Sunday, June 3, 2018

ಮೊಗಸಾಲೆ ಅವರ ಕಾದಂಬರಿ: ಧಾತು

*ಡಾ.ನಾ.ಮೊಗಸಾಲೆ ಅವರ ಧಾತುವಿಗೊಂದು ಆಕಾರ*

ಕನ್ನಡದ ಹೆಸರಾಂತ ಬರಹಗಾರ, ಸಾಹಿತ್ಯದ ಕ್ರಿಯೇಟಿವ್ ಪ್ರಕಾರದಲ್ಲಿ ಸಾವಿರಾರು ಪುಟಗಳಲ್ಲಿ ಬರೆದು ಸಂತೃಪ್ತರಾದ ಮೇಲೆ ಡಾ.ನಾ.ಮೊಗಸಾಲೆ ಬರೆದ ಹೊಸ ಕಾದಂಬರಿಯೇ *ಧಾತು*.

ಮೂವತ್ತು ವರ್ಷದ ನಂತರ ಇತ್ತೀಚಿನ ಅವರ *ನನ್ನದಲ್ಲದ್ದು* ಓದಿದ್ದೆ. ಅಭಿಪ್ರಾಯ ಬರೆಯುವ ಇರಾದೆಯಿಂದ ಕೊಟ್ಟಿದ್ದ ಕಾದಂಬರಿಯನ್ನು ಬೇಗ ಹಿಡಿಯಲಿಲ್ಲ.

ಈ ಮಧ್ಯೆ ಹಿರಿಯ ಮಿತ್ರರಾದ ಡಾ.ಜಿ.ಬಿ.ಪಾಟೀಲ ಅವರು 'ಒಂದೇ ಓದಿಗೆ ಮುಗಿಸಿದೆ. ಅದ್ಭುತವಾಗಿದೆ. ನೀವು ಓದಲೇಬೇಕು' ಎಂದರು.

ಇಂದು ಪುಸ್ತಕ ದಿನಾಚರಣೆ, ಒಳ್ಳೆಯ ಪುಸ್ತಕ ಓದುವ ಸದಾಶಯದಿಂದ ಒಂದೇ ಓದಿಗೆ ಮುಗಿಸಿದೆ.
ನಂತರ ಲೇಖಕರ ಮಾತು ಹಾಗೂ ಡಾ.ಆಶಾದೇವಿ ಅವರ ಮುನ್ನುಡಿ ಓದಿದೆ.

ಯಾಕೋ‌ ತುಂಬ, ತುಂಬಾ ನಿರಾಶೆಯಾಯಿತು. ಗಾಬರಿ ಬೇಡ.

ಕಾರಣ ಇದೇ ವಸ್ತು ಇಟ್ಟುಕೊಂಡು ಬಾಲ್ಯದ ಕೆಲವು ಘಟನೆಗಳ ಆಧಾರದ ಕಾದಂಬರಿ ಬರೆಯುವ ವಿಚಾರವನ್ನು‌ ಗೆಳೆಯರ ಮುಂದೆ ನಿವೇದಿಸಿಕೊಂಡದ್ದೆ.

ಕಾಮ ನನ್ನ ಕಾಡಿದ ಬಗೆಯನ್ನು ಏಪ್ರಿಲ್‌ ೧೧ ೨೦೧೮ ರಂದು‌ *ಶುಭೋದಯ ಕರ್ನಾಟಕ* ಸಂದರ್ಶನದಲ್ಲಿ ಹೇಳಿದ್ದೆ ಕೂಡ.

ಇಂದು ಇದನ್ನು ಓದಿದ ಮೇಲೆ ಶಾಕ್. ಅಕಸ್ಮಾತ್ ಓದದೇ ಬರೆದಿದ್ದರೆ? ಈಗ ಓದಿ ನಿರಾತಂಕವಾಯಿತು.

