ಬದುಕ ಪಯಣದ ಹಾದಿಯಲಿ - ೩
ಒಂಟಿತನದ ಹಿಂಸೆ
- ಸಿದ್ದು ಯಾಪಲಪರವಿ
ಗೆಳೆಯ ರವಿ ಬೆಳಗೆರೆ ತಮ್ಮ ಆಡಿಯೋ 'ಒ ಮನಸೇ' ಎಂಬುದರಲ್ಲಿ ಒಂಟಿತನದ ಬಗ್ಗೆ ಪ್ರಸ್ತಾಪಿಸಿದ ನೆನಪು. ಇದು ಅರ್ಥವಾಗಬೇಕಾದರೆ ಸ್ವತಃ ಅನುಭವಿಸಬೇಕಲ್ಲ. ಈ ಒಂಟಿತನವನ್ನು ಕೆಲವೊಮ್ಮೆ ನಾವೇ ಸೃಷ್ಟಿಸಿಕೊಳ್ಳುತ್ತೇವೆ. ಮನಸಿಗೆ ಆಘಾತವಾದಾಗ ಅದರಲ್ಲೂ ವಿಶೇಷವಾಗಿ ನಾವು ಪರಮ ಆಪ್ತರು ಎಂದು ನಂಬಿದವರು ಕೈ ಕೊಟ್ಟಾಗ, ಹಿಂಸೆ ನೀಡಿದಾಗ ಒಂಟಿತನ ಆವರಿಸುತ್ತದೆ.
ಇದು ನಂಬಿಕೆಯ ತಪ್ಪು ಗ್ರಹಿಕೆಯೋ, ವ್ಯಕ್ತಿಗಳ ತಪ್ಪು ಗ್ರಹಿಕೆಯೋ ಎಂಬುದು ಇಂತಹ ಸಂದರ್ಭಗಳಲ್ಲಿ ಗೊತ್ತಾಗುವುದಿಲ್ಲ. ನಮಗರಿವಿಲ್ಲದಂತೆ ಕೆಲವರನ್ನು ತುಂಬಾ ಆಪ್ತರೆಂದು, ಒಳ್ಳೆಯವರೆಂದು ತೀವ್ರವಾಗಿ ನಂಬಿ ಬಿಡುತ್ತೇವೆ. ಅಂತಹ ಆಪ್ತತೆ ಅವರಿಗೆ ನಮ್ಮ ಬಗ್ಗೆ ಇದೆಯೋ ಇಲ್ಲವೋ ಎಂಬುದನ್ನು ಅರಿತುಕೊಳ್ಳಲು ವಿಫಲರಾಗುತ್ತೇವೆ.
ಭಾವುಕ ಮನಸ್ಸು ಅವರ ವ್ಯಕ್ತಿತ್ವದ ಹಿಂದಿರುವ ಹಿಡನ್ ಅಜೆಂಡಾ ಅರ್ಥ ಮಾಡಿಕೊಳ್ಳಲು ವಿಫಲವಾಗಿರುತ್ತದೆ ಎಂಬ ವಾಸ್ತವ ನಮಗೆ ಗೊತ್ತಿರುವುದಿಲ್ಲ.
ತಮ್ಮ ಆಸೆ, ಉದ್ದೇಶ ಈಡೇರಲಿಲ್ಲ ಎಂದು ಗೊತ್ತಾದಾಗ ನಂಬಿದವರು ವ್ಯಗ್ರವಾಗಿ ಮೈಮೇಲೆ ಮುಗಿ ಬೀಳುತ್ತಾರೆ. ಆಗ ಅವರ ಭಾಷೆ, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಬದಲಾಗುತ್ತದೆ. ನಂಬಿದವರ ಅನಿರೀಕ್ಷಿತ ದಾಳಿಯನ್ನು ಎದುರಿಸದ ಮನಸ್ಸು ತತ್ತರಿಸಿ ಹೋಗುತ್ತದೆ, ದುಃಖಕ್ಕೆ ಈಡಾಗುತ್ತದೆ.
