ಆರ್.ಕೆ. ನಾರಾಯಣ್ ಅವರ ನಾಟಕ ವಾಚಮನ್ ಆಫ್ ದಿ. ಲೇಕ್ (ಕೆರೆಯ ಕಾವಲುಗಾರ)
ಕೆರೆಯಂ ಕಟ್ಟಿಸು, ಭಾವಿಯಂ ತೋಡಿಸು ಎಂಬುದು ನಮ್ಮ ಹಿರಿಯರ ನಿರಂತರ
ಆಶಿರ್ವಾದವಾಗಿರುತ್ತಿತ್ತು. ರಾಜಮಹಾರಾಜರು ಹಿರಿಯರಿಂದ ಆಶೀರ್ವಾದ ಬೇಡಿದಾಗ ಹಿರಿಯರು
ಮೇಲಿನಂತೆ ಹಾರೈಸುತ್ತಿದ್ದರು. ನಮ್ಮ ರಾಜ್ಯದ ಇತಿಹಾಸವನ್ನು ಗಮನಿಸಿದಾಗ ರಾಜ
ಮಹಾರಾಜರಷ್ಟೇ ಕೆರೆಗಳು ಮಹತ್ವದ ಐತಿಹ್ಯ ಪಡೆದಿದೆ. ಆದ್ದರಿಂದ ಪ್ರತಿ ಊರಲ್ಲಿ ಕೆರೆಗಳ
ಇತಿಹಾಸ ಸರ್ವೇ ಸಾಮಾನ್ಯ. ಕೆರೆ, ಭಾವಿ, ದೇವಾಲಯಗಳಿಲ್ಲದ ಊರುಗಳನ್ನು ನಾವು ಕಾಣಲು
ಸಾಧ್ಯವಿಲ್ಲ.
ಈ ಹಿನ್ನಲೆಯಲ್ಲಿ ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣರವರು ಬರೆದ ಕಥಾನಕ - ನಾಟಕ ಕೆರೆಕಾವಲುಗಾರ ಕೆರೆಗೆ ಹಾರದಂತೆ ಹೊಸ ವಿಚಾರವನ್ನು ಕಟ್ಟಿಕೊಡುತ್ತದೆ.
ಈ
ನಾಟಕದಲ್ಲಿ ಮಾರಾ, ರಾಜಾ ಹಾಗೂ ದೇವಿ ಪ್ರಮುಖ ಪಾತ್ರಗಳಾಗಿವೆ. ಎಲ್ಲ ಕೆರೆಗಳಂತೆ
ಇಲ್ಲಿಯೂ ತ್ಯಾಗ ಬಲಿದಾನವಿದೆ. ನೋಡಲು ಅರೆ ಹುಚ್ಚನಂತೆ ಕಾಣುವ ಮಾರಾ ನಿಜವಾಗಲೂ ಹಾಸ್ಯ
ಪ್ರಜ್ಞೆವುಳ್ಳ ಬುದ್ಧಿವಂತ, ಕರುಣಾಮಯಿ, ತ್ಯಾಗಜೀವಿ. ಆದರೆ ಊರ ಮುಖ್ಯಸ್ಥ ಅವನನ್ನು
ಹುಚ್ಚನೆಂದು ಭಾವಿಸಿ ರಾಜನ ಭೇಟಿಯ ಸಂದರ್ಭದಲ್ಲಿ ರಾಜನ ಕಣ್ಣಿಗೆ ಬೀಳದಂತೆ ದೂರವಿಡಲು
ಪ್ರಯತ್ನಿಸುತ್ತಾನೆ. ಆದರೆ ಮಾರಾ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ರಾಜನನ್ನು
ಕಂಡು ದೇವಿ ತನ್ನ ಕನಸಿನಲ್ಲಿ ವಿವರಿಸಿದ ಕೆರೆ ಕಟ್ಟಿಸುವ ಆಶಯವನ್ನು ವಿವರಿಸಿ ಕೆರೆ
ಕಟ್ಟಿಸಲು ಕಾರಣನಾಗುತ್ತಾನೆ. ವಿಶಾಲ ಕೆರೆಯ ರಕ್ಷಣೆ ಹಾಗೂ ಉಸ್ತುವಾರಿ ಮಾರಾನ ಹೆಗಲಿಗೆ
ಬೀಳುತ್ತದೆ. ಒಂದರ್ಥದಲ್ಲಿ ಮಾರಾ ಕೆರೆಗೆ ಮಹಾರಾಜನಿದ್ದಂತೆ. ಕೆರೆಯ ಮೇಲಿನ ಕಾಳಜಿ,
ಪ್ರೀತಿ, ಹಾಗೂ ಶ್ರದ್ಧೆ ಅನನ್ಯವಾದುದು. ಕೆರೆ ಮಲಿನವಾಗದಂತೆ ಎಲ್ಲರಿಗೂ
ಉಪಯೋಗವಾಗುವಂತೆ ಮಾರಾ ಎಚ್ಚರವಹಿಸುತ್ತಾನೆ. ಜೊತೆ ಜೊತೆಗೆ ಮಗ ಗಂಗನಿಗೂ ಕೆರೆ
ರಕ್ಷಿಸುವಲ್ಲಿ ತರಬೇತಿ ನೀಡುತ್ತಾನೆ.