ಐವತ್ತರ ಗಡಿ ದಾಡಿದ ನಾನು ಹಾಗೂ ಎಪ್ಪತ್ತರ ಗಡಿ ದಾಟಿದ ಹಿರಿಯ ಜೀವ ಮೊಗಸಾಲೆ ಅವರು ಬದುಕನ್ನು ನೋಡಬಹುದಾದ ಭಿನ್ನತೆ ವಿಷದವಾಯಿತು.

ಕಾದಂಬರಿ ಸಿನೆಮಾದಷ್ಟೇ ಪ್ರಭಾವಿ‌ ಮಾಧ್ಯಮ. ಆದರೆ ಅದರ ಪ್ರಜೆಂಟೇಶನ್ ಮಹತ್ವದ್ದು. ಅಂತಹ ಮಹತ್ವದ ಕೆಲಸವನ್ನು ಮೊಗಸಾಲೆ ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಕಾಮ ಒಂದೊಂದು ಹಂತದಲ್ಲಿ ಒಂದೊಂದು ಬಗೆಯಲ್ಲಿ ಅರಳಿ ಕಾಡುತ್ತದೆ. ಪ್ರತಿ ಕಾಡುವಿಕೆಯಲ್ಲೂ ಹೊಸತನ, ಜೀವನೋತ್ಸಾಹ ಚಿಮ್ಮುತ್ತಲೇ ಇರುತ್ತದೆ. ಜೀವಚೈತನ್ಯ ಹಾಗೂ ಜೀವಧಾತುವೂ ಹೌದು. ಅದು ಬತ್ತಿದರೆ ಬದುಕು ನೀರಸ. ಅತಿಯಾದರೆ ವಿಕೃತ ಚಪಲ.

ಕಾಮುಕತೆ ಹಾಗೂ ಕಾಮದ ನಡುವಿನ ಅಂತರ ಅರಿಯದೇ ಒದ್ದಾಡುತ್ತೇವೆ.
'ಈ ಕುರಿತು ನಾವು ಬರೆಯಬಹುದಾದ ಸಾಲುಗಳನ್ನು ನಮ್ಮ ಮಕ್ಕಳು ಓದಿದರೇ' ಎಂಬ ಆತಂಕ, ಧಕ್ಕೆಯಾಗಬಹುದಾದ ಇಮೇಜಿಗೆ ಹೆದರುತ್ತ‌ ನಾವೇ ಒಂದು ದಿನ ನಾಶವಾಗುತ್ತೇವೆ.

ಅಂತಹ ಆತಂಕ ಈ ಕಾದಂಬರಿಯ ನಾಯಕನಿಗೂ ಹಾಗೂ ನಮಗೂ ಕಾಡುತ್ತದೆ.

*ಕಾಮ-ಬರಹ-ಧ್ಯಾನ*

ನಮ್ಮ ಸೂಕ್ಷ್ಮ ಬದುಕಿನ ಮಹತ್ವದ ಸಂಗತಿಗಳೆಂದರೆ
*ಕಾಮ-ಬರಹ-ಧ್ಯಾನ*.

ಮನುಷ್ಯ ಹರೆಯದಲ್ಲಿ ಕಾಮಿಸಲು ತಹತಹಿಸುತ್ತಾನೆ. ತನ್ನ ಭಾವನೆ ಹಾಗೂ ಬಯಕೆಗಳ ತೀವ್ರತೆಯನ್ನು ಹೊರ ಹಾಕಲು ಕಾಮ ಪರಿಣಾಮಕಾರಿ‌ ಮಾಧ್ಯಮ.

ಹದಿಹರೆಯದ ವಯೋಮಾನದಲಿ ಕಾಮ ವಿಪರೀತ ಕಾಡುವುದರಿಂದ ಅದರ ಬಗ್ಗೆ ಸೂಕ್ತ ತಿಳುವಳಿಕೆ ಮೂಡದೇ ಒದ್ದಾಡಬೇಕಾಗುತ್ತದೆ.

