*ನೆಲೆ ನಿಂತ ಹುಡುಕಾಟ ಹುಡುಗಾಟ*
ಹುಚ್ಚು ಮನಸಿಗೆ ಹತ್ತಲ್ಲ
ಸಾವಿರದ ಮುಖಗಳ ಹುಡುಕಾಟ
ತೀರದ ದಾಹ ತಣಿಸಲು
ನೂರೆಂಟು ಗೊಂದಲದ ಹುಡುಗಾಟ
ದೇಹದಾಟ ಮೈಮಾಟ ಸೊಬಗ
ಕೂಟ ಕಳ್ಳ ನೋಟ ಮಳ್ಳ ಹಟ
ಬಾಗಿದರೂ ಮೈ ಕುಗ್ಗಿದರೂ
ಕೈ ನಿಲ್ಲದ ಚಪಲದಾಟ
ಅಲ್ಲಿ ಇಲ್ಲಿ ಮತ್ತೆಲ್ಲಿ
ಹೇಗಂದರೆ ಹಾಗೆ ಹೀಗಂದು
ಹೀಗೆ ಏನಾದರೂ ಮಾಡಲು
ಒಳಹೊರಗೂ ನೊಂದು ಕೊಂದು
ಹಿಂದು ಮುಂದು ಮುಖಗಳ
ಮೇಲೆ ಮುಖವಾಡಗಳ ಸರಮಾಲೆ
ಮುಗಿಯದ ಚಪಲಕೆ ತೀರದ
ದಾಹಕೆ ಬತ್ತದ ಜೀವಜಲ
ಮತ್ತೆ ಮತ್ತೆ ಮತ್ತದೇ ಗತ್ತು
ಒಳಗೊಳಗೆ ನಿಲ್ಲದ ಮತ್ತು
ಬರೀ ಗಮ್ಮತ್ತು ಮೋಜಿನ
ಮಂಜಿನಾಟದ ಬೆರಗ ಛಳಿ
ಬೆದರದ ಮನಕಿಲ್ಲ ನಾಚಿಗೆ
ಕರಗದ ಚಿಂತನೆಗಿಲ್ಲ ಚಿಂತೆ
ನೀ ಸಿಕ್ಕ ಮರುಕ್ಷಣ ಎಲ್ಲ
ಎಲ್ಲಾ ಮಂಗಮಾಯ ನಾ
ಈಗ ಬರೀ ನಾ
ನೀ ನೆಂಬ ನಂಬಿಗೆಯ ಬಿಗಿಬಂಧನದಿ
ನಿರಂತರ ಹರಿವ ಜೋಡ ನದಿ
ಬದುಕ ದಡ ಸೇರಿ ಆಳಕೇರಿ ಒಳಗಿಳಿಯಲು.
----ಸಿದ್ದು ಯಾಪಲಪರವಿ.
No comments:
Post a Comment