ಈ ಹಂತದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆಯುತ್ತದೆ. ಅಬ್ಬರ ರಭಸದಿಂದ ಜೋರಾಗಿ ಸುರಿದ
ಮಳೆಯಿಂದಾಗಿ ಕೆರೆ ಒಡೆದು ಹೋಗುವ ಭೀತಿ ಉಂಟಾಗುತ್ತದೆ. ಮತ್ತೊಮ್ಮೆ ಪ್ರತ್ಯಕ್ಷಳಾದ
ದೇವಿ ಈಗ ತಾನು ಭಿನ್ನವಾದ ಮನಸ್ಥಿತಿಯಲ್ಲಿದ್ದು, ಕೆರೆಯನ್ನು ಒಡೆದು ಹಾಕುವದಾಗಿ
ತಿಳಿಸುತ್ತಾಳೆ. ತಾನು ನಿಷ್ಠೆಯಿಂದ ರಕ್ಷಿಸಿಕೊಂಡ ಕೆರೆಯನ್ನು ಊರ ಜನರನ್ನು
ಉಳಿಸಬೇಕೆಂದು ಮಾರಾ ಪರಿಪರಿಯಿಂದ ಬೇಡಿಕೊಳ್ಳುತ್ತಾನೆ. ದೇವಿಗೆ ರಕ್ಷಣೆ ಹೇಗೆ ಸಾಧ್ಯವೊ
ವಿನಾಶವು ಸಾಧ್ಯ ಎಂಬುದನ್ನು ಉಗ್ರವಾಗಿ ವಿವರಿಸುತ್ತಾಳೆ. ಪುರಾಣಕಾಲದ ಪವಿತ್ರ
ಸ್ಥಳದಲ್ಲಿ ದೇವಿಯ ಆಟದ ಬೊಂಬೆಯಂತಿದ್ದ ವೇದಾ ನದಿಯ ನೀರನ್ನು ಕಲ್ಲುಗಳ ಮಧ್ಯೆ ನೀವು
ಬಂಧಿಸಿದ್ದು ಈಗ ನಾನು ನನ್ನ ವೇದಾಳನ್ನು ಮುಕ್ತಗೊಳಿಸಬೇಕಾಗಿದೆ ಎಂಬ ಭಾವ ಉಂಟಾಗಿದೆ
ಅದಕ್ಕಾಗಿ ನಾನು ಕೆರೆಯನ್ನು ಒಡೆಯುತ್ತೇನೆ ಎನ್ನುತ್ತಾಳೆ. ವಿನಾಶದ ಮನಸ್ಥಿತಿಯಲ್ಲಿದ್ದ
ದೇವಿ ಮಾರಾನ ದುಃಖಿತ ನಿವೇದನೆಯನ್ನು ತಿರಸ್ಕರಿಸುತ್ತಾಳೆ.
