ಇಂದಿನ ಜಾಗತಿಕ ತಾಪಮಾನವನ್ನು ನೋಡಿದರೆ ಭಯಾನಕವೆನಿಸುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟರ ಕೈಗೆ ಸಿಕ್ಕು ಪರಿಸರ ನಾಶವಾಗುತ್ತಲೇ ಇದೆ.
ಹಣ ಇದ್ದರೆ ಏನೆಲ್ಲಾ ಕೊಂಡುಕೊಳ್ಳಬಹುದು ಎಂಬುದು ಕೇವಲ ಭ್ರಮೆ !
ಎಷ್ಟೋ ಸಾವಿರ ಕೋಟಿ ಸುರಿದರೂ ಮನುಷ್ಯ ದಿಢಿರೆಂದು ನೀರನ್ನು , ಆಹಾರ ಪದಾರ್ಥಗಳನ್ನು ಸೃಷ್ಟಿಸಲಾರ ಎಂಬ ಸತ್ಯ ಗೊತ್ತಿದ್ದರೂ ಅವನ ಅನಾದರ , ಅಜ್ಞಾನಕ್ಕೆ ಕೊನೆಯಿಲ್ಲದಾಗಿದೆ.
ಪರಿಸರ ಇಲಾಖೆ ,ಲೆಕ್ಕವಿಲ್ಲದಷ್ಟು ಹುಟ್ಟಿಕೊಂಡಿರುವ ಸೇವಾಸಂಸ್ಥೆಗಳು ಕಣ್ಣಾ ಮುಚ್ಚಾಲೆ ಆಟದಲ್ಲಿವೆ ಇಲ್ಲಿಯೂ ಅತಿಯಾದ ಹಿಪೊಕ್ರಸಿ ತುಂಬಿ ತುಳುಕುತ್ತಲಿದೆ.
ನಮ್ಮ ಹೋರಾಟಗಳು , ನಾವು ಮಾಡುವ ಭಾಷಣಗಳು , ಮಾಧ್ಯಮಗಳ ಸಂವೇದನೆಯಿಲ್ಲದ ಸಂವಾದಗಳು , ಸಹಿಷ್ಣತೆ,ಅಸಹಿಷ್ಣತೆಯ ಕೆಸರಾಟ ಎಲ್ಲವೂ ಕೇವಲ ಕಾಳಜಿರಹಿತ ಹಿಪೊಕ್ರಸಿ !!
ಆದರೆ ಈ ನಾಟಕ ಎಷ್ಟು ದಿನ ?
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಗಾರರಿಕೆಯ ಜವಾಬ್ದಾರಿಯುತ ಅಬ್ಬರವಿಲ್ಲದ ಹೋರಾಟವಾಗಬೇಕು.
ಪ್ರತಿ ಬೇಸಿಗೆಯ ತಾಪಮಾನ ಹೆಚ್ಚಾದಾಗ ಈ ರೀತಿಯ ಸ್ಮಶಾನ ವೈರಾಗ್ಯ ಉಂಟಾಗದೇ ನಿರಂತರ ಪ್ರಜ್ಞೆಯಾಗಬೇಕು. ಧಾರ್ಮಿಕ ಮುಖಂಡರುಗಳು , ಸಾಮಾಜಿಕ ಸಂಘಟನೆಗಳು , ವಿದ್ಯಾಸಂಸ್ಥೆಗಳು ಪರಿಸರ ರಕ್ಷಣೆಗೆ ಮುಂದಾಗಬೇಕು. ವಿಶ್ವಮಾನವತೆ ಹಾಗೂ ಪರಿಸರ ರಕ್ಷಣೆ ನಮ್ಮ ಜವಾಬ್ದಾರಿಯಾದಾಗ ಎಲ್ಲಾ ಅಸಹಿಷ್ಣತೆ ಇಲ್ಲದಾಗುತ್ತದೆ.
ಈ ಸತ್ಯ ಎಲ್ಲರಿಗೂ ಗೊತ್ತಿದ್ದರೂ ತಮ್ಮದೇ ವಾದ ಗೆಲ್ಲಲಿ ಎಂಬ ಹಟಮಾರಿತನವಿದೆ.
ಎಡ-ಬಲ ವಿಚಾರವಾದಿಗಳ ಮೂಲ ಧೋರಣೆ ಪರಿಸರ ರಕ್ಷಣೆ ಹಾಗೂ ವಿಶ್ವಮಾನವತೆಯಾಗಬೇಕು ಇಲ್ಲದಿದ್ದರೆ ನಾವ್ಯಾರು ಇರುವುದಿಲ್ಲ ನಮ್ಮ ವಾದವೂ ಇರುವುದಿಲ್ಲ.
ಪ್ರಗತಿಪರ, ಮುಂದುವರೆದ ರಾಷ್ಟ್ರಗಳ ಪರಿಸರ ಪ್ರಜ್ಞೆ ಹಾಗೂ ಧೋರಣೆಯನ್ನೊಮ್ಮೆ ಗಮನಿಸಿ ಪಾಠ ಕಲಿಯೋಣ...
---ಸಿದ್ದು ಯಾಪಲಪರವಿ
No comments:
Post a Comment