ಯಾರನ್ನಾದರೂ ಸ್ನೇಹಿತರೆಂದು ಸ್ವೀಕರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಅವರ ಸ್ನೇಹದ ಉದ್ದೇಶವನ್ನು ಗ್ರಹಿಸದೇ ಹೋದರೂ, ನಂತರ ತಿರುಗಿ ಬಿದ್ದರೆ ಹೇಗೆ ಸ್ವೀಕರಿಸಬೇಕು ಎಂಬ ಮಾನಸಿಕ ತಯಾರಿ ಇರಬೇಕು. ಇದು ಕೇವಲ ಪ್ರೀತಿ, ಪ್ರೇಮ, ಹುಡುಗ, ಹುಡುಗಿಯರಿಗೆ ಸಂಬಂಧಿಸಿರುವುದಿಲ್ಲ. ಎಲ್ಲ ರೀತಿಯ ಸ್ನೇಹಕ್ಕೆ ಅನ್ವಯಿಸುತ್ತದೆ.
ನೀವು ಒಂಟಿಯಾಗಿದ್ದೀರಿ ಎಂದೆನಿಸಿದಾಗ, ಎಲ್ಲವೂ ಬೇಡವೆನಿಸುತ್ತದೆ. ಊಟ-ನಿದ್ರೆ, ಮಾತು-ಚರ್ಚೆ ಎಲ್ಲವೂ ನಿರರ್ಥಕ. ಮನಸು ಮುದುರಿಕೊಂಡು ನಮ್ಮ ಮೇಲೆ ಕೋಪಿಸಿಕೊಂಡು ಬಿಡುತ್ತದೆ. ನಮ್ಮ ತಪ್ಪಿಗೆ ನಾವೇ ಕಾರಣ ಎಂಬ ಪಾಪಪ್ರಜ್ಞೆ ಕಾಡುತ್ತದೆ. ನಾವು ಸಹನಶೀಲ ಸ್ವಭಾವದವರಾದರೆ ಸರಿ ಇಲ್ಲದೇ ಹೋದರೆ ಎಲ್ಲರೊಂದಿಗೆ ಅದರಲ್ಲೂ ವಿಶೇಷವಾಗಿ ಬಾಳ ಸಂಗಾತಿ, ಕುಟುಂಬ ಸ್ನೇಹಿತರೊಂದಿಗೆ ಅಸಹನೆಯಿಂದ ವರ್ತಿಸಿಬಿಡುತ್ತೇವೆ. ದುಃಖ ಉಮ್ಮಳಿಸಿ ಬರುತ್ತದೆ. ಆತ್ಮೀಯರನ್ನು ಹುಡುಕಿ ಹೋಗಿ ಅತ್ತು ಬಿಡಬೇಕೆನಿಸುತ್ತದೆ. ಒಮ್ಮೊಮ್ಮೆ ಹೆಚ್ಚು ದುಃಖಿತರಾಗಿ ಅಳಲು ಸಾಧ್ಯವಾಗುವುದಿಲ್ಲ. ಹೊಟ್ಟೆಯಲ್ಲಿ ಬೆಂಕಿ ಬಿದ್ದ ಅನುಭವ. ಈ ಒಂಟಿತನ ಹೆಚ್ಚಾಗುವುದು ತುಂಬಾ ಅಪಾಯಕಾರಿ ಪರಿಣಾಮ ಬೀರಿ ಡಿಪ್ರೆಶನ್ ಹಂತಕ್ಕೆ ತಲುಪುತ್ತೇವೆ. ಹೆಚ್ಚಾದ ಡಿಪ್ರೆಶನ್ ಆತ್ಮಹತ್ಯೆಗೆ ಕಾರಣವಾಗುತ್ತದೆ.. ಅಕಸ್ಮಾತ್ ನಮ್ಮ ಆತ್ಮೀಯರು ಕೆಲಕ್ಷಣ ನಮ್ಮಿಂದ ದೂರಾದರೆ ಮನಸು ಸಾಯಲು ಹಪಹಪಿಸುತ್ತದೆ. ಸಾಧಿಸಬೇಕಾಗಿದ್ದು ಬೇಕಾದಷ್ಟಿದ್ದಾಗ, ಅನೇಕ ಜವಾಬ್ದಾರಿಗಳು ನಮ್ಮ ಹೆಗಲ ಮೇಲಿದ್ದಾಗ ನಮ್ಮನ್ನು ನಂಬಿದವರು ನಮ್ಮ ಸುತ್ತಲೂ ಇದ್ದದ್ದು ಇಂತಹ ವಿಷಗಳಿಗೆಯಲ್ಲಿ ಗೋಚರವಾಗುವುದೇ ಇಲ್ಲ.
