯಿಂದ ಹರಸಿ ಹೋದಾಗ ಕೆಲ ಕ್ಷಣ ಭಾವುಕನಾದೆ.

ಮನೆತನದ ಇತಿಹಾಸ ಹೇಳುವ ಇವರ ಕತೆಯನ್ನು ಕೇಳುತ್ತಿದ್ದ ತಾತ , ಅಪ್ಪ ಈಗ  *ಇತಿಹಾಸ*.

ಇವರು ಹೇಳಿದನ್ನು ಕೇಳಿ ಗೋದಿ ಬನ್ನೂರು ಹುಡುಕಿದೆ. ಬೇರುಗಳ ನೆನಪು ಮತ್ತು ಹುಡುಕಾಟ ಅನನ್ಯ.

ಬೇರು ಹಿಡಿದು ಬೆಳೆದಷ್ಟು ಮರ ಬೀಳುವುದಿಲ್ಲ.
ಬೇರು ಅಲುಗಾಡಿದರೆ ನಾವೂ ಇರುವುದಿಲ್ಲ.

ಇತಿಹಾಸ ನೋಡಿಲ್ಲ , ಭವಿಷ್ಯ ಗೊತ್ತಿಲ್ಲ , ವರ್ತಮಾನದಲಿ ಬದುಕಿದ್ದರೆ ಸಾಕು ಜೀವಂತಿಕೆಯಿಂದ.

ಮುಂದೆ ನಾವು ಇತಿಹಾಸ ಸೇರುತ್ತೇವೆ ಆದರೆ ನಮ್ಮ ಮಕ್ಕಳು ಇವರು ಹೇಳುವುದನ್ನು ಕೇಳುವಷ್ಟು , ಹಣ ಕೊಡುವಷ್ಟು ವ್ಯವಧಾನ ಇಟ್ಟುಕೊಳ್ಳಲಿ ಎನಿಸಿತು.

---ಸಿದ್ದು ಯಾಪಲಪರವಿ