Tuesday, March 6, 2018

ಕೂಸು ಕಳೆದಿದೆ ಜಾತ್ರೆಯಲಿ

*ಕೂಸು ಕಳೆದಿದೆ ಜಾತ್ರೆಯಲಿ*

ಒಲವಿನಿಂದ ಒಂದರಗಳಿಗೆ ಬಿಟ್ಟಿರದೆ
ನಿತ್ಯ ಕಾವ್ಯ ಬರೆದು ಲಾಲಿ ಹಾಡಿ
ಮುದ್ದು ಮಾಡಿ ಬೆಳೆಸಿದ್ದ
ಕೂಸು ಕಳೆದು ಹೋಗಿದೆ

ಗಾಣದೆತ್ತಿನ ದುಡಿತದ ದಂಡಿನರಮನೆಯ
ಸಿಂಹಾಸನದಿ ಕುಳಿಸಿ ಮೆರೆಸುವ
ನಾಜೂಕು ಮಂದಿಯ ಸಂಗದ
ಮರಳು ಮಾತಿಗೊಲಿದು ಮುನಿಸ
ಮರೆತು ದುಡಿದೇ ದುಡಿಯುವ
ಅಸಹಾಯಕ ಮರುಳ
ಕೂಸು ಕಳೆದು ಹೋಗಿದೆ

ಸಂಸಾರ ಸಾಗರದ ಪ್ರೀತಿ ಅಲೆಯಲಿ
ವಾತ್ಸಲ್ಯದಮಲಿನಲಿ ಅಪ್ಪಳಿಸಿ ಬಿದ್ದ
ಹೊಡೆತವರಿಯದೆ ತನ್ನ ತಾ ಮರೆತ
ಕೂಸು ಕಳೆದು ಹೋಗಿದೆ

ನಿತ್ಯ ಜಂಜಡದ ಸ್ವಾರ್ಥಿಗಳ
ಮೃದು ಮಾತಿಗೆ ಕೇಳಿದ್ದ ಮಾಡಿ
ಕೊಟ್ಟು ತಲೆ ಮೇಲೆ ಹೊತ್ತು
ಕುಣಿದು ನಕ್ಕು ನಲಿದ ಮಕ್ಕಳ
ಮನಸಿನ ಹುಚ್ಚು ಪೆದ್ದ
ಕೂಸು ಕಳೆದು ಹೋಗಿದೆ

ಈಗ ಕಳೆದಿದ್ದ ಕೂಸು ಎಚ್ಚರಾಗಿ
ಮೈಮನಗಳ ನೋವಿಗೆ ಬೇಸತ್ತು
ಸಣ್ಣಗೆ ನರಳುತಿದೆ ದಿಕ್ಕು ತೋಚದ
ಕೂಸು ಕಳೆದು ಹೋಗಿದೆ

ಕಳಕೊಂಡ ಹಳವಂಡದಿ ಹಳಹಳಿಸಿ
ಅಂಗಲಾಚಿ ನಡುಗುತ
ಕಣ್ಣೀರ ಸುರಿಸುವ
ಕೂಸು ಕಳೆದು ಹೋಗಿದೆ

ಇಷ್ಟೆಲ್ಲ ಮಾಡಿದರೂ ದಕ್ಕುವುದು
ಬರೀ ಚೂರು ಚೂರೂ ಪಾರು
ಅದನೇ ಕಣ್ಣಿಗೊತ್ತಿ ಸಂಭ್ರಮಿಸುವ
ಕೂಸು ಕಳೆದು ಹೋಗಿದೆ

ಈಗ ಹಿಡಿದು ಕಟ್ಟಿ ಹಾಕಿ
ರಮಿಸಿ ಮತ್ತೆ ಮತ್ತೆ ಮತ್ತೆ
ಮುದ್ದು
ಮಾಡಿ ಮತ್ತ ಬರಿಸಿ

ಜೇನ ಸುರಿಸಿ ಜೀವರಸವ
ಹರಿಸಿ ಬೆಚ್ಚಗೆ ಎದೆಯ
ಗೂಡಲಿ ಜತನ ಮಾಡುವೆ
ಕಳೆದು ಹೋದ ನನ್ನ ಕೂಸ.

----ಸಿದ್ದು ಯಾಪಲಪರವಿ.

No comments:

Post a Comment