ಎಲ್ಲರೂ ನಮ್ಮನ್ನು ತಪ್ಪಿತಸ್ಥ ಎಂದು ಭಾವಿಸಿದ್ದಾರೆ ಎಂದೆನಿಸುತ್ತದೆ. ಆದರೆ ವಾಸ್ತವದಲ್ಲಿ ಯಾರೂ ನಮ್ಮನ್ನು ಹಾಗೆ ಅಂದುಕೊಂಡಿರುವುದೇ ಇಲ್ಲ. ಎಲ್ಲರೂ ಅವರ ಪಾಡಿಗೆ ಅವರಿದ್ದರೂ ನಮ್ಮ ಬಗ್ಗೆ ಏನೋ ಕಮೆಂಟ್ ಮಾಡುತ್ತಾರೆ ಎಂಬ ಸುಳ್ಳು ಭ್ರಮೆ ಸೃಷ್ಟಿಯಾಗುತ್ತದೆ.
ಖಿನ್ನತೆ, ಅನುಮಾನ, ಅಸಂತೋಷ, ಅಸಹಾಯಕತೆ, ಅಸಮಾಧಾನ, ಆತಂಕ ಕ್ಷಣ ಕ್ಷಣಕ್ಕೆ ಹೆಚ್ಚಾಗುವ ಭಾವಗಳು. ವೈದ್ಯರನ್ನು, ಆಪ್ತಸಮಾಲೋಚಕರನ್ನು ಭೇಟಿ ಆಗಿ ಸಮಸ್ಯೆ ಹೇಳಿಕೊಳ್ಳಬೇಕು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬುದು ಬೇಡವಾಗುತ್ತದೆ. ಸಾವೇ ಶ್ರೇಷ್ಠ ಪರಿಹಾರವೆನಿಸುತ್ತದೆ.
ಆತ್ಮೀಯರು ನಮ್ಮ ಸಮಸ್ಯೆಯ ಕುರಿತು ಚರ್ಚಿಸಿ ಸಮಾಧಾನಗೊಳಿಸುವುದು ನಿರರ್ಥಕವೆನಿಸುತ್ತದೆ. ಅವರು ನಮ್ಮ ಸಮೀಪದಲ್ಲಿದ್ದಾಗ ಅವರು ಹೇಳುವುದು ನಿಜ ಅನಿಸುತ್ತದೆ. ನಂತರ ಮತ್ತೇ ಅದೇ ಯಥಾ ಸ್ಥಿತಿ. ಬೇರೆಯವರ ಸಮಾಧಾನದ ಮಾತುಗಳು ಮನಸ್ಸಿಗೆ ತಾಟದಂತೆ ಒಂಟಿತನ ಅಡ್ಡಿಪಡಿಸುತ್ತದೆ.
ಒಂಟಿತನದ ವಿಷ ದಿನದಿಂದ ದಿನಕ್ಕೆ ಸಿಹಿ ಎನಿಸುತ್ತದೆ. ವರ್ತಮಾನದ ಸಮಸ್ಯೆಯಿಂದ ನಾವು ಹೊರ ಬರಲು ಅಸಾಧ್ಯವೆನಿಸುತ್ತದೆ. ಉಪದೇಶ ಹೇಳುವವರು ನನ್ನ ಸ್ಥಿತಿ ತಲುಪಲಿ ಗೊತ್ತಾಗುತ್ತದೆ ಎಂಬ ತಕರಾರು ಏಳುತ್ತದೆ. ಹೀಗೆ ಹತ್ತು-ಹಲವು ಬಗೆಯ ಕರಾಳ ಸ್ವರೂಪದೊಂದಿಗೆ ಒಳಗಿನ ವೈರಿ ಒಂಟಿತನ ನಮ್ಮನ್ನು ಕುಬ್ಜರನ್ನಾಗಿಸುತ್ತದೆ. ಆದರೆ ಈ ಒಂಟಿತನಕ್ಕೆ ಕಾರಣವಾದವರು ತಮ್ಮಷ್ಟಕ್ಕೆ ತಾವೇ ಆರಾಮವಾಗಿ ಇದ್ದು ಬಿಡುತ್ತಾರೆ. ನಮ್ಮನ್ನು ಏಳಲಾರದ, ಮೇಲೇಳಲಾರದ ಆಳಕ್ಕೆ ನೂಕಿ .॒
No comments:
Post a Comment