ಕೇವಲ ಅನುಭವಿಸಿ ವಿಸರ್ಜಿಸುವ ಹಪಾಹಪಿ. ಸಂಗಾತಿಗೆ ಸುಖ ಸಿಗುತ್ತೊ ಬಿಡುತ್ತೋ‌ ಮುಖ್ಯವಲ್ಲ. ತಾನು ವಿಸರ್ಜಿಸಿ ಹಗುರಾದರೆ ಸಾಕೆಂಬ ಸ್ವಾರ್ಥ.
ಹೆಣ್ಣು ಈ ಪ್ರಕ್ರಿಯೆಯಲ್ಲಿ ಕಾಮ ಸುಖದಿಂದ ವಂಚಿತಳಾಗುತ್ತಾಳೆ.

ಮಿಲನಸುಖದ ನಿಜವಾದ ಮರ್ಮ ತಿಳಿಯುವದರೊಳಗೆ ಬದುಕೇ ಮುಗಿದು ಹೋಗಿರುತ್ತೆ.

ಇದನ್ನು ಅನೇಕ ಪ್ರಸಂಗಗಳಲ್ಲಿ ಹಿರಿಯ ಮಹಿಳೆಯರು ನಿಸ್ಸಂಕೋಚವಾಗಿ ಹೇಳಿದ್ದನ್ನು ಕೇಳಿಸಿಕೊಂಡು ಬೆರಗಾಗಿದ್ದೇನೆ.

ವ್ಯರ್ಥವಾಗಿ ಕಳೆದುಹೋದ ಯೌವನದ ಸುಖಕ್ಕಾಗಿ ಮರುಗುವಂತಾಗುತ್ತದೆ. ಬಾಳ ಸಂಗಾತಿಗಳು ಪರಸ್ಪರ ಏಕಾಂತದಲಿ ಚರ್ಚಿಸಿ ಸುಖ ಅನುಭವಿಸದಿರಲು ಗಂಡಸರ‌ ಅಹಂಕಾರವೇ ಕಾರಣ.

ಶೀಘ್ರಸ್ಖಲನದಂತಹ ಪಿಡುಗು ಅನೇಕರ ಏಕಾಂತವನ್ನು ಕೊಂದು ಹಾಕುತ್ತದೆ. ಇದನ್ನು ಅರ್ಥಮಾಡಿಕೊಳ್ಳದ ದಂಪತಿಗಳು ಇದು ಹೀಗೆಯೇ ಅಂದುಕೊಂಡಿರುತ್ತಾರೆ.

ವ್ಯಕ್ತಿತ್ವ ವಿಕಸನದ ಸಂದರ್ಭದಲ್ಲಿ ಇಂತಹ ಮುಜುಗರದ ಪ್ರಶ್ನೆಗಳನ್ನು ನಾನೂ ಎದುರಿಸಿ, ಸರಿಯಾಗಿ ಉತ್ತರಿಸದೇ ಕಂಗಾಲಾಗಿದ್ದೇನೆ.

ಆಗ ನಾನು ಮೊಗಸಾಲೆಯವರನ್ನು ಓದಿದ್ದರೆ ಈ ಪೀಕಲಾಟ ತಪ್ಪುತ್ತಿತ್ತೇನೋ !!

ನಂತರ ನಾನು ನನ್ನ ಅನಿವಾಸಿ ವೈದ್ಯ ಮಹಿಳೆಯೊಬ್ಬರಿಗೆ ಈ ವಿಷಯ ಹೆದರುತ್ತ ಕೇಳಿದೆ.
' ಅಯ್ಯೋ ಇದು ಯಾವ ಮಹಾ ವಿಷಯ ಸರ್, ಅಮೇರಿಕಾದಲ್ಲಿ ಈ ಕುರಿತು ಸಾಕಷ್ಟು ಅಧ್ಯಯನ ಆಗಿದೆ. ಲೈಂಗಿಕ ಅತೃಪ್ತಿ ಮತ್ತು ಶೀಘ್ರಸ್ಖಲನ‌ ದೈಹಿಕ ಸಮಸ್ಯೆ ಅಲ್ಲವೇ ಅಲ್ಲ. ಬೇಕಾದರೆ ನೀವೇ ಎಕ್ಸಪೆರಿಮೆಂಟ್ ಮಾಡಿ' ಅನ್ನಬೇಕೆ!

