Saturday, March 12, 2016

ಕಳೆದು ಹೋಗಿದ್ದೇನೆ



ಮುಗ್ಧತೆ-ತವಕ--ತಲ್ಲಣ
ಗಳ ತೊಟ್ಟಿಲಲಿ
ತೂಗುಯ್ಯಾಲೆ
ಕಂಡ ಕನಸುಗಳಿಗೆ
ಲೆಕ್ಕವಿಲ್ಲ.
ಕಾಮಕುದುರೆಯನೇರಿ
ಪ್ರೇಮದಾಟದಲಿ
ಮೀಯುವ
ತವಕ
ಅಕ್ಷರ ಬಂಧನದ
ತಲ್ಲಣ
ಸೋಲು ನೋವು
ಹತಾಶೆಯ ಬೇಗುದಿ.
ಹಿಡಿದ ಹಾದಿಯ
ಅಂತ್ಯ ಅಯೋಮಯ
ಭಾವುಕ ಭ್ರಾಮಕ ಸುಳಿಯ
ಸೆಳೆತದ ಆಲಿಂಗನ.
ಸತ್ಯ - ಆದರ್ಶಗಳ
ಗಾಳದಿ ಸಿಕ್ಕ ಮೀನು.
ಕಂಡದ್ದೆಲ್ಲ ಕಸಿದು
ಹೊಸಕುವ ಹುಮ್ಮಸ್ಸು.
ತೋಳ ದಿಂಬಾಗಿಸಿ
ದಿಂಬಲಿ ಅವಳ
ಬಿಂಬವ ತಡಕಾಡಿದ
ಅನರ್ಥ ಬದುಕು.
ನಿಟ್ಟುಸಿರ ದಾಳಿ ಗೆ
ಏದುಸಿರಿ ಬೆವರಿಗೆ
ಥಟ್ಟನೆ ಜಾರಿ ಬಿದ್ದ
ಪುರುಷ ಹನಿ...
ಸಹಿಸುತ, ರಮಿಸುತ
ಸೋಲುತ ಗೆಲ್ಲುತ
ಅಗ್ನಿ ಪರೀಕ್ಷೆಗೊಳಗಾಗಿ
ಎಲ್ಲವನು ಎಲ್ಲರನು
ಸಹಿಸಿಕೊಂಡು
ನನ್ನನೇ ದಹಿಸಿಕೊಂಡು
ಪಾರಾದ ಏರು ಯೌವ್ವನ
ಈಗ ನೀ ಎಲ್ಲಿರುವೆ?!..

---ಸಿದ್ದು ಯಾಪಲಪರವಿ

No comments:

Post a Comment