ಮಾರಾ ರಾಜನಿಗೆ ವಿಷಯ ತಿಳಿಸಿ ತಾನು ಮರಳಿ ಬರುವವರೆಗೆ ದೇವಿ ತನ್ನ ರುದ್ರಾವತಾರವನ್ನು
ಪ್ರದರ್ಶಿಸಬಾರದು ಎಂಬ ಕರಾರಿನೊಂದಿಗೆ ತಾನು ಬರುವವರೆಗೆ ಕೆರೆ ರಕ್ಷಣೆಯ
ಜವಾಬ್ದಾರಿಯನ್ನು ದೇವಿಯ ಹೆಗಲಿಗೆ ಹೊರಿಸಿ ರಾಜನ ಬಳಿ ತೆರಳುತ್ತಾನೆ.
ರಾಜ ಮಾರನ ವಿವರಣೆ ಕೇಳಿ ಆತಂಕಕೊಳಗಾಗುತ್ತಾನೆ. ಈ ಹಂತದಲ್ಲಿ ಊರಿನ ರಕ್ಷಣೆ
ಅಸಾಧ್ಯವೆನಿಸಿದರೂ ಎಚ್ಚರಿಕೆ ನೀಡಲು ಬಯಸುತ್ತಾನೆ. ಆದರೆ ತ್ಯಾಗಮಯಿ, ದಯಾಮಯಿ ಮಾರನ
ಆಲೋಚನೆ ಭಿನ್ನವಾಗಿರುತ್ತದೆ. ದೇವಿ ತಾನು ಮರಳಿ ಹೋಗುವವರೆಗೆ ಕೆರೆಯನ್ನು ರಕ್ಷಿಸುವ
ಭರವಸೆ ನೀಡಿದ್ದಾಳೆ. ದೇವಿ ಕೊಟ್ಟ ಮಾತಿಗೆ ತಪ್ಪುವುದಿಲ್ಲವಾದ್ದರಿಂದ ತಾನು ಅಲ್ಲಿಗೆ
ತಿರುಗಿ ಹೋಗದಂತೆ ಆಗಲಿ ಎಂಬ ಸೂಕ್ಷ್ಮ ಭಾವನೆಯನ್ನು ರಾಜನಿಗೆ ತಿಳಿಸಿದಾಗ
ಆಘಾತವಾಗುತ್ತದೆ. ನಿಮ್ಮ ಖಡ್ಗದಿಂದ ರಾಜಭಟ್ಟರ ಮೂಲಕ ನನ್ನ ಹತ್ಯೆಯಾದರೆ ನಾನು ತಿರುಗಿ
ಹೋಗುವ ಪ್ರಸಂಗವೇ ಬರುವುದಿಲ್ಲಾ. ಆಗ ದೇವಿಯೂ ಶಾಂತಳಾಗುತ್ತಾಳೆ, ಕೆರೆಯೂ
ರಕ್ಷಣೆಯಾಗುತ್ತದೆ. ನನ್ನ ಪ್ರಾಣ ತ್ಯಾಗದಿಂದ ಕೆರೆ ಉಳಿಯಲಿ ಊರ ಜನರ ರಕ್ಷಣೆಯಾಗಲಿ
ಎಂದು ಪ್ರಾಣ ಕಳೆದುಕೊಳ್ಳಲು ತನ್ನ ಸಮ್ಮತಿ ಸೂಚಿಸುತ್ತಾನೆ.
ತನ್ನ ವಂಶಕ್ಕೆ ಕೆರೆಯ ರಕ್ಷಣೆಯ ನಿರ್ವಹಣೆ ದೊರಕುವಂತಾಗಲಿ ಎಂಬ ತನ್ನ ಕೊನೆಯ ಆಸೆಯನ್ನು
ರಾಜನ ಬಳಿ ನಿವೇದಿಸಿಕೊಂಡು ಗಂಗಾ ಹಾಗೂ ಅವನ ಮಗನ ಉಸ್ತುವಾರಿಯಲ್ಲಿ ಕೆರೆ ರಕ್ಷಣೆ
ಮುಂದುವರೆಯುವ ವಿವರಣೆಯೊಂದಿಗೆ ನಾಟಕ ಮುಗಿಯುತ್ತದೆ.
ಕೆರೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಮಾರನ ಮೂರ್ತಿ ಕೆರೆಯ ಮುಂದೆ ಸ್ಥಾಪಿಸಿ ಪೂಜಿಸಲ್ಪಡುತ್ತದೆ.
ಇದೊಂದು ಕಾಲ್ಪನಿಕ ಕಥೆಯಾದರೂ ನಮ್ಮ ಪೂರ್ವಜರ ಪರಿಸರ ಕಾಳಜಿಯನ್ನು ಕಥೆ
ಪ್ರತಿಬಿಂಬಿಸುತ್ತದೆ. ಕರ್ನಾಟಕದ ಪ್ರತಿ ಊರುಗಳಲ್ಲಿನ ಕೆರೆಗಳು ಇಂದು ನಾಶವಾಗಿವೆ.
ಪರಿಸರ ಪ್ರಜ್ಞೆ ಇರುದ ನಾವು ಪ್ರಕೃತಿ ಮಾತೆಯ ಕೋಪಕ್ಕೆ ಗುರಿಯಾಗುತ್ತಲಿದ್ದೇವೆ.
ಮಾರನಂತಹ ಪರಿಸರ ಪ್ರೇಮಿಗಳು ಇಲ್ಲದ ಕಾರಣ ನಿತ್ಯ ದೇವಿ ಕ್ಷುದ್ರಳಾಗುತ್ತಿದ್ದಾಳೆ.
ಕೆರೆಗಳು ಬತ್ತಿ ಹೋಗಿವೆ, ಕೆರೆಗಳ ಸ್ಥಳಗಳಲ್ಲಿ ಕಾಂಕ್ರೀಟ್ ಕಟ್ಟಡಗಳು ಆಕ್ರಮಿಸಿ ನಮ್ಮ
ಪೂರ್ವಜರು ನಂಬಿದ್ದ ಮೌಲ್ಯಗಳು ನಾಶವಾಗಿವೆ.
ದೇವರು, ಪುರಾಣಗಳ ಕಲ್ಪನೆಯು ಅವೈಜ್ಞಾನಿಕವೆನಿಸಿದರೂ ನಮ್ಮ ಹಿರಿಯರಿಗೆ ಪರಿಸರ
ರಕ್ಷಿಸುವ ಉದ್ದೇಶ ಅದರ ಹಿಂದೆ ಇರುತ್ತಿತ್ತು. ದೇವರು-ಧರ್ಮದ ಹೆಸರಿನಲ್ಲಿ ಭಯ-ಭಕ್ತಿಯ
ಆಚರಣೆಗಳ ಮೂಲಕ ಪರಿಸರ ರಕ್ಷಣೆ ನಮ್ಮವರ ಉದ್ದೇಶವಾಗಿತ್ತು. ಇಂದು ಪರಿಸರ, ಕೆರೆ, ಭಾವಿ,
ಹಳ್ಳಗಳು ಚಿತ್ರದ ರೂಪಗಳಾಗಿ ಪಾಠದ ವಸ್ತುಗಳಾಗಿವೆ. ಆರ್.ಕೆ. ನಾರಾಯಣರ ಈ ನಾಟಕ
ವರ್ತಮಾನದ ಸಂದರ್ಭಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಹರಿಯುವ ನದಿಗಳನ್ನು ತಡೆದು
ಡ್ಯಾಂ ಕಟ್ಟುವುದನ್ನು ಪರಿಸರ ಪ್ರೇಮಿಗಳು ನಿಸಗ ವಿರೋಧಿ ಕ್ರಿಯೆಯಂದು ವಾದಿಸಿದರು
ವಿವಿಧ ಯೋಜನೆಗಳ ಮೂಲಕ ಪರಿಸರ ವಿನಾಶ ಮುಂದುವರೆದಿದೆ. ಇತ್ತೀಚೆಗೆ ಉತ್ತರಾಂಚಲದಲ್ಲಿ
ಸಂಭವಿಸಿದ ಜಲಪ್ರಳಯ ಪರಿಸರ ಮಾತೆಯ ಉಗ್ರ ಕೋಪಕ್ಕೆ ಸಾಕ್ಷಿಯಾಗಿದೆ. ನಾವು ಇನ್ನಾದರೂ
ಎಚ್ಚೆತ್ತುಕೊಳ್ಳಬೇಕೆಂಬ ಸಂದೇಶವನ್ನು ಪ್ರಕೃತಿ ಮಾತೆ ನಮಗೆ ರವಾನಿಸಿದ್ದಾಳೆ.