ಹಾಗೆ ಹೇಳಿದವರು ದೊಡ್ಡ ಡಾಕ್ಟರ್, ಜವಾಬ್ದಾರಿ ಮಹಿಳೆಯಾದ್ದರಿಂದ ನಾನವರ ಮಾತನ್ನು ನಂಬಿದೆ. ಅದು ಸಂಪೂರ್ಣ ನಿಜ ಎಂದು ಸ್ವತಃ ಖಾತರಿಪಡಿಸಿಕೊಂಡೆ.

ಹರೆಯದಲ್ಲಿ ಕಾಡುವ ಶೀಘ್ರಸ್ಖಲನ ವಯಸ್ಸಾದಂತೆ ಹಿಡಿತಕ್ಕೆ ಬರುತ್ತದೆ, ಆದರೆ ಅಷ್ಟರೊಳಗೆ ಆಯುಷ್ಯ ಮುಗಿದಿರಬಾರದು.

ವ್ಯಕ್ತಿ ಮಧ್ಯ ವಯಸ್ಕನಾದಂತೆ ಕಾಮ ಸುಖವನ್ನು ಬರೀ‌ ಸಾಮಿಪ್ಯದಲ್ಲಿ ಹುಡುಕದೇ ಬೇರೆ ಚಟುವಟಿಕೆಗಳಲ್ಲಿ ಕಾಣುತ್ತಾನೆ.‌

ಮಹಿಳೆಯಾದರ ಮಕ್ಕಳ ಲಾಲನೆ ಪಾಲನೆ, ಕ್ರಿಯಾಶೀಲ ಪುರುಷ ಬರಹ ಮತ್ತು ಓದಿನಲ್ಲಿ ಆ ಸುಖ ಕಂಡುಕೊಳ್ಳುತ್ತಾನೆ.

ಓದು-ಬರಹಗಳಲ್ಲಿ ಮಿಲನ ಸಂಭ್ರಮ‌ ಸಿಗುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿ  ಮನೋಪ್ರಧಾನ ತೃಪ್ತಿಯಿರುತ್ತದೆ. ದೇಹಪ್ರಧಾನವಲ್ಲ.

ಬರೆಯುವ ಓದುವ ಹುಮ್ಮಸ್ಸು ತಗ್ಗಿದ ಮೇಲೆ ಆರಾಧನೆ, ಧ್ಯಾನದಲ್ಲಿ ಕಾಮಸುಖ ಕಾಣುತ್ತಾನೆ. ಅದಕ್ಕಾಗಿಯೇ ಋಷಿ ಮುನಿಗಳು ಧ್ಯಾನದ ಮೂಲಕ ಕಾಮ ನಿಗ್ರಹ ಮಾಡುತ್ತಾರೆ.

*ಧ್ಯಾನಕ್ಕೆ ದಣಿವರಿಯದ ಪರಮಸುಖ*.

ಈ ಮೂರು ಪ್ರಕ್ರಿಯೆಗಳಲಿ‌ ಕಾಮ ಬೇರೆ ಬೇರೆ ಆಯಾಮಗಳಲಿದ್ದರೂ ಅಂತಿಮ ಉದ್ದೇಶ ಭಾವಾಭಿವ್ಯಕ್ತಿ ಮತ್ತು ಹಗುರಾಗುವುದು.

                            ***

ಆದ್ದರಿಂದ ಮೊಗಸಾಲೆ ಅಭಿನಂದನಾರ್ಹರು. ಅವರ ಬರಹದಲ್ಲಿ ಅಂತಹ ತಾಕತ್ತು ಇದೆ.

ಅವರನ್ನು ಕಾಡಿದ ಕಾಮ ಹಾಗೂ ಸ್ತ್ರೀ ಪರ ನಿಲುವಿಗೆ ಜೀವ ತುಂಬಿದ್ದಾರೆ.

ಹೆಣ್ಣನ್ನು‌ ಹಲವು‌ ಅಹಮಿಕೆಯಿಂದ ಅನುಭವಿಸುವ ಗಂಡು ಆಕೆಯ ಭಾವನೆಗಳನ್ನು ಲೆಕ್ಕಿಸುವುದೇ ಇಲ್ಲ.
ಬರೀ ಪಡೆದು ಕೊಂಡಿರುತ್ತಾರೆ. ಕೊಟ್ಟಿರುವುದೇ ಇಲ್ಲ. ಕೊಂಡು ಕೊಳ್ಳವಿಕೆ ಸಂಬಂಧಿಸಿದ್ದು ದೇಹಕ್ಕೋ, ಮನಸಿಗೋ ಎಂಬ ಗುಮಾನಿ‌ ಬೇರೆ.

ಮೊಗಸಾಲೆ ವೃತ್ತಿಯಿಂದ ವೈದ್ಯರು. ಅನೇಕ ರೋಗಿಗಳ ಸಮಸ್ಯೆಗಳನ್ನು‌ ಆಲಿಸಿರುತ್ತಾರೆ. ಇಡೀ ಕಾದಂಬರಿ ಕೊಂಚ ಜೀವನಾನುಭವ ಎಂಬಂತೆ ಧ್ವನಿಸಿದರೂ ಇದೊಂದು ಕಾಲ್ಪನಿಕವೂ ಇರಬಹುದು.

ಕಥೆ-ಕಾದಂಬರಿ ಬರೆಯುವಾಗ ವೈಯಕ್ತಿಕ ಬದುಕಿನ‌ ಪ್ರಭಾವದಿಂದ ಹೊರಬರುವುದು ಕಷ್ಟ. ಆದರೆ ಅದನ್ನು ಇಟ್ಟುಕೊಂಡೇ ಆಶಯಕ್ಕೆ ಧಕ್ಕೆ ಬರದಂತೆ ಬರೆಯಬೇಕು. ವರ್ತಮಾನದ ಅನೇಕ ವಾಸ್ತವದ ಘಟನೆಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ.

ಧಾರವಾಡ ಸಾಹಿತ್ಯ ಸಂಭ್ರಮ, ವಸುದೇಂದ್ರರ *ಗೇ*ಯತೆ,ಕಾರಂತರ ಕಾದಂಬರಿಗಳು, ನಾಮೋ ಕೂಡಾ ನಾ ಮೊಗಸಾಲೆ ಆಗಿ ಪಾತ್ರಗಳಾಗುತ್ತವೆ.
ತಂತ್ರದ ಹೊಸ ಪ್ರಯೋಗ ಇದು.
ಎಲ್ಲವೂ ಬರೀ ಕಲ್ಪನೆ ಅಲ್ಲ. ಹಾಗಂತ ಬರೀ ವಾಸ್ತವವೂ ಅಲ್ಲ.

ಕುತೂಹಲ ಕೆರಳಿಸುವ ದೃಷ್ಟಿಯಿಂದ ಧಾರವಾಡದ ಸಾಹಿತ್ಯ ಸಂಭ್ರಮ ಎಳೆದಾಡಿದ್ದಾರೆ ಆದರೆ ನಿಜವಾದ ಸಸ್ಪೆನ್ಸ್‌  ಓದುಗರಿಗೆ ಹೊಳೆಯುತ್ತದೆ.

ಇಡೀ ಕಾದಂಬರಿ ಮಂದಗತಿ‌‌  ಅನಿಸುವುದು ಇಲ್ಲಿಯೇ. ಆದರೆ ಫಿಕ್ಷನ್ ಗೆ ಇದು ಅನಿವಾರ್ಯ.