ಬೆಂಗಳೂರಿನಲ್ಲಿದ್ದ ನೂರಾರು ಕೆರೆಗಳು ಹೆಸರಿನಲ್ಲಿ ಮಾತ್ರ ಉಳಿದಿವೆ. ಕೆರೆಗಳ
ಒತ್ತುವರಿಯಲ್ಲದೇ ಇದ್ದ ಕೆರೆಗಳಿಗೆ ಮಲಿನ ನೀರನ್ನು ಸೇರಿಸುವ ಕೆರೆಗಳ ಅತ್ಯಾಚಾರ
ನಡೆದಿದೆ. ಕರ್ನಾಟಕದ ಹಳ್ಳಿ ಬದುಕನ್ನು, ಮುಗ್ಧ ಪಾತ್ರಗಳನ್ನು ತಮ್ಮ ಕಥೆ ಕಾದಂಬರಿಗಳ
ಮೂಲಕ ಕಟ್ಟಿಕೊಟ್ಟ ಆರ್.ಕೆ. ನಾರಾಯಣ್ ಕರ್ನಾಟಕದ ಕೆರೆಗಳ ವಿನಾಶ ಕಂಡು ಈ ನಾಟಕ
ಬರೆದಿರಬಹುದು ಎಂಬ ಭಾವ ಉಂಟಾಗುತ್ತದೆ.
ಇಂದು ಯಾವುದೇ ಹೊಸ ಯೋಜನೆಗೆ ಸುಲಭ ಆಕ್ರಮಣವೆಂದರೆ ಕೆರೆಗಳು. ಕೆರೆಗೆಳ ಜಾಗದಲ್ಲಿ
ನಿರ್ಮಾಣಗೊಂಡ ಬಸ್ ನಿಲ್ದಾಣಗಳು, ಮಲ್ಟಿಪ್ಲೆಕ್ಸ್ ಕಟ್ಟಡಗಳು ಮಳೆ ಬಂದಾಗ ಜಲಾವೃತಗೊಂಡು
ಅಲ್ಲಿದ್ದ ಕೆರೆಗಳನ್ನು ನೆನಪಿಸುತ್ತವೆ. ಸಮಯ ಸಿಕ್ಕಾಗಲೆಲ್ಲಾ ಪ್ರಕೃತಿ ಮಾತೆ ತನ್ನ
ಸಿಟ್ಟನ್ನು ತೀರಿಸಿಕೊಳ್ಳುತ್ತಾಳೆ.
ಗೈಡ್, ಮಾಲ್ಗುಡಿ ಡೇಸ್, ಫೈನಾನ್ಸಿಯಲ್ ಎಕ್ಸ್‌ಪರ್ಟ್ ನಂತಹ ಮಹತ್ವದ ಕೃತಿಗಳನ್ನು
ಇಂಗ್ಲಿಷ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಆರ್.ಕೆ. ನಾರಾಯಣ್ ಅವರ 'ವಾಚ್‌ಮನ್ ಆಫ್ ದಿ
ಲೇಖ್' ನಾಟಕ ಭಾವನಾತ್ಮಕ ಕಥಾ ನಿರೂಪಣೆ ಮೂಲಕ, ಗ್ರಾಮೀಣ ಜನರ ಸಹಜ ಪಾತ್ರಗಳನ್ನು
ಕಟ್ಟಿಕೊಡುವದರೊಂದಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪರಿಸರ ರಕ್ಷಣೆ ಕಾಳಜಿಯನ್ನು
ಓದುಗರಿಗೆ ತಲುಪಿಸಲು ಯಶಸ್ವಿಯಾಗಿದೆ.
No comments:
Post a Comment