ಆಶಾದೇವಿ ಅವರು ಹೇಳುವ ಹಾಗೆ ಇದು ಸಂಪೂರ್ಣ, ಪಕ್ಕಾ ಸ್ತ್ರೀ ಪರ. ಇಡೀ ಲೋಕದ ಮಹಿಳೆಯರು ಹಿರಿಯರಾದ ಮೊಗಸಾಲೆಯವರ ಚಿಂತನಾ ಲಹರಿಗೆ ಅಭಿನಂದಿಸಬೇಕು.

ಈ‌ ವಿಷಯದಲ್ಲಿ ಅವರು ಪಕ್ಕಾ ಸೈಕೋಲಾಜಿಸ್ಟ್. ಮನಶಾಸ್ತ್ರಜ್ಞರು. ರವಿ‌ ಕಾಣದ್ದನ್ನ ಕವಿ ಕಾಣುವದು ಇಂತಹ ಪ್ರಸಂಗಗಳಲ್ಲಿ.

ಸೆಕ್ಸ್  ವಿಷಯಗಳನ್ನು ನಿವೇದಿಸುವಾಗ ಅತೀ ಎನಿಸುವಷ್ಟು ಲೈಂಗಿಕ ವಿವರಣೆ ಮೂಲಕ ಸೈದ್ಧಾಂತಿಕ ಓದಿಗೆ ಭಂಗ ಬರುವ ಅಪಾಯದಿಂದ ಕೃತಿ ಪಾರಾಗಿದೆ.

ವಯಸ್ಸಾದವರ ಸಂಬಂಧಗಳನ್ನು ಹಾದರ, ಅನೈತಿಕ, ಚಪಲ,ತೆವಲು,ಅಸಹಜ, ವಾಂಛೆ ಇತ್ಯಾದಿ ಗುಸು,ಗುಸು ಅನಗತ್ಯ ಎಂಬುದನ್ನು ಕಾದಂಬರಿಕಾರ  ಸ್ಪಷ್ಟಪಡಿಸುತ್ತಾರೆ.

ಗಂಡು-ಹೆಣ್ಣಿನ ಸಾಮೀಪ್ಯದ ಹಲವು ಆಯಾಮಗಳ‌ ಚರ್ಚೆಗೆ ಸೀಮಿತಗೊಳಿಸದೇ ಗೇ ಹಾಗೂ ಸಲಿಂಗ ಕಾಮದ ಒಳನೋಟವಿದೆ.
ಆದರೆ ಅವರಿಗೆ ಯಾಕೋ ಒಪ್ಪಿಕೊಳ್ಳುವ ಮನಸ್ಸಿಲ್ಲ.
ಅದೂ ವಿಕಾರ,ಅಸಹಜವೂ ಅಲ್ಲದ ಬಯಕೆ ಎಂಬುದನ್ನು ಒಪ್ಪದಿರುವುದು ಧಾತುವಿನ ಮಿತಿ.

ಆದರೂ ಮೊಗಸಾಲೆ ಅವರ ಆಲೋಚನಾ ಕ್ರಮ ಗೊಣಗಾಟದಿಂದ ಮುಕ್ತ. ಶುದ್ಧ ಮನೋವೈಜ್ಞಾನಿಕ.  ಪ್ರಸ್ತುತ. ತಮಗೆ ಸಹ್ಯವೆನಿಸದ ಸಂಗತಿಗಳನ್ನು ಅವರು ಅನಗತ್ಯ ಎಳೆದಾಡುವುದಿಲ್ಲ.

ಐರೋಪ್ಯ ಸಮುದಾಯದಲ್ಲಿ ಖಾಸಗಿ ಬದುಕಿಗೆ ಇರುವ ಸ್ವಾತಂತ್ರ್ಯ ಇಲ್ಲದ ಮಡಿವಂತ ದೇಶ ನಮ್ಮದು.

ಅದರಲ್ಲೂ ಸಾಂಸ್ಕೃತಿಕ ಲೋಕದಲ್ಲಿರುವವರೇ ಆಡಿಕೊಳ್ಳುವ ಅಸೂಯೆ ನೋಡಿದಾಗ ಅಯ್ಯೋ ಎನಿಸುತ್ತದೆ.

ಈ ಮಡಿವಂತಿಕೆಯ ಭರದಲ್ಲಿ ಸ್ನೇಹ ಸುಖದಿಂದ ವಂಚಿತರಾಗುತ್ತೇವೆ. ಹಾಗಂತ ಫ್ಲರ್ಟ್ ಆಗಿರುವುದರಲ್ಲಿ ಸುಖವೂ ಇಲ್ಲ.

ದೇಹಕ್ಕಿಂತ ಮನಸು ದೊಡ್ಡದು,ಮನಸಿಗಿಂತ ಆತ್ಮಸಾಂಗತ್ಯ ದೊಡ್ಡದು.

ಆತ್ಮಸಾಂಗತ್ಯ ಮುಖ್ಯವಾದಾಗ ಕಾಮ ಗೌಣ.

ಸ್ಪರ್ಷ ,ಬಿಸಿಯಪ್ಪುಗೆ,ಸಿಹಿಮುತ್ತು ಹಾಗೂ ನಿರ್ಮಲ ಸ್ನೇಹ ಪ್ರಧಾನವಾಗುತ್ತೆ.

ನಾನಿದನ್ನು ವಿದೇಶಗಳಲ್ಲಿ ನೋಡಿ, ಅನುಭವಿಸಿದ ಮೇಲೆ ಸಾರ್ವಜನಿಕವಾಗಿ
*ಹಗ್ಗಿಸುವುದು*, ಮುತ್ತಿಡುವುದು ಅತ್ಯಂತ ಆಪ್ತ ಭಾವವೆನಿಸಿತು.

ಇದರ ಆಪ್ತ ಭಾವ ನನ್ನ ಕಿರಿಯ ಮಗಳೊಂದಿಗೆ ಅನುಭವಿಸಿ ಅರ್ಥಮಾಡಿಕೊಂಡಿದ್ದೆ. ಈಗ ಇದರ *ಇನ್ನೊಂದು ಮುಖದ* ಆಪ್ತತೆಯನ್ನೂ ಅನುಭವಿಸಿದೆ.

ವಿಮರ್ಶೆ ಹಾಗೂ ಅಭಿಪ್ರಾಯ ಹೇಳುವ ಸಿದ್ಧ ಮಾದರಿಯ ಗಡಿ ಮೀರಿದ ಅಭಿಪ್ರಾಯವಿದು.
ಸಹಸ್ಪಂದನೆ ಅನ್ನಬಹುದು.

ಕಾದಂಬರಿಯ ಭಾಷೆ ಪೂರ್ಣ ಪ್ರಮಾಣದ ದೇಸಿಯ ಕರಾವಳಿಯದು. ಇಂಗ್ಲಿಷ್ ಬದಬಳಕೆಯೂ ಹಾಗೆ ಕರಾವಳಿಮಯ.

ಮೊಗಸಾಲೆ ಅವರ ಸಂಪರ್ಕ ಬಂದ ಮೇಲೆ ಅವರ ಭಾಷೆ ಹಾಗೂ ಮನೋಧರ್ಮದ ಪರಿಚಯವಾದ್ದರಿಂದ ಓದು ಸರಳವೆನಿಸಿತು.

ಮಹಿಳೆಯರ ಅನೇಕ ತಲ್ಲಣಗಳ ಕುರಿತು ಆಲೋಚಿಸುವ ಉದಾರಿಗಳು, ಮಹಿಳೆಯರು ಈ ಕಾದಂಬರಿಯನ್ನು ಓದಲೇಬೇಕೆಂಬ ಹಕ್ಕೊತ್ತಾಯ ನನ್ನದು.

ಕಾಮದಾನುಭವದ ಪಾಪ ಪ್ರಜ್ಞೆ ನಿಲ್ಲಿಸಲು, ಉಳಿದದ್ದನ್ನು ನೀವೇ ಓದಿ ಅನುಭವಿಸಿ.

------ಸಿದ್ದು ಯಾಪಲಪರವಿ.

No comments:

